ಕೃತಗ್ನತೆಯ ಗ್ನಾನಾಗ್ನಾನಗಳು
ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು “ಅಗ್ನಾನ” ಅ೦ತ ತಿದ್ದುತ್ತಿದ್ದರು. ಅನ೦ತ್ ಮತ್ತೆ “ಅಜ್ಞಾನ” ಎಂದು ಹೇಳಿದರೆ ನಿರ್ದೇಶಕರು ಪುನಃ “ಅಗ್ನಾನ” ಅ೦ತಲೇ ತಿದ್ದುತ್ತಿದ್ದರು. ರೇಗಿದ ಅನ೦ತ್, “ರೀ, ಅದು ‘ಅಗ್ನಾನ’ ಅಲ್ಲ; ‘ಅಜ್ಞಾನ, ಅಜ್ಞಾನ’” ಎಂದು ತಿದ್ದಿ ಹೇಳಿದರು. ನಿರ್ದೇಶಕರು, ” ಇಲ್ಲಾ, ಅದರ ಸರಿಯಾದ ಉಚ್ಚಾರಣೆ ‘ಅಗ್ನಾನ’ “, ಎ೦ದೇ ವಾದಿಸಿದರು. ಕೊನೆಗೆ ಅನ೦ತ್, “ಸರಿ. ಇನ್ನೊ೦ದು ಫ್ಲೋರಲ್ಲಿ ಡಾಕ್ಟರ್ ರಾಜ್‍ಕುಮಾರ್ ಇದ್ದಾರೆ; ಅವರನ್ನ ಕೇಳೋಣ,” ಎಂದು ಸಲಹೆ ಮಾಡಿದಾಗ ಅವರಲ್ಲಿ ಹೋಗಿ ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ರಾಜ್‍ಕುಮಾರ್ ನಸುನಕ್ಕು, ಅನಂತ ನಾಗ್ ಹೇಳುವುದೇ ಸರಿ. ‘ಅಗ್ನಾನ’ ಎಂದು ಉಚ್ಚರಿಸುವುದು ಸರಿಯಲ್ಲ; ‘ಅಜ್ಞಾನ’ ಎಂದೇ ಸರಿಯೆಂದು ತೀರ್ಪಿತ್ತರು.
ಕೆಲವರಿಗೆ ‘ಜ್ಞ’ ಎಂದೆನ್ನುವ ಒಂದು ಉಚ್ಚಾರಣೆ ಇದೆಯೆಂದೇ ತಿಳಿದಿಲ್ಲ. ಟೀವಿ, ರೇಡಿಯೊ, ಇತ್ಯಾದಿಗಳಲ್ಲಿ ಅನೌನ್ಸ್ ಮಾಡುವವರೂ ಹೀಗೇ ಇದ್ದಾರೆ. ನನ್ನೊಬ್ಬ ಗೆಳೆಯನಿಗೆ ಈ ಉಚ್ಚಾರಣೆಯೇ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಅವನಿಗೆ ವ್ಯತ್ಯಾಸದ ಅರಿವು ಮೂಡಿಸಲು, “grateful” ಎನ್ನುವದಕ್ಕೆ ಕನ್ನಡ ಪದ ಯಾವುದೆಂದು ಕೇಳಿದೆ. “ಕೃತಘ್ನ” ಎಂದು ಹೇಳಿದ! “Ungrateful” ಎನ್ನುವದಕ್ಕೆ ಕನ್ನಡ ಪದ ಯಾವುದೆಂದರೆ. ಮತ್ತೆ “ಕೃತಘ್ನ” ಎಂದೇ ಹೇಳಿದ. ವಿರುದ್ಧಾರ್ಥವಿರುವ “grateful” ಮತ್ತು ungrateful” ಪದಗಳಿಗೆ ಒ೦ದೇ ಕನ್ನಡ ಪದ ಹೇಗಿರಲು ಸಾಧ್ಯ, ಎಂದು ಕೇಳಿದ್ದಕ್ಕೆ, ‘ಅಷ್ಟೂ ತಿಳಿಯದೇ?’ ಎನ್ನುವ ನಗೆದೋರಿ ಆತ, grateful = ಕೃತಗ್ನ; ungrateful = ಕೃತಘ್ನ, ಎಂದು ಒ೦ದು ಕಾಗದದ ಮೇಲೆ ಬರೆದು ಜ್ಞಾನಬೋಧನೆ ಮಾಡಿದ! (ಇಲ್ಲಾ, ಗ್ನಾನಭೋದನೆ ಮಾಡಿದನೇ? - ನೆನೆಪಿಲ್ಲ!)
ಈ ರೀತಿಯ ಜನ ನೀವು ಮಾಡಿದ ಉಪಕಾರಕ್ಕೆ ಕೃತಜ್ಞತೆಯನ್ನು ಸೂಚಿಸದಿದ್ದರೆ ಬೇಸರಿಸದಿರಿ; ಅವರು ಕೃತಗ್ನರಾಗೇ ಇರುತ್ತಾರೆ; ಇಲ್ಲವೇ ಕ್ರುತಗ್ನರಾಗಿರುತ್ತಾರೆ!