ರಾಬ್ಡಿದೇವಿಗೆ ತಾನು ಸತ್ತಂತೆ ಕನಸು ಬಿದ್ದಾಗ...

ರಾಬ್ಡಿದೇವಿಗೆ ತಾನು ಸತ್ತಂತೆ ಕನಸು ಬಿದ್ದಾಗ...

   ರಾಬ್ಡಿದೇವಿಗೆ (ಅದೇಪ್ಪಾ, ಶ್ರೀಮತಿ ಲಾಲೂ) ಒಮ್ಮೆ ತಾನು ಸತ್ತಂತೆ ಕನಸು ಬಿತ್ತಂತೆ. ಕೇವಲ ಕನಸು ಸ್ವಾಮೀ; ನೂರಲ್ಲ, ಇನ್ನೂರು ವರ್ಷ ಬದುಕಲಿ ಬಿಡಿ, ನಮಗೇನು? ರಾಬ್ಡಿಗೆ ಕನಸು ಬಿದ್ದಾಗ ನಮ್ಮ ಲಾಲೂ ಸಾಹೇಬರು ಮಾತ್ರ ಇನ್ನೂ ಗುಂಡುಕಲ್ಲಿನ ಹಾಗೆ ಬದುಕಿದ್ದಾರೆ ಅನ್ನೋದು ನೆನಪಿಡಲೇಬೇಕಾದ ವಿಚಾರ. ಸತ್ತಮೇಲೆ ಇನ್ನೇನು, ಕೊನೆಯ ವಿಚಾರಣೆ ಆಗಲೇಬೇಕಲ್ಲ. ರಾಬ್ಡಿ ಕೂಡಾ ಯಮಲೋಕದಲ್ಲಿ ಯಮಧರ್ಮನ ಮುಂದೆ ಹಾಜರಾದಳು. ಆಕೆಗೂ ಸಿನೆಮಾ ನೋಡಿ, ಪುಸ್ತಕ-ಪುರಾಣ ಓದಿ, ಯಮಲೋಕ ಅಂದರೆ ಹೀಗಿರುತ್ತೆ ಅಂತ ಒಂದು ಕಲ್ಪನೆಯಿತ್ತು. ಆದರೆ ಆಶ್ಚರ್ಯ ಅಂದರೆ ಯಮಲೋಕ ಹಾಗಿರಲೇ ಇಲ್ಲ! ಕಾಲಕ್ಕೆ ತಕ್ಕಂತೆ ಇದೂ ಬದಲಾಗಿದೆ ಅಂತಂದುಕೊಂಡಳು ರಾಬ್ಡಿದೇವಿ.

   ಯಮ ಆಕೆಯ ವಿಚಾರಣೆ ಶುರು ಮಾಡಿದ. ಚಿತ್ರಗುಪ್ತರಿಗೆ ನಿವೃತ್ತಿಯಾಗಿತ್ತು. ಹಾಗಾಗಿ ಅವರೂ ಕೂಡಾ ಇರಲಿಲ್ಲ. ಯಮ "ರಾಬ್ಡಿಯ ಗಡಿಯಾರ ತನ್ನಿ" ಅಂತ ಆದೇಶಿಸಿದ. ಅವನ ಸೇವಕರು ಒಂದು ದೊಡ್ಡ ಗೋಡೆ ಗಡಿಯಾರ ತಂದರು. ಯಮ ಅದನ್ನು ನೋಡಿ "ನೀನು ನಿನ್ನ ಜೀವನದಲ್ಲಿ ಒಟ್ಟು ಒಂಭತ್ತು ಸಾವಿರದ ಐನೂರ ಹತ್ತೊಂಭತ್ತು ಸಾರ್ತಿ ಸುಳ್ಳು ಹೇಳಿದ್ದೀಯ" ಅಂದ. ರಾಬ್ಡಿಗೆ ಶಿಕ್ಷೆಯೇನು ಕೊಡುತ್ತಾನೋ ಅಂತ ಗಾಬರಿಯಾದರೂ ಯಮನ ವಿಚಾರಣೆಯ ರೀತಿ ಮಾತ್ರ ವಿಚಿತ್ರ ಅನ್ನಿಸಿತು. "ಇದೇನು, ಯಮರಾಜ ಇಷ್ಟು 'ಅಪ್ ಟು ಡೇಟ್' ಆಗಿದ್ದಾನಲ್ಲ" ಅಂತ ಮನಸ್ಸಿನಲ್ಲೇ ಅಂದುಕೊಂಡು, ಧೈರ್ಯ ಮಾಡಿ ಯಮನನ್ನು ಕೇಳಿಯೇಬಿಟ್ಟಳು. "ಅಲ್ಲ, ಯಾವುದೋ ಗಡಿಯಾರ ನೋಡಿ ನನ್ನ ಬಗ್ಗೆ ತೀರ್ಪು ಕೊಟ್ಟಿರಲ್ಲ, ಹೇಗೆ" ಅಂತ. ಯಮ ಹೇಳಿದ "ಇದು ಸಮಯ ಉಳಿಸೋದಕ್ಕೆ ಮಾಡಿರುವ ಹೊಸಾ ವಿಧಾನ. ಭೂಲೋಕದಲ್ಲಿರುವ ಪ್ರತಿಯೊಬ್ಬರದ್ದೂ ಒಂದು ಗಡಿಯಾರ ಇರುತ್ತೆ ಯಮಲೋಕದಲ್ಲಿ. ಆಯಾ ವ್ಯಕ್ತಿ ಒಮ್ಮೆ ಸುಳ್ಳು ಹೇಳಿದ ಅಂದರೆ ಅವನ ಗಡಿಯಾರದ ಮುಳ್ಳು ಒಮ್ಮೆ ಮುಂದಕ್ಕೆ ಹೋಗುತ್ತೆ. ಅದನ್ನು ನೋಡಿ ಸುಲಭವಾಗಿ ಹೇಳಬಹುದು ಯಾರು ಎಷ್ಟು ಬಾರಿ ಸುಳ್ಳು ಹೇಳಿದ್ದಾರೆ ಅಂತ".

   ರಾಬ್ಡಿದೇವಿಗೆ ಕುತೂಹಲ ತಡೆಯಲು ಆಗಲಿಲ್ಲ. "ಇತರ ವ್ಯಕ್ತಿಗಳ ಗಡಿಯಾರಗಳನ್ನೂ ಒಮ್ಮೆ ನೋಡಬಹುದೇ" ಅಂತ ಕೋರಿಕೊಂಡಳು. "ಹೋಗಲಿ, ಪಾಪ" ಅಂತ ಯಮ ಅವಳನ್ನು ತನ್ನ ಗಡಿಯಾರಗಳ ಸಂಗ್ರಹಕ್ಕೆ ಕರೆದುಕೊಂಡು ಹೋಗಿ ತೋರಿಸಿದ. ಹಾಗೇ ಕಣ್ಣಾಡಿಸಿದ ರಾಬ್ಡಿಗೆ ಒಂದೆರಡು ಗಡಿಯಾರಗಳನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅದನ್ನು ಗಮನಿಸಿದ ಯಮ ಹೇಳಿದ "ಅಲ್ಲಿದೆಯಲ್ಲ, ಒಮ್ಮೆ ಕೂಡಾ ಮುಂದಕ್ಕೆ ಹೋಗದಿರುವ ಗಡಿಯಾರ, ಅದು ಬುದ್ಧನದ್ದು. ಆತ ತನ್ನ ಜೀವನದಲ್ಲಿ ಸುಳ್ಳನ್ನೇ ಹೇಳಿರಲಿಲ್ಲ. ಇನ್ನೊಂದು, ಕೇವಲ ಎರಡು ಬಾರಿ ಮುಂದೆ ಓಡಿರುವ ಗಡಿಯಾರ, ಅದು ನಿಮ್ಮ ದೇಶದ ಗಾಂಧೀಜಿಯದ್ದು".

   ರಾಬ್ಡಿಗೆ ತನ್ನೊಂದು ಬಯಕೆಯನ್ನು ಅದುಮಿಡಲಾಗಲಿಲ್ಲ. ಮೆಲ್ಲಗೆ ಕೇಳಿದಳು "ಯಮರಾಜ, ಒಂದು ಕೋರಿಕೆ. ದಯವಿಟ್ಟು ನನ್ನ ಗಂಡ ಲಾಲೂ ಗಡಿಯಾರ ಎಲ್ಲಿದೆ ಅಂತ ತೋರಿಸುತ್ತೀರಾ?". ಲಾಲೂ ಇನ್ನೂ ಬದುಕಿರುವುದರಿಂದ ಯಮ ಈ ಕೋರಿಕೆಯನ್ನು ಒಪ್ಪಲಿಲ್ಲ. ರಾಬ್ಡಿ ಕೂಡಾ ತನ್ನ ಪಟ್ಟು ಬಿಡಲಿಲ್ಲ. ಕೊನೆಗೂ ರಾಬ್ಡಿಯ ಹಟಕ್ಕೆ ಸೋತ ಯಮ (ಎಷ್ಟೇ ಆದರೂ ಸಾವಿತ್ರಿಯಿಂದ ಒಮ್ಮೆ ಸೋಲುಂಡ ಅನುಭವಿ ನೋಡಿ) ಆಕೆಯನ್ನು ತನ್ನ ಕಚೇರಿಗೆ ಕರೆದುಕೊಂಡು ಹೋದ. ಆದರೆ ಅಲ್ಲಿ ಯಾವುದೇ ಗಡಿಯಾರ ಇರಲಿಲ್ಲ. ರಾಬ್ಡಿ ಕೇಳುವಷ್ಟರಲ್ಲಿ ಯಮ ಅಲ್ಲಿದ್ದ "ಸೀಲಿಂಗ್ ಫ್ಯಾನ್" ತೋರಿಸಿ ಹೇಳಿದ "ನಿನ್ನ ಗಂಡ ಲಾಲೂ ಅದ್ಯಾವ ಪರಿ ಸುಳ್ಳು ಹೇಳುತ್ತಾನೆ ಅಂದರೆ, ಅವನ ಗಡಿಯಾರ ಪ್ರತಿ ನಿಮಿಷವೂ ತಿರುಗುತ್ತಲೇ ಇರುತ್ತದೆ. ಅದಕ್ಕೇ ಅವನ ಗಡಿಯಾರವನ್ನು ಸೀಲಿಂಗ್ ಫ್ಯಾನ್ ಮಾಡಿಕೊಂಡಿದ್ದೀನಿ. ಬಹಳ ಚೆನ್ನಾಗಿ ಗಾಳಿ ಬರುತ್ತೆ!". ರಾಬ್ಡಿ ಸುಸ್ತೋ ಸುಸ್ತು. Wink

(ವಿ-ಪತ್ರದ ಮೂಲಕ ಬಂದ ನಗೆಹನಿ ಇದು. ಮೂಲ ಕರ್ತೃ ಯಾರು ಗೊತ್ತಿಲ್ಲ. ಮೂಲ ನಗೆಹನಿ ಸಂಕ್ಷಿಪ್ತವಾಗಿ ಇಂಗ್ಲಿಷಿನಲ್ಲಿತ್ತು. ಅದಕ್ಕೇ ಸ್ವಲ್ಪ ರೆಕ್ಕೆ-ಪುಕ್ಕ ಸೇರಿಸಿ ಕನ್ನಡೀಕರಿಸುವ ಪ್ರಯತ್ನ ಮಾಡಿದ್ದೇನೆ)

Rating
No votes yet