ನನ್ನ ಬಾಲ್ಯದ ನೆನಪುಗಳು - ಅವಳು ಯಾರು

ನನ್ನ ಬಾಲ್ಯದ ನೆನಪುಗಳು - ಅವಳು ಯಾರು

ಬರಹ

ಈ ಲೇಖನ ಮಾಲೆ ನನ್ನ ಅತ್ಮಚರಿತ್ರೆಯಲ್ಲ ನಾನು ಅದನ್ನು ಬರೆಯುವಷ್ಟು ದೊಡ್ಡವನಲ್ಲ , ಆದರೆ ಜೀವನದಲ್ಲಿ ತುಂಬಾ ದೊಡ್ಡ ಘಟನೆಗಳು ನಮ್ಮೆದುರು ಘಟಿಸಿ ನಾವದನ್ನು ಸುಲುಭವಾಗಿಯೆ ಮರೆತು ಬಿಡುತ್ತೇವೆ ಆದರೆ ಕೆಲವೊಮ್ಮೆ ಅತಿ ಚಿಕ್ಕ ಘಟನೆಗಳು ನಮ್ಮ ನೆನಪಿನಲ್ಲಿ ಸೇರಿ ಜೀವನದ ಕಡೆಯ ಕ್ಷಣದವರೆಗು ನೆನೆಯುತ್ತಲೆ ಇರುತ್ತೇವೆ ಅಂತಹ ಆಯ್ದ ಘಟನೆಗಳ ಸರಮಾಲೆಯೆ ಈ ಲೇಖನಮಾಲೆಯ ವಿಷಯ.


 


ನನ್ನ ಬಾಲ್ಯದ ನೆನಪುಗಳು - ಅವಳು ಯಾರು


 


ಅದು ನಲವತ್ತು ವರ್ಷದ ಹಿಂದಿನ ಮಾತು. ನಮ್ಮ ತಂದೆ ಪ್ರೌಡಶಾಲೆಯಲ್ಲಿ ಮುಖ್ಯೋಪದ್ಯಾಯರು. ಆಗ ಚಿಕ್ಕಮಂಗಳೂರಿನ ಮುಡಿಗೆರೆಯ ಹತ್ತಿರದ ಗೆಂಡೆಹಳ್ಳಿ ಎಂಬ ಚಿಕ್ಕ ಊರಿನಲ್ಲಿ ವಾಸವಾಗಿದ್ದೆವು.ನಾನಿನ್ನು ೧ ನೆ ತರಗತಿ ಓದುತ್ತಿದೆ ಅನ್ನಿಸುತ್ತೆ , ಆಗಿನ ಘಟನೆ. ಊರಿನಿಂದ ನಮ್ಮ ಮಾವ ಹಾಗು ಸಂಸಾರ ಎಲ್ಲ ಬಂದು , ನಮ್ಮ ತಾಯಿಯವರನ್ನು ಕರೆದುಕೊಂಡು ಧರ್ಮಸ್ಥಳಕ್ಕೆ ಹೊರಟರು ನಾನು ಸಾಕಷ್ಟು ಹಟ ಮಾಡಿದೆ ಜೊತೆಗೆ ಬರುತ್ತೇನೆ ಎಂದು, ಕಡೆಗೆ ನಮ್ಮ ಮಾವ ದೊಡ್ಡ ಬಿಸ್ಕತ್ತಿನ ಪಟ್ಟಣ ತೋರಿಸಿ ಇದು ಪೂರ್ತಿ ನಿನಗೆ , ನೀನು ಅಪ್ಪ , ಅಣ್ಣನ ಜೊತೆಯಲ್ಲಿಯೆ ಮನೆಯಲ್ಲಿ ಇರಬೇಕು. ಅಮ್ಮ ೩ ದಿನದಲ್ಲಿ ಹಿಂದೆ ಬರುತ್ತಾಳೆ ನೀನು ಗಲಾಟೆ ಮಾಡಬಾರದು ಎಂದು ಒಪ್ಪಿಸಿದರು ಯಾವ ಬಿಸ್ಕತ್ತಿನ ಮಾಯೆಯೋ ನಾನು ಒಪ್ಪಿ ಬಿಟ್ಟೆ . ಅವರೆಲ್ಲ ಬಸ್ಸು ಹತ್ತಿ ಹೋದ ನಂತರ ನನ್ನ ದಡ್ಡತನ ನನ್ನ ಅರಿವಿಗೆ ಬಂತು. ಬಿಸ್ಕತ್ತಿನ ವ್ಯಾಮೋಹ ನನ್ನಿಂದ ದೂರವಾಯಿತು. ಅದರೆ ತಂದೆ ಎದುರು ಅಳುವ ದೈರ್ಯವು ಇರದೆ ಅಮ್ಮನಿರದ ಮನೆಯಲ್ಲಿ ಒಬ್ಬನೆ ಇರಲಾರದೆ ಹೊರಗಿನ ಜಗಲಿಯಲ್ಲಿ ಒಬ್ಬನೆ ಕುಳಿತ್ತಿದ್ದೆ.


ಸಂಜೆ ಆರು ಘಂಟೆ ದಾಟಿತ್ತು, ತಂದೆಯವರು ಒಬ್ಬರೆ ಒಳಗೆ ಕುಳಿತ್ತಿದ್ದವರು ಬೇಸರ ಕಳೆಯಲೆಂದು ಕೊಳಲು ಬಾರಿಸುತ್ತಿದ್ದರು. ಹೊರಗೆ ಕುಳಿತ ನಾನು ಆ ಕೊಳಲಿನ ನಾದ ಕೇಳುತ್ತ ಹೊರಗೆ ರಸ್ತೆಯ ಕಡೆ ನೋಡುತ್ತಿದ್ದೆ. ನಮ್ಮ ಮನೆ ಎದುರಿಗೆ ಕಪ್ಪು ಟಾರಿನ ರಸ್ತೆ ಹೆಬ್ಬವಿನ ರೀತಿ ಮಲಗಿತ್ತು. ಮನೆಯ ಎದುರಿಗೆ ಇದ್ದ ದೊಡ್ಡ ಗೋಣಿಯ ಮರ (ಸ್ವಗತ: ಅಥವ ಆಲದ ಮರ ?) ಕತ್ತಲಿನಲ್ಲಿ ದೊಡ್ಡ ದೈತ್ಯನಂತೆ ಕಾಣುತ್ತಿತ್ತು. ನಿದಾನವಾಗಿ ಆಕಾಶವೆಲ್ಲ ಕಪ್ಪು ಮೋಡದಿಂದ ತುಂಬಿ ಕೊಂಡು , ಮಳೆಯ ಹನಿ ಪ್ರಾರಂಬವಾಯಿತು. ಆಗ ಒಳಗಿನಿಂದ ತಂದೆ ಯವರು ನನ್ನನ್ನು ಕೂಗಿ ಒಳಗೆ ಬಾರೊ ಎಂದರು . ಆದರೆ ನನ್ನ ಸ್ವಾಭಿಮಾನ ? , ಛೇ ಒಂದು ಬಿಸ್ಕತ್ತಿನ ಪಟ್ಟಣ್ಣದ ಆಸೆಗೆ ಎಲ್ಲರಿಂದ ಮೋಸ ಹೋದ ಭಾವ ತುಂಬಿ ಕೊಂಡಿತ್ತು. ಹಾಗಾಗಿ ಉತ್ತರವನ್ನು ಕೊಡಲಿಲ್ಲ. ಒಳಗು ಹೋಗಲಿಲ್ಲ. ಇದ್ದಕಿದ್ದಂತೆ ಮಳೆಯ ಬಿರಿಸು ಹೆಚ್ಚಾಯಿತು. ಒಳಗಿನಿಂದ ಬರುತ್ತಿದ್ದ ಕೊಳಲಿನ ದ್ವನಿ, ಮಳೆಯ ಶಬ್ದ ಎಲ್ಲ ಸೇರಿ ನನ್ನಲ್ಲಿ ಯಾವುದೊ ಒಂದು ರೀತಿಯ ಭ್ರಮೆಯ ಲೋಕವನ್ನು ನಿರ್ಮಿಸುತ್ತಿತ್ತು.


ಕತ್ತಲೆಯು ನಿದಾನವಾಗಿ ಕಣ್ಣು ತುಂಬಿಕೊಂಡಿತು, ಮಳೆ ಹಾಗು ಕೊಳಲಿನದ್ವಂದ ಕಿವಿಯಲ್ಲಿ ತುಂಬಿ ನನ್ನ ಉಳಿದೆಲ್ಲ ಭಾವಗಳನ್ನು ಅಳಿಸಿಹಾಕುತ್ತಿರುವಂತೆಯೆ , ನಿದಾನವಾಗಿ ಮತ್ತೊಂದು ದ್ವನಿ ಬೆಣ್ಣೆಯಲ್ಲಿ ಕೂದಲು ಎಳೆದಂತೆ ಸೇರಿ , ನಂತರ ಹೆಚ್ಚುತ್ತ ಹೋಯಿತು , ಅಗೋಚರ ಕತ್ತಲೆಯ ರಸ್ತೆಯ ನಮ್ಮ ಮನೆಯ ಎಡಭಾಗದಿಂದ ಬರುತ್ತಿರುವ ಶಬ್ದ ನಂತರ ಸ್ವಷ್ಟವಾಗುತ್ತ ಹೋಗಿ ಅದು ಯಾರೊ ಅಳುತ್ತಿರುವ ಹೌದು ಹೆಣ್ಣೊಬ್ಬಳು ಅಳುತ್ತಿರುವ ಶಬ್ದ ಅಂತ ಗೊತ್ತಾಯಿತು. ರಸ್ತೆಯ ಕಡೆಗೆ ಕಣ್ಣರಳಿಸಿ ನೋಡುತ್ತಿದ್ದೆ, ಕತ್ತಲೆಯಲ್ಲಿ ಯಾರೊ ಒಬ್ಬ ವ್ಯಕ್ತಿ ನಿಧಾನವಾಗಿ ನಡೆಯುತ್ತ ಬಂದು ನಮ್ಮ ಮನೆಯ ಮುಂದೆಯೆ ನಿಂತಿತು, ಆದರು ಅಳು ಮಾತ್ರ ನಿಂತಿಲ್ಲ ಕತ್ತಲಿನಲ್ಲಿ ಮುಖವು ಸ್ವಷ್ಟವಿಲ್ಲ , ಹೆಂಗಸು ಅಂತ ಮಾತ್ರ ತಿಳಿಯುತ್ತಿತ್ತು. ಕೊಳಲಿನ ಶಬ್ದ ನಿಂತು ಹೋಯಿತು, ನಮ್ಮ ತಂದೆಯವರಿಗು ಈ ಶಬ್ದ ಮುಟ್ಟಿತೇನೊ. ನಾನು ಹೆದರಿ ನಿಂತು ಹಿಂದೆ ಸರಿದೆ ಬಾಗಿಲಿನ ಕಡೆ. ನಮ್ಮ ತಂದೆ ಒಳಗಿನಿಂದ ಬಂದು ನನ್ನ ಹಿಂದೆ ನಿಂತಿದ್ದು ಅರಿವಿಗೆ ಬಂದಿತು. ಆಕೆ ಅಳುವಿನ ದ್ವನಿಯಲ್ಲಿ " ಸ್ವಾಮಿ ನಾನು ಈ ರಾತ್ರಿ ನಿಮ್ಮ ಜಗಲಿಯಲ್ಲಿ ಮಲಗಬಹುದ ?" ಅಂತ ಪ್ರಶ್ನಿಸಿದಳು. ನಮ್ಮ ತಂದೆ ಸ್ವಲ್ಪ ಏರಿದ ದ್ವನಿಯಲ್ಲೆ " ಯಾರಮ್ಮ ನೀನು ?" ಅಂದರು.ಹಾಗನ್ನುತ್ತಲೆ ಆಕೆ ಹೊರಡಿಸಿದ ಅರ್ತ, ಕರ್ಕಶ ದ್ವನಿ ನನ್ನ ಎದೆಯನ್ನೆ ನಡುಗಿಸಿತು. ನನ್ನ ಹೆಗಲ ಮೇಲಿದ್ದ ತಂದೆಯವರ ಕೈ ನಡುಗುತ್ತಿದ್ದು ನನ್ನ ಅರಿವಿಗೆ ಬರುತ್ತಿತ್ತು , ಆಕೆ " ಅಯ್ಯೋ ಸ್ವಾಮಿ ನಾನೊಬ್ಬಳು ಬೇವಾರ್ಸಿ" ಎಂದು ಜೋರಾಗಿ ಅಳುತ್ತ ಕತ್ತಲೆಯಲ್ಲಿ ವೇಗವಾಗಿ ರಸ್ತೆಯಲ್ಲಿ ನಡೆಯುತ್ತ ಮುಂದೆ ಹೊರಟಳು ,ಏಕೊ ಅವಳನ್ನು ಕರೆಯುವ ದೈರ್ಯವು ನಮ್ಮ ತಂದೆಯವರಿಗೆ ಬರಲ್ಲಿಲ್ಲ ಅನ್ನಿಸುತ್ತೆ, ಅವಳ ಅಳುವಿನ ದ್ವನಿ ಕೇಳಿಸುತ್ತ ಇದ್ದಿದ್ದು. ನಿದಾನವಾಗಿ ಅಳುವಿನ ದ್ವನಿ ಮಳೆಯ ಶಬ್ದದ ಜೊತೆ ಕಳೆದು ಹೋಗಿ ಮೊದಲಿನಂತೆ ಮಳೆಯ ಶಬ್ದ ಮಾತ್ರ ಕೇಳುತ್ತಿತ್ತು. ನನ್ನ ಸ್ವಾಭಿಮಾನವು ಎಲ್ಲೊ ನನ್ನನ್ನು ಮರೆತು ಒಳಗೆ ಹೊರಟು ಹೋಗಲು ನಾನು ಅದನ್ನು ಅರಸುತ್ತ ನಮ್ಮ ತಂದೆಯವರ ಜೊತೆ ಒಳಗೆ ಬಂದು ಬಿಟ್ಟೆ.