ಅಯೋಧ್ಯೆ ತೀರ್ಪಿನ ಮುಂದೂಡುವಿಕೆಯಿಂದುಂಟಾದ ಕಷ್ಟನಷ್ಟಗಳು
(ಈ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ.)
* ಶಾಲಾ ಮಕ್ಕಳಿಗೆ ಎರಡು ದಿನಗಳ ರಜಾ ಮಜಾ ಸದ್ಯಕ್ಕಂತೂ ಕೈತಪ್ಪಿಹೋಯಿತು.
* ಪೋಲೀಸ್ ಬಂದೋಬಸ್ತ್‌ಗೆ ಮಾಡಿದ ಖರ್ಚೆಲ್ಲ ವ್ಯರ್ಥವಾಯಿತು.
* ವಿವಿಧ ಸಂಘಟನೆಗಳ ಪ್ರತಿಭಟನಾಕಾರರ ಉತ್ಸಾಹಕ್ಕೆ ತಣ್ಣೀರೆರಚಿದಂತಾಯಿತು.
* ಬಾಡಿಗೆ ಪ್ರತಿಭಟನಾಕಾರರ ಆದಾಯಕ್ಕೆ ಹೊಡೆತ ಬಿತ್ತು.
* ತೀರ್ಪಿನ ಕಾವಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿದ್ದ ಪುಢಾರಿಗಳು ಆ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು.
* ಬರ್ಖಾದತ್, ಸರ್ದೇಸಾಯಿ, ಪ್ರತಾಪಸಿಂಹಾದಿಗಳು ಆವೇಶ ಹತ್ತಿಕ್ಕಿಕೊಂಡು ಕಾಯಬೇಕಾದ ಅವಸ್ಥೆ ಬಂತು.
* ಟಿವಿ ಕೇಂದ್ರಗಳಿಗೆ ಕ್ಯೂ ಹಚ್ಚಿದ್ದ ಗಣ್ಯರು ಮತ್ತು ಬುದ್ಧಿಜೀವಿಗಳು ವಾಪಸ್ ಹೋಗಬೇಕಾಯಿತು.
* ಪತ್ರಿಕೆಗಳಿಗೆ ಲೇಖನ ಅಥವಾ ಪತ್ರ ಬರೆಯಲು ಚಡಪಡಿಸಿಕೊಂಡಿದ್ದ (ನನ್ನಂತಹ) ಲೇಖಕರ ರಣೋತ್ಸಾಹ ಟುಸ್ ಆಯಿತು.
* ಪತ್ರಿಕೆಗಳು ೨೪ಕ್ಕೆಂದು ರೆಡಿಮಾಡಿಟ್ಟುಕೊಂಡಿದ್ದ ವಿಶೇಷ ಪುರವಣಿ, ವಿಶೇಷ ಲೇಖನ, ವಿಶೇಷ ಪುಟಗಳೆಲ್ಲ ವೇಸ್ಟ್ ಆದವು. (’ಸಂಯುಕ್ತ ಕರ್ನಾಟಕ’ ಮಾತ್ರ ವೇಸ್ಟ್ ಮಾಡಿಕೊಳ್ಳಲಿಲ್ಲ.)
* ’ಸುವರ್ಣ ನ್ಯೂಸ್’ ವಾಹಿನಿಯ ’ಬಿಗ್ ಫೈಟ್ ವಿತ್ ರಂಗನಾಥ್’ ಎಂಬ ಪ್ರಹಸನದ ಹಲವು ಸಂಚಿಕೆಗಳ ಸಿದ್ಧತೆಗಳು ವ್ಯರ್ಥವಾದವು. (ರಂಗನಾಥ್ ಅವರು ಮೇಕಪ್ ಬಿಟ್ಟು ಬೇರಾವ ಪೂರ್ವಸಿದ್ಧತೆಯೂ ಇಲ್ಲದೆ ಕಾರ್ಯಕ್ರಮಕ್ಕೆ ಬರುವುದರಿಂದಾಗಿ ಅವರಿಗೆ ಏನೂ ನಷ್ಟವಾಗಿಲ್ಲ.)
* ಬಸ್, ವಿದ್ಯುತ್, ನೀರು, ಕಸ ಎತ್ತುವಿಕೆ ಇತ್ಯಾದಿ ಸೇವೆ ಒದಗಿಸುತ್ತಿದ್ದ ಸಂಸ್ಥೆಗಳು ಪ್ರತಿಭಟನೆ, ಬಂದ್, ಗಲಭೆಗಳ ನೆಪ ಹೇಳಿ ಸೇವೆ ಸ್ಥಗಿತಗೊಳಿಸುವ ಸದವಕಾಶದಿಂದ ಸದ್ಯಕ್ಕಂತೂ ವಂಚಿತವಾದವು.
* ಎಂದಿನಂತೆ ಆ ಸಂದರ್ಭದಲ್ಲಿ ಆಟೋಗಳು ಕೈಗೊಳ್ಳುತ್ತಿದ್ದ ಭರ್ಜರಿ ಬೇಟೆ ಮುಂದೂಡಲ್ಪಟ್ಟಿತು.
ಈ ಎಲ್ಲ ನಷ್ಟಗಳಿಗೆ ಕಾರಣವಾದ ತೀರ್ಪು ಮುಂದೂಡುವಿಕೆಯನ್ನು ಪ್ರಶ್ನಿಸಿ ನಾನು ನ್ಯಾಯಾಲಯದಲ್ಲಿ ಸಾರ್ವಜನಿಕ ಅಹಿತಾಸಕ್ತಿ ಅರ್ಜಿ ದಾಖಲಿಸುವವನಿದ್ದೇನೆ.