ಹುಚ್ಚು ನದಿ

ಹುಚ್ಚು ನದಿ

ಹೆಣ್ಣನ್ನು ನದಿಗೆ ಯಾಕೆ ಹೋಲಿಸುತ್ತಾರೆ, ಚಲಿಸುವ ಎಲ್ಲಕ್ಕೂ ಹೆಣ್ಣೆಂದು ಯಾಕೆ ಕರೆಯುತ್ತಾರೆ ಎಂದು ಅವಳಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು. ಆದರೆ ಅದರ ಬಗ್ಗೆ ಯಾವತ್ತೂ ತಲೆಗೆಡಿಸಿಕೊಳ್ಳದೆ ಏಕಾಂಗಿಯಾಗಿ ಬದುಕನ್ನು ಮುಂದುವರಿಸುತ್ತೇನೆ ಎಂದು ಕರ್ನಾಲನ್ನು ಬಿಟ್ಟು ಪುಣೆಗೆ ಬಂದವಳಿಗೆ ಕೆಲಸ ಹುಡುಕುವುದು ಅಷ್ಟೇನೂ ಕಷ್ಟವಾಗಿರಲಿಲ್ಲ. ಈಗೀಗ ಕೆಲಸ ಸಿಗುವುದು ಯಾರಿಗೂ ಕಷ್ಟವಲ್ಲವಲ್ಲ. ಆದರೂ ತನ್ನ ಡ್ರೀಮ್ ಕಂಪನಿಯಲ್ಲಿ ಅದೂ ತನಗಿಷ್ಟವಾದ ಫೈನಾನ್ಸ್ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಸಿಕ್ಕಿದ್ದು ತಾನು ಮಾಡಿದ ಮಹಾನ್ ಸಾಧನೆ ಎಂದು ಅವಳಿಗನಿಸಿತ್ತು. ಅದು ನಿಜವಾಗಿಯೂ ಹೌದು.

ದೂರ ಮನಸ್ಸುಗಳನ್ನು ದೂರ ಮಾಡಿ ಬಿಡುತ್ತದೆ ಎಂದು ಕಾರಣ ಕೊಟ್ಟಿದ್ದರೂ ಒಂಥರಾ ಸ್ಯಾಡಿಸ್ಟ್ ಆಗಿರುವ ಅವನ ಮೇಲೆ ಮೊದಲಿನಿಂದಲೂ ಆಕೆಗೆ ಅಷ್ಟಕಷ್ಟೇ! ಅಸ್ಖಲಿತ ಪ್ರೀತಿಗೆ ಮನಸ್ಸು ಸೋಲುತ್ತಿದ್ದರೂ ಇಂದು ತನ್ನ ಬದುಕು ಬಹು ದೊಡ್ಡ ಆಯಾಮದಲ್ಲಿದೆ ಮತ್ತು ಇಲ್ಲಿ ಪ್ರೀತಿಗೆ ಅಷ್ಟೇನೂ ಸ್ಥಳವಿಲ್ಲ. ಅದರ ಮೇಲೆ ಅವನಿಗೆ ಮದುವೆ, ಮಕ್ಕಳ ಭೂತ ತಲೆಗೆ ಹಿಡಿದಿದೆ. ಇಂದು ನಿಲ್ಲಿಸದಿದ್ದರೆ ತನ್ನ ಬದುಕನ್ನು ತಾನೇ ಹಾಳು ಮಾಡಿಕೊಂಡಂತೆ ಎಂದು ಅದರ ನಂತರ ತನ್ನ ಬಾಯ್ ಫ್ರೆಂಡನ್ನು ಡಂಪ್ ಮಾಡಿ ಖುಷಿಯಲ್ಲೇ ಇದ್ದಳು. ಸ್ವತಂತ್ರವಾಗುವುದರ ಅರ್ಥವೆಂದರೆ ತನ್ನದೇ ನಿರ್ಧಾರಗಳು ಮತ್ತು ಅದರಿಂದಾದ ಲಾಭ/ನಷ್ಟಗಳಿಗೆ ತಾನೇ ಜವಾಬ್ದಾರಿ. ಇದರಿಂದ ಆಗುವ ದೊಡ್ಡ ಸಮಾಧಾನಕರ ಸಂಗತಿಯೆಂದರೆ ಇನ್ನೊಬ್ಬನ ಮೇಲೆ ಆಪಾದನೆ ಹೊರಿಸುವ ಅಗತ್ಯವಿಲ್ಲದಿರುವುದು. ಇದು ಅವಳಿಗೆ ಇಷ್ಟವೇ ಆಗಿತ್ತು

ಇಂದಾದರೂ ತನ್ನ ಬಾಸ್ ಎಂಬ ಟಾಪ್ ಟು ಬಾಟಂ ತನ್ನ ಕ್ಷಕಿರಣ ದೃಷ್ಟಿ ಬೀರುವ ಮನುಷ್ಯನಿಗೆ ಪಾಠ ಕಲಿಸಬೇಕು ಎಂದುಕೊಂಡೇ ಬಂದಿದ್ದಳು. ಬಂದ ತಕ್ಷಣವೇ ಮೀಟಿಂಗ್ ಆಮಂತ್ರಣ ಕೊಟ್ಟಿದ್ದ ಇ-ಮೇಲೊಂದು ಅವಳ ಇನ್ಬಾಕ್ಸಿನಲ್ಲಿ ಬಿದ್ದಿತ್ತು. ಎಂದಿನಂತೆ ತನ್ನ ಬೆಳವಣಿಗೆ ಕುರಿತಾದ ಚರ್ಚೆ. ವನ್ ಟು ವನ್ ಆಗಿರುವ ಈ ಮೀಟಿಂಗ್ ತನ್ನ ಬೆಳವಣಿಗೆಗೆ ನಿಜಕ್ಕೂ ಲಾಭಕರ ಎಂದು ಯೋಚಿಸಿದಾಗಲೆಲ್ಲಾ ತನ್ನ ಬಗ್ಗೆ ಇಷ್ಟೊಂದು ಕಾಳಜಿಯಿರುವ ಬಾಸಿನ ಮೇಲೆ ಪ್ರೀತಿ ಉಕ್ಕಿ ಬರೋದು. ಎರಡು ಮಕ್ಕಳಿರುವ ಆತನನ್ನು ರೋಲ್ ಮಾಡಲ್ ಎಂದೇ ಆರಾಧಿಸುತ್ತಿದ್ದಳು. ಅವನ ದೃಷ್ಟಿಯೊಂದು ಮಾತ್ರ ಅವಳಿಗೆ ಸರಿ ಬರುತ್ತಿರಲಿಲ್ಲ ಆದರೆ ಈಗ ಅದು ಮರೆತೇ ಹೋಗಿತ್ತು!

ಕಳೆದ ತಿಂಗಳಿನಲ್ಲಿ ನಡೆದ ಮೀಟಿಂಗ್ನಲ್ಲಿ ತಾನು ಮಾಡುವ ಇನ್ನೋವೆಷನ್ನುಗಳು ಮತ್ತು ಎಲ್ಲರನ್ನೂ ಹಿಂದಿಕ್ಕಿ ಟಾರ್ಗೆಟ್ ತಲುಪುವ ವೇಗ ನಿಜಕ್ಕೂ ಇಂಪ್ರೆಸ್ಸಿವ್ ಎಂದು ಹೊಗಳಿಕೆ ಗಿಟ್ಟಿಸಿಕೊಂಡಿದ್ದಳು. ಅದರ ಮೇಲೆ ಮುಂದಿನ ಅವಕಾಶಗಳು, ಮಾರ್ಕೆಟಿನಲ್ಲಿ ಕಂಪನಿಯ ವ್ಯಾಲ್ಯೂ ಎಂದೆಲ್ಲಾ ಮಾತನಾಡುತ್ತಾ ಬಳಿ ಬಂದು ತನ್ನ ಭುಜ ತಟ್ಟಿ ಮೆಲ್ಲನೆ ಅಮುಕಿದಾಗ ಇಡೀ ಮೈಯಲ್ಲಿ ಜ್ವರ ಬಂದಂತಾಗಿತ್ತು. ಅವನ ಮುಖದಲ್ಲಿ ಒಂದು ಮಂದಹಾಸವಿತ್ತು. ಇವಳೂ ನಗಲು ಯತ್ನಿಸಿದ್ದಳು.

 

ಮುಂದಿನ ಅರ್ಧ ಘಂಟೆಯಲ್ಲಿ ನಡೆಯಲಿರುವ ಮೀಟಿಂಗ್ ತಯಾರಿಗೆಂದು ಒಮ್ಮೆ ಕನ್ನಡಿ ನೋಡಿಕೊಂಡಳು, ಕೂದಲನ್ನು ಬಿಟ್ಟು ಸ್ವಲ್ಪ ಗ್ಲೋಸ್ ಬಳಿದುಕೊಂಡು ಹೊರಟವಳಿಗೆ ನ್ಯೂಸ್ ಪೇಪರ್ ಕಣ್ಣಿಗೆ ಬಿದ್ದಿತ್ತು. ತನ್ನ ಡೆಸ್ಕಿನ ಮೇಲಿದ್ದ ಅದರಲ್ಲಿ ಯಮುನೆ ಎಂಬ ನದಿ  ಹುಚ್ಚು ಹಿಡಿದಂತೆ ಹರಿಯುತ್ತಿದ್ದ ಸುದ್ದಿಯಿತ್ತು. ಇನ್ನೂ ಎಷ್ಟು ಆಪೋಷಣೆ ಮಾಡುತ್ತಾಳೆ, ಎತ್ತ ಸಾಗುತ್ತಾಳೆ ಎಂದು ಗೊತ್ತಿರಲಿಲ್ಲ. ಅವಳು ಅದರ ಬಗ್ಗೆ ತಲೆಯೂ ಕೆಡಿಸಿಕೊಳ್ಳಲಿಲ್ಲ.  

Rating
No votes yet

Comments