ಪವರ್ ಕಟ್ ಇಲ್ಲದ ಕಾನುತೋಟ

ಪವರ್ ಕಟ್ ಇಲ್ಲದ ಕಾನುತೋಟ

 


                  ಉತ್ತಮ ಗುಣಮಟ್ಟದ ವಿದ್ಯುತ್, ಪವರ್ ಕಟ್ ಪ್ರಶ್ನೆಯೇ ಇಲ್ಲ, ಸಿಂಗಲ್ ಫೇಸ್ ಕಾಟ ಗೊತ್ತಿಲ್ಲ, ದಿನಪೂರ್ತಿ ಸಮರ್ಪಕ ವಿದ್ಯುತ್ ಪೂರೈಕೆ, ಓಹ್ ಇಷ್ಟು ಓದಿದ ಮೇಲೆ ನೀವು ಇದು ನಮ್ಮ ದೇಶದ ಸುದ್ದಿಯೇ ಅಲ್ಲ  ಎಂಬ ವಿಚಾರಕ್ಕೆ ಬಂದಿರುತ್ತೀರಿ, ಆದರೆ ಇದು ನಮ್ಮದೇ ರಾಜ್ಯದ ಪುಟ್ಟ ಹಳ್ಳಿಯ ಸುದ್ಧಿ.  ವಿಷಯ ಅಷ್ಟೇ ಅಲ್ಲ ಎಷ್ಟೇ ವಿದ್ಯುತ್ ಉಪಯೋಗಿಸಿದರೂ ಬಿಲ್ ಕಟ್ಟಬೇಕಾಗಿಲ್ಲ,  ಬಿಲ್ ಕಟ್ಟುವ ಕಿರಿಕಿರಿ ಅಥವಾ ಹಣ ಕಟ್ಟದಿದ್ದರೆ ಡಿಸ್‌ಕನೆಕ್ಟ್ ಮಾಡುವ ಭಯವೂ ಇಲ್ಲ. ಮೊದಲನೆಯದಲ್ಲ ಇದ್ದರೂ ಇರಬಹುದು ಇದು ಮಾತ್ರಾ ಬೊಗಳೆ ಎಂಬ ತೀರ್ಮಾನಕ್ಕೆ ಬಂದಿರಾದರೆ ಅದು ಸುಳ್ಳು.
 ಶಿವಮೊಗ್ಗ ಸಾಗರ ತಾಲ್ಲೂಕು ಕಾನುತೋಟ ಎಂಬುದು ಸಾಗರದಿಂದ ಜೋಗಕ್ಕೆ ಸಾಗುವ ಮಾರ್ಗದಲ್ಲಿರುವ ಒಂಟಿಮನೆಯ ಪುಟ್ಟ ಹಳ್ಳಿ. ಅಲ್ಲಿಗೆ ಮೆಸ್ಕಾಂ ವಿದ್ಯುತ್ ಪೂರೈಕೆ ಮಾಡಿದೆಯಾದರೂ ಕಾಡಿನ ನಡುವೆ ಹಾದುಹೋಗಿರುವ ಲೈನ್ ನಿಂದಾಗಿ ವಾರಕ್ಕೊಮ್ಮೆ ವಿದ್ಯುತ್ ಮುಖ ನೋಡುವುದು ಕಷ್ಟವಾಗಿತ್ತು. ಆಗ ಕಾನುತೋಟದ ಗುರು ಮನಸ್ಸು ಮಾಡಿದ್ದು ಸ್ವಯಂ ವಿದ್ಯುತ್ ತಯಾರಿಕೆಗೆ. ಗುಡ್ಡದ ಬುಡದಲ್ಲಿರುವ ಗುರುರವರ ಮನೆಗೆ ಗುಡ್ಡದ ನೆತ್ತಿಯಿಂದ ಪ್ರಕೃತಿದತ್ತವಾದ ಅಬ್ಬಿನೀರು  ಹರಿದು ಬಂದು ವ್ಯರ್ಥವಾಗಿ ಹೊಳೆಗೆ ಸೇರಿ ಹೋಗುತ್ತಿತು. ಅದಕ್ಕೆ ಪೈಪ್ ಲೈನ್ ಹಾಕಿ ಅಲ್ಲೊಂದು ಜನರೇಟರ್ ಕೂರಿಸಿದರು ಗುರು. ಅಲ್ಲಿಂದೀಚೆಗೆ ಕಾನುತೋಟದ ಗುರು ಅವರಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ ಅದೂ ಪೈಸಾ ಖರ್ಚಿಲ್ಲದೆ. ವಿದ್ಯುತ್ ಟರ್ಬೈನ್ ತಿರುಗಿಸಿದನಂತರದ ನೀರು ತೋಟಕ್ಕೆ ಬಳಕೆಯಾಗುತ್ತದೆ. ಈಗಾಗಲೆ ಯಶಸ್ವೀ ಆರು ವರ್ಷಗಳನ್ನು ಸ್ವಯಂ ವಿದ್ಯುತ್ ತಯಾರಿಕೆ ಮಾಡಿಕೊಂಡು ಪೂರೈಸಿಕೊಳ್ಳುತ್ತಿರುವ ಗುರು ಪವರ್ ಕಟ್ ಮುಂತಾದ ಕಿರಿಕಿರಿಯಿಂದ ಮುಕ್ತರಾಗಿದ್ದಾರೆ. ಹೀಗೆ ಅವಕಾಶವಿರುವ ಜನರು ಮನಸ್ಸುಮಾಡಿದರೆ ಮೆಸ್ಕಾಂ ನ ಹೊರೆಯೂ ಕಡಿಮೆಯಾಗಿ ವಿದ್ಯುತ್ ಸ್ವಾವಲಂಬಿಗಳಾಗಬಹುದು ಎನ್ನುವುದು ಕಾನುತೋಟದ ಗುರುರವರ ಮಾತು.   
ಸಂಪರ್ಕ: ೦೮೧೮೩-೨೦೭೨೫೩


(ವಿಕ ಲವಲವಿಕೆಯಲ್ಲಿ ಇಂದು ಪ್ರಕಟಿತ)

Rating
No votes yet

Comments