ಭಗತ್ ಸಿಂಗ್ ನೆನಪಿನಲ್ಲಿ...

ಭಗತ್ ಸಿಂಗ್ ನೆನಪಿನಲ್ಲಿ...

ಪ್ರಸ್ತುತ ಎಲ್ಲರಿಗೂ ಭಗತ್ ಸಿಂಗ್ ಪರಿಚಯವಿರುವುದರಿಂದ ಅವರ ಬಯಾಗ್ರಫಿ ಬರೆಯುವುದು ನಮ್ಮ ಈ ತಲೆಮಾರಿಗೆ ಅಗತ್ಯವಿಲ್ಲ. ಅಗತ್ಯವಿದ್ದರೆ ಅದು ಮುಂದಿನ ತಲೆಮಾರಿಗೆ ಏಕೆಂದರೆ ಈಗಾಗಲೇ 'ಕ್ರಾಂತಿಕಾರಿ ಭಯೋತ್ಪಾದಕ'ರೆಂದು ಕರೆಯಲ್ಪಡುವ ಕ್ರಾಂತಿಕಾರಿಗಳ ಅರಿವು ಮುಂದಿನ ಜನಾಂಗಕ್ಕೆ ಯಾವ ರೀತಿ  ಬಿಂಬಿಸಲಾಗುವುದೋ ನಾ ಕಾಣೆ! ಭಗತ್ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕಾರಣೀಭೂತವಾದ  ಜಲಿಯನ್ ವಾಲಾ ಬಾಗಿಗೆ ಹೋಗಿ ಬಂದ ನಂತರ ಕಾಡಿದ್ದು ಕೇವಲ ಭಗತ್ ಅಲ್ಲ, ಬಹುತೇಕ ಹುತಾತ್ಮರಾದ ಎಲ್ಲರೂ. ಆದರೆ ಅವರೆಲ್ಲರ ಮಧ್ಯೆ ನನಗೆ ಎದ್ದು ನಿಂತು ಕಾಣುವ ವ್ಯಕ್ತಿತ್ವ ಭಗತ್ ರದ್ದು. ಅವರ 'ನಾನೇಕೆ ನಾಸ್ತಿಕ' ಲೇಖನ ಕೂಡ ಒಂದು ಕಾರಣ.


"ಕ್ರಾಂತಿಕಾರಿಯೆಂದರೆ ಅಸ್ತಿತ್ವದಲ್ಲಿರುವ ಸಮಾಜದ ವ್ಯವಸ್ಥೆಯನ್ನು, ಅಂದರೆ ಆಳ್ವಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ನವೀನ ರೀತಿಯಲ್ಲಿ ಹಾಗೂ ಉತ್ತಮ ಮಾದರಿಯ ಆಧಾರದ ಮೇಲೆ ಕ್ರಮಬದ್ಧವಾದ ಕಾರ್ಯಕ್ರಮಗಳ ಮೂಲಕ ಸಮಾಜದ ಪುನರ್ನಿರ್ಮಾಣ ಎಂದರ್ಥ. ಹೀಗೆ ಮಾಡುವುದು ಅಗತ್ಯ, ಇಲ್ಲವಾದಲ್ಲಿ ಅದು ಕ್ರಾಂತಿಯಾಗುವುದಿಲ್ಲ." ಎಂಬ ವಿಚಾರ ಧೋರಣೆಯ ಭಗತ್ ಉಳಿದ ಕ್ರಾಂತಿಕಾರಿಗಳಿಗಿಂತ ವಿಭಿನ್ನರಾಗಿ ಕಾಣುವುದೂ ಇಂಥ ಚಿಂತನೆಗಳಿಗೆ. ಬಾಕುನಿನ್, ಮಾರ್ಕ್ಸ್, ಲೆನಿನ್ ಮತ್ತೂ ಟ್ರಾಟ್ ಸ್ಕಿ ಬರಹಗಳನ್ನು ಹೆಚ್ಚಾಗಿ ಅಭ್ಯಸಿಸಿದ ಭಗತ್ ಅವರು ನಡೆಸಿದ ಯಶಸ್ವೀ ಕ್ರಾಂತಿಗಳಿಂದ ಬಹುವಾಗಿ ಪ್ರಭಾವಿತರಾದರು. ಇದರ ಪರಿಣಾಮವಾಗಿಯೇ ಸೋಷಿಯಲಿಸಂನತ್ತ ಅವರ ಮನಸ್ಸು ವಾಲಿತು, ಅಷ್ಟೇ ಅಲ್ಲ ತಮ್ಮ ಸಂಘದ ಪ್ರಮುಖ ಧ್ಯೇಯವನ್ನೂ ಅದೇ ಆಗಿಸಿದರು.  

 

 

 

ತಮ್ಮಲ್ಲಿ ದೇಶಪ್ರೇಮ ಬೆಳೆಯಲು ತಂದೆ ಕಾರಣ ಎನ್ನುವ ಭಗತ್ ಪ್ರಾರಂಭದಲ್ಲಿ ದೈವ ಭಕ್ತಿಯನ್ನಿಟ್ಟುಕೊಂಡಿದ್ದರೂ ಕ್ರಮೇಣ ಅವರಲ್ಲಿ ನಾಸ್ತಿಕತೆ  ಬೆಳೆಯಲಾರಂಭಿಸಿತು. ದೇವರಿಲ್ಲ ಎಂದು ಒಪ್ಪಿಕೊಂಡಾಕ್ಷಣ ದೇವರನ್ನು ಒಪ್ಪಿಕೊಳ್ಳಿಸಲು ಪ್ರೇರೇಪಿಸುವ ಎಷ್ಟೋ ಕಾರಣಗಳು ಬಂದೊದಗುತ್ತವೆ. ಇದರ ಅರಿವಿಲ್ಲದಿರಲಿಲ್ಲ. ಶುದ್ಧ ನಾಸ್ತಿಕತೆಯನ್ನು ವಿವರಿಸುತ್ತಾ ಅವರು ಹೀಗೆನ್ನುತ್ತಾರೆ,

"ದೇವರಲ್ಲಿ ನಂಬಿಕೆಯಿರುವವನು ಅದನ್ನು ಕಳೆದುಕೊಳ್ಳುವುದಕ್ಕೆ ಅವನಲ್ಲಿರುವ ಸ್ವಪ್ರತಿಷ್ಟೆಯು ಹೇಗೆ ತಾನೇ ಕಾರಣವಾದೀತು? ಇದು ಎರಡು ವಿಧದಲ್ಲಿ ಮಾತ್ರ ಸಾಧ್ಯ.ಒಂದೋ ಆ ಮನುಷ್ಯ ತಾನು ದೇವರ ಪ್ರತಿಸ್ಪರ್ಧಿಯೆಂದು ಯೋಚಿಸಲು ಆರಂಭಿಸಬೇಕು ಇಲ್ಲವೇ ತಾನೇ ದೇವರೆಂದು ಭಾವಿಸಿರಬೇಕು. ಈ ಎರಡೂ ಸಂದರ್ಭಗಳಲ್ಲಿ ಅವನು ಶುದ್ಧ ನಾಸ್ತಿಕನಾಗಲು ಸಾಧ್ಯವಿಲ್ಲ. ಮೊದಲನೆಯ ಸಂದರ್ಭದಲ್ಲಿ ಅವನು ತನ್ನ ಪ್ರತಿಸ್ಪರ್ಧಿಯ ಅಸ್ತಿತ್ವವನ್ನು ನಿರಾಕರಿಸಲು ಹೋಗುವುದೇ ಇಲ್ಲ. ಎರಡನೆಯ ಸಂದರ್ಭದಲ್ಲಿ ಪ್ರಕೃತಿಯ ಮರೆಯಲ್ಲಿದ್ದು ಪ್ರಜ್ಞಾಪೂರ್ವಕವಾಗಿ ಚಲನವಲನಗಳನ್ನು ನಿಯಂತ್ರಿಸುವ ಶಕ್ತಿಯೊಂದರ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಆತ ತನ್ನನ್ನೇ ಆ ದೇವರೆಂದುಕೊಳ್ಳುತಾನೋ ಅಥವಾ ಆ ಪರಮ ಶಕ್ತಿಯು  ತನ್ನಿಂದ ಭಿನ್ನವಾಗಿದೆಯೆಂದು ಭಾವಿಸುತ್ತಾನೋ ಎಂಬುದು ಮುಖ್ಯವಲ್ಲ, ಬದಲು, ಮೂಲಭೂತ ಶಕ್ತಿಯೊಂದಿಗೆ ಮತ್ತು ಅದರಲ್ಲಿ ಅವನಿಗೆ ನಂಬಿಕೆಯಿದೆ ಎನ್ನುವುದಷ್ಟೇ ಇಲ್ಲಿ ಮುಖ್ಯ ಅಂತಹ ಸಂದರ್ಭಗಳಲ್ಲಿ ಅವನು ನಾಸ್ತಿಕನಾಗುವುದು ಸಾಧ್ಯವೇ ಇಲ್ಲ"

 

ಸ್ವತಂತ್ರ ಚಿಂತನೆಯನ್ನು ಬೆಂಬಲಿಸುತ್ತಿದ್ದ ಭಗತ್ ಅಹಿಂಸೆಯ ಬಗ್ಗೆ ಒಳವಿದ್ದವರೂ ಆಗಿದ್ದರು. ಕ್ರಾಂತಿಕಾರಿ ಎಂದರೆ ಹಿಂಸೆ ಪ್ರಚೋದಕರು ಎಂದು ಬಿಂಬಿಸಲಾಗುವ ಜನರಿಗೆ ಅವರ ಈ ಮಾತುಗಳು ಮತ್ತು ಅವರು ಅನುಸರಿಸಿದ ದಾರಿಯ ಸಮರ್ಥನೆಯನ್ನು ನೀಡುತ್ತವೆ  "ಅತ್ಯಂತ ಅಗತ್ಯವಾದಾಗ ಮಾತ್ರ ಒಂದು ಭೀಕರ ಅನಿವಾರ್ಯತೆಯಾಗಿ ಬಲ ಪ್ರಯೋಗವು ಸಮರ್ಥನೀಯ. ಆದರೆ ಎಲ್ಲಾ ಸಾಮೂಹಿಕ ಚಳುವಳಿಗಳು ಅಹಿಂಸಾ ತತ್ವವನ್ನು ತಮ್ಮ ಧೋರಣೆಯನ್ನಾಗಿ ಅನುಸರಿಸುವುದು ಅತ್ಯಗತ್ಯ"  ಈ ವಿಚಾರದಿಂದ ಭಗತ್ ನಮ್ಮೊಂದಿಗೆ ನಮ್ಮ ಬದಿಯಲ್ಲಿ ನಿಲ್ಲುತಾರೆ ಆದ್ದರಿಂದ ಹೆಚ್ಚು ಮನಸ್ಸನ್ನು ಸ್ಪರ್ಷಿಸುತ್ತಾರೆ. ಏಕೆಂದರೆ ಹಿಂಸೆ ನಮಗೆ ಸ್ವಾಭಾವಿಕ. ಅಹಿಂಸೆ ಹೊಸತು. 'ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎನ್ನುವುದು ಆದರ್ಶವಾದರೆ ಹೊಡೆದವನ ಕೆನ್ನೆಗೆ ಬಾರಿಸುವುದು ವಾಸ್ತವ!

 

ಅವರನ್ನು ಗಲ್ಲಿಗೇರಿಸಿದಾಗ ಅಂತಹ ಮಹಾನ್ ಭವಿತವ್ಯದ ಚಿಂತಕ ಮತ್ತು ಅದನ್ನು ಬಹುತೇಕ ಪಾಲಿಸಬಲ್ಲ ವ್ಯಕ್ತಿಯನ್ನು ಬಹುಬೇಗ ಕಳೆದುಕೊಂಡಾಗ ನಷ್ಟವಾದದ್ದು ಭಾರತ ಮಾತೆಗೆ, ನಮಗೆ! ಆದರೆ ಒಬ್ಬ ಕ್ರಾಂತಿಕಾರಿ ಈ ರೀತಿ national icon ಆಗಲು ಅದು ಪ್ರಧಾನ ರೀತಿ ಕಾರಣವಾಯಿತು. ರಾಣಿ ಲಕ್ಷ್ಮೀಬಾಯಿ, ಚೆನ್ನಮ್ಮ, ತಾತ್ಯಾ ಟೋಪೆ, ಆಜಾದ್ ಇವೆ ಮೊದಲಾದ ಹೆಸರುಗಳನ್ನೂ ನೆನೆಸಿಕೊಂಡಾಗ ನೆಟ್ಟಗಾಗುವ  ರೋಮಸಂಕುಲ ಭಗತರನ್ನೂ ನೆನೆಸಿಕೊಂಡಾಗ ಆಗುವುದು ವಿಶೇಷವೇನಲ್ಲ. ಆಗದಿದ್ದರೆ ಸಲ್ಲ!

 


ಜೈಲಿನಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಭಗತ್ ಬರೆದ ಈ ಮಾತುಗಳು ಅವರ ವ್ಯಕ್ತಿತ್ವಕ್ಕೆ, ಅವರ ಬದುಕಿಗೆ ಇಟ್ಟ ಕನ್ನಡಿ - "ಶ್ರೇಷ್ಠ ಧ್ಯೇಯಕ್ಕಾಗಿ ನನ್ನ ಪ್ರಾಣಾರ್ಪಣೆ ಮಾಡುತ್ತಿರುವೆನೆಂಬ ಸಾರ್ಥಕ ಕಲ್ಪನೆಗಿಂತ ಬೇರೆ ಎಂತಹ ಸಾಂತ್ವನ ನನಗೆ ಬೇಕಾಗಿದೆ? ಒಬ್ಬ ದೈವ ಭಕ್ತನಾದ ಹಿಂದುವೇನೋ ಮರುಜನ್ಮದಲ್ಲಿ ಒಬ್ಬ ರಾಜನಾಗಿ ಹುಟ್ಟುವ ಕನಸು ಕಾಣಬಹುದು, ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರು ಎಲ್ಲಾ ಸುಖ - ಸಂತೋಷಗಳನ್ನು ಸವಿಯಬಹುದಾದ ಸುಂದರ ಸ್ವರ್ಗದ ಕನಸು ಕಾಣಬಹುದು; ಇಲ್ಲಿಯ ನೋವು ಮತ್ತು ತ್ಯಾಗಗಳಿಗೆ ಪ್ರತಿಯಾಗಿ ದೊರೆಯಬಹುದಾದ ಪುರಸ್ಕಾರವನ್ನವರು ನಿರೀಕ್ಷಿಸಬಹುದು. ಆದರೆ ನಾನಾದರೋ ಏನೆನ್ನು ಅಪೇಕ್ಷಿಸಲಿ? ಹಗ್ಗವು ನನ್ನ ಕುತ್ತಿಗೆಯ ಸುತ್ತ ಬಿದ್ದು ನನ್ನ ಕಾಲ ಕೆಳಗಿನ ಹಲಗೆಯನ್ನು ಎಳೆದು ಹಾಕಿದಾಗ, ಆ ಕ್ಷಣವೇ ನನ್ನ ಕಡೆಯ ಕ್ಷಣ ಎಂಬುದು ನನಗೆ ಚೆನ್ನಾಗಿ ಗೊತ್ತು. ನಾನು ಅಥವಾ ಇನ್ನೂ ನಿಷ್ಕೃಷ್ಟವಾಗಿ ಅಧ್ಯಾತ್ಮದ ಪರಿಭಾಷೆಯಲ್ಲಿ ಹೇಳಬೇಕೆಂದರೆ, ನನ್ನ ಆತ್ಮ ಅಲ್ಲಿಗೆ ಕೊನೆಯಾಗುತ್ತದೆ. ಮುಂದೆ ಏನೂ ಉಳಿಯುವುದಿಲ್ಲ. ಅಂತ ಅದ್ಭುತವಾದ ಕೊನೆ ಇದಲ್ಲದಿದ್ದರೂ ಹೋರಾಟದ ನನ್ನ ಪುಟ್ಟ ಜೀವನವೇ ಒಂದು ಪುರಸ್ಕಾರವಾಗಿರುತ್ತದೆ - ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಎದೆಗಾರಿಕೆ ನನ್ನಲ್ಲಿದ್ದರೆ! ಇದಕ್ಕಿಂತ ಬೇರೇನೂ ಇಲ್ಲ. ಸ್ವಾರ್ಥ ಸಾಧನೆಯ ಯಾವ ಉದ್ದೇಶವೂ ಇಲ್ಲದೆ, ಇಲ್ಲಿಯಾಗಲಿ ಅಥವಾ ಇಲ್ಲಿನದಾಚೆಯಾಗಲಿ ಯಾವ ಪುರಸ್ಕಾರವನ್ನೂ ಪಡೆಯುವ ಅಭಿಲಾಷೆಯಿಲ್ಲದೆ, ಸ್ವಾತಂತ್ರ್ಯದ ಧ್ಯೇಯಕಾಗಿ ನಾನು ನಿಷ್ಕಾಮ ಮನೋಭಾವದಿಂದ ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ"

 

ಇಪ್ಪತ್ತರ ಹರೆಯದಲ್ಲೇ ಇಂಥಹ ಮೇಧಾವಿ ಚಿಂತನೆಗಳು ಅದನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಮತ್ತು ಅತೀವ  ಧೈರ್ಯ ಹೊದಿದ್ದ ಭಗತ್ ನಮಗೆಲ್ಲಾ ಸ್ಪೂರ್ತಿಯಾಗಬೇಕು. ದೇಶಕ್ಕಾಗಿ ಜೀವ ತೆತ್ತ ಈ ಚೇತನಕ್ಕೆ ಅವರ ಹುಟ್ಟು ಹಬ್ಬದ ಕಾರಣ  ನೀಡುತ್ತಾ ಕೊನೆಯದಾಗಿ ಭಗತ್ ಸಿಂಗರ ಮಾತುಗಳೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ, ನನ್ನ ಬರಹಗಳಿಗೂ ಈ ಮಾತುಗಳು ಅನ್ವಯವಾಗುವುದರಿಂದ. - 

"ಕುರುಡಾಗಿ ಅನುಸರಿಸುವ ಉದ್ದೇಶದಿಂದ ಇದನ್ನು ಓದಬೇಡಿ ಮತ್ತೂ ಇದರಲ್ಲಿ ಬರೆದಿರುವುದೆಲ್ಲವನ್ನು ಪ್ರಶ್ನಾತಿತವೆಂದು ಹಾಗೆಯೇ ಸ್ವೀಕರಿಸಬೇಡಿ.ಓದಿರಿ, ವಿಮರ್ಶಿಸಿರಿ ಹಾಗೂ ಅದರ ಬಗ್ಗೆ ಚಿಂತಿಸಿರಿ ಮತ್ತೂ ಅದರ ನೆರವಿನಿಂದ ನಿಮ್ಮದೇ ಸ್ವತಂತ್ರ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಿ."

 

 

 ಚಿತ್ರಕೃಪೆ: 

quicktake.files.wordpress.com

marvisirmed.com

ಆಧಾರ : 

'ನಾನೇಕೆ ನಾಸ್ತಿಕ - ಭಗತ್ ಸಿಂಗ್' (ಅನು: ಗಾಯತ್ರಿ) 


ಇದನ್ನೂ ಓದಿ:

http://en.wikipedia.org/wiki/Bhagat_Singh

http://www.iloveindia.com/indian-heroes/bhagat-singh.html




Rating
No votes yet

Comments