ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೮

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೮

ಬರಹ

೧೯೨೮ರಲ್ಲಿ ನಾಗಪುರ ಭಾಗದಲ್ಲಿ ಒಟ್ಟು ೧೮ ಶಾಖೆಗಲಿದ್ದವು. ಮೆಟ್ರಿಕ್ ತರಗತಿ ಮುಗಿಸಿದ್ದತಹ ಸ್ವಯಂಸೇವಕರಿಗೆ ಡಾಕ್ಟರ್ಜಿ ಉನ್ನತ ವಿದ್ಯಾಭ್ಯಾಸ ಮಾಡಲು ತಿಳಿಸುತ್ತಿದ್ದರು. ಸಂಘದ ಕಾರ್ಯಕರ್ತ ಬರಿ ನೌಕರಿಗಾಗಿ ಕಾಯದೆ ರಾಷ್ಟ್ರಕಾರ್ಯಕ್ಕಾಗಿ ವಿದ್ಯೆ ಕಲಿಯಬೇಕೆಂಬ ಹೊಸ ದೃಷ್ಟಿಕೋನವನ್ನು ಅವರು ಕೊಟ್ಟರು. ಪದವೀಧರರಾಗಿ ಸಮಾಜದಲ್ಲಿ ಗೌರವ ಪಡೆದಲ್ಲಿ ಸಂಘಕಾರ್ಯಕ್ಕೆ ಹೆಚ್ಚು ಅನುಕೂಲವೆಂದು ಅವರ ನಂಬಿಕೆ. ಆರ್ಥಿಕವಾಗಿ ಅನುಕೂಲತೆ ಇದ್ದ ಸ್ವಯಂಸೇವಕರನ್ನು ಉನ್ನತ್ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಲು ಡಾಕ್ಟರ್ಜಿ ಸೂಚಿಸಿದರು. ಅದರಂತೆಯೇ ಶ್ರೀ ಭಯ್ಯಾಜಿ ದಾನಿ, ಬಾಬುರಾವ್ ತೇಲಂಗ್, ತಾತ್ಯ ತೇಲಂಗ್ ಇತರರು ಕಾಶಿ ವಿಶ್ವ ವಿದ್ಯಾಲಯವನ್ನು ಸೇರಿದರು. ಹೀಗೆ ನಾಗಪುರದಿಂದ ಸಂಘವು ಬೇರೆ ಬೇರೆ ಪ್ರಾಂತಕ್ಕೆ ಪ್ರಥಮವಾಗಿ ಹರಡಿತು.

 

ನಾಡಿನ ಹಿರಿಯರಿಗೆಲ್ಲಾ ಸಂಘಕಾರ್ಯದ ಅನಿವಾರ್ಯತೆಯನ್ನು ಮನಗಾಣಿಸಿ ಸಾಧ್ಯವಾದಷ್ಟೂ ಅವರ ಸಹಕಾರ ಪಡೆಯಬೇಕೆಂಬುದು ಡಾಕ್ಟರ್ಜಿ ಅವರ ಆಸೆಯಾಗಿದ್ದಿತು. ೧೯೨೮ರ ಕೊನೆಯಲ್ಲಿ ಕಾಂಗ್ರೆಸ್ ನ ಕಲ್ಕತ್ತಾ ಅಧಿವೇಶನದ ವೇಳೆಯಲ್ಲಿ ಅವರು ಶ್ರೀ ಸುಭಾಷಚಂದ್ರ ಬೋಸ್ರವರನ್ನು ಕಂಡರು. ಮೊದಲು ಬೋಸ್ ಅವರು ಈ ಭೇಟಿಗಾಗಿ ಅರ್ಧ ಗಂಟೆ ವೇಳೆಯನ್ನು ಮಾತ್ರ ನಿಗದಿ ಮಾಡಿದ್ದರು. ಆದರೆ ಪ್ರತ್ಯಕ್ಷ ಭೇಟಿಯು ಗಂಟೆಗಟ್ಟಲೆ ನಡೆಯಿತು. ಡಾಕ್ಟರ್ಜಿ ಅವರಿಂದ ಆರಂಭವಾದ  ಸಂಘದ ಬಗ್ಗೆ ಅವರ ಆಸಕ್ತಿ ಕೆರಳಿದರೂ ರಾಜಕೀಯದಲ್ಲಿ ಉನ್ನತವಾಗಿ ತೊಡಗಿಸಿಕೊಂಡಿದ್ದರಿಂದ ತಮಗೆ ಸಂಘಕ್ಕೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ ಎಂದು ಬೋಸ್ ರವರು ತಮ್ಮ ಅಸಹಾಯಕತೆಯನ್ನು ಪ್ರಕಟಿಸಿದರು.

 

ಮದನ ಮೋಹನ ಮಾಳವೀಯರು ಒಮ್ಮೆ ಸಂಘದ ಮೊಹಿತೆವಾಡದ ಶಾಖೆಗೆ ಬಂದಿದ್ದರು. ಸಂಘಸ್ಥಾನ ಸ್ಥಿತಿಯನ್ನು ಕಂಡು ಆರ್ಥಿಕ ಸಂಕಷ್ಟವನ್ನು ಅವರು ಮನಗಂಡರು. ತಾವು ಸಂಘಕ್ಕಾಗಿ ನಿಧಿಯನ್ನು ಸಂಘ್ರಹಿಸಿ ಕೊಡುವುದಾಗಿ ಡಾಕ್ಟರ್ಜಿ ಅವರಲ್ಲಿ ತಿಳಿಸಿದಾಗ ಡಾಕ್ಟರ್ಜಿರವರು ವಿನಯ ಪೂರ್ವಕವಾಗಿಯೇ ಅದನ್ನು ತಿರಸ್ಕರಿಸಿದರು. ಹಣಕ್ಕಿಂತ ಅವರ ಆಶೀರ್ವಾದವೇ ಸಂಘಕ್ಕೆ ಮುಖ್ಯ ಎಂದು ತಿಳಿಸಿದರು. ಸಂಘದಲ್ಲಿ ಹಣಕ್ಕಿಂತಲೂ ವ್ಯಕ್ತಿಗೆ ಹೆಚ್ಚಿನ ಮಹತ್ವ ನೀಡುವ ಸಂಘದ ವಿಶೇಷತೆಯನ್ನು ನೋಡಿ ಮಾಳವೀಯರು ತುಂಬಾ ಸಂತಸ ಪಟ್ಟರು.

 

೧೯೨೯ ಜನವರಿಯಲ್ಲಿ ಒಂದು ಸಂಗೀತ ಕಾರ್ಯಕ್ರಮಕ್ಕೆ ಡಾಕ್ಟರ್ಜಿರವರು ಹೋಗಿದ್ದರು. ಸ್ವಭಾವತಃ ಸಂಗೀತದಲ್ಲಿ ಆಸಕ್ತಿ ಇರದೇ ಇದ್ದರೂ ಸ್ನೇಹಿತರ ಒತ್ತಾಯಕ್ಕಾಗಿ ಹೋಗಿದ್ದರು. ಕೊನೆಯಲ್ಲಿ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತ "ಬಾಲಕರ ಗಾಯನವು ಸಂಗೀತ ಶಾಸ್ತ್ರವನ್ನರಿಯದ ನನ್ನಂಥವನನ್ನೂ ಮಂತ್ರ ಮುಗ್ಧನನ್ನಾಗಿಸಿತು. ರಾಷ್ಟ್ರೀಯ ವಿಚಾರಗಳನ್ನು ಗದ್ಯಕ್ಕಿಂತ ಹೆಚ್ಚು ಪ್ರಭಾವಿಯಾಗಿ ಪದ್ಯ ರೂಪದಲ್ಲಿ ತಿಳಿಸಬಹುದೆಂದು ನನಗೆ ತೋರಿತು" ಎಂದು ಹೇಳಿದರು.ತಾವು ನೋಡುವ ಕೇಳುವ ಪ್ರತಿಯೊಂದು ಸಂಗತಿಯಲ್ಲೂ ರಾಷ್ಟ್ರೀಯ ಮಹತ್ವವನ್ನು ಗುರುತಿಸುವುದು ಡಾಕ್ಟರ್ಜಿರವರ ವಿಶೇಷತೆಯಾಗಿತ್ತು.

 

ಅಂದಿನ ಕಾರ್ಯಕ್ರಮದಲ್ಲಿ ಹಾಡಿದ್ದ ಶ್ರೀ ಯಾದವ ರಾವ್ ಜೋಷಿ ಅವರಿಗೂ ಡಾಕ್ಟರ್ಜಿ ಅವರಿಗೂ ನಿಕಟ ಸಂಪರ್ಕ ಬೆಳೆಯಿತು. ಮುಂದೆ ಜೋಷಿ ಅವರಿಗೆ ಸಂಘವೇ ಜೀವನ ಸಂಗಾತಿಯಾಯಿತು.