ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

ಬರಹ

Rev Ferdinand Kittelರೆವೆರೆಂಡ್ ಎಫ್. ಕಿಟ್ಟೆಲ್ ರ ಕನ್ನಡ- ಇಂಗ್ಲೀಷ್ ನಿಘಂಟಿನಷ್ಟು ಅಪೂರ್ವವಾದದ್ದು ಕನ್ನಡದಲ್ಲಿ ಇನ್ನೊಂದಿಲ್ಲ. ಅದರ ಗಾತ್ರ, ಘನತೆ, ಸಂಗ್ರಹ, ಪದ್ಧತಿಗಳು ಅನನ್ಯವಾದವುಗಳು. ಅದರ ಪ್ರಕಟಣೆ ನೂರುವರ್ಷದ ಮೇಲಾದಾಗ್ಯೂ ಇಂದಿನ ಸಂದರ್ಭದಲ್ಲೂ ಕಿಟೆಲ್ ರು ಕನ್ನಡ ಸಾರಸ್ವತಕ್ಕೆ ಸಲ್ಲಿಸಿದ ಅಮೋಘ ಸೇವೆಯ ಸ್ಮರಣೆ ಮಾಡುವುದು ಔಚಿತ್ಯಪೂರ್ಣವಾಗಿದೆ.

ಅವರು ಕ್ರೈಸ್ತ ಮತ ಪ್ರಚಾರಕ್ಕಾಗಿಯೇ ೧೮೫೩ ರಲ್ಲಿ ಬಾರತಕ್ಕೆ ಬಂದವರು. ಮೊದಲು ಧಾರವಾಡ, ಮಂಗಳೂರು, ಹುಬ್ಬಳ್ಳಿ ಯಲ್ಲಿ ಮತಪ್ರಚಾರದ ಕಾರ್ಯ ನಡೆಸಿದರು. ಭಾಷಾ ಪ್ರಚಾರಕ್ಕೆ ಮುಖ್ಯವಾದದ್ದು ಅಲ್ಲಿನ ದೇಸಿ ಭಾಷೆ. ಅದಕ್ಕಾಗಿ ಅವರು ಎಲ್ಲಕ್ಕಿಂತ ಮೊದಲೇ ಕನ್ನಡಭಾಷೆಯನ್ನು ಕಲಿತರು. ಧರ್ಮಪ್ರಚಾರವನ್ನು ಸ್ವಲ್ಪ ಕಾಲ ಬದಿಗಿಟ್ಟು ದೇಸಿ ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳನ್ನು ಕಲಿತಿದ್ದಲ್ಲದೆ ಅದರಲ್ಲಿ ಪ್ರಾವೀಣ್ಯತೆಯನ್ನೂ ಪಡೆದರೆಂಬುದು ಇಲ್ಲಿ ನಾವು ಗಮನಿಸಬೇಕಾದ ಸಂಗತಿ.

ರೆವರೆಂಡ್ .ಕಿಟ್ಟಲ್ ಅದರಲ್ಲಿ ಅಗ್ರೇಸರು ಎಂದು ಖಂಡಿತವಾಗಿ ಹೇಳಬಹುದು. ಕಿಟ್ಟೆಲ್ ರು ಜರ್ಮನಿಯ 'ಹ್ಯಾನ್ ವರ್ 'ನಲ್ಲಿ ೧೮೩೨ ನೆಯ ಏಪ್ರಿಲ್ ೭ ರಂದು ಜನಿಸಿದರು. ಅವರ ಫಾಸ್ಟರ್ ತಂದೆಯೂ ಮತಪ್ರಚಾರ ಮಾಡುತ್ತಿದ್ದರು. ಹೀಗೆ ತಮ್ಮ ಚಿಕ್ಕಂದಿನಲ್ಲೇ ಅವರು ಮತಪ್ರಚಾರವನ್ನು ಸ್ವೀಕರಿಸಲೇಬೇಕಾಯಿತು. ಕಿಟ್ಟಲ್ ಮಂಗಳೂರಿನ 'ಪಾಲೆನಿತ್'' ಎಂಬ ಹುಡುಗಿಯೊಡನೆ ೧೮೬೦ ರಲ್ಲಿ ವಿವಾಹವಾದರು. ಈ ಮದುವೆ ೪ ವರ್ಷಗಳಲ್ಲೇ ಅಂತ್ಯವಾಯಿತು. ಬಹುಬೇಗ ಅವರ ಹೆಂಡತಿ ತೀರಿಕೊಂಡರು. ಸುಮಾರು ೧೪ ವರ್ಷಗಳಕಾಲ ಮತಪ್ರಚಾರದ ಕೆಲಸ ಮುಂದುವರೆಸಿ, ಜರ್ಮನಿಗೆ ತೆರಳಿದರು. ಅವರು ಮತ್ತೆ ಭಾರತಕ್ಕೆ ಮರಳಿ ಬಂದಿದ್ದು ೧೮೬೭ ರಲ್ಲಿ. ಈ ಬಾರಿ ಅವರು ಮರು ಮದುವೆಯಾದರು. ಆಕೆ ತಮ್ಮ ಮೊದಲನೆಯ ಪತ್ನಿ ಯ ತಂಗಿ- 'ಜೂಲಿಯ' ಎಂಬುವಳೊಡನೆ.

ಕನ್ನಡ ಸಾಹಿತ್ಯಕ್ಕೆ ಅವರ ಸೇವೆ ಅಪಾರ : ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ 'ಅವಿಸ್ಮರಣೀಯರಾಗಿರುವುದು' ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ - ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು 'ಬಾಸೆಲ್ ಮಿಶನ್' ನವರು ಪ್ರಕಟಿಸಿದರು.

ಆಗಿನ ಕಾಲದಲ್ಲಿ ಯಾವ ಪ್ರಚೀನ ಕನ್ನಡ ಗ್ರಂಥಗಳು ಮುದ್ರಣದಲ್ಲಿರಲಿಲ್ಲ. ಅವು ಸುಲಭವಾಗಿ ಸಿಗುತ್ತಲೂ ಇರಲಿಲ್ಲ. ತಮಗೆ ಅಲ್ಲಿ ಇಲ್ಲಿ ಸಿಕ್ಕ ಸುಮಾರು ೩೫ ಕನ್ನಡ ಕೃತಿಗಳಸಹಾಯದಿಂದ ತಮ್ಮ (ಕರಡು ಪ್ರತಿ) ಕೃತಿಯನ್ನು ಸಿದ್ಧಪಡಿಸಿದರು. ೧೭೫೨ ಪುಟಗಳಿರುವ ಈ ಗ್ರಂಥ ೧೮೯೪ ರಲ್ಲಿ ಪ್ರಕಟವಾಯಿತು. ಮತ ಪ್ರಚಾರವೇ ಅವರ 'ಮಿಶನ್' ನ ಮುಖ್ಯೋದ್ದೇಶ. ಅದಕ್ಕಾಗಿಯೇ ಭಾರತಕ್ಕೆ ಬಂದು ದಕ್ಷಿಣ ಭಾರತವನ್ನೆಲ್ಲಾ ಸುತ್ತಿ, ದ್ರಾವಿಡಭಾಷೆಗಳಾದ ಕನ್ನಡ, ತಮಿಳು, ತುಳು, ಮಲಯಾಳಂ, , ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದ ಸಲುವಾಗಿಯೇ ಇಂಥ ಕೆಲಸ ಮಾಡಲು ಸಾಧ್ಯವಾಯಿತು.

ನಿಧಾನವಾಗಿ ಯೋಚಿಸಿದರೆ ಆ ಕಾಲದಲ್ಲಿ, ಪಂಪಭಾರತ, ವಡ್ಡಾರಾಧನೆ, ಕವಿರಾಜಮಾರ್ಗ ದಂತಹ ಕಾವ್ಯಗಳು ಇನ್ನೂ ಪ್ರಕಟವಾಗಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡ - ಇಂಗ್ಲೀಷ್ ನಂತಹ ಗ್ರಂಥ ರಚನೆ ನಿಜಕ್ಕೂ ಆಶ್ಚರ್ಯಕರವಾದದ್ದು- ಅದೂ ಒಬ್ಬ ವಿದೇಶೀಯನಿಂದ. ಅವರು ತಮ್ಮ ಕಿಟ್ಟೆಲ್ ಶಬ್ದಕೊಶಕ್ಕೆ ಮುನ್ನುಡಿ ಬರೆದಾಗಲೇ ಅದನ್ನು ಹೇಗೆ ಓದಿಕೊಳ್ಳಬೇಕು, ಎನ್ನುವುದರ ಬಗ್ಗೆಯೂ ತಿಳಿಸಿದ್ದಾರೆ.(" The compiler entreats the public to look upon the present dictionary with an indulgent eye " ) ಜರ್ಮನಿಯ 'ಟ್ಯೂಬಿಂಜಿನ್' ವಿಶ್ವವಿದ್ಯಾಲಯ ಅವರಿಗೆ "ಗೌರವ ಡಾಕ್ಟರೇಟ್" ಕೊಟ್ಟು ಗೌರವಿಸಿತು. ಶಬ್ದಕೋಶದ ರಚನೆಯಲ್ಲಿ ಒಂದು ಉತ್ತಮ ಕ್ರಮವನ್ನು ಅವರು ಉಪಯೋಗಿಸಿಕೊಂಡರು. ದೇಶ್ಯ, ಸಂಸ್ಕೃತ, ಮತ್ತು ಅನ್ಯದೇಶಿ ಪದಗಳ ಉಪಯೋಗ. ಇಂತಹ ವಿತರಣೆ ಬಹಳ ಶಾಸ್ತ್ರೀಯವಾಗಿವೆ. ದೇಶ್ಯ ಶಬ್ದಗಳಿಗೆ ವಿಶೇಷಗಮನವನ್ನು ಕೊಡಲಾಗಿದೆ. ಹೊಸ ಪದಗಳ ಬಳಕೆ- ಹೇಗೆ ವಾಕ್ಯಗಳಲ್ಲಿ ಪ್ರಯೋಗಿಸಬಹುದೆಂಬುದನ್ನು ತೋರಿಸಿದ್ದಾರೆ. ಏಕಾಕ್ಷರ ಶಬ್ದಗಳು, ತತ್ಸಮ, ತದ್ಭವ, ಪ್ರತ್ಯಯ, ಸಮಾಸಗಳನ್ನು ಸೂಚಿಸಿದ್ದಾರೆ. ಪ್ರತಿಶಬ್ದವೂ ಅದರ ಮೂಲರೂಪ ಹೇಗಾಯಿತು, ಯಾವ ಭಾಷೆಯಿಂದ ಬಂದಿದೆ, ಎನ್ನುವ ಆಧಾರಗಳೂ ಧಾಖಲಾಗಿವೆ. ಆಡುಮಾತು ನುಡಿಗಟ್ಟು, ಗ್ರಾಮ್ಯ ಶಬ್ದಗಳು ಹೇಗೆ ಒಂದು ಪ್ರಾಂತ್ಯದಿಂದ ಪಕ್ಕದ ಪ್ರಾಂತ್ಯಕ್ಕೆ ಬದಲಾಗುತ್ತವೆ ಎನ್ನುವ ವಿಷಯನ್ನು ತೋರಿಸಿದ್ದಾರೆ.

ಅವರ ಕನ್ನಡ ಭಾಷಾ ಪ್ರೇಮ ಶ್ಲಾಘನೀಯವಾದದ್ದು. 'ಶಬ್ದ ಮಣಿ ದರ್ಪಣ' ಎಂಬ, ಗ್ರಂಥವನ್ನು (೯ ಹಸ್ತಪ್ರತಿಗಳ ಆಧಾರದಿಂದ) ಶಾಸ್ತ್ರೀಯವಾಗಿ ಸಂಪಾ ದಿಸಿದ್ದಾರೆ. ಅದರ ಪ್ರಸ್ತಾವನೆ, ಟಿಪ್ಪಣಿಗಳು ವಿದ್ವಾಂಸರನ್ನು ಇಂದಿಗೂ ಕಾಡಿವೆ. ೧೫ ಹಸ್ತಪ್ರತಿಗಳ ಆಧಾರದಿಂದ 'ಛಂದೋಂಬುಧಿ' ಎಂಬ ನಾಗವರ್ಮನ ಕಾವ್ಯವನ್ನು ಸಂಪಾದಿಸಿ, ವಿಸ್ತಾರವಾದ ಪೀಠಿಕಾ ಟಿಪ್ಪಣಿಯನ್ನು ತಯಾರಿಸಿದ್ದಾರೆ. ' ಶಬ್ದಮಣಿದರ್ಶನ' ವನ್ನು ಮೂಲವಾಗಿಟ್ಟುಕೊಂಡು ಭಾಷಾಶಾಸ್ತ್ರಕ್ಕೆ ಸಹಾಯಮಾಡುವಂತಹ ರಚನೆ, ('A Grammar of the kannada language') ಬಹು ಮೆಚ್ಚುಗೆ ಪಡೆದ ಕೃತಿ. ಅಪಾರ ಶ್ರದ್ಧೆ, ಪರಿಶ್ರಮಗಳಿಲ್ಲದೆ ಇಂತಹ ಶ್ರೇಷ್ಟ ಕೃತಿಗಳನ್ನು ಹೊರತರಲು ಸಾಧ್ಯವೇ? ಕನ್ನಡದಲ್ಲಿ 'ಜ್ಞಾನಾರ್ಜನೆ'ಮಾಡಿಕೊಂಡ ಬಳಿಕ, ಬೈಬಲ್ಲನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು. ಪರಮಾತ್ಮ ಜ್ಞಾನ, ಸಂಕ್ಷೇಪ ವ್ಯಾಕರಣ, ಕನ್ನಡ ಕಾವ್ಯಮಾಲೆ, ಗಳಂತಹ ಗ್ರಂಥಗಳು ಬೆಳಕಿಗೆ ಬಂದವು. ಇನ್ನಿತರ ಗ್ರಂಥಗಳ ಪಟ್ಟಿ ಹೀಗಿದೆ :

೧. ( Parables in Coorg ) ೧೮೭೩ ರಲ್ಲಿ, ಕೊಡಗಿನ ನುಡಿಗಟ್ಟುಗಳ ಸಂಗ್ರಹ

೨. ೧೮೭೫ ರಲ್ಲಿ, ೨,೦೦೦ ಗಾದೆಗಳ ಸಂಗ್ರಹವನ್ನು ಪ್ರಕಟಿಸಿದರು.

೩. ಶಾಲಾ ಕಾಲೇಜುಗಳಿಗೆ ಬೇಕಾದ ಪಠ್ಯಪುಸ್ತಕಗಳು. ಅವರ ಮತಕ್ಕೆ ಸಂಬಂಧಪಟ್ಟ ಕೃತಿಗಳ ಪ್ರಕಟಣೆ.

ಕಿಟ್ಟೆಲ್ ತಮ್ಮ ಸ್ವದೇಶಕ್ಕೆ ಹೋಗಿದ್ದವರು, ದುರ್ದೈವದಿಂದ ಮರಳಲೇ ಇಲ್ಲ. ಡಿಸೆಂಬರ್, ೨೦, ೧೯೦೩ ರಲ್ಲಿ ಜರ್ಮನಿಯಲ್ಲೇ ದೈವಾಧೀನರಾದರು. ಕನ್ನಡವನ್ನು ನಿಜವಾಗಿಯೂ, ಹೃದಯಪೂರ್ವಕವಾಗಿಯೂ ಪ್ರೀತಿಸುತ್ತಿದ್ದರು. ಅವರ ನಿಜವಾದ ಉದ್ದೇಶ್ಯ ಮತಪ್ರಚಾರವೊಂದೇ ಆಗಿರಲ್ಲಿಲ್ಲ. ಕನ್ನಡಕ್ಕೆ ಅವರು ಕೊಟ್ಟ ಕೊಡುಗೆ ಅಪಾರ ಎಂದರೆ ತಪ್ಪಲ್ಲ.

* ಆಧಾರ :ಮುಂಬೈ ಕರ್ಣಾಟಕ ಸಂಘ, ಪ್ರಕಟಿಸಿದ್ದ ಸೆಪ್ಟೆಂಬರ್- ಅಕ್ಟೋಬರ್ ೧೯೯೩ ರ 'ಸಂಬಂಧ' ಎಂಬ ಪತ್ರಿಕೆಯಿಂದ.

** ಶ್ರೀ ನಾಡಿಗ್ ರವರಿಗೆ, ಈ ಲೇಖನದಿಂದ ಉಪಯೋಗವಾದರೆ ನಾನು ಧನ್ಯ.