ಹಾದಿಬದಿಯ ದೇವ-ದೇವಿಯರೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ!
ಆಯಕಟ್ಟಿನ ನಿವೇಶನಗಳಲ್ಲಿನ ಆರಾಧನೆಯ “ಅಕ್ರಮ ಮಂದಿರ”ಗಳಿಗೆ ಗತಿ ಕಾಣಿಸಬೇಕೆಂದು ಸುಪ್ರೀಂ ಕೊರ್ಟ್ ಸರಕಾರಗಳಿಗೆ ತಾಕೀತು ಮಾಡಿದೆ. ಇವು “ಅಕ್ರಮ ಆರಾಧನಾ” ಮಂದಿರಗಳೂ ಹೌದು! ಕಟ್ಟಡಗಳೇ ಅಕ್ರಮ, ದುರುದ್ದೇಶಪೂರಿತ; ಅಂದಮೇಲೆ ಅಲ್ಲಿ ನಡೆಯುವ ಆರಾಧನೆ ತಾನೇ ಸಕ್ರಮವಾದೀತು ಹೇಗೆ?
ಮೂಢರು, ಬುದ್ಧಿ ಸೋಂಬೇರಿಗಳು, ಆಸೆಬುರುಕ ಜಡಾತ್ಮರು ಯಾವ ಕಲ್ಲಿಗೂ, ‘ದೇವರಾಗಿಬಿಡಬಾರದೇ’ ಎಂಬ ಉತ್ಕಟ ಆಸೆಯಿಂದಲೇ ಅಡ್ಡಬೀಳುತ್ತಾರೆ. ಕೇಳಿ-ಕೇಳಿದೊಡನೆಯೇ ಕೇಳಿದ್ದನ್ನದು ತಂದಿಟ್ಟುಬಿಡಬೇಕೆಂಬುದು ಅವರ ಜೊಲ್ಲುಸುರಿಸುವ ದುರಾಸೆ. ಅದೇ “ಭಜತಾಂ ಕಲ್ಪವೃಕ್ಷಃ” “ನಮತಾಂ ಕಾಮಧೇನುಃ” ಎನ್ನುವುದೇ ಅವರ ಸೋಂಬೇರಿ ನಂಬಿಕೆ. ಪ್ರಶ್ನಿಸಿದರೆ, “ಧಾರ್ಮಿಕ ಭಾವನೆಗಳಿಗೆ ಧಕ್ಕೆ” ಎಂದು ಅವರ ಬೊಬ್ಬೆ! ಈ ಉತ್ಕಟ Fool-hardyಗಳೇ ಆ ಖದೀಮ ಭೂಗಳ್ಳರ ಬತ್ತದ ಬಂಡವಾಳ. ರಾತ್ರೋ ರಾತ್ರಿ ನೆಟ್ಟ ಒಂದು ಕಲ್ಲು; ಅದಕ್ಕೆ ಕಿರು ಪ್ರಾಂಗಣ; ಮೇಲೊಂದು ಎತ್ತರದ ಗೋಪುರ; ಪಕ್ಕದಲ್ಲಿ ಪೂಜಾರಿಯ ಚಿಕ್ಕ ಕ್ವಾರ್ಟರ್ಸ್: ನಂತರ ಹಿಂದು-ಮುಂದಿನ ಜಾಗದಲ್ಲಿ ಅಂತಸ್ಥುಗಳುಳ್ಳ ಸುಸಜ್ಜಿತ ಕಲ್ಯಾಣ ಮಂಟಪ, ಬಾಡಿಗೆ ರೂಮುಗಳು - ಇವೆಲ್ಲಾ ಮಾಫಿಯಾಗಳಿಗೆ, ಕಂಡು ಕೇಳಿ ಅರಿಯದ ಆ ದೇವರ ಕೊಡುಗೈ ಬಳುವಳಿ!
ಇದು ಯಾವ ದೇವರ ಪ್ರೀತಿ? ಯಾವ ಸೀಮೆ ಧರ್ಮ? ಜಡತೆಬಿಟ್ಟು ದುಡಿಯುವ, ನಿಯತ್ತಿನಿಂದ ಬದುಕುವ ಜವಾಬ್ದಾರಿ ಜನತೆಯಲ್ಲಿ ವ್ಯಾಪಕವಾಗಬೇಕು. ಅಲ್ಲಿಯವರೆಗೆ ಈ “ಧರ್ಮದ್ರೊಹ” ನಿಲ್ಲುವುದಿಲ್ಲ.
ಆರ್ ಕೆ ದಿವಾಕರ
ಕರೆ: 9448047559