ಕಿಟ್ಟೆಲ್ ಸಮಾಧಿ

ಕಿಟ್ಟೆಲ್ ಸಮಾಧಿ

ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ,  ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳಗೊಂಡ ಕನ್ನಡ ಇಂಗ್ಲಿಷು ಪದಕೋಶ ತಂದ ಮಹನೀಯ.  ತನ್ನ ಕೆಲಸವನ್ನೇ ಮರೆತದ್ದಕ್ಕೆ,  ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಬಂದರೂ, ಮರಳಿ ತಾಯ್ನಾಡಿಗೆ ಹಿದಿರುಗಿದರೂ, ಮತ್ತೆ ಬಂದು  ಛಲಬಿಡದ ತ್ರಿವಿಕ್ರಮನಾಗಿ ತನ್ನ ಪದಕೋಶ ಮುಗಿಸಿಕೊಟ್ಟ ದ್ರಷ್ಟಾರ. 
A Grammar of the Kannada Language: Comprising the Three Dialects of the language  ಕನ್ನಡ ವ್ಯಾಕರಣ , ಕನ್ನಡದ ಮೂರು ವಿಭಿನ್ನ  ಆಡುಭಾಷೆಗಳಲ್ಲಿ ಎನ್ನುವ ಪುಸ್ತಕವನ್ನೂ ಕಿಟ್ಟೆಲ್ ಬರೆದಿದ್ದಾರೆ. ಜೊತೆಗೆ ನಾಗವರ್ಮ ಕವಿಯ ಛಂದೋಬುದಿಯನ್ನೂ ಅನುವಾದಿಸಿದರೆಂದು ವಿಕಿಪೀಡಿಯಾ ಹೇಳುತ್ತದೆ.  
ಈ ಮಹನೀಯರ ಸಮಾಧಿ ಜರ್ಮನಿಯ ಟ್ಯೂಬಿಂಗೆನ್ ನಗರದಲ್ಲಿದೆಯೆಂದು ವಿಕಿಪೀಡಿಯಾ ನೋಡಿ ತಿಳಿದಿದ್ದೆ.   ಆದರೆ ಅಲ್ಲಿ ಎಲ್ಲಿ ಹೇಗೆ ಹುಡುಕುವುದೆಂದು ತಿಳಿದಿರಲಿಲ್ಲ.  ಈ ಬಗ್ಗೆ ಸಂಪದದಲ್ಲಿ ಪ್ರಸ್ತಾಪಿಸಿದಾಗ ಹೇಳಿಕೊಳ್ಳುವ ಪ್ರತಿಕ್ರಿಯೆಯೂ ಬಂದಿರಲಿಲ್ಲ.  ಆದರೆ ಸಂಪದ ಸ್ಥಾಪಕ ಹರಿಪ್ರಸಾದ್ ನನಗೆ ಉತ್ತರ ಬರೆದು, ಜರ್ಮನಿಯಲ್ಲೇ ಇರುವ ಪ್ರೊ. ಬಿ. ಎ. ವಿವೇಕ ರೈ ಅವರನ್ನು ಸಂಪರ್ಕಿಸಿದರೆ ವಿವರ ತಿಳಿಯಬಹುದೆಂದು ತಿಳಿಸಿ, ಅವರ ವಿಳಾಸ ನೀಡಿದ್ದರು.  ಜೊತೆಗೆ ಹೊಳೆನರಸೀಪುರ ಮಂಜುನಾಥ್ ಅವರು ನನ್ನ ಬಗ್ಗೆ ಪ್ರೊಫ಼ೆಸರಿಗೆ  ಮಿಂಚೆ ಕಳಿಸಿದ್ದರು.  ಈ ಹಿನ್ನೆಲೆಯಲ್ಲಿ  ಪ್ರೊಫ಼ೆಸರರನ್ನು ಸಂಪರ್ಕಿಸಿದಾಗ ಅವರು, ೧೯೯೩ರ ಸುಮಾರಿನಲ್ಲಿ ಕಿಟ್ಟೆಲ್ ಸಮಾಧಿಯನ್ನು ತಾವು ಸಂದರ್ಶಿಸಿದ್ದುದಾಗಿಯೂ,  ಬಹಳ ಜನ ಕಿಟ್ಟೆಲ್ ಗಳು ಇರಬಹುದಾದ ಸಾಧ್ಯತೆ ಇರುವುದರಿಂದ ಅಲ್ಲಿನ ನಾಗರಿಕರ ನೆರವು ಪಡೆದು ಹುಡುಕುವಂತೆಯೂ ತಿಳಿಸಿದರು.  ನನ್ನ ಜರ್ಮನಿ ಪ್ರವಾಸದಲ್ಲಿ ವಿವೇಕ ರೈ ಗಳನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದೇ ಹೋದದ್ದು ನನಗೆ ವಿಷಾದದ ಸಂಗತಿಯಾಗಿಯೇ ಉಳಿದುಹೋಯಿತು. 
ಇದಕ್ಕೂ ಮುಂಚೆ ನನ್ನೊಂದಿಗೆ ವಿಮಾನದಲ್ಲಿ ಪಯಣಿಸಿದ ಸಹಪಯಣಿಗ ಶ್ರೀ ವಿಜಯಕುಮಾರ್ ರವರು ಟ್ಯೂಬಿಂಗೆನ್ ವಿಶ್ವವಿದ್ಯಾನಿಲಯದಲ್ಲೇ ಉಳಿದುಕೊಳ್ಳುವರಿದ್ದರು.  ಆದರೆ ಅವರು ಇರುವವರೆಗೂ ನಾನಿದ್ದ ಸ್ಟುಟ್‍ಗಾರ್ಟ್ - ಎಷ್ಟರ್ಡಿಂಗೆನ್ ನಿಂದ ೪೦ ಕಿ.ಮೀ. ದೂರದ ಟ್ಯೂಬಿಂಗೆನ್ ಗೆ ಹೋಗಲೂ ನನಗೆ ಸಾಧ್ಯವಾಗಲಿಲ್ಲ.  ಕೊನೆಗೆ ಹಿಂತಿರುಗುವ ದಿನ ಹತ್ತಿರ ಬಂದಂತೆ, ನನ್ನ ಸಹೋದ್ಯೋಗಿ ಜರ್ಮನಿಗರಲ್ಲಿ  ಕಿಟ್ಟೆಲ್ ಬಗ್ಗೆ ವಿಚಾರಿಸಿದರೆ, ಅವರ ಬಗ್ಗೆ ತಿಳಿದವರು ಯಾರೂ ಇರಲಿಲ್ಲ.  ಕಿಟ್ಟೆಲರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನು ತಿಳಿದು ಅವರಿಗೂ ಆಶ್ಚರ್ಯವಾಗುತ್ತಿತ್ತಷ್ಟೇ.  ಸಿಮೋನ್ ನನಗಾಗಿ ಅಂತರ್ಜಾಲದಲ್ಲಿ ಹುಡುಕಿ ಟ್ಯೂಬಿಂಗೆನ್ ನಲ್ಲಿ ಮೂರು ರುದ್ರಭೂಮಿಗಳು ಇರುವುದನ್ನು ಕಂಡುಕೊಂಡ.  ನಮ್ಮ ಹಿರಿಯ ಸಹೋದ್ಯೋಗಿ ಎಲಿಸಬೆತ್, ತನ್ನ ಮಗಳು ಟ್ಯೂಬಿಂಗೆನ್ ನಲ್ಲೇ ಓದುತ್ತಿರುವುದರಿಂದ ಈ ಬಗ್ಗೆ ನನಗೆ ಸಹಾಯ ಮಾಡುವುದಾಗಿ ಹೇಳಿದರು.  ಆದರೆ ಹೆಚ್ಚಿನ ವಿಚಾರವೇನೂ ತಿಳಿಯಲಿಲ್ಲ.  ಕೊನೆಗೆ ನಮ್ಮ ಇನ್ನೊಬ್ಬಳು ಸಹೋದ್ಯೋಗಿ ಸಿಬಿಲೆ, ನನ್ನ ಪಾಡು ಕಂಡು ಅಂತರ್ಜಾಲದಲ್ಲಿ ಹುಡುಕಿ ಕಿಟ್ಟೆಲ್ ಸಮಾಧಿ ಇರಬಹುದಾದ ರುದ್ರಭೂಮಿಯ ಹೆಸರನ್ನು ತಿಳಿಸಿ, ಆ ಸಮಾಧಿಯ ರೆಫರೆನ್ಸ್ ಸಂಖ್ಯೆಯನ್ನೂ ಹುಡುಕಿ ಕೊಟ್ಟಳು.  ಇದೆಲ್ಲಾ ನನ್ನ ಜರ್ಮನ್ ಸಹೋದ್ಯೋಗಿಗಳೇ ಮಾಡಿದುದೇಕೆಂದರೆ,  ಈ ವಿವರಗಳಿರುವ ಅಂತರ್ಜಾಲ ತಾಣಗಳೆಲ್ಲಾ  ಜರ್ಮನ್ ಭಾಷೆಯಲ್ಲೇ ಇದ್ದುದು!!
ಕಡೆಗೆ ನನ್ನ ಭಾರತೀಯ ಸಹೋದ್ಯೋಗಿಗಳೊಂದಿಗೆ ಟ್ಯೂಬಿಂಗೆನ್ ಗೂ ಪಯಣಿಸಿದೆ.  ಅವರಲ್ಲಿ ಒಬ್ಬರು ಉತ್ತರ ಭಾರತೀಯರು, ಕನ್ನಡದ ಬಗ್ಗೆ ಏನೂ ಗೊತ್ತಿರುವವರಲ್ಲ.  ಟ್ಯೂಬಿಂಗೆನ್ ನೋಡಲೆಂದು ಹೊರಟವರು.  ಇನ್ನೊಬ್ಬರು ಕನ್ನಡಿಗರೇ ಆದರೂ ಮಾಡರ್ನ್ ಕನ್ನಡಿಗರು.! ಕಿಟ್ಟೆಲ್ ಸಮಾಧಿ ನೋಡುವ ಆಸಕ್ತಿ ಇರುವವರಲ್ಲ.  ಟ್ಯೂಬಿಂಗೆನ್ ನಲ್ಲಿ ಅವರಿಬ್ಬರನ್ನು ಅವರ ಪಾಡಿಗೆ ಬಿಟ್ಟು,  ರುದ್ರಭೂಮಿಯ ವಿಳಾಸ ಹಿಡಿದು ಹುಡುಕುತ್ತಾ ಹೊರಟೆ.  ವಿಶ್ವವಿದ್ಯಾನಿಲಯದ ಬದಿಯಲ್ಲೇ ಇದ್ದ ವಿಶಾಲ ರುದ್ರಭೂಮಿ ಅದು ಸ್ಟಾಟ್-ಫ್ರೀಢ್‍ಹಾಫ್. ( ಗಣ್ಯರ-ರುದ್ರಭೂಮಿ).  ಅಲ್ಲಿನ ಪಿ ಬ್ಲಾಕ್ ಒಂದನೇ ವಿಭಾಗದಲ್ಲಿ ೧೭ ನೇ ಸಮಾಧಿ ಕಿಟ್ಟೆಲರದು ಎಂದು ಸಿಬಿಲೆ ಪ್ರಿಂಟ್ ಮಾಡಿ ಕೊಟ್ಟಿದ್ದಳಲ್ಲಾ.. ಅದನ್ನು ಹುಡುಕಲು ಒಳ ಹೊಕ್ಕರೆ...
ವಿಂಗಡಣೆಗೆ ಯಾವುದೇ ಸಂಖ್ಯೆಗಳಿರಲಿಲ್ಲ. ಪಿ ಬ್ಲಾಕ್ ಹುಡುಕುವುದು ಸುಲಭವಾದರೂ  ಒಂದನೇ ವಿಭಾಗದ ಹದಿನೇಳನೇ ಸಮಾಧಿ ಹುಡುಕುವುದು ಸುಲಭವಾಗಿರಲಿಲ್ಲ. ನಿಶ್ಯಬ್ದ ಪಾಲಿಸಬೇಕಾದ ರುದ್ರಭೂಮಿಯಲ್ಲಿ ನಾನು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆಯುತ್ತಿದ್ದೆ. ಸಹಾಯ ಕೇಳೋಣವೆಂದರೂ ಅಲ್ಲಿ ಯಾರೂ ಕಣ್ಣಿಗೆ ಬೀಳುವವರಿರಲಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ಹುಡುಕಾಟದಲ್ಲಿ ನೂರಾರು ಸಮಾಧಿಗಳ ಹೆಸರು ನೋಡಿದ್ದೆ.  ಕಿಟ್ಟೆಲರ ಹೆಸರು ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲ.  ನಿರಾಸೆಯೊಂದಿಗೆ ಅಲ್ಲಿ ನಿಂತಾಗ, ಗಿಡಕ್ಕೆ ನೀರು ಹಾಕಲು ಬಂದ ಹಣ್ಣು ಹಣ್ಣು ಮುದುಕಿಯೊಬ್ಬರು ಕಣ್ಣಿಗೆ ಬಿದ್ದರು.  ಅವರ ಬಳಿ ಈ ಸಮಾಧಿ ಕಂಡು ಹಿಡಿಯಲು ಸಹಾಯ ಯಾಚಿಸಿದೆ.  ಅವರಿಗೆ ಇಂಗ್ಲಿಶ್ ಬರದು, ನನಗೆ ಜರ್ಮನ್ ಬರದು.  ನಾನು ಕನ್ನಡದಲ್ಲೇ ಕೇಳಿದ್ದರೂ ಏನೂ ತೊಂದರೆ ಇರಲಿಲ್ಲ.  ಆ ಮಾತೆ, ಒಂದು ನಿಮಿಶ ಚಿಂತಿಸಿ, ಕೈ-ಸನ್ನೆ ಯ ಜಾಗತಿಕ ಭಾಷೆಯಲ್ಲಿ ತನ್ನ ಮಗ ನನಗೆ ಸಹಾಯ ಮಾಡಬಹುದೆಂದೂ, ನಾನು ಆಕೆಯನ್ನು ಹಿಂಬಾಲಿಸಬೇಕೆಂದೂ ತಿಳಿಸಿದರು.  ಅಂದೇನೋ ಜರ್ಮನಿಯಲ್ಲಿ ಬೆಂಕಿಯಂತ ಬಿಸಿಲು. ಮೂವತ್ತೈದು ಡಿಗ್ರಿ ಸೆಂಟಿಗ್ರೇಡುಗಳಷ್ಟು ಉಷ್ಣತೆ. ನಾನಾಗಲೇ ಐದಾರು-ಕಿಮೀಗಳಷ್ಟು ದೂರ ನಡೆದು ದಣಿದಿದ್ದೆ.  ಆ ಅಜ್ಜಿಯನ್ನು ಹಿಂಬಾಲಿಸಿದೆ.  ಆದರೂ ನಡಿಗೆಯ ವೇಗದಲ್ಲಿ ಅವರನ್ನು ಸರಿಗಟ್ಟಲು ನನಗಾಗಲಿಲ್ಲ.  ನಾಲ್ಕು ನಿಮಿಷಗಳ ನಡಿಗೆಯಲ್ಲಿ ಆ ರುದ್ರಭೂಮಿಯಿಂದ ಹೊರಬಂದು ಅದರ ಪಕ್ಕದಲ್ಲಿರುವ ಮನೆಯೊಂದಕ್ಕೆ ಹೊಕ್ಕ ಅಜ್ಜಿ ತನ್ನ ಮಗನಿಗೇನೋ ಕೂಗಿ ಹೇಳಿದರು. ನನಗೆ ಕುಡಿಯಲು ಒಂದಷ್ಟು ನೀರು ಕೊಟ್ಟರು.  ಜ್ಯೂಸ್ ಬೇಕಾ ಎಂದು ವಿಚಾರಿಸಿದರು. ಬೇಡವೆಂದೆ. ನನ್ನ ಮನಸ್ಸೆಲ್ಲಾ ಇಷ್ಟು ದೂರ ಬಂದರೂ ಇನ್ನೂ ಕಾಣದ ಕಿಟ್ಟೆಲ್ ಸಮಾಧಿಯ ಬಗ್ಗೆಯೇ ಚಿಂತಿಸುತ್ತಿತ್ತು.  ಅಷ್ಟರಲ್ಲಿ ಅವರ ಮಗ ಆ ರುದ್ರಭೂಮಿಯ ಕೀಪರ್ ಇರಬೇಕು ಎನ್ನಿಸುತ್ತದೆ.  ನಾನು ಹೇಳಿದ ಹೆಸರಿನಿಂದ ಅವನಿಗೇನೂ ಹೊಳೆದಂತೆನ್ನಿಸಲಿಲ್ಲ.  ಆದರೆ ಸಮಾಧಿಯ ಸಂಖ್ಯೆ P I 17  - ೬೩ ಎನ್ನುವುದನ್ನು ಹೇಳಿದಾಗ ಅವನ ಮುಖದಲ್ಲಿ ಹೊಳಪು ಕಾಣಿಸಿತು.  ಒಳ ಹೋಗಿ ಬಂದವನ ಕೈಯಲ್ಲಿ  ರುದ್ರಭೂಮಿಯ ಮ್ಯಾಪ್ ಇತ್ತು.  ಅದರಲ್ಲಿ ಹುಡುಕಿದಾಗ ನಾನು ಹೇಳಿದ ಸಂಖ್ಯೆ ಮತ್ತು ಹೆಸರು ಹೊಂದಿಕೆಯಾದದ್ದನ್ನು ಕಂಡು ನನಗೇ ಸಂತಸವಾಯಿತು.  ಮತ್ತೆ ಎರಡು ನಿಮಿಷಗಳ ನಡಿಗೆಯ ನಂತರ ನಾನು ಕಿಟ್ಟೆಲ್ ಸಮಾಧಿಯ ಮುಂದಿದ್ದೆ.  ಅವನಿಗೆ ಗುರುತು ಪರಿಚಯವಿರದ ಬೇರೆ ಧರ್ಮ ಮತ್ತು ದೇಶದ ವ್ಯಕ್ತಿ ಈ ಸಮಾದಿಯನ್ನು ಹುಡುಕಿ ಬಂದಿದ್ದು ಅಚ್ಚರಿಯಾಗಿದ್ದು ಅವನ ನೋಟದಲ್ಲಿ ಕಾಣುತ್ತಿತ್ತು.  ಅದರಲ್ಲೂ ಫ಼ರ್ಡಿನಾಂಡ್ ಕಿಟ್ಟೆಲ್ ಮರಣಿಸಿದ್ದು ೧೯೦೩ ರಲ್ಲಿ ಎಂದಾಗ ಅವನಿಗಿನ್ನೂ ಅಚ್ಚರಿ. ನೂರು ವರುಷಗಳ ಹಿಂದೆ ಮರಣಿಸಿದ ವ್ಯಕ್ತಿಯ ಸಮಾಧಿ ಹುಡುಕುತ್ತಾ ೩೫ರ ಈ ವ್ಯಕ್ತಿ ಅವನಿಗೆ ಒಗಟಾಗಿಯೇ ಕಂಡಿರಬೇಕು.
ಕಿಟ್ಟೆಲ್ ಕರ್ನಾಟಕದಲ್ಲಿ ಮಾಡಿದ ಸಾಧನೆಯ ಬಗ್ಗೆ ಅವನಿಗೆ ತಿಳಿಸಿದೆ. ಅವರ ಪ್ರತಿಮೆ ಬೆಂಗಳೂರಿನಲ್ಲಿರುವುದನ್ನೂ ತಿಳಿಸಿದೆ.  ಇಲ್ಲೆಲ್ಲಾ ಬೆಂಗಳೂರು ಜಗತ್ಪ್ರಸಿದ್ದ.!  ಅಚ್ಚರಿಯೊಂದಿಗೆ ನನ್ನನ್ನು ಬೀಳ್ಕೊಟ್ಟು ಅವನು ಹೊರಟು ಹೋದ. 
ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ನಾನಲ್ಲಿದ್ದೆ. ಕಿಟ್ಟೆಲ್ ಸಮಾಧಿಯೊಂದಿಗೆ ಕನ್ನಡದ ಇಂದಿನ ಸ್ಥಿತಿಗಳನ್ನು ನನಗೆ ತಿಳಿದಂತೆ ಹೇಳಿಕೊಂಡೆ. ಕುವೆಂಪು, ಪೂಚಂತೆ,ಬೇಂದ್ರೆ,ಗೋಕಾಕ್,ಕಾರ್ನಾಡ,ಅನಂತಮೂರ್ತಿ, ರಾಜಕುಮಾರ್, ವಿಷ್ಣು, ಶಂಕರನಾಗ್, ಹೀಗೆ ನನ್ನ ಮನಸ್ಸಿಗೆ ಹೊಳೆದವರ ಬಗ್ಗೆಯೆಲ್ಲಾ ಹೇಳಿದೆ. ಅವರ ಸಾಧನೆಯ ಶಕ್ತಿಗೆ ನನ್ನ ನಮನಗಳನ್ನರ್ಪಿಸಿ ಮೌನಾಚರಣೆ ಮಾಡಿದೆ.  ನಂತರ ಹಿಂದಿರುಗಿ ಬಂದು ನೆಕರ್ ನದಿಯ ದಂಡೆಯಲ್ಲಿ ಕಾಯುತ್ತಿದ್ದ ನನ್ನ ಸಹೋದ್ಯೋಗಿಗಳನ್ನು ಸೇರಿಕೊಂಡೆ. 

Rating
No votes yet

Comments