ಮಿಂಚುಹುಳಗಳು
ಮಿಂಚುಹುಳುಗಳು
ಕುದುರೆಮುಖದ ಮಳೆಗಾಲವೊಂದು ನೆನಪಾಗುತ್ತದೆ.
ಅಕ್ಕ, ನಾನು, ರೂಪ, ರಾಜು – ಹುಡುಗರು, ರಜೆಗೆ
ಅಂತ ಬಂದಿದ್ದು. ಚಿಕ್ಕಪ್ಪ ಕುಡಿದು ಬರುವುದಕ್ಕೆ ಮುಂಚೆ
ನಮ್ಮೆಲ್ಲರ ಮೋಜು, ಮಾತು, ಗುಜು ಗುಜು ಮುಗಿದುಬಿಡಬೇಕು,
ಚಿಕ್ಕಮ್ಮನ ಬಿಸಿಬಿಸಿ ಪಡ್ಡುಗಳು – ಬೆಂಗಳೂರಲ್ಲಿ ಎಲ್ಲಿ ಸಿಗಬೇಕು!
ಜೊತೆಗೆ ಅವರಿಗೆ ಹೇಳದೆ ಮನೆಮುಂದಿನ ರಸ್ತೆಬದಿಯ ರಕ್ಕಸ
ಹಲಸಿನ ಮರದ ತೊನೆತೊನೆ ಹಣ್ಣುಗಳ ಪಕ್ಕ
ಕಟ್ಟಿದ್ದ ಹೆಜ್ಜೇನು ಹಟ್ಟಿಗಳು ಆದಿನ ಕೀಳಿಸಿತ್ತು.
ಬಂದಾಗಲೇ ಏರಿತ್ತು.
ಅದೇನು ಅಸಾಧ್ಯ ಚೆಲುವು ಈ ಚಿಕ್ಕಪ್ಪನದ್ದು!
ಸರಿ. ಸ್ನಾನ, ವಿಭೂತಿ, ಅವರಮ್ಮನ ಫೋಟೊಗೆ ಊದುಬತ್ತಿ ಹೊಗೆ, ಹೂವು
– ಇಷ್ಟು ನಮಗೆ ತಿಳಿದಿತ್ತು.
ಆಮೇಲೆ?
ಬಾಗಿಲ ಸಂದಿಯಿಂದ ಚಿಕ್ಕಪ್ಪ ಚಿಕ್ಕಮ್ಮನ ಮೂತಿಗೆ ಎರಡು
ಬಿಟ್ಟಿದ್ದು, ತೊಡೆ ನಡುಗಿದ್ದು.
ಶಾಲೆಯಂತೆ ನಮ್ಮನ್ನೆಲ್ಲ ಕೂರಿಸಿಕೊಂಡು
ಎಂದೋ ಕಲಿತು ಮರೆಮರೆತು ಬ್ರೋಚೇವಾರೆವರುರಾ
ಹಾಡುತ್ತ, ಹಾಡುತ್ತ, ಅದೇನಾಯಿತೊ, ಒಂಟಿ ಗಾಲಲ್ಲಿ ಬಾಗಿಲಿಗೊರಗಿ
ಒಗ್ಗರಣೆ ಮೇಲೊಂದು ಕಣ್ಣಿಟ್ಟು ಕೇಳುತ್ತಿದ್ದ ಚಿಕ್ಕಮ್ಮನಿಗೆ
ರೊಯ್ಯನೆ ಗಾಜಿನ ಬಟ್ಟಲಿಂದ ಮುಖಕ್ಕೆ ಗುರಿಯಿಟ್ಟು ಹೊಡೆದಿದ್ದು.
ಅಕ್ಕ ರೂಪ ಎದ್ದದ್ದು, ಚಿಕ್ಕಪ್ಪ ಅವರನ್ನು ಗದರಿ ಕೂರಿಸಿದ್ದು,
ರಾಜು ಬಾಗಿಲಲ್ಲಿ ಅಮ್ಮನತ್ತ ಹೋಗುವುದೋ ಬೇಡವೋ ಎಂಬಂತೆ ನಿಂತದ್ದು,
ಚಿಕ್ಕಮ್ಮ ಹೋಗಿ ಅಡುಗೆ ಮನೆ
ಸಿಂಕಿನಲ್ಲಿ ಮುಖ ತೊಳೆದು, ಒಗ್ಗರಣೆ ಹಾಕಿದ್ದು,
ನಾನು ಹಾಗೆಯೇ ಹೊರಗೆ ಬಾಲ್ಕನಿಯಲ್ಲಿ
ಜಿರ್ರೋ ಜಿರ್ರೋ ಕತ್ತಲ ಮಧ್ಯೆ, ಆ ಅಂಥ
ಕಾಡಿನಂತ ಊರಿನ ಲೈಟುಕಂಬಗಳ ಬೆಳಕಲ್ಲಿ
ನುಸುಳಾಡುವ ಬೆಟ್ಟದ ಕುರುಡು ರಸ್ತೆಗಳಲ್ಲಿ ಯಾರಿಗೆ ಕಾದಿದ್ದು?
ಬಾಲ್ಕನಿಯ ಕಟ್ಟೆಯಲ್ಲಿ ಮುಖವೂರಿ ಕೂತು
ಬೆಂಗಳೂರಲ್ಲಿ ಅಣ್ಣ ಇಷ್ಟೊತ್ತಿಗೆ ಮನೆಗೆ ಬಂದಿರಬಹುದೇನೋ ಎಂದು
ಯೋಚಿಸುತ್ತ ಅಕಸ್ಮಾತ್ ಕತ್ತಲಲ್ಲಿ ಕೆಳಗೆ ನೋಡಿದಾಗ ಕಂಡದ್ದು
ಗುಂಡಿಯಲ್ಲಿ ಬೆಳಕಿನ ಚೂರುಗಳಂತೆ ನೂರಾರು, ಸಾವಿರಾರು ಮಿಂಚುಹುಳಗಳು.
ರವಿಶಂಕರ
೩೦, ಜನವರಿ, ೨೦೦೯