ಯಾರಿಗೆ ಮಂದಿರಾ... ಯಾರಿಗೆ ಮಸೀದೀ....

ಯಾರಿಗೆ ಮಂದಿರಾ... ಯಾರಿಗೆ ಮಸೀದೀ....

ಬಲ್ಲಿರೇನಯ್ಯಾ.......

ಭಳಿರೇ ಪರಾಕ್ರಮ ಕಂಠೀರವಾ............!

ಅಖಂಡ ಭರತ ಖಂಡದ ಅಯೋಧ್ಯೆಯನ್ನು ಆಳಿ ಜನಮನಗೆದ್ದಿರುವ ಮರ್ಯಾದಾ ಪುರುಷೋತ್ತಮ ಯಾರೆಂದು ಬಲ್ಲೀರಿ.......?

ಭಗವಾನ್ ಶ್ರೀರಾಮ ಚಂದ್ರ ಎಂದು ಕೇಳಿಬಲ್ಲೆವೂ....

ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ....

ಸರಯೂ ನದಿಯ ತಟದಲ್ಲಿ ತರುಲತೆಗಳ ಬಳುಕು, ಪುಷ್ಪ ವನಗಳ ಥಳುಕಿನಿಂದ ಕಂಗೊಳಿಸುತ್ತಿದ್ದ ಅಯೋಧ್ಯೆಯಲ್ಲೇನೋ ಧಾವಂತದ ಮೌನ. ದೇಶಾದ್ಯಂತ ಎಲ್ಲರಲ್ಲೂ ಏನಾಗುತ್ತದೆಯೇನೋ ಎಂಬ ಆತಂಕ, ಎಲ್ಲೆಲ್ಲೂ ತಳಮಳ, ಕಳವಳ, ಆತಂಕ, ತಲ್ಲಣ, ವ್ಯಾಕುಲತೇ... ಎಲ್ಲೆಲ್ಲೂ ಖಾಖಿಗಳು. ವಾತಾವರಣವೆಲ್ಲ ಖಾಖಿಮಯಾ...
ಇಂತಹ ಸಮಯದಲ್ಲಿ ನಮ್ಮ ಒಡ್ಡೋಲಗ ಉಚಿತವೆಂದು ನಾವೀ ಒಡ್ಡೋಲಗಕ್ಕೆ ಬಂದಿದ್ದೇವೇ.... ಯಾರಲ್ಲೀ...

ಅಯ್ಯಾ ಶ್ರೀ ರಾಮಚಂದ್ರ ಪ್ರಭುವೇ..... ನೀವು ಹುಟ್ಟಿದ ಜಾಗಕ್ಕಾಗಿ ಶತಮಾನಗಳಿಂದಲೇ ವಿವಾದ ನಡೆಯುತ್ತಿದೆ. ಹೋರಾಟಗಳು, ಹಾರಟಗಳು, ರಕ್ತಪಾತಗಳು ಆಗಿವೆ. ಇದೀಗ ಮತ್ತೆ ನಿಮ್ಮ ಜನ್ಮಸ್ಥಾನವೆಂದು ಹೇಳುತ್ತಿರುವ ಆ ನಿರ್ದಿಷ್ಟ ಸ್ಥಳವು ನಿಮ್ಮದ್ದಾ ಅಥವಾ ಒಂದಾನೊಂದು ಕಾಲದಲ್ಲಿ ದೇಶವನ್ನು ಆಳಿದ್ದ ಬಾಬರ ಕಟ್ಟಿಸಿದ ಮಸೀದಿಯದ್ದಾ ಎಂಬುದನ್ನು ನ್ಯಾಯಾಲಯ ಹೇಳುವ ವೇಳಗೇ.....

ಭಾಗವತರೇ..... ನಾವು ಜೀವಿಸಿದ್ದೆವು ಎಂದು ಹೇಳಲಾಗುತ್ತಿರುವ ದಿವಸಗಳಿಂದಲೇ ವಿವಾದ ನಮಗೆ ತಪ್ಪಿದ್ದಲ್ಲ. ಹೋರಾಟದಲ್ಲೇ ಬೆಳೆದವರು ನಾವು. ಬಾಲ್ಯದ ಕೆಲವು ಸಮಯ ತಮ್ಮಂದಿರಾದ ಲಕ್ಷ್ಮಣ, ಭರತ-ಶತ್ರುಘ್ನರೊಂದಿಗೆ ಆಡಿ-ಪಾಡಿದ್ದಷ್ಟೆ ವಿವಾದಾದೀತ ಸಮಯ ಎನ್ನಬಹುದೂ.... ನಮ್ಮ ಚಿಕ್ಕಮ್ಮಳಿಗೆ ಮಂಥರೆ ಮಾಡಿದ ದುರ್ಭೋದನೆಯ ಪ್ರಚೋದನೆಯಿಂದಾಗಿ ನಾವು ಪಟ್ಟಾಭಿಷೇಕವನ್ನು ತ್ಯಜಿಸಿ ವನವಾಸಕ್ಕೆ ಹೋದಲ್ಲಿಂದ ನಾವು ಎಷ್ಟೊಂದು ಕಾರ್ಪಣ್ಯಗಳನ್ನು ಎದುರಿಸಿಲ್ಲಾ...

ಸ್ವಾಮೀ ದಶರಥ ಪುತ್ರರೇ... ವಿವಾದ ಎದ್ದಿರುವ ಸ್ಥಳದಲ್ಲೇ ನೀವು ಹುಟ್ಟಿದ್ದು ಎನ್ನುತ್ತಿರುವ ವರ್ಗ ಒಂದು ಅಲ್ಲೇ ನಿಮಗೆ ದೇಗುಲ ಕಟ್ಟಬೇಕೆಂದು ಟೊಂಕ ಕಟ್ಟಿದೆ. ಆದರೆ ಇನ್ನೊಂದು ವರ್ಗ ನಾವು ಹಲವು ಕಾಲದಿಂದ ನಮ್ಮ ಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಿಕೊಂಡ ಸ್ಥಳ ಅದಾಗಿದ್ದು, ಅದು ನಮ್ಮದೆಂದು ಹಠ ಹಿಡಿಯುತ್ತಿದೆ. ಪರಮಾತ್ಮಾ.... ನೀವೇ ಹೇಳುವಂತವರಾಗಿ, ಆ ಜಾಗ ಯಾರದ್ದು....? ನೀವು ಅಲ್ಲಿಯೇ......

ಭಾಗವತರೇ ಸ್ವಲ್ಪ ಬಾಯಿ ಮುಚ್ಚುತ್ತೀರಾ......ಯಾವ ಧರ್ಮ, ಯಾವ ಪೂಜೆ, ಯಾವ ಆರಾಧನೆ? ಎಲ್ಲಾ ಧರ್ಮಕ್ಕಿಂತಲೂ ರಾಜಕೀಯದ ಕೊಳಕು ಧರ್ಮವಿದೆ ನೋಡಿ.... ಅದು ಅತ್ಯಂತ ಅಪಾಯಕಾರಿ..... ವಿವಿಧ ಪಕ್ಷಗಳ ಈ ರಾಜಕೀಯ ಮಂಥರೆಯರು ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನನ್ನ ಹೆಸರು ಹೇಳುತ್ತಾ, ಗಲಾಟೆ ಎಬ್ಬಿಸಿ, ಬೆಂಕಿ ಹೊತ್ತಿಸಿ, ರಕ್ತ ಹರಿಸಿ, ಹೆಣ ಉದುರಿಸಲು ಪ್ರೇರಣೆ ನೀಡುತ್ತಾರೆ ನೋಡಿ... ಅಮಾಯಕರು ದೊಂಬಿಯಲ್ಲಿ ಮುಳುಗಿದ್ದಾಗ, ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು, ಕೈಯಲ್ಲಿ ದೂರ ಸಂವೇದಿ ಗುಂಡಿ ಅದುಮುತ್ತಾ ತುಟಿಯಂಚಿನಲ್ಲಿ ವಕ್ರನಗೆ ಬೀರುತ್ತಾ, ಹರಿದ ರಕ್ತ, ಉದುರಿದ ಹೆಣಗಳು ಎಷ್ಟು ಮತಗಳಾಗಿ ಪರಿವರ್ತಿತವಾಗಬಹುದು ಎಂಬುದಾಗಿ ಲೆಕ್ಕ ಹಾಕುತ್ತಾರಲ್ಲಾ....  ಇದು ಯಾರ ಧರ್ಮವೂ ಅಲ್ಲಾ.... ಇದು ಯಾರ ಸಂಸ್ಕೃತಿಯೂ ಅಲ್ಲಾ....

ಇತ್ತೀಚೆಗೆ ನಾವೊಂದು ಸರ್ವಧರ್ಮ ಸಮ್ಮೇಳನವನ್ನು ಅಂತರಿಕ್ಷದಿಂದ ಗಮನಿಸುತ್ತಿದ್ದೆವು. ಅತ್ತ ತಿರುಗಿದರೆ, ಇಸ್ಲಾಮಿನ ಅಲ್ಲಾಹುವೂ, ಇತ್ತ ತಿರುಗಿದರೆ ಇತರ ಧರ್ಮದ ದೇವಾದಿಗಳೂ ಇದೇ ಸಮ್ಮೇಳನವನ್ನು ವೀಕ್ಷಿಸುತ್ತಿರುವುದು ಕಂಡು ಬಂತು. ಉಭಯ ಕುಶಲೋಪರಿಯ ಬಳಿಕ, ನಾವು ಈ ಜನರ ಹೇಸಿಗೆ ಹೋರಾಟದ ಕುರಿತು ಪರಸ್ಪರ ಮಾತಾಡಿಕೊಂಡೆವು. ಎಲ್ಲರಿಂದಲೂ ಹೊರಟದ್ದು ಖೇದಕರವಾದ ನಿಟ್ಟಿಸಿರು.

ಮರ್ಯಾದಾ ಪುರುಷೋತ್ತಮನೇ.... ನಿಮ್ಮ ಆರಾಧನೆಗೆ....

ಭಾವತರೇ...... ಯಾರಿಗೆ ಬೇಕಿದೆ ಮಂದಿರ- ಮಸೀದಿ...? ಮತಬ್ಯಾಂಕಿನ ಮೇಲೆ ಕಣ್ಣಿಟ್ಟವರಿಗಿರುವ ಆಸಕ್ತಿ ನಮಗಿಲ್ಲ. ತಮ್ಮತಮ್ಮ ಟಿಆರ್‌ಪಿ ಏರಿಸಿಕೊಳ್ಳಲು ತುತ್ತೂರಿವರು ನೀಡುತ್ತಿರುವ ಕೊಡುಗೆಯೇನೂ ಕಮ್ಮಿ ಇಲ್ಲಾ.....ನಮ್ಮನ್ನು ಆರಾಧಿಸಲು ಆಡಂಬರವೇನೂ ಬೇಕಿಲ್ಲ. ಹೃದಯ ಮಂದಿರಕ್ಕಿಂತ ಪ್ರಶಸ್ತ ಸ್ಥಳ ಇನ್ಯಾವುದಿದೆ......? ಅಲ್ಲಾಹುವೇ ಹೇಳಿರುವುದನ್ನು ಪವಿತ್ರ ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ನಮಗೆ ಮಸೀದಿಯೇ ಬೇಕಿಲ್ಲ.... ಶುಚಿರ್ಭೂತರಾಗಿ ಮೆಕ್ಕಾದ ದಿಕ್ಕಿಗೆ ಮುಖಮಾಡಿ ಎಲ್ಲಿಯೂ ನಮಿಸಬಹುದಾಗಿದೆ.....

ಎಲ್ಲಾ ಧರ್ಮಗಳೂ ಹೆಚ್ಚೂ ಕಮ್ಮಿ ಇದನ್ನೇ ಹೇಳಿರುವುದೆಂಬುದನ್ನು ಮೊದಲು ಅರ್ಥಮಾಡಿಕೊಳ್ಳೀ...
ಯಾವ ಧರ್ಮದ ದೇವರಿಗೂ ಇಲ್ಲಿ ಮಂದಿರ-ಮಸೀದಿ ಬೇಕಾಗಿಲ್ಲ. ಭಾವನೆಗಳನ್ನು ಕೆರಳಿಸುವವರನ್ನು ಮೊದಲು ಸದೆ ಬಡಿಯಬೇಕಾಗಿದೆ. ಇತಿಹಾಸಿದಿಂದ ಪಾಠ ಕಲಿಯದ ಮೂಢರುಗಳಿರಾ.... ಅವನು ಒಡೆದನೆಂದು ಇವನು, ಇವನು ಒಡೆದನೆಂದು ಅವನು; ಒಡೆಯುತ್ತಾ ಹೋದರೇ..... ಒಡಕುಗಳೇ ತುಂಬಿಕೊಳ್ಳುತ್ತವೆ. ನೀವು ಧರ್ಮವನ್ನೇ ನಂಬುವರಾದರೇ... ಅದಕ್ಕೇ ಅಂಟಿಕೊಳ್ಳುವರಾದರೆ ಆಯಾ ಧರ್ಮಗಳಲ್ಲಿ ಹೇಳಿರುವ ಉದಾತ್ತ ಗುಣಗಳನ್ನು ಅನುಸರಿಸೀ... ನೆಮ್ಮದಿಯಿಂದ ಬದುಕುವುದ ಕಲಿಯಿರೀ....

ಎಲ್ಲರಿಗೂ ಒಳಿತಾಗಲೀ...  ಸರ್ವೇಜನ ಸುಖಿನೋಭವಂತೂ...!
ಮಂಗಳಂ!

Rating
No votes yet

Comments