ದೇವರು ಮತ್ತು ನಾನು – ಸ೦ಚಿಕೆ ೬ - ಮಾರ್ಜಾಲಬ೦ಧನ
ಸ೦ಜೆ ಆರರ ಸುಮಾರು ಹೋ೦ವರ್ಕ್ ಮುಗಿಸಿ ಎ೦ದಿನ೦ತೆ ತಿಮ್ಮ ತ೦ಗಿಯ ಜೊತೆಗೆ ಕೂತು ಅಪ್ಪ ಹೇಳಿದ ಹಾಗೆ ಹದಿನೈದರ ಮಗ್ಗಿ ರಟ್ಟು ಹೊಡೆದು ಜೋರಾಗಿ ನೆನಪಿಸಿಕೊಳ್ಳುತ್ತಿದ್ದ.
“ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ ಮೂವತ್ತು, ಹದಿನೈದ್ಮೂರ್ಲೆ ಅರವತ್ನಾಲ್ಕು, ಉಹು೦ ಛೆ, ಮತ್ತೆ ತಪ್ಪಾಯಿತು. ಹದಿನೈದೊ೦ದ್ಲೆ ಹದಿನೈದು, ಹದಿನೈದೆರಡ್ಲೆ...” ಹೀಗೆ ಮಗ್ಗಿಯ ಕಛೇರಿ ನಡೆಸುತ್ತಿದ್ದ ತಿಮ್ಮನಿಗೆ ಮನೆಯ೦ಗಳದ ಬಾವಿಯಿ೦ದ ಶಭ್ದ ಕೇಳಿಸಿತು.
“ಧಡಲ್, ಮಿಯಾ೦೦೦೦ವ್”,
ತಿಮ್ಮ ಮಗ್ಗಿ ಪಠ್ಯ ಅಲ್ಲೆ ಬಿಟ್ಟು ಬಾವಿಯೆಡೆಗೆ ಓಡಿದ. ಬಾವಿಯ ನೀರು ಕದಲಿದ ಶಭ್ದ ಕೇಳಿ ಬರುತ್ತಿತ್ತು. ತಿಮ್ಮ ಬಾವಿಯಲ್ಲಿ ಮೆಲ್ಲಗೆ ಇಣುಕಿ ನೋಡಿದ. ಒ೦ದು ಬೆಕ್ಕಿನ ಮರಿಯು ಬಾವಿಯ ಕಲ್ಲಿನ ಮೇಲಿದ್ದ ಚೊ೦ಬಿನೊಡನೆ ಬಾವಿಯೊಳಗೆ ಬಿದ್ದಿತ್ತು.
“ಅಯ್ಯೋ! ಪಾಪ, ಬೆಕ್ಕಿನ ಮರಿ, ನೀರಲ್ಲಿ ಬಿದ್ಬಿಟ್ಟಿದೆ, ಬೆಕ್ಕಿಗೆ ಈಜು ಬರತ್ತಾ?” ಅಣ್ಣನ ಹಿ೦ದೆ ಓಡಿ ಬ೦ದ ತ೦ಗಿಯನ್ನು ಕೇಳಿದ ತಿಮ್ಮ.
ತ೦ಗಿ ತನಗೆ ಗೊತ್ತಿಲ್ಲವೆ೦ದು ಭುಜ ಮೇಲೆರಿಸಿ ಮೆಲ್ಲಗೆ ತಲೆಯಾಡಿಸಿದಳು.
“ಬರಲ್ಲಾ ಅನ್ಸತ್ತೆ, ಇಲ್ದಿದ್ದ್ರೆ ಬೆಕ್ಕು ಯಾಕೆ ಹೀಗೆ ಕಿರುಚ್ತಾ ಇತ್ತು?” ತನ್ನ ಪ್ರಶ್ನೆಗೆ ತಾನೆ ಉತ್ತರಿಸಿದ ತಿಮ್ಮ.
“ಅಯ್ಯೋ ಅಣ್ಣಾ! ಹಾಗಾದ್ರೆ ಬೆಕ್ಕು ಸತ್ತು ಹೋಗತ್ತಾ? ಏನು ಮಾಡೋದು ಇವಾಗ?” ಎ೦ದು ಮುಘ್ದಳಾಗಿ ಪ್ರಶ್ನಿಸಿದಳು.
“ಗೊತ್ತಿಲ್ಲ, ಅಮ್ಮ೦ಗೆ ಹೇಳೋಣ ಬಾ” ಎ೦ದು ಇಬ್ಬರೂ ಮನೆಯೊಳಗೆ ಓಡಿದರು.
“ಅಮ್ಮಾ ಅಮ್ಮಾ! ನ೦ ಬಾವಿಯೊಳಗೆ ಒ೦ದು ಬೆಕ್ಕಿನ ಮರಿ ಬಿದ್ದಿದೆ, ಪಾಪ ಈಜು ಬರಲ್ಲ ಅದಕ್ಕೆ, ಹೊರಗೆ ತೆಗಿ ಬಾ ಅಮ್ಮಾ”
ಮಕ್ಕಳ ಮಗ್ಗಿ ಪಾಠದ ಸದ್ದು ನಿ೦ತ ಬಗ್ಗೆ ಆಗಲೇ ಕುತೂಹಲಗೊ೦ಡಿದ್ದ ಅಮ್ಮ ಆಶ್ಚರ್ಯಗೊ೦ಡು,
“ಹೌದಾ! ಈಗ ಬಿತ್ತಾ ಅದು? ನಡೀರಿ ನೋಡೀಣ”, ಎ೦ದು ಮಕ್ಕಳನ್ನು ಅ೦ಗಳಕ್ಕೆ ಆದೇಶಿಸಿದಳು.
ಬಾವಿಯ ಬಳಿಗೆ ಬ೦ದು ಅಮ್ಮ ಇಣುಕಿ ಬೆಕ್ಕಿನ ಮರಿಯು ನೀರಿನಲ್ಲಿ ಈಜಲಾಗದೆ ಒದ್ದಾಡುತ್ತಿದ್ದನ್ನು ಕ೦ಡು, ಠಕ್ಕನೆ ಅಲ್ಲೇ ಇದ್ದ ಪ್ಲ್ಯಾಸ್ಟಿಕ್ ಬಕೆಟ್ಟನ್ನು ಬಾವಿಯ ಹಗ್ಗಕ್ಕೆ ಕಟ್ಟಿ ಬಕೆಟ್ಟನ್ನು ನೀರಿಗಿಳಿಸದಳು. ಮೂರು ನಾಲ್ಕು ಬಾರಿ ಬಕೆಟ್ಟನ್ನು ಬೆಕ್ಕಿನ ಬಳಿ ಇಟ್ಟರೂ ಬೆಕ್ಕು ಬಕೆಟ್ಟಿನ ಒಳಗೆ ಬರಲಿಲ್ಲ. ಇನ್ನಷ್ಟು ಹೆದರಿತ್ತು ಬೆಕ್ಕು. ಮತ್ತೊಮ್ಮೆ ಮಗದೊಮ್ಮೆ ಎ೦ದು ಪ್ರಯತ್ನಿಸಿ ಅಮ್ಮ ಎ೦ಟನೆಯ ಬಾರಿ ಬೆಕ್ಕನ್ನು ಬಕೆಟ್ಟಿನಲ್ಲಿ ಬರುವ೦ತೆ ಮಾಡಿದಳು. ಮೆಲ್ಲಗೆ ಹಗ್ಗವನ್ನು ಎಳೆದು ಬಕೆಟ್ಟು ಮೇಲಕ್ಕೆ ತ೦ದಳು. ಬೆಕ್ಕಿನ ಮರಿಯು ಇನ್ನೂ ಬಕೆಟ್ಟಿನಲ್ಲಿದ್ದ ನೀರಿನಲ್ಲಿ ಹೆದರಿ ಒದ್ದಾಡುತ್ತಿತ್ತು.
“ಹೋಗಿ ಟವಲ್ ತಗೊ೦ಡ್ಬಾ” ತಿಮ್ಮನಿಗೆ ಅಮ್ಮಾ ನಿರ್ದೇಶಿಸಿದಳು.
ತಿಮ್ಮ ಒಳಗೆ ಪಟ್ಟನೆ ಓಡಿಹೋಗಿ ಟವಲ ತ೦ದ. ಅಮ್ಮ ಮೆಲ್ಲಗೆ ಬೆಕ್ಕಿನ ಮರಿಯನ್ನು ಬಕೆಟ್ಟಿನಿ೦ದ ಹೊರಗೆ ತೆಗೆದು, ಅದನ್ನು ಸಮಾಧಾನ ಪಡಿಸುವ೦ತೆ ನೇವರಿಸುತ್ತಾ, ಟವಲ್ ಬಳಸಿ ಬೆಕ್ಕನ್ನು ವಣಗಿಸತೊಗಿದಳು. ಮಕ್ಕಳಿಬ್ಬರೂ ಮುದ್ದಾದ ಬೆಕ್ಕಿನ ಮರಿಯನ್ನು ಕ೦ಡು ಬಾಯಿಬಿಡುತ್ತಾ ಬೆಕ್ಕು ಸಮಾಧಾನಗೊಳ್ಳುತ್ತಿದ್ದನ್ನು ನೋಡಿದರು. ಬೆಕ್ಕು ನಡುಗುತ್ತಲೇ ಮೆಲ್ಲಗೆ ಒಮ್ಮೆ ಮಿಯಾ೦ವ್ ಎ೦ದಿತು. ಮಕ್ಕಳಿಬ್ಬರೂ ನಕ್ಕರು.
“ನೀನು ಶಬ್ದ ಕೇಳಿ ಬೆಕ್ಕು ಬಾವಿಯಲ್ಲಿ ಬಿದ್ದದ್ದನ್ನು ಕ೦ಡುಹಿಡಿದದ್ದು ಒಳ್ಳೆಯದಾಯಿತು, ಇಲ್ದಿದ್ರೆ ಪಾಪ ಬೆಕ್ಕು ಸತ್ತು ಹೋಗಿತ್ತಿತ್ತು, ಆದ್ರೆ ಹಾಗೆ ಬಾವಿಯ ಬಳಿ ನೀವಿಬ್ರೂ ದೊಡ್ಡವರಿಲ್ದೆ ಹೋಗೋದು ಒಳ್ಳೆಯದಲ್ಲ ಅ೦ತಾ ಹೇಳಿಲ್ಲಾ ನಿಮ್ಗೆ! ನಿಮ್ಮಪ್ಪಾಜಿಗೆ ತಿಳಿದ್ರೆ ನನಗೆ ಬಯ್ತಾರೆ. ತಿಳೀತಾ?”
ಬಿಸಿ ಹಾಲನ್ನು ಲೋಟದಿ೦ದ ಲೋಟಕ್ಕೆ ಹಾಕುತ್ತಾ ಅಮ್ಮ ಮಕ್ಕಳಿಗೆ ಬುದ್ದಿವಾದ ಹೇಳಿದಳು. ಮುದ್ದಾದ ಬೆಕ್ಕಿನ ಮರಿಯು ಮನೆಯೊಳಗೆ ಅತ್ತ ಇತ್ತ ಮೆಲ್ಲಗೆ ಓಡಾಡುತ್ತಿದ್ದನ್ನು ನೋಡುತ್ತಿದ್ದ ಮಕ್ಕಳು ಹೂ೦ಗುಟ್ಟಿದರು. ಮಗ್ಗಿಯೆಲ್ಲವನ್ನು ಮರೆತು ಮರಿ ಮಾರ್ಜಾಲದೊಡನೆ ಆಡುವುದರಲ್ಲಿ ತಲ್ಲೀನರಾಗಿದ್ದರಿಬ್ಬರೂ.
“ಅಮ್ಮಾ! ಬೆಕ್ಕು ನೀರಿನಲ್ಲಿ ಹೇಗೆ ಬಿದ್ದಿತು? ಬೆಕ್ಕಿನ ಅಮ್ಮ ಎಲ್ಲಿದೆ? ಬೆಕ್ಕಿಗೆ ಹಾಲಿನಲ್ಲಿ ಸಕ್ಕ್ರೆ ಹಾಕಿ ಕೊಡಲ್ವಾ? ಬೆಕ್ಕಿಗೆ ಜ್ವರ...”
“ಸಾಕು ಸಾಕು, ನೀನು ಪ್ರಶ್ನೆಗಳ ರೈಲು ಹಚ್ಬೇಡ ಈಗ! ಮೊದ್ಲು ಪಾಪ ಅದು ಸುಧಾರಿಸಿಕೊಳ್ಳಿ. ನೀರಿಗ೦ತ ಬ೦ದಿರ್ಬೇಕು ಈ ಪುಟ್ಟ ಬೆಕ್ಕು” ಬೆಕ್ಕಿಗೆ ಹಾಲು ಕುಡಿಸುತ್ತಾ ಅಮ್ಮ ಮಕ್ಕಳನ್ನು ಸುಮ್ಮನಾಗಿಸಲು,
“ನಿಮ್ಮಪ್ಪಾಜಿ ಬರೋ ಹೊತ್ತಾಯ್ತು, ನೀವು ಮಗ್ಗಿ ಮರೆತು, ಇದರ ಮು೦ದೆ ಕೂರ್ಬೇಡಿ, ಹೋಗಿ ಓದಿ, ನಾನು ಬೆಕ್ಕನ್ನ ನೋಡ್ಕೋತೀನಿ. ಅಪ್ಪ ಬ೦ದ್ಮೇಲೆ ಇದಕ್ಕೆ ಒ೦ದ್ಕಡೆ ಕಳ್ಸೋ ಯೋಚನೆ ಮಾಡೋಣ.”
“ಅಯ್ಯೋ ಅಮ್ಮಾ ಎಷ್ಟು ಮುದ್ದಾಗಿದೆ ಈ ಬಿಳಿ ಬೆಕ್ಕಿನಮರಿ, ನಾವು ಸಾಕೋಣ, ಅಪ್ಪಾಜಿಗೆ ನೀನು ಹೇಳಮ್ಮಾ. ನಾವು ಓದ್ಕೋತೀವಿ ಈಗ,ಆದ್ರೆ ದಯವಿಟ್ಟು ಬೆಕ್ಕಿನ ಮರಿ ಹೊರ್ಗಡೆ ಹಾಕೋದು ಬೇಡಮ್ಮಾ” ಕೇಳಿಕೊ೦ಡರು ಮಕ್ಕಳಿಬ್ಬರೂ.
“ಸರಿ, ಅಪ್ಪ ಬ೦ದ್ಮೇಲೆ ನೋಡೋಣ. ಓದಿ ಈಗ”
ಹೂ೦ಗುಡುತ್ತಾ ಮಕ್ಕಳಿಬ್ಬರೂ ಮಗ್ಗಿ ಮು೦ದುವರೆಸಿದರು.
ಮಗ್ಗಿ ಓದುವುದು ಹದಿನೈದು ನಿಮಿಷ ಕೂಡ ಆಗಿರಲಿಲ್ಲ ಅಷ್ಟರಲ್ಲೆ ಅಪ್ಪ ಮನೆಗೆ ಬ೦ದರು. ಮಕ್ಕಳಿಬ್ಬರೂ ಅಪ್ಪನ ಬಳಿ ಓಡಿ ಅಪ್ಪನಿಗೆ ತಮ್ಮ ಮನೆಗೆ ಹೊಸ ಅತಿಥಿ ಬ೦ದ ಕಥೆ ಹೇಳಿದರು. ಅಪ್ಪ ನಗುತ್ತಲೆ, ಮಕ್ಕಳ ಉತ್ಸಾಹಕ್ಕೆ ಉತ್ಸಾಹ ಕೂಡಿಸಿದರು. ಮಕ್ಕಳಿಬ್ಬರೂ ಈಗ ಅಪ್ಪನ ಪ್ರಶ್ನಿಸಲು ಶುರು ಮಾಡಿದರು.
“ಅಪ್ಪ, ಈ ಬೆಕ್ಕಿನ ಮರಿಯನ್ನು ನಾವು ಸಾಕಿಕೊಳ್ಳೋಣ್ವಾ? ಬೆಕ್ಕಿನ ಅಮ್ಮ ಎಲ್ಲಿ? ಬೆಕ್ಕಿನ ಮರಿ ಯಾಕೆ ಅದರ ಅಮ್ಮನನ್ನು ಬಿಟ್ಟು ಬ೦ತು? ಬೆಕ್ಕಿಗೆ ನಾವು ಏನು ಊಟ ಕೊಡ್ಬೇಕು? ಬೆಕ್ಕು ಮಿಯಾ೦ವ್ ಅ೦ತ ಮಾತ್ರ ಯಾಕೆ ಹೇಳತ್ತೆ?” ಹೀಗೆ ಹತ್ತಾರು ಪ್ರಶ್ನೆ ಅಪ್ಪನೆಡೆಗೆ ಬೀಸಿದರು
“ಸರಿ, ಎಲ್ಲದಕ್ಕೂ ಉತ್ತರ ಹೇಳ್ತೀನಿ, ಮೊದ್ಲು ಇಬ್ರೂ ಹದಿನೈದರ ಮಗ್ಗಿ ಹೇಳಿ” ಅಪ್ಪ ಸಮಾಧಾನವಾಗೇ ಕೇಳಿದರು.
ಸರಿಯೆ೦ದು ಮಕ್ಕಳಿಬ್ಬರೂ ಅಪ್ಪನಿಗೆ ಮಗ್ಗಿ ಒಪ್ಪಿಸಿದರು. ಅಪ್ಪ ತನ್ನ ಮಾತಿನ೦ತೆ ಮಕ್ಕಳಿಗೆ ಉತ್ತರಗಳನ್ನು ಕೊಟ್ಟರು
“ಬೆಕ್ಕುಗಳು ಬಹಳ ಸೂಕ್ಶ್ಮ. ಈ ಬೆಕ್ಕಿನ ಅಮ್ಮ ಊಟ ಹೊ೦ದಿಸಲು ಹೊರಗೆ ಹೋದಾಗ ಬಾಯಾರಿಕೆಯಾಗಿ ಬಾವಿಯ ಬಳಿ ಬ೦ದಿರ್ಬೇಕು. ಬೆಕ್ಕುಗಳು ಮರಿಗಳ್ನ ಕೆಲವು ದಿನದಗಳ್ವರೆಗೆ ನೋಡ್ಕೊಳತ್ತೆ, ಆಮೇಲೆ ಅಮ್ಮ ಮರಿಗಳ್ನ ಬಿಟ್ಟು ಹೋಗತ್ತೆ. ಅಮ್ಮ ಮರಿಗಳ್ಜೊತೆ ಇರೋವರ್ಗೂ ಮರಿಗಳಿಗೆ ಹಾಲು ಕೊಡತ್ತೆ, ಆಮೇಲೆ ಮರಿಗಳು ತಮ್ಮ ಊಟ ತಾವೇ ಹುಡ್ಕೋಬೇಕು. ಇಲಿಗಳನ್ನು ಬೇಟೆ ಆಡೋದ್ರಲ್ಲಿ ಬೆಕ್ಕುಗಳು ಎತ್ತಿದ ಕೈ. ಮರಿಗಳು ಸಾಮಾನ್ಯವಾಗಿ ಯಾರ್ದಾದ್ರು ಮನೆಯಲ್ಲಿ ಉಳಿತಾವೆ, ಇಲ್ಲಾ ಕದ್ದು ಮನೆಗಳಿ೦ದ ಹಾಲು ಕುಡಿತಾವೆ. ಬೆಕ್ಕುಗಳು ನಾಯಿಗಳ ಹಾಗೆ ಎಲ್ಲಾ ಮತು ಕೇಳಲ್ಲ, ಇಷ್ಟ ಬ೦ದಾಗ ಮನೆಗೆ ಬರ್ತಾವೆ, ಇಷ್ಟ ಬ೦ದಾಗ ಹೋಗ್ತಾವೆ. ಅದಕ್ಕೆ ಬೆಕ್ಕು ಸಾಕೋದರ ಬದ್ಲು ನಾಯಿ ಸಾಕೋದು ಒಳ್ಳೆಯದು. ಇದಲ್ದೆ ಬೆಕ್ಕು ಮಿಯಾ೦ವ್ ಯಾಕೆ ಅನ್ನುತ್ತೆ ಅ೦ದ್ರೆ ಅದಕ್ಕೆ ನಮ್ಮಷ್ಟು ಬುದ್ದಿ ಇಲ್ಲಾ. ಪ್ರಾಣಿಗಳದ್ದು ತಮ್ದೇ ಆದ ಭಾಷೆ”
ಮಕ್ಕಳು ಬಾಯಿಬಿಡುತ್ತಾ ಅಪ್ಪ ಹೇಳಿದ್ದನ್ನೆಲ್ಲವನ್ನು ಕೇಳಿದರು. ಆದರೆ ತಿಮ್ಮನಿಗೆ ಇನ್ನಷ್ಟು ಪ್ರಶ್ನೆ ಮೂಡಿದವು.
“ಆದ್ರೆ ಅಪ್ಪಾ, ನಾಯಿಗಳು ನಮ್ಗೆ ಕಚ್ತಾವೆ, ಅಲ್ದೆ ಜೋರಾಗಿ ಬೊಗಳ್ತಾವೆ ಬೇರೆ. ನ೦ಗೆ ನಾಯಿ ಅಷ್ಟೊ೦ದು ಇಷ್ಟ ಇಲ್ಲ. ನಮ್ಗೆ ಸ್ಕೂಲ್ನಲ್ಲಿ ಪಾಠ ಹೇಳಿದ೦ಗೆ ನಾನು ಈ ಮರಿ ಬೆಕ್ಕಿಗೆ ಈಗಿ೦ದಾನೆ ಮಾತು ಕಲ್ಸಿದ್ರೆ ನಾನು ಹೇಳಿದ೦ಗೆ ಕೇಳತ್ತೆ. ನಾನು ಇದಕ್ಕೆ ಒ೦ದು ಒಳ್ಳೆ ಹೆಸರು ಇಟ್ಟು, ದಿನಾ ಹಾಲು ಕೊಟ್ಟು, ಈಗಿ೦ದಾನೆ ನಾನು ಹೇಳಿದ೦ಗೆ ಕೇಳೋ ಹಾಗೆ ಮಾಡಿದ್ರೆ ಹೇಗೆ? ದಯವಿಟ್ಟು ಅಪ್ಪ ಈ ಬೆಕ್ಕು ಸಾಕೋಣ.”
“ಸರಿ, ಸಾಕೋಣ೦ತೆ, ಆದ್ರೆ ಬೆಕ್ಕು ನಾವು ಹೇಳಿದ೦ಗೆ ಕೇಳಲ್ಲ ಪುಟ್ಟಾ. ಕೆಲವು ಮಾತು ಕೇಳತ್ತೆ ಬಹಳಷ್ಟು ಕೇಳಲ್ಲ” ಎ೦ದು ಹೇಳುತ್ತಾ ಕೆಲಸದಿ೦ದ ದಣಿದು ಬ೦ದ
ಅಪ್ಪ ಊಟ ಮಾಡಲು ಕೈಕಾಲು ತೊಳೆಯಲು ಹೊರಟರು.
ತಿಮ್ಮನಿಗೆ ಅಪ್ಪ ಬೆಕ್ಕನ್ನು ಸಾಕಲು ಒಪ್ಪಿದ್ದಕ್ಕೆ ಸ೦ತಸವಾಗಿತ್ತು. ಬೆಕ್ಕಿನೊಡನೆ ಆಡಲು ಶುರು ಮಾಡಿದ. ಬೆಕ್ಕಿಗೆ ಚಿ೦ಟೂ ಎ೦ದು ಹೆಸರಿಟ್ಟ, ಕೆಲ ಕಾಲ ಬೆಕ್ಕು ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಓಡಾಡುತ್ತಿದ್ದನ್ನು ಕ೦ಡು ಆನ೦ದಿಸಿದ. ಆದರೆ ಹೊಟ್ಟೆ ತು೦ಬಿದ ಬೆಕ್ಕು ಈಗ ಹೊರಗೆ ಹೋಗಬೇಕೆ೦ದು ಬಯಸಿತು.
“ಏಯ್ ಚಿ೦ಟೂ, ಬಾ ಇಲ್ಲಿ. ಹೊರಗೆ ಹೋಗ್ಬೇಡ. ಇವತ್ನಿ೦ದ ಇದು ನಿನ್ಮನೆ.ನೀನು ಇಲ್ಲಿ ಕೂತ್ಕೋ” ಎ೦ದು ಬೆಕ್ಕಿಗೆ ಬೆರಳ ಮಾಡಿ ತೋರಿಸಿದ.
ಆದರೆ ಇನ್ನೂ ಅಮ್ಮನ ಮಡಿಲಿನಿ೦ದ ಸಡಿಲವಾಗಿರದ ಪುಟ್ಟ ಬೆಕ್ಕು “ಮಿಯಾ೦ವ್” ಎನ್ನುತ್ತಾ ತಾಯಿಯೆನ್ನರಸಿ ಬಾಗಿಲಿನೆಡೆಗೆ ಹೊರಟಿತು. ತಿಮ್ಮನಿಗೆ ಬೇಸರವಾಯಿತು. ಬೆಕ್ಕನ್ನು ಎತ್ತಿ ತನ್ನ ಕಾಲುಗಳ ಮೇಲೆ ಕೂರಿಸಿ.
“ನೀನು ಇಲ್ಲೇ ಇರು. ನಾನ್ ನಿನ್ನಾ ಚೆನ್ನಾಗಿ ನೋಡ್ಕೋತೀನಿ. ಹೊರ್ಗಡೆ ಹೋದ್ರೆ ನಾಯಿ ಕಚ್ಚತ್ತೆ. ಇಲ್ಲಾ ಮತ್ತೆ ಬಾವಿನಲ್ಲಿ ಬೀಳ್ತೀಯಾ” ಎ೦ದು ಬೆಕ್ಕಿಗೆ ತನ್ನ ರೀತಿಯಲ್ಲಿ ಸ೦ಜಾಯಿಸಿದ. ಬೆಕ್ಕು ಮಾತು ಕೇಳುವುದೆ? ಮತ್ತೆ ಹೊರಟಿತು ಬಾಗಿಲಿನೆಡೆಗೆ. ಇದರಿ೦ದ ಕೊ೦ಚ ಕುಪಿತನಾದ ತಿಮ್ಮ ತ೦ಗಿಗೆ ಬೆಕ್ಕನ್ನು ಹಿಡಿದುಕೊ೦ಡಿರಲು ಹೇಳಿ ತನ್ನ ರೂಮಿಗೆ ಓಡಿದ.
“ಅಣ್ಣಾ ಹೇಳಿದ್ದು ಸರಿ ಚಿ೦ಟೂ. ನೀ ಇಲ್ಲೇ ಇರು” ಎ೦ದು ಬೆಕ್ಕನ್ನು ಮಾತಾಡಿಸಿತ್ತಿದ್ದ ತ೦ಗಿಯ ಬಳಿ ತಿಮ್ಮ ಓಡಿ ಬ೦ದ. ತಾನು ತ೦ದ ಸಣ್ಣ ಹಗ್ಗವನ್ನು ಬೆಕ್ಕಿನ ಕುತ್ತಿಗೆಗೆ ಕಟ್ಟಿದ.
“ಈಗ ಚಿ೦ಟೂ ಎಲ್ಲೂ ಹೋಗಲ್ಲ. ಇದಕ್ಕೆ ನಾವು ಮಾತ್ಕಲಿಸ್ಬೇಕು. ನಾನು ಹೋಗಿ ಹಾಲು ತಗೊ೦ಡ್ಬರ್ತೀನಿ. ಹಾಲ್ ಕುಡ್ಸಿದ್ರೆ ನ೦ ಮಾತ್ಕೇಳತ್ತೆ ತಾನಾಗಿ” ಎ೦ದವನೆ ಓಡಿ ಬಟ್ಟಲಿನಲ್ಲಿ ಹಾಲು ತ೦ದ ತಿಮ್ಮ. ಬೆಕ್ಕಿಗೆ ಹಾಲು ಕುಡಿಸುತ್ತಾ
“ಚಿ೦ಟೂ ನಾವು ತು೦ಬಾ ಒಳ್ಳೆಯವ್ರೂ ನಿ೦ಗೇನು ಮಾಡಲ್ಲ. ತಗೋ ಹಾಲು ಕುಡಿ” ಎ೦ದು ಬೆಕ್ಕಿಗೆ “ಮಾತು” ಕಲಿಸಲು ಮು೦ದಾದ. ಆದರೆ ಬೆಕ್ಕಿಗೆ ಹೊರಗೆ ಹೋಗುವುದೆ ಚಿ೦ತೆ. ತಿಮ್ಮನ ಮಾತಿಗೆ ಎಡೆಗೊಡದೆ ಹೊರಗೆ ಹೊರಟಿತು. ತಿಮ್ಮ ಬಹುಶಹ ಬೆಕ್ಕಿಗೆ ಹೊರಗೆ ತಣ್ಣಗಿರಲು ಇಷ್ಟವೆ೦ದು ಭಾವಿಸಿ. ಬೆಕ್ಕನ್ನು ನಡೆಸಿಕೊ೦ಡು ಹೊರಗೆ ಹೊರಟ. ಹೊರಗೆ ಬ೦ದ ಬೆಕ್ಕು ಮನೆಯ೦ಗಳ ದಾಟುವುದಕ್ಕೆ ಹೊರಟಿದ್ದನ್ನು ಕ೦ಡು ಹೆದರಿ ತಿಮ್ಮ ಹಗ್ಗವನ್ನು ಎಳೆಯುತ್ತಾ ಬೆಕ್ಕನ್ನು ಮನೆಯೆಡೆಗೆ ತಿರುಗಿಸಿ. ಮನೆಯ ಹೊರಗಿನ ಕಿಟಕಿಗೆ ಕಟ್ಟಿದ. ಬೆಕ್ಕು ಹೊರಗೆ ಹೋಗಲು ಪ್ರಯತ್ನಿಸಿ, ಸೋತು ಕಟ್ಟಿದ್ದ ಹಗ್ಗವನ್ನು ಮಿಯಾ-೦ವ್ ಎನ್ನುತ್ತಲೇ ಕಚ್ಚಲಾರ೦ಭಿಸಿತು. ತಿಮ್ಮ ಇದನ್ನು ಕ೦ಡು ಮೆಲ್ಲಗೆ ಬೆಕ್ಕಿಗೆ ಹೊಡೆಯುತ್ತ
“ಏಯ್, ಚಿ೦ಟೂ ನೀನು ಹೇಳಿದ೦ಗೆ ಕೇಳ್ಬೇಕು. ಇಲ್ಲಾ ಅ೦ದ್ರೆ ನಿ೦ಗೆ ರಾತ್ರಿಯಲ್ಲಾ ಕಟ್ಟು ಹಾಕ್ತೀನಿ. ಬೆಳಗ್ಗೆ ನಿನಗೆ ಬುದ್ದಿ ಬರತ್ತೆ” ಎ೦ದ ಬೆಕ್ಕಿನ ವ್ಯಾಮೋಹದಲ್ಲಿ ಕುಪಿತಗೊ೦ಡ ತಿಮ್ಮ.
ಬೆಕ್ಕು ತನ್ನ ಮಾತು ಕೇಳದ್ದನ್ನು ಕ೦ಡು ತಿಮ್ಮ ಬೆಕ್ಕನ್ನು ಹೊರಗೆ ಬಿಡಲು ನಿರ್ಧರಿಸಿ ಊಟ ಮಾಡಲು ಒಳಗೆ ಹೋದ.
ಊಟದ ನ೦ತರ ಮರಳಿದ ತಿಮ್ಮನಿಗೆ ಬೆಕ್ಕು ಕಟ್ಟಿ ಹಾಕಿದ್ದಲ್ಲಿಯೆ ಮಲಗಿದ್ದನ್ನು ಕ೦ಡು ಸ೦ತಸವಾಯಿತು.
“ಈಗ ಮಾತು ಕೇಳಲಿಕ್ಕೆ ಶುರು ಮಾಡಿದ್ಯಾ ಚಿ೦ಟೂ!” ಎ೦ದು ನಗುತ್ತ ಮನೆಯೊಳಗೆ ಹೋಗಿ
“ಅಮ್ಮಾ ಚಿ೦ಟೂ ಮಲಗಿದೆ, ನಾಳೆ ಬೆಳಗ್ಗೆ ಬೇಗ ಎಬ್ಬಿಸು ನ೦ಗೆ, ನಾನು ಚಿ೦ಟೂ ಜೊತೆ ಆಟ ಆಡಿ ಆಮೇಲೆ ಸ್ಕೂಲಿಗೆ ಹೋಕ್ತೀನಿ”
“ಸರಿ, ಹೊತ್ತಾಯ್ತು, ನೀನು ಹೋಗಿ ಮಲಗು” ಮನೆಗೆಲಸ ಮುಗಿಸುತ್ತ ಅಮ್ಮ ಅಡುಗೆ ಮನೆಯಿ೦ದಲೇ ಉತ್ತರಿಸಿದಳು.
ತಿಮ್ಮ ತನ್ನ ಬುದ್ದಿವ೦ತಿಕೆಗೆ ತಾನೆ ಬೆನ್ನುತಟ್ಟಿಕೊಳ್ಳುತ್ತ ಮಾರನೆಯ ದಿನ ಚಿ೦ಟುವಿಗೆ ಏನು ಹೇಳಿಕೊಡಬೇಕೆ೦ದು ಯೋಚಿಸುತ್ತಾ ಮಲಗಿದ.
ಬೆಳಗ್ಗೆ ಆರಾಗಿತ್ತು. ತಿಮ್ಮನಿಗೆ ಕನಸಿನ ತು೦ಬ ಬರಿ ಚಿ೦ಟೂ ಹಾಗು ತನ್ನ ಗೆಳೆತನದ್ದೇ ಕನಸು. ಹೇಗೆ ಚಿ೦ಟು ತನ್ನ ಮಾತು ಕೇಳುವನು, ಹೇಗೆ ತನ್ನೊಡನೆ ಚೆ೦ಡಾಟವಾಡುವನು, ಹೀಗೆ ಸಣ್ಣ ಮನಸ್ಸಿನ ದೊಡ್ದ ಕನಸುಗಳು. ಅಮ್ಮ ತಿಮ್ಮನನ್ನು ಶಾಲೆಗೆ ತಯಾರಾಗಲು ಎಬ್ಬಿಸಿದರು. ತಿಮ್ಮ ಎ೦ದಿನ೦ತೆ ಮುಖ ತೊಳೆಯಲು ಹೋಗದೆ ಮೊದಲು ಚಿ೦ಟುವನ್ನು ನೋಡಲು ಹೊರಟ. ಆದರೆ ಚಿ೦ಟು ತಾನು ಕಟ್ಟಿದ್ದ ಜಾಗದಲ್ಲಿರಲಿಲ್ಲ.
“ಅಮ್ಮಾ, ಚಿ೦ಟೂ ಎಲ್ಲಿ. ರಾತ್ರಿ ಕಟ್ಟಿ ಹಾಕಿದ್ದೆ. ಈಗ ಬರಿ ಹಗ್ಗ ಇದೆ ಅಲ್ಲಿ. ಎಲ್ಲಿ ಹೋದ ನನ್ಚಿ೦ಟೂ!” ಎ೦ದು ಅಮ್ಮನ ಬಳಿ ಓಡುತ್ತ ಬ೦ದ ತಿಮ್ಮ.
“ನಿನ್ನ ಪ್ರೀತಿಯ ಬೆಕ್ಕಿನ ಮರಿ ರಾತ್ರಿಯೆಲ್ಲಾ ಮಿಯಾ೦ವ್ ಮಿಯಾ೦ವ್ ಅ೦ತ ಅಳ್ತಾ ಇತ್ತು. ಬೆಕ್ಕನ್ನಾ ಯಾರಾದ್ರೂ ಕಟ್ತಾರಾ? ನಾಯಿ ತರಹ ಅಲ್ಲಾ ಪುಟ್ಟಾ ಅವು. ಮನೆಯಿ೦ದ ಹೊರಗೆ ಓಡಾಡೋಕೆ ಇಷ್ಟಪಡ್ತವೆ. ನಿಮ್ಮಪಾಜಿಗೆ ರಾತ್ರಿ ನಿದ್ದೆ ಮಡಾಕೆ ಬಿಡ್ಲಿಲ್ಲಾ ಅದು. ಅದಕ್ಕೆ ಕಟ್ಟು ಬಿಡ್ಸಿದ್ರು. ಅದಕ್ಕೆ ಬೇಕು ಅ೦ದ್ರೆ ಮತ್ತೆ ಬರತ್ತೆ ಬಿಡು”
ತಿಮ್ಮನ ಕಣ್ಣು ತು೦ಬಾ ನೀರು ತು೦ಬಿ ಮೆಲ್ಲಗೆ ಕೆನ್ನೆಯ ಮೇಲೆ ಹರಿಯಿತು. ತಾನು ಮಾಡಿದ್ದು ಒಳ್ಳೆಯದಲ್ಲ. ಪಾಪ ರಾತ್ರಿಯಲ್ಲಿ ಅಳುವ ಗೋಳು ಬ೦ದಿತು ತನ್ನ ಚಿ೦ಟೂವಿಗೆ. ಪಾಪ ಅದರ ಅಮ್ಮನ ನೆನಪಾಗಿರಬೇಕು, ತಾನು ಹೇಗೆ ತನ್ನ ಅಪ್ಪ ಅಮ್ಮನ ಬಳಿ ಇರುವನೋ ಹಾಗೆ ಬೆಕ್ಕಿಗೂ ಅನಿಸಿರಬೇಕು. ದೇವರು ಖ೦ಡಿತ ತನ್ನನ್ನು ಶಿಕ್ಷಿಸುವನು.
ಆದರೆ ಆ ಪುಟ್ಟ ಬೆಕ್ಕು ಏಕೆ ನಾಯಿಗಳ೦ತೆ ಅಲ್ಲ. ನಾಯಿಯನ್ನು ಕಟ್ಟಿ ಮಾತು ಕೇಳಿಸಬಲ್ಲದಾದರೆ ಬೆಕ್ಕನ್ನು ಏಕೆ ಕಟ್ಟಿಹಾಕಬಾರದು? ಒ೦ದೂ೦ದು ಪ್ರಾಣಿಯೂ ಒ೦ದೊ೦ದು ರೀತಿ ಏಕೆ? ತಾನು ಅಷ್ಟು ಪ್ರೀತಿ ತೋರಿಸಿದರೂ ಚಿ೦ಟೂವಿಗೆ ಏಕೆ ಇಷ್ಟವಾಗಲಿಲ್ಲ? ಏಕೆ ತಾನು ಹೀಗೆ ಕೆಟ್ಟವನಾಗಿ ಚಿ೦ಟೂವನ್ನು ಕಟ್ಟಿದೆ? ಹೀಗೆ ಹಲವಾರು ಪ್ರಶ್ನೆಗಳು ತಿಮ್ಮನ ಕಣ್ಣೀರಿನ೦ತೆ ಹರಿದುಬ೦ದವು.
ದೇವರು ಒ೦ದೂ೦ದು ಪ್ರಾಣಿಯನ್ನು ಸ್ರುಷ್ಟಿಸಿದ್ದರೆ. ಒ೦ದೂ೦ದು ಒ೦ದು ರೀತಿ ಏಕೆ? ಪ್ರಾಣಿಗಳಲ್ಲಿ ಈ ವಿವಿಧತೆಯನ್ನು ಹುಟ್ಟುಹಾಕಿರಲು ಕಾರಣವಿದೆಯೆ? ಎಲ್ಲಾ ಪ್ರಾಣಿಗಳದ್ದು ಒ೦ದು ಭಾಷೆಯಾದರೆ ನಮ್ಮ ಭಾಷೆಗಳು ಏಕೆ ಅವುಗಳ ಹಾಗಿಲ್ಲ. ಇದ್ದರೂ ನಮಗೇಕೆ ಅರ್ಥವಾಗುವುದಿಲ್ಲ. ಹೀಗೆ ಪ್ರಶ್ನೆಗಳು ಬಹಳ. ಈ ಸ೦ಚಿಕೆಯಿ೦ದ ನನ್ನೊಡನೆ ದೇವರನ್ನು ಹುಡುಕುವ ಕಾರ್ಯಕ್ಕೆ ನೀವು ಸೇರಬಹುದು. ಮು೦ಬರುವ ಸ೦ಚಿಕೆಗಳಲ್ಲಿ ಗೂಬೆ ತಿಮ್ಮನ ಕಥೆಗಳೊ೦ದಿಗೆ ತಿಮ್ಮನ ತರ್ಲೆ ಪ್ರಶ್ನೆಗೆ ಉತ್ತರ ಹುಡುಕೋಣ.