ವಿಶೇಷ ವರದಿ...ನಮ್ಮ ಪ್ರತಿನಿಧಿಯಿಂದ

ವಿಶೇಷ ವರದಿ...ನಮ್ಮ ಪ್ರತಿನಿಧಿಯಿಂದ

ಬರಹ

ಇದು ಕೇವಲ ತಮಾಷೆಗಾಗಿ. ಬಹಳ ದಿನಗಳ ಹಿಂದೆ ಮಿಂಚಂಚೆಯಲ್ಲಿ ಬಂದದ್ದು. ಇದರ ಮೂಲ ತೆಲುಗಿನಲ್ಲಿದ್ದು


ಪ್ರಥಮ ಬಾರಿ ಅನುವಾದಿಸಲು ಪ್ರಯತ್ನಿಸಿದ್ದೇನೆ.


 


ಟಿ.ವಿ.೯ ವಾಹಿನಿಯಲ್ಲಿ ಬರುವ ಸುದ್ದಿಯ ಉದಾಹರಣೆ (ತಮಾಷೆಗಾಗಿ)


 


ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ಒಂದು ನಾಯಿ ಕುಂಟುತ್ತಿದ್ದರೆ ನೀವು ಪ್ರಾಣಿ ಪ್ರೇಮಿಗಳಾಗಿದ್ದರೆ ಅದನ್ನು ಕಂಡು ಶುಶ್ರೂಷೆ ಮಾಡುವಿರಿ, ಇಲ್ಲವಾದಲ್ಲಿ ಅದರ ದು:ಖ ಕಂಡು ಮರುಗುವಿರಿ.


 


ಅದೇ ದಾರಿಯಲ್ಲಿ ನಮ್ಮ ಟಿ.ವಿ.೯ ಸುದ್ದಿ ಸಂಗ್ರಹಕ ಹೋಗುತ್ತಿದ್ದಾನೆ. ತಕ್ಷಣ ಟಿ.ವಿ.೯ ಕಛೇರಿಗೆ ಒಂದು ಕರೆ ಹೋಗುತ್ತದೆ.


ಕೂಡಲೆ ಅಲ್ಲಿಂದ ಒಬ್ಬ ಛಾಯಾಗ್ರಹಕನನ್ನು ಸ್ಥಳಕ್ಕೆ ಕಳುಹಿಸುತ್ತಾರೆ.


 


ಈಗ ಶುರು...


 


ಸ್ವಾಮಿ, ಆ ನಾಯಿಯ ಪರಿಸ್ಥಿತಿ ಹೇಗಿದೆ? ಯಾವಾಗಿನಿಂದ ಅದು ಅಲ್ಲಿದೆ?


 


ಈ ನಾಯಿ ಬೆಳಗ್ಗಿನಿಂದ ಇಲ್ಲಿದೆ, ಈಗ ಕುಂಟುತ್ತಿದೆ...ಸ್ವಪ್ನ.


 


ಅಲ್ಲಿನ ಜನ ಇದರ ಬಗ್ಗೆ ಏನಾದ್ರೂ ಹೇಳುತ್ತಿದ್ದಾರ..ಸ್ವಾಮಿ?


 


ಇಲ್ಲಿಯ ಜನ ಅದು ಒಂದು ನಾಯಿ ಎಂದು, ಅದರ ಕಾಲಿಗೆ ಏಟು ಬಿದ್ದಿರುವುದರಿಂದ ಅದು ಕುಂಟುತ್ತಿದೆ ಎಂದು ಹೇಳುತ್ತಿದ್ದಾರೆ.


 


ಹೀಗೆ ಮುಂಚೆ ಎಂದೂ ಆ ನಾಯಿ ಈ ಬೀದಿಯಲ್ಲಿ ಕುಂಟುತ್ತಿರಲಿಲ್ಲವೆಂದು ಹೇಳುತ್ತಿದ್ದಾರೆ..ಸ್ವಪ್ನ.


 


ಕುಂಟುತ್ತಿರುವ ನಾಯಿಯ ಪರಿಸ್ಥಿತಿ ಹೇಗಿದೆ..ಸ್ವಾಮಿ?


 


ನಾಯಿ ಸಧ್ಯಕ್ಕೆ ಕುಂಟುತ್ತಿದೆ, ಹೀಗೆ ಕಾಲಿಗೆ ಏಟು ಬಿದ್ದಿರುವುದು ಮೊದಲನೆ ಸಲ ಅನಿಸುತ್ತಿದೆ. ಆದ್ದರಿಂದ ಕುಂಟಲು ಬರದೆ


ಒದ್ದಾಡುತ್ತಿದೆ. ನಾವು ಅದನ್ನು ಮಾತನಾಡಿಸಲು ಪ್ರಯತ್ನಿಸಿದೆವು ಆದರೆ ಅದು ಉತ್ತರಿಸದೆ ಸುಮ್ಮನೆ ನಲುಗುತ್ತಿದೆ..ಸ್ವಪ್ನ.


 


ಧನ್ಯವಾದಗಳು ಸ್ವಾಮಿ. ತಾಜಾ ವಿವರಣೆಗಳಿಗೋಸ್ಕರ ನಾನು ನಿಮಗೆ ಕರೆ ಮಾಡುತ್ತಿರುತ್ತೇನೆ.


 


ಇದು ಗಾಯವಾಗಿ ಕುಂಟುತ್ತಿರುವ ನಾಯಿಯ ಪರಿಸ್ಥಿತಿಯ ಬಗ್ಗೆ ನಮ್ಮ ಕ್ರೈಂ ಪ್ರತಿನಿಧಿ ಸ್ವಾಮಿ ಅವರು ಕೊಟ್ಟ ವಿವರಗಳು.


 


ಈಗ ಒಂದು ಸಣ್ಣ ವಿರಾಮ. ವಿರಾಮದ ನಂತರ "ನಾಯಿಗಳು ಹಾಗು ಕುಂಟುವುದು" ಈ ಕುರಿತಾಗಿ ಚರ್ಚಿಸಲು ಪ್ರಮುಖ ನಾಯಿ ವೈದ್ಯರಾದ ನಾಯಿ ಕುಮಾರ್ ಅವರು ನಮ್ಮ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ.


 


ವಿರಾಮದ ನಂತರ....


 


ಪ್ರತಿನಿಧಿ : ಹೇಳಿ ನಾಯಿ ಕುಮಾರ್ ಅವರೆ ನೀವು ಮುಂಚೆ ಯಾವಾಗಲಾದರು ಹೀಗೆ ನಾಯಿಗಳು ಕುಂಟುವುದನ್ನು ನೋಡಿದ್ದೀರಾ? ಒಂದು ವೇಳೆ ನೋಡಿದ್ದರೆ ಯಾವ ಜಾತಿಯ ನಾಯಿಗಳು ಕುಂಟುವುದನ್ನು ನೋಡಿದ್ದೀರ?


 


ನಾ.ಕು : ಈ ವಿಧದಲ್ಲಿ ನಾಯಿಗಳು ಕುಂಟುವುದು ಇದು ಮೊದಲಲ್ಲ. ಪ್ರಪಂಚದಲ್ಲಿ ಎಷ್ಟೋ ಜಾತಿ ನಾಯಿಗಳು, ಎಷ್ಟೋ


ಸಂದರ್ಭದಲ್ಲಿ ಕುಂಟಿದ ಹಾಗೆ ನಮ್ಮ ಹತ್ತಿರ ಆಧಾರಗಳಿವೆ. ಕುಂಟುವುದಕ್ಕು ಜಾತಿಗು ಸಂಬಂಧವಿಲ್ಲ.


 


ಪ್ರ.ನಿ. : ಅಂದರೆ ನಾಯಿಗಳು ಕುಂಟುವಾಗ ಅದಕ್ಕೆ ನೋವಾಗುವುದೆ? ಆದರೆ ಯಾವ ರೀತಿಯ ನೋವು?


 


ನಾ.ಕು : ನೋವಿನಲ್ಲಿ ವಿಧಗಳಿಲ್ಲ. ಸಾಮಾನ್ಯವಾಗಿ ಏಟು ಬಿದ್ದ ಕಾಲಿಗೆ ನೋವಾಗುವುದೆಂದು Dog's Medical Science


ನಲ್ಲಿ ಪ್ರಬಲ ಆಧಾರಗಳಿವೆ.


 


ಪ್ರ.ನಿ. : ತಾಜಾ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಲು ನಮ್ಮ ಕ್ರೈಂ ಪ್ರತಿನಿಧಿ ಸ್ವಾಮಿಯವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ.


 


ಸ್ವಾಮಿ ಹೇಳಿ ಹೇಗಿದೆ ಆ ನಾಯಿಯ ಪರಿಸ್ಥಿತಿ.


 


ಸ್ವಾಮಿ : (ಕಿವಿಯಲ್ಲಿ ear piece ಇಟ್ಟುಕೊಂಡು ದಿಕ್ಕುಗಳನ್ನು ನೋಡುತ್ತಿರುವರು)ಹೇಗಿದೆ ಆ ನಾಯಿಯ ಪರಿಸ್ಥಿತಿ


 


ಪ್ರ.ನಿ.: ಸ್ವಾಮಿ ಹೇಳಿ ಹೇಗಿದೆ ಆ ನಾಯಿಯ ಪರಿಸ್ಥಿತಿ


 


ಸ್ವಾಮಿ : ನಾಯಿ ಇನ್ನು ನಲುಗುತ್ತಿದೆ. ಈಗ ತಾನೆ ಪ್ರಾಣಿ ದಯಾ ಸಂಘದವರು ಬಂದು ನಾಯಿಯನ್ನು ಕರೆದೊಯ್ದಿದ್ದಾರೆ.


 


ಪ್ರ.ನಿ: ನಾಯಿ ಕಾಲಿಗೆ ಏಟು ಬಿದ್ದಿತ್ತು. ನಾಯಿಯ ಬೇರೆ ಭಾಗಗಳು ಹೇಗಿತ್ತು ಸ್ವಾಮಿ.


 


ಸ್ವಾಮಿ : ಕಾಲಿಗೆ ಮಾತ್ರ ಏಟು ಬಿದ್ದಿತ್ತು. ಆದರೆ ಈ ನಾಯಿಯ ಬಾಲ ಸೊಟ್ಟಗಿತ್ತು.


 


ಪ್ರ.ನಿ : ಸೊಟ್ಟ ಅಂದರೆ ಹೇಗೆ ಸ್ವಾಮಿ ( ಈಗ ಪ್ರತಿನಿಧಿಯ ಮುಖದಲ್ಲಿ ಭಾವನೆಗಳು ನೋಡಬೇಕು, ಶತ್ರು ಪಡೆಯನ್ನು ನಾಶ


ಮಾಡಲು ಹೊರಟಿರುವ ಸೈನಿಕನ ಮುಖದಲ್ಲಿರುವ ಹಾಗೆ)


 


ಸ್ವಾಮಿ : ನಾನು ಈಗಾಗಲೆ ಆ ಬಾಲವನ್ನು ನೆಟ್ಟಗೆ ಮಾಡಲು ಪ್ರಯತ್ನಿಸಿದೆ. ಆದರೆ ಅದು ಆಗುತ್ತಿಲ್ಲ.


 


ಪ್ರ.ನಿ: ಸ್ವಾಮಿ ಧನ್ಯವಾದಗಳು. ನಾಯಿಕುಮಾರ್ ಅವರೆ ಕಾಲಿಗೆ ಏಟು ಬಿದ್ದಿರುವುದರಿಂದ ಅದರ ಬಾಲ ಸೊಟ್ಟಗಾಗಿರಬಹುದೆಂದು ನಮ್ಮ ಪ್ರತಿನಿಧಿ ಹೇಳುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?


 


ನಾ.ಕು : ಅಭಿಪ್ರಾಯ ಅಂದರೆ ಏನೋ ನಿನ್ನ ಬಾಯಿಗೆ ಮಣ್ಣು ಹಾಕ.. ಕಾಲಿಗೆ ಏಟು ಬಿದ್ದರೆ ಬಾಲ ಸೊಟ್ಟಗೆ ಆಗುತ್ತದೇನೋ


ಹುಚ್ಚ. ಮನುಷ್ಯನ ನೀನು. ಇಷ್ಟು ಹೊತ್ತು ನೀನು ಬರೆದು ಕೊಟ್ಟ ಹಾಗೆ ಓದಿದೆ. ಇನ್ನು ಸಾಧ್ಯವಿಲ್ಲ. ನನ್ನ ಮೈ ಉರಿಯುತ್ತಿದೆ.


ಬಂಗಾರದಂಥ ಮಾದೇಶ ಅನ್ನೋ ಹೆಸರನ್ನು ಬದಲಾಯಿಸಿ ನಾಯಿಕುಮಾರ್ ಅಂತ ಹೆಸರಿಟ್ಟು ಷರ್ಟು, ಪ್ಯಾಂಟು ಹಾಕಿಸಿ


ಡಾಕ್ಟರ್ ಹಾಗೆ ನಟಿಸಬೇಕಾ? ಹೀಗೆ ನಟಿಸಿದರೆ ನನ್ನ ಟೀ ಅಂಗಡಿಯಿಂದ ಏದುರುಗಡೆ ಇರೋ ನಿಮ್ಮ ಕಛೇರಿಗೆ ದಿನಾಲೂ ೧೦೦ ಟೀ ವ್ಯಾಪಾರ ಮಾಡುತ್ತೀರಾ? ನಿಮಗೆ ಮನಸ್ಸಾಕ್ಷಿ ಇದೆಯಾ? !@#$#@%%%#(&^)^)


ಹೀಗೆ ಬೈದುಕೊಂಡು ಹೊರಟು ಹೋದರು ನಮ್ಮ ನಾಯಿ ಕುಮಾರ್ ಅಲಿಯಾಸ್ ಮಾದೇಶ.