ಕಾಲಿಂಗ್ ಕಾರ್ಡ್

ಕಾಲಿಂಗ್ ಕಾರ್ಡ್

ಬರಹ
ವಾರಾಂತ್ಯದಲ್ಲಿ ಒಂದು ದಿನ ... ಅರಾಮವಾಗಿ ಎದ್ದು ಕಾಫೀ ಮಾಡಿಕೊಳ್ಳುತ್ತ ಮನದ ತುಂಬ ’ಸುಮ’ಳನ್ನು ತುಂಬಿಕೊಂಡು ಹಾಗೇ ಹಾಡಿಕೊಳ್ಳುತ್ತಿದ್ದೆ... "ಚೈತ್ರದ ಪ್ರೇಮಾಂಜಲಿಯಾ ಸುಮಾ ಸುಮ ಸುಮಾ" ... 
ಈ ಸುಮ ಯಾರು ಅಂದಿರಾ ? ಇನ್ನೇನು ಕೆಲವೇ ತಿಂಗಳಲ್ಲಿ ನನ್ನ ಅರ್ಧಾಂಗಿಯಾಗಿ ನನ್ನ ಬಾಳನ್ನು ಬೆಳಗಲು ಬರುವ ಕುಸುಮ. 
ಎಂ.ಎಸ್ ಮುಗಿಸಿದ ಮೇಲೆ, ಕೆಲಸಕ್ಕೂ ಸೇರಿ ಅಮೇರಿಕದಲ್ಲೇ ನೆಲೆಸಿರೋ ಶುದ್ದ ಬ್ರಹ್ಮಚಾರಿಯಾದ ನನಗೆ ಈಗ ಮದುವೆ ವಯಸ್ಸು. ಒಂದು ಕಾಲದಲ್ಲಿ, ಮದುವೆಗೆ ಹುಡುಗ ಅಮೇರಿಕದಲ್ಲಿ ಇದ್ದಲ್ಲಿ ಅವನಿಗೆ ಹುಡುಗಿಯನ್ನು ಕೊಡಲು ಭಾರತದಲ್ಲಿ ಕ್ಯೂ ಇರುತ್ತಿತ್ತಂತೆ. ಆದರೆ ಈಗ ? ಕ್ಯೂ ಬಿಡಿ, ಒಂದು ಹುಡುಗಿ ಸಿಕ್ಕೋದೇ ದುಸ್ತರವಾಗಿದೆ. ಹುಡುಗ ಅಮೇರಿಕದಲ್ಲಿ ಇದ್ದಾನೆ ಕೆಲಸದಲ್ಲಿ ಅಂದರೆ ಕನ್ಯಾಪಿತೃವಿಗೆ ಇವನು ನಿಜವಾಗಲೂ ಕೆಲಸದಲ್ಲಿ ಇದ್ದಾನೆಯೇ ಎಂದೇ ಅನುಮಾನ. ಇನ್ನು ಸಾಫ್ಟ್ ವೇರ್ ಕಂಪನಿಯಲ್ಲಿ ಇದ್ದಾನೆ ಅಂದರೆ, ಅನುಮಾನ ದುಪ್ಪಟ್ಟು. ನನ್ನ ಪರಿಸ್ಥಿತಿಯೂ ಇದೇ.
ಭಾರತಕ್ಕೆ ವಿಸಿಟ್ ಹೊಡೆದು ಎರಡು ವರ್ಷಗಳೇ ಕಳೆದಿದ್ದವು. ಒಂದು ಟ್ರಿಪ್ ಹಾಕಲೇ ಎಂದು ಯೋಚಿಸುತ್ತಿರುವಾಗ ನನ್ನ ಕಸಿನ್ ರಾಜೇಶನ ಮದುವೆ ಫಿಕ್ಸ್ ಆಯ್ತು ಅಂತ ತಿಳೀತು. ಹಾಗೇ ಇನ್ಯಾರದೋ ಮುಂಜಿ, ಮತ್ಯಾರೋ ಮನೆಯ ಗೃಹಪ್ರವೇಶ ಅಂತೆಲ್ಲ ವಿಷಯ ಅಮ್ಮ ತಿಳಿಸಿದಾಗ, ಹೊರಡುವ ನಿರ್ಧಾರ ಮಾಡಿಯೇಬಿಟ್ಟೆ. 
ಮನೆಯಲ್ಲಿ ವಿಷಯ ತಿಳಿಸಿದ್ದೂ ಆಯ್ತು. "ಹೇಗಿದ್ರೂ ಬರ್ತೀಯ, ನಿನಗೂ ಒಂದಷ್ಟು ಹುಡುಗೀರನ್ನ ನೋಡಿರುತ್ತೀವಿ" ಅಂದರು ಅಮ್ಮ. ನಾನಂದೆ "ಅಲ್ಲಮ್ಮಾ, ಒಬ್ಬಳನ್ನು ಕಟ್ಟಿಕೊಂಡು ಜೀವನ ಸಾಗಿಸೋದೇ ಕಷ್ಟ ಈ ಕಾಲದಲ್ಲಿ. ಅಂಥಾದ್ರಲ್ಲಿ ’ಒಂದಷ್ಟು’ ಜನರನ್ನು ಮದುವೆಯಾದಲ್ಲಿ ನನ್ನ ಗತಿ ಏನಮ್ಮ?" ಅಂದೆ. "ಶುದ್ದ ತಲೆಹರಟೆ ನೀನು. ಒಂದಷ್ಟು ಜನರನ್ನು ನೋಡಿರ್ತೀನಿ, ನಿನಗೆ ಯಾರು ಇಷ್ಟವಾಗ್ತಾಳೋ ಅವಳನ್ನು ಕಟ್ಟಿಕೋ ಅಂದಿದ್ದು" ಅಂತ ಅವಶ್ಯಕತೆ ಇಲ್ಲದಿದ್ದರೂ ಬಿಡಿಸಿ ಹೇಳಿದರು. 
ಅಮ್ಮ ಅಂದುಕೊಂಡ ಹಾಗೆ, ಕನ್ಯಾಪಿತೃಗಳೇನೂ ದಂಬಾಲು ಬಿದ್ದುಗೊಂಡೇನೂ ಬರಲಿಲ್ಲ. ನಾನು ಊರು ಸೇರೋ ಹೊತ್ತಿಗೆ ಕನಿಷ್ಟ ಒಂದು ಹೆಣ್ಣಿನ ಮನೆಯಿಂದಲೂ ’ಉಪ್ಪಿಟ್ಟು-ಕಾಫೀ’ವರೆಗೆ ಮಾತುಕತೆ ಆಗಿರಲಿಲ್ಲ !
ಅಮೇರಿಕದಿಂದ ಭಾರತಕ್ಕೆ ಹೋಗಿರೋದ್ರಿಂದ, ನನ್ನಷ್ಟು ಬಿಡುವಾಗಿರೋ ಇನ್ನೊಬ್ಬ ಅಲ್ಲಿರಲಿಲ್ಲ. ಎಲ್ಲರೂ ಏನೋ ಬಿಜಿ. ನನ್ನೊಟ್ಟಿಗೆ ಇಂಜಿನೀರಿಂಗ್’ವರೆಗೂ ಒಟ್ಟಿಗೆ ಓದಿದ್ದ ರಾಜೇಶನಿಗೂ, ನನಗೊಂದು ಈ-ಮೈಲ್ ಬರೆದು ವಿಷಯ ತಿಳಿಸೋಷ್ಟು ಟೈಮ್ ಇರಲಿಲ್ಲ. ಈಗ ನಾನೇ ಬಂದಾಯ್ತಲ್ಲ, ಬಿಡಿ.
ನನಗೆ ಹೇಗಿದ್ರೂ ಟೈಮ್ ಇತ್ತಲ್ಲ ಅಂತ ಅವನ ಮದುವೆಗೆ ಸ್ವಲ್ಪ ಓಡಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಓಡಾಡಿದ್ದು ಮದುವೆ ಮನೆಯಲ್ಲಿ. ಯಾಕೆ ಅಂದಿರಾ? ಹೆಣ್ಣಿನ ಮನೆಯ ಕಡೆಯ ಒಂದು ಹುಡುಗಿಯ ಕಂಗಳು ನನ್ನನ್ನೇ ಬೆನ್ನಟ್ಟಿತ್ತು, ಅದಕ್ಕೆ. ನಾನೂ ಗಮನ ಕೊಟ್ಟು ಕದ್ದು ನೋಡಿದೆ. ಸುಂದರಿ. ಆಮೇಲೆ ನಾನೇನು ಸುಮ್ಮನಿರಲಿಲ್ಲ. ಹಾಗೇ ಒಂದು ಕಿರು ನಗು ಸೂಸಿ, ಮಾತನಾಡಿಸಿದ್ದೂ ಅಯ್ತು. ಅವಳೇ ಸುಮ !!
ಮದುವೆಯ ಮಾರನೇ ದಿನ, ಬಿಡುವಾಗಿದ್ದಾಗ contact information ತೆಗೆದುಕೊಳ್ಳುವ ಪ್ಲಾನ್ ಹಾಕಿದ್ದೆ. ಬೆಳಿಗ್ಗೆ ತಿಂಡಿ-ಕಾಫೀಗೆ ಛತ್ರಕ್ಕೆ ಹೋದಾಗ, ಹೆಣ್ಣಿನ ಮನೆಯ ಕಡೆ ಯಾರಿಗೋ ಎದೆ ನೋವು ಬಂದು ಆಸ್ಪತ್ರೆಗೆ ಸೇರಿಸಲಾಯಿತಂತೆ. ಈ ಅಂತೆ-ಕಂತೆಗಳ ಮಧ್ಯದಲ್ಲಿ ನನಗೆ ಆಗಿದ್ದು ಮಾತ್ರ ಭಾರೀ ಅನ್ಯಾಯ. ಮತ್ತೆ ಸುಮ ನನ್ನ ಕಣ್ಣಿಗೆ ಬೀಳಲೇ ಇಲ್ಲ. ಪೆಚ್ಚು ಮೋರೆ ಹಾಕಿಕೊಂಡು, ಬರಿಗೈ ದಾಸನಾಗಿ ಅಮೇರಿಕಕ್ಕೆ ಹಿಂದಿರುಗಿ ಬಂದಿದ್ದೆ.
ಇವೆಲ್ಲ ನೆಡೆದು ಒಂದು ತಿಂಗಳೇ ಆಗಿತ್ತು. ಯಾವಾಗಲಾದರೂ ಮದುವೆ ವಿಷಯ ಬಂದಾಗ ಅಮ್ಮನ ಬಳಿ ಈ ವಿಷಯ ತಿಳಿಸಿ ಆಂಟಿ, ಅಂದರೆ ರಾಜೇಶನ ಅಮ್ಮ’ನ ಕಿವಿಗೆ ಬೀಳುವಂತೆ ಮಾಡಬೇಕು ಅಂದುಕೊಳ್ಳುತ್ತಿದ್ದೆ. 
ಕಳೆದ ಭಾನುವಾರ ಬೆಳಿಗ್ಗೆ, ಊರಿಂದ ಕಾಲ್ ಬಂದಿತ್ತು. ವಿಷಯ ತಿಳಿದು, ಹುರ್ರೇ, ಎಂದು ಕೂಗಿದ್ದೆ. 
ಸುಮ’ಳ ತಂದೆ-ತಾಯಿ ಆಂಟಿಯ ಜೊತೆ ನಮ್ಮ ಮನೆಗೆ ಬಂದಿದ್ದರಂತೆ. "ನಿನಗೆ ಒಪ್ಪಿಗೇನಾ" ಎಂದರು ಅಮ್ಮ. ನಾನು "ಅಮ್ಮ, ಊರಿಗೆ ಯಾವಾಗ ಬರಲಿ" ಎಂದೆ. ಅದಕ್ಕೆ ನಗುತ್ತ ಅಮ್ಮ ಹೇಳಿದ್ದರು "ಮದುವೆ ಮನೆಯಲ್ಲಿ ಹೇಗಿದ್ರೂ ನಿನ್ನನ್ನು ಅವರು ನೋಡಿಯೇ ಇದ್ದಾರೆ. ನಾನು ಹೇಳ್ತೀನಿ ಆವಾಗ ಬರುವೆಯಂತೆ. ಒಂದು ಸಾರಿ ಹುಡುಗಿ ಜೊತೆ ಮಾತನಾಡಿ ಅಭಿಪ್ರಾಯ ತಿಳಿದುಕೋ" ಎಂದು ಸುಮ’ಳ ಮೊಬೈಲ್ ನಂಬರ್ ಕೊಟ್ಟಿದ್ದರು. ಇಂತಹ ಅಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ.
ಹೇಗಿದ್ರೂ ಮೊಬೈಲ್ ನಂಬರ್ ಸಿಕ್ಕಿತ್ತು. ದಿನಕ್ಕೊಮ್ಮೆ ಕಾಲ್ ಮಾಡಿದ್ದೇನು, ಮಾತಾಡಿದ್ದೇನೂ ..... ಹೇಗೆ ಕಳೀತು ಒಂದು ವಾರ ಅಂತಲೇ ಗೊತ್ತಾಗಲಿಲ್ಲ. ಇದಿಷ್ಟು ನೆಡೆದ ಕಥೆ. 
ಕಾಫಿ ಕುಡಿಯುತ್ತ, ಸುಮಳಿಗೆ ಕರೆ ಮಾಡಬೇಕು ಅಂತ ಅಂದುಕೊಳ್ಳುವಾಗಲೇ, ನನ್ನ ಮೊಬೈಲು ರಿಂಗ್ ಆಯ್ತು. ನಂಬರ್ ನೋಡಿದರೆ 'Private Number' ಅಂತಿತ್ತು.
ಕಾಲ್ ತೆಗೆದುಕೊಂಡು ’ಹಲೋ’ ಎಂದೆ. ಆ ಕಡೆಯಿಂದ "May I speak to Manoj?" ಅಂದರು. "May I know who is calling?" ಅಂದೆ. ತಕ್ಷಣ, ಆ ಕಡೆಯವರು "ಸಾರ್, ನಮಸ್ಕಾರ. ನಾನು ವಾಸುದೇವಮೂರ್ತಿ ಅಂತ. ಗ್ಲೋಬಲ್ ಕಮ್ಯೂನಿಕೇಶನ್ಸ್’ನಿಂದ. ಸಾರ್, ನೀವು ಇಂಡಿಯಾಗೆ ಕಾಲ್ ಮಾಡಬೇಕಾದರೆ ಯಾವ ಕಾರ್ಡ್ ಬಳಸುತ್ತೀರಾ?" ಅಂದರು. 
ಬೆಳಿಗ್ಗೆ ಬೆಳಿಗ್ಗೆ ಇದೊಳ್ಳೇ ಆಯ್ತಲ್ಲ ಕಥೆ. ಜೊತೆಗೆ ಸ್ವರ ಕೇಳಿದರೆ ಯಾರೋ ಹಿರಿಯರು ಇರಬೇಕು ಅಂತ ಅಂದುಕೊಂಡು ಯಾವುದೋ ಕಾರ್ಡ್ ಹೆಸರು ಹೇಳಿದೆ. ಅದನ್ನು ಕೇಳಿ ಅವರು, ತಮ್ಮ ಕಂಪನಿ ಕಾಲಿಂಗ್ ಕಾರ್ಡ್ ಬಗ್ಗೆ ಕೊರೆಯ ಹತ್ತಿದರು. ನಾನು ಮಧ್ಯದಲ್ಲೇ ಮಾತನ್ನು ಕತ್ತರಿಸಿ ಮತ್ತೆ ಕರೆ ಮಾಡಲು ತಿಳಿಸಿ, ಲೈನ್ ಡಿಸ್ಕನೆಕ್ಟ್ ಮಾಡಿದೆ. ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸಂತೆ. ನನಗೋ ಒಮ್ಮೆಲೇ ಮುಖಕ್ಕೆ ಹೊಡೆದ ಹಾಗೆ ಹೇಳೋಕ್ಕೆ ಬರಲ್ಲ.
ಅದಿರಲೀ, ನನ್ನ ನಂಬರ್ ಇವರಿಗೆ ಹ್ಯಾಗೆ ಸಿಕ್ಕಿತು. ನಾನು ಮನೋಜ್ ಅಂತ ನಾನು ಹೇಳದೇ ಇದ್ರೂ ಹೇಗೆ ತಿಳೀತು? ನಾನು ಕನ್ನಡದವನು ಅಂತ ಹೇಗೆ ತಿಳೀತು? ಇವರುಗಳ ಕಾರ್ಯಾಚರಣೇನೇ ಅರ್ಥ ಆಗಲ್ಲ.  ಮೊನ್ನೆ ನಮ್ಮ ಆಫೀಸಿನಲ್ಲೂ ಒಂದಿಬ್ಬರು ಈ ವಿಷಯ ಹೇಳಿದ್ದರು. ಈಗ ನೋಡಿದರೆ ನನಗೂ ಇದೇ ರೀತಿಯ ಕಾಲ್ ಬರತೊಡಗಿದೆ. ಇನ್ಮುಂದೆ 'Private Number' ಅಂತ ಬಂದರೆ ಕಾಲ್ ತೊಗೋಬಾರದು ಅಂತ ನಿರ್ಧಾರ ಮಾಡಿದೆ. 
ಎರಡು ದಿನ ಅಯ್ತು. ಮಧ್ಯಾನ್ನ ಊಟದ ಸಮಯದಲ್ಲಿ ಮೊಬೈಲ್ ರಿಂಗ್ ಆಯ್ತು. ಮತ್ತೆ 'Private Number'. ಹಾಗೇ ಬಿಟ್ಟೆ. ಹತ್ತು ನಿಮಿಷದ ನಂತರ ಮತ್ತೆ 'Private Number'ನಿಂದ ಕರೆ. ಈ ಸಾರಿ ತೆಗೆದುಕೊಂಡು ಸ್ಪಷ್ಟವಾಗಿ ಹೇಳಿಯೇಬಿಡಬೇಕು ಎಂದು ಸ್ವಲ್ಪ ಖಾರವಾಗಿಯೇ "ಹಲೋ" ಅಂದೆ. ಆಕಡೆಯಿಂದ "ನಾನು ಸುಮ" ಅಂತ ಉತ್ತರ ಬಂತು. ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿದ್ದರಿಂದ ಬೂತ್’ನಿಂದ ಕರೆ ಮಾಡಿದ್ದಳಂತೆ. "ಸಾರಿ" ಹೇಳುತ್ತ ಅಷ್ಟು ಖಾರವಾಗಿ ನುಡಿದಿದ್ದರ ಹಿನ್ನೆಲೆಯನ್ನು ಸ್ವಲ್ಪ ವಿವರಿಸಿ ಹೇಳಿ, ಸಮಾಧಾನ ಮಾಡಿ ಕರೆ ಮುಗಿಸೋ ಅಷ್ಟರಲ್ಲಿ, ಮೀಟಿಂಗ್’ಗೆ ಟೈಮ್ ಆಗಿತ್ತು.
ಮತ್ತೆರಡು ಬಾರಿ ಹೊತ್ತಿಲ್ಲದ ಹೊತ್ತಲ್ಲಿ ’ವಾಸುದೇವಮೂರ್ತಿ’ ಕಡೆಯಿಂದ ಕರೆ ಬಂದಿತ್ತು. ಪ್ರತೀ ಸಾರಿ ಅಂದುಕೊಳ್ಳುತ್ತೇನೆ, ’ನಿಮ್ಮ ಕಾರ್ಡ್ ನನಗೆ ಬೇಡ, ಕರೆ ಮಾಡಬೇಡಿ’ ಅಂತ ಹೇಳಿಬಿಡಬೇಕೂ ಅಂತ. ಆದರೆ ಆಗ್ತಿಲ್ಲ ಹೇಳೋಕ್ಕೆ.
ಮೊನ್ನೆಯಂತೂ ರೇಗಿಯೇ ಬಿಟ್ಟಿದ್ದೆ. ಸಹನೆಗೂ ಒಂದು ಮಿತಿ ಇರುತ್ತೆ ತಾನೇ? ಅದು ಏನಾಯ್ತು ಅಂದರೆ, ಸ್ನೇಹಿತನ ಮನೆಯಲ್ಲಿ ಪಾರ್ಟಿಯಲ್ಲಿದ್ದಾಗ ಕರೆಬಂದಿತ್ತು. ಇನ್ನೊಮ್ಮೆ ಕರೆ ಮಾಡಿ ಎಂದೆಲ್ಲ ಹೇಳುವಾಗ, ನನ್ನ ಸ್ನೇಹಿತರು ತಮ್ಮ ವಿಸ್ಕಿ ಗ್ಲಾಸನ್ನು ನನ್ನ ’ಪೆಪ್ಸಿ’ ಕ್ಯಾನಿಗೆ ತಾಗಿಸಿ ಚಿಯರ್ಸ್ ಅಂದರು. ನಾನೂ ’ಚಿಯರ್ಸ್’ ಅಂದೆ. ಅದಕ್ಕೆ ಈ ಮೂರ್ತಿ "ಏನ್ ಸಾರ್, ಗುಂಡಿನ ಪಾರ್ಟೀನಾ" ಅನ್ನೋದೇ? ಮೊದಲೇ ಬೇಡದ ಕಾಲ್, ಜೊತೆಗೆ ಇಂತಹ ತಲೆಹರಟೆ ಮಾತು. "ನಾನು ಕುಡೀತೀನಿ, ಮಾಂಸ ತಿಂತೀನಿ, ನಿಮಗ್ಯಾಕ್ರೀ ಬೇಕು ಆ ವಿಷಯಾ.." ಅಂತೆಲ್ಲ ಚೆನ್ನಾಗಿ ರೇಗಿ ಕರೆ ಕತ್ತರಿಸಿದ್ದೆ. 
ಮತ್ತೊಮ್ಮೆ ಮೈಗೆ ಹುಷಾರಿಲ್ಲ ಎಂದು ಮಧ್ಯಾನ್ನ ಮನೆಗೆ ಬಂದು ಮಲಗಿದ್ದೆ. ಹನ್ನೆರಡೂವರೆಗೆ ಇವರ ಕರೆ. ಮೈ ಹುಷಾರಿಲ್ಲ ಬೇರೇ ದಿನ ಕರೆ ಮಾಡಿ ಅಂದೆ. "ಯಾಕೆ ಸಾರ್, ಪ್ರಾಜಕ್ಟ್ ಮುಗೀತಾ? ಬೇರೆ ನೋಡ್ತಿದ್ದೀರಾ?" ಎಂದೆಲ್ಲಾ ಮನಸ್ಸಿಗೆ ಬಂದ ಪ್ರಶ್ನೆ ಕೇಳತೊಡಗಿದಾಗ, ನನಗೆ ಸಿಕ್ಕಾಪಟ್ಟೆ ಉರಿದುಹೋಯ್ತು. ಬೈದು "ಇನ್ನು ಮುಂದೆ ಕಾಲ್ ಮಾಡಬೇಡಿ. ನಿಮ್ಮ ಕಾರ್ಡೂ ಬೇಡ, ನಿಮ್ಮ ಕಾಳಜೀನೂ ಬೇಡ" ಅಂತ ಹೇಳಿ ಲೈನ್ ಕಟ್ ಮಾಡಿದ್ದೆ. ಅಧಿಕಪ್ರಸಂಗತನ !! ಸ್ವಲ್ಪ ಹೊತ್ತು ನೆಮ್ಮದಿಯಾಗಿ ಇರೋಣವೆಂದರೆ ಅದೂ ಆಗೊಲ್ಲ. ಸಂಪೂರ್ಣ ಮೂಡ್ ಕೆಟ್ಟು ಹೋಯ್ತು.
ಇನ್ನೆರಡು ದಿನ ವಾಸುದೇವಮೂರ್ತಿ’ಯಿಂದ ಯಾವ ಕರೆಯೂ ಇಲ್ಲ. ಈ ಕೆಲಸ ಮುಂಚೇನೇ ಮಾಡಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಆದರೆ, ಅವರೂ ಮನುಷ್ಯರಲ್ಲವೇ ಎಂಬ ಮಾನವೀಯತೆ. ಈ ಮೂರ್ತಿಯ ಗಲಾಟೆಯಿಂದ ಹಾಗೂ ಕೆಲಸದಲ್ಲಿ ತೀರಾ ಒತ್ತಡದ ಕಾರಣ ಸುಮಳಿಗೂ ಕರೆ ಮಾಡಿರಲಿಲ್ಲ. 
ಶನಿವಾರ ಬೆಳಿಗ್ಗೆ ಸುಮಳಿಗೆ ಕರೆ ಮಾಡಿದೆ. ಸುಮ ಕಾಲ್ ತೆಗೆದುಕೊಳ್ಳಲಿಲ್ಲ. ಮತ್ತೆರಡು ಬಾರಿ ಪ್ರಯತ್ನ ಮಾಡಿ ಸುಮ್ಮನಾದೆ. ಮತ್ತೆ ಒಂದು ಘಂಟೆ ಕಳೆದು ಪ್ರಯತ್ನ ಮಾಡಿದೆ. ಇಲ್ಲ. ಒಂದೋ, ಮನೆಯಲ್ಲಿ ಮೊಬೈಲ್ ಮರೆತು ಹೋಗಿರಬೇಕು ಇಲ್ಲ ರಿಂಗ್ ಆಗಿದ್ದು ಕೇಳಿಸಲಿಲ್ಲ ಅಂತ ಅನ್ನಿಸುತ್ತೆ. 
ಅರ್ರೇ, ಹೌದಲ್ಲ, ಬಟ್ಟೆ ಅಂಗಡಿಗೆ ಹೋಗುವುದಿದೆ ಅಂತ ಹೇಳಿದ್ಲು. ಬಳೇಪೇಟೇನೋ, ಗಾಂಧೀಬಜಾರೋ ಆಗಿದ್ದರೆ ಮೊಬೈಲ್ ರಿಂಗಾಗಿದ್ದೂ ಕೇಳೋಲ್ಲ.
ನನಗೂ ಹೊರಗೆ ಹೋಗೋದಿತ್ತು, ಹಾಗಾಗಿ ಸ್ನಾನ ಮಾಡಿ ಹೊರಟೆ. ವಾಪಸ್ಸು ಬಂದಾಗ ತೀರಾ ತಡ ಆಗಿತ್ತು. ಹಾಗೇ ಹಾಸಿಗೆ ಮೇಲೆ ಬಿದ್ದುಕೊಂಡವನಿಗೆ ಮೊಬೈಲ್ ರಿಂಗ್ ಆದಾಗಲೇ ಎಚ್ಚರವಾಗಿದ್ದು. ಘಂಟೆ ಬೆಳಿಗ್ಗೆ ಒಂಬತ್ತು. ದಡಬಡಿಸಿ ಎದ್ದೆ. 
ಸುಮ ಇರಬೇಕು ಎಂದುಕೊಳ್ಳುತ್ತ... ನಂಬರ್ ನೋಡಿದರೆ........ ಮನೆ ನಂಬರ್ !
"ಮನು, ನಾನು ಕಣೋ. ಚೆನ್ನಾಗಿದ್ದೀಯಾ" ಅಂದರು ಅಮ್ಮ. ಯಾಕೋ ಸ್ವರದಲ್ಲಿ ದುಗುಡ ಇದ್ದಂತೆ ಇತ್ತು. "ಏನಾಯ್ತು" ಅಂದೆ. ಮುಂದಿನ ಐದು ನಿಮಿಷ ಅಮ್ಮನ ಮಾತು, ನನ್ನ ಹೂಗುಟ್ಟುವಿಕೆ ಅಷ್ಟೇ ! ಕಡೆಗೆ "ಆಯ್ತು" ಎಂದಷ್ಟೇ ಹೇಳಿ ಇಟ್ಟೆ.
ಏನು ಮಾಡಬೇಕು ಎಂದು ತೋಚುತ್ತಿಲ್ಲ. ಯಾರ ಮುಂದೆ ಹೇಳಿಕೊಳ್ಳಲಿ. ಯಾರಾದರೂ ಪ್ರೀತಿಪಾತ್ರರಾದವರು ಇಲ್ಲಿ ಇದ್ದಿದ್ದರೆ, ಅವರೆದೆಗೆ ಒರಗಿ ಜೋರಾಗಿ ಅತ್ತುಬಿಡುತ್ತಿದ್ದೆ ....
"ಸುಮ" ಇನ್ನು ನನ್ನ ಪಾಲಿಗೆ ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲೇ ಕಷ್ಟವಾಗಿತ್ತು !! ನನ್ನ ಪಾಲಿಗೆ ಇಲ್ಲ ಅಂದ ಮಾತ್ರಕ್ಕೆ ಈ ಲೋಕದಲ್ಲೇ ಅವಳು ಇಲ್ಲ ಅಂತ ಅರ್ಥ ಅಲ್ಲ !!
ಇಷ್ಟು ದಿನ ಎಷ್ಟೆಲ್ಲ ಮಾತನಾಡಿ, ನಮ್ಮದೇ ಲೋಕದಲ್ಲಿ ಇದ್ದ ನಾವುಗಳು ಇನ್ನು ಮುಂದೆ ಬೇರೇನೋ !!
ಎಲ್ಲದಕ್ಕೂ ಕಾರಣ "ವಾಸುದೇವಮೂರ್ತಿ". ಆ ಹೆಸರಿನಲ್ಲಿ ನನಗೆ ಇಷ್ಟು ದಿನ ಕರೆ ಮಾಡಿದ್ದು, ಸುಮಳ ಅಪ್ಪ. ತನ್ನ ಅಳಿಯನಾಗೋ ಹುಡುಗ ಹೇಗೆ ಎಂದು ತಿಳಿದುಕೊಳ್ಳಲು ಪದೇ ಪದೇ "ವಾಸುದೇವಮೂರ್ತಿ" ಎಂಬ ಹೆಸರಿನಲ್ಲಿ ಕರೆ ಮಾಡಿ, ಯಾವ ಹೊತ್ತಿನಲ್ಲಿ ಎಲ್ಲಿ ಇರುತ್ತೇನೆ ಎಂದು ಅವರು ನೆಡೆಸುತ್ತಿದ್ದ ತನಿಖೆ ! ಹೀಗೂ ಉಂಟೆ !! ನಂಬೋಕ್ಕೇ ಆಗ್ತಿಲ್ಲ.
ಸ್ನೇಹಿತರ ಜೊತೆ ಪಾರ್ಟಿಯಲ್ಲಿದ್ದಾಗ ಬಂದ ಕರೆ, ಮೈ ಹುಷಾರಿಲ್ಲದಿದ್ದಾಗ ಬಂದ ಕರೆ, ಅವರ ಅಧಿಕಪ್ರಸಂಗತನಕ್ಕೆ ನಾನು ಬಾಯಿಗೆ ಬಂದಂತೆ ಬಯ್ದದ್ದು ಎಲ್ಲ ಸೇರಿ ನನಗೆ ಅವರು ಕೊಟ್ಟ Certificate ಏನಪ್ಪ ಅಂದರೆ "ಕುಡುಕ, ಮಾಂಸ ತಿನ್ನೋನು, ಸಭ್ಯತೆ ಇಲ್ಲ, ಕೈಯಲ್ಲಿ ಕೆಲಸ ಇಲ್ಲ, ಸದಾ ಸ್ನೇಹಿತರ ಹಿಂಡು, " ಹೀಗೆ. 
ಮದುವೆ ಮುರಿದುಬಿದ್ದಿದೆ. ಸುಮಳ ಇಷ್ಟ/ಅನಿಷ್ಟಗಳನ್ನು ಯಾರೂ ಕೇರ್ ಮಾಡಿದಂತೆ ಕಾಣಲಿಲ್ಲ ಅಥವಾ ಯಾರಿಗೂ ಬೇಡದ ವಿಷಯ. ಅವಳಿಗೆ ಮಾಡಿದ ಕರೆಯನ್ನೇ ಸ್ವೀಕರಿಸದಿದ್ದರೆ ಮಾತನಾಡುವ ಬಗೆ ಹೇಗೆ? ನಾನು ಮಾಡಿದ ಕರೆ ತೆಗೆದುಕೊಳ್ಳಬಾರದು ಎಂದು ತಾಕೀತು ಮಾಡಿದ್ದರೆ ಅವಳೇನು ಮಾಡುತ್ತಾಳೆ? ಹಾಗಂತ ಅವಳ ಮನೆಗೆ ಕರೆ ಮಾಡಿ ಯಾರಿಂದಲೋ ಬೈಸಿಕೊಂಡಿದ್ದೂ ಆಯ್ತು. 
ತಮಗೆ ತಿಳಿದಿದ್ದೇ ಸರಿ ಅನ್ನೋದಕ್ಕಿಂತಾ ಒಮ್ಮೆ ನನ್ನ ಮಾತನ್ನು ಕೇಳಿದ್ದರೆ, ಪರಿಸ್ಥಿತಿ ಸರಿಪಡಿಸಬಹುದಿತ್ತು.
ಹೀಗಂತೆ ಹಾಗಂತೆ ಎಂದು ನಮ್ಮ ಬಂಧುವಲಯದಲ್ಲಿ ವಿಷಯ ಹರಡಿದೆ. ಅಪ್ಪ-ಅಮ್ಮ ಏನು ವಿವರಿಸಿದರೂ ಹಿಂದೆ ಆಡಿಕೊಳ್ಳುವುದೇನೂ ಕಡಿಮೆಯಾಗುವುದಿಲ್ಲ.
ನನ್ನ ಅಹವಾಲು ಇಷ್ಟೇ ... ಸ್ವಾಮಿ ನನ್ನ ಮಾವನಾಗಲಿದ್ದವರೇ, ಇನ್ನೊಬ್ಬ ವರನನ್ನು ತಾವು ಹುಡುಕಿದಾಗ, ಖುದ್ದಾಗಿ ವಿಚಾರಿಸಿ, ತಾವೇ ಮಾತನಾಡಿ ಮದುವೆ ಮಾಡಿಕೊಡಿ. ತೆರೆಯ ಹಿಂದಿನ ಈ ತನಿಖೆ ಬೇಡ. ನಿಮ್ಮ ಮಗಳ ಮನಸ್ಸು ಮುರಿದಿದ್ದೇ ಅಲ್ಲದೇ ನನ್ನ ಬದುಕಿನಲ್ಲೂ ಆಟ ಆಡಿದ್ದೀರ. ಇನ್ನೊಬ್ಬ ಮನುಷ್ಯನನ್ನು ಅರಿವ ಮೊದಲು ನೀವು ಮನುಷ್ಯರಾಗಿ.

{ಇತ್ತೀಚಿನ ಅಕ್ಕ ಸಮಾರಂಭದ ಸ್ಮರಣ ಸಂಚಿಕೆಯಲ್ಲಿ ಈ ಕಥೆ ಪ್ರಕಟಗೊಂಡಿದೆ}