ಅಯೋಧ್ಯೆಯ ತೀರ್ಪು- ಬಹಿರಂಗ ಸ್ವಗತ

ಅಯೋಧ್ಯೆಯ ತೀರ್ಪು- ಬಹಿರಂಗ ಸ್ವಗತ

ಬರಹ

ಆ ದಿನ - ನನ್ನ ನೆನಪುಗಳು

ಡಿಸೆಂಬರ್ ೬, ೧೯೯೨ ರಂದು ಟೀವಿಗೆ ಅಂಟಿಕೊಂಡು ಕೂತವರಲ್ಲಿ ನಾನು ಒಬ್ಬ. ಮಸೀದಿಯನ್ನು ಕೆಡವಿದರು ಎಂಬ ಸುದ್ದಿ ,ನಂತರ ಆ ಕಟ್ಟಡವನ್ನು ಕೆಡವಿದ ಚಿತ್ರಗಳು ಟೀವಿ ಪರದೆಯ ಮೇಲೆ ಮೂಡತೊಡಗಿದಾಗ  ... ನಿಜವನ್ನೇ ಹೇಳುತ್ತೇನೆ... ತಡೆಯಲಾರದಷ್ಟು ಸಂತಸವಾಗಿತ್ತು.  ಅಕ್ಕಪಕ್ಕದ ಮನೆಗಳಿಗೆ ಹೋಗಿ "ಗೊತ್ತಾಯ್ತಾ ವಿಷಯ?" ಅಂತ ಒಬ್ಬರನೊಬ್ಬರು ಜನ ಕೇಳು್ತ್ತಿದ್ದರು. ನನಗೆ ಗೊತ್ತಿರುವಂತ ಎಲ್ಲಾ ಜನರಲ್ಲಿ  ಏನೋ ಸಂಭ್ರಮ, ಯಾವುದೋ ಪೀಡೆ ತೊಲಗಿದ ಹಬ್ಬದ ಲಹರಿ.

ಕಲ್ಯಾಣ್ ಸಿಂಗ್ ಸರಕಾರ ವಜಾ ಆಯಿತು ಎಂಬ ಸುದ್ದಿ ಬಂತು. ಇನ್ನು ಹಿಂದು ಮುಸ್ಲಿಮ್ ದಂಗೆಗಳು ಏಳಲಿವೆ ಎಂಬ ಭೀತಿ, ಹಲವಾರು ಮುಸ್ಲಿಮರ ಮನಸ್ಸಿಗೆ ಆದ ನಿಜವಾದ ಧಕ್ಕೆಯ ಬಗ್ಗೆ ಅನುಕಂಪ, ಸಭ್ಯ ಸಮಾಜದಲ್ಲಿ ವಿವಾದವೊಂದು ಈ ರೀತಿ  ಕೊನೆಯಾಗಬಾರದಿತ್ತು ಅನ್ನುವ ವ್ಯಥೆ. ಇವೆಲ್ಲದರ ನಡುವೆಯೂ ನಮ್ಮ ಕಣ್ಣ ಮುಂದೆ ಇತಿಹಾಸ ಸೃಷ್ಟಿಯಾಗಿದೆ ಎನ್ನುವ ಭಾವ ಆವರಿಸಿಕೊಂಡಿತ್ತು. ಇನ್ನು ಮುಂದೆ ಎಲ್ಲಾ ಬದಲಾಗಲಿದೆ ಎನ್ನುವ ನಿರೀಕ್ಷೆ ಹುಟ್ಟಿತ್ತು. ವಯಸ್ಸಿಗೆ ಮೀರಿ ಓದಿಕೊಂಡಿದ್ದರೂ, ರಾಜಕೀಯದ ಮೇಲೆ ನನ್ನದೇ ಅಭಿಪ್ರಾಯಗಳನ್ನು ಹೊಂದಿದ್ದರೂ ಕೂಡ ನಾನಾಗ ಕೇವಲ ಹೈಸ್ಕೂಲು ದಾಟಿದ ಹುಡುಗ.ಪರಿಚಯದ ಹುಡುಗನ ತಂದೆಯೊಬ್ಬರು ಇದು ಬಿಜೇಪಿಯ ರಾಜಕೀಯ ಕುತಂತ್ರ , ರಾಮನಿಗೇಕೆ ಮಂದಿರ ಬೇಕು ಎಂದು ವಾದಿಸಿದಾಗ, ಮರ್ಯಾದೆಗಾಗಿ ಸುಮ್ಮನಿದ್ದರೂ, ಮೈ ಕುದ್ದುಹೋಗಿತ್ತು. ಹೀಗಾಗಬಾರದಿತ್ತು  ಎಂದು ಹೇಳುವ ಅನೇಕ ಜನರಲ್ಲೂ ಒಳಗಡೆ ಮೆಚ್ಚುಗೆಯ ಭಾವ ಸೂಸುತ್ತಿತ್ತು. ಮಸೀದಿಯನ್ನು ಮರ್ಯಾದೆಯಾಗಿ ಸ್ಥಳಾಂತರಿಸಬೇಕಿತ್ತು ಎಂದವರೇ ಹೊರತು ಮಂದಿರ ನಿರ್ಮಾಣದ ಬಗ್ಗೆ ಚಕಾರವೆತ್ತಿದವರು ಕಡಿಮೆ.

ತಮ್ಮ ನೆಚ್ಚಿನ ದೈವವಾದ ಶ್ರೀರಾಮನಿಗೆ ಅವನ ಹುಟ್ಟಿನ ನೆಲದಲ್ಲಿ ಕಡೆಗಾದರೂ ಒಂದು ಭವ್ಯ ಮಂದಿರ ನಿರ್ಮಾಣವಾದೀತೆಂದು ಆಸ್ತಿಕರು ಹಿಗ್ಗಿದರು. ಅಲ್ಲಿ ರಾಮನ ದರ್ಶನ ಮಾಡುವ ಪ್ರೊಗ್ರಾಮನ್ನು ತಮ್ಮ ಮುಂದಿನ ವರ್ಷದ ತೀರ್ಥಯಾತ್ರೆಯ ಯೋಜನೆಗಳಲ್ಲಿ ಆಗಲೇ ಸೇರಿಸಿದ್ದರು. ಆದರೆ ನಾನಂತ ರಾಮಭಕ್ತನಾಗಿರಲಿಲ್ಲ. ಮರ್ಯಾದಾಪುರುಷೋತ್ತಮನಿಗಿಂತ  ನನಗೆ ಕಪಟನಾಟಕಸೂತ್ರಧಾರಿಯೇ ಹೆಚ್ಚು ಪ್ರಿಯನಾಗಿದ್ದ. ರಾಮನಿಗಿಂತ ಅವನ ಬಂಟ ಹನುಮನ ಮೇಲೆ ಹೆಚ್ಚು ನಂಬಿಕೆ ಮತ್ತು ಪ್ರೀತಿ.ಇಷ್ಟಕ್ಕೂ ಕೆಲವೊಮ್ಮೆ ದೇವರಿದ್ದಾನೆಯೆ ಎಂಬ ಪ್ರಶ್ನೆ. ಪೂರ್ತಿ ನಾಸ್ತಿಕನಾಗದಿದ್ದದ್ದು  ಕೇವಲ ಪರೀಕ್ಷೆಗಳ ಹೆದೆರಿಕೆಯಿಂದ. ಆದರೂ "ಮಂದಿರ್ ವಹೀ ಬನಾಯೇಂಗೆ" ಎನ್ನುವ ಘೋಷಣೆಗೆ  ನನ್ನ ಮನ ತಾಳ ಹಾಕುತ್ತಿತ್ತು.

ಕಾಲಾಯ ತಸ್ಮೈ ನಮಃ

ನಂತರ ನಡೆದ ಗಲಭೆಗಳು,  ಗೋಧ್ರಾ ಹತ್ಯಾಕಾಂಡ ಮತ್ತು ನಂತರದ ಗುಜರಾತಿನ ದಳ್ಳುರಿಗೆ ಈ ವಿವಾದಕ್ಕೆ ನೇರವಾಗಿಯೋ ಸುತ್ತುಬಳಸಿಯೋ ತಳಕು ಹಾಕಿಕೊಂಡಿವೆ.  ಮೊದಮೊದಲು "ಪಾಠ ಕಲಿಸುವ" ಲಹರಿಯಲ್ಲಿದ್ದ ಹಿಂದು ಸಮಾಜ ಕೆಲವೇ ದಿನಗಳಲ್ಲಿ ಎಲ್ಲವನ್ನೂ ಮರೆತು ಹೊಟ್ಟೆ ಹೊರೆಯುವದನ್ನೇ  ತನ್ನ ಗುರಿಯಾಗಿಸಿಕೊಂಡು ಹಳೆಯ ಜಾತಿ ರಾಜಕೀಯಕ್ಕೆ ಮರಳಿ ಜೋತುಬಿದ್ದಿತು. ಆದರೆ ಕೆಲವು ಮುಸಲ್ಮಾನರಲ್ಲಿ ಇದು ರೊಚ್ಚು ಕೆರಳಿಸಿ ಅನೇಕ ಮಧ್ಯಮವರ್ಗದ ಹುಡುಗರನ್ನು ಜಿಹಾದಿಗಳನ್ನಾಗಿ ಮಾಡಿದ್ದು ಸುಳ್ಳಲ್ಲ. ಈ ವಿವಾದದಿಂದ ಬಂದ ರಾಜಕೀಯ ಚೆಕ್ಕನ್ನು ಪೂರಾ ಬಳಸಿಕೊಂಡ ಬಿಜೇಪಿ ಅಧಿಕಾರಕ್ಕೆ ಬಂದೊಡನೆ ಇದನ್ನು ಮತ್ತೆ ಹಿಂದಕ್ಕೆ ಸರಿಸಿ ತನ್ನ ಅವಕಾಶವಾದಿತನವನ್ನು ಚೆನ್ನಾಗಿ  ತೋರಿಸಿತು. ಅದುವರೆಗೂ ಶಿಸ್ತಿಗೆ, ಸಂವಿಧಾನ ಬಧ್ದತೆಗೆ ಹೆಸರಾಗಿದ್ದ ಸಂಘಪರಿವಾರಕ್ಕೆ ವಚನದ್ರೋಹದ ಕಳಂಕ  ಈಗಲೂ ಗಟ್ಟಿಯಾಗಿ ಮೆತ್ತಿಕೊಂಡಿದೆ.

ಕಾಲದ ಹರಿವಿನಲ್ಲಿ ೧೮ ವರ್ಷಗಳು ಕಳೆದಿವೆ.  ಸಮಯ ಎಲ್ಲರನ್ನೂ ಬದಲಾಯಿಸಿದೆ. ದೇಶ ಬದಲಾಗಿದೆ. ಆಂದು ದೇಶದ ಅದ್ವಿತೀಯ ನಾಯಕರಾಗಿದ್ದ ವಾಜಪೇಯಿ ಮತ್ತು ಅದ್ವಾನಿ ,ಇಂದು ಬಾಳಿನ ಸಂಜೆಯಲ್ಲಿದ್ದಾರೆ. ಪ್ರಧಾನಿಯಾಗಿದ್ದ ನರಸಿಂಹ ರಾಯರು ಇತಿಹಾಸದ ಯಾವುದೋ ಪುಟದಲ್ಲಿ ಮೂಲೆಗುಂಪಾಗಿದ್ದಾರೆ.ಮುಗಿದೇ ಹೋಯಿತು ಎನ್ನುವಂತಿದ್ದ ವಂಶಪರಂಪರೆಯ ಆಳ್ವಿಕೆಯ ಐದನೇ ಕಂತನ್ನು ಇಂದು ಎದುರುನೋಡುತ್ತಿದ್ದೇವೆ. ಅಂದು  ದಿವಾಳಿಯಾಗಿದ್ದ ಭಾರತದ ಅರ್ಥವ್ಯವಸ್ಥೆಯಲ್ಲಿ ಇಂದು ದೀಪಾವಳಿಯ ವಾತಾವರಣವಿದೆ. ಅಂತರಜಾಲ ಮತ್ತು ಮೊಬೈಲುಗಳು ದೇಶವೆಲ್ಲಾ ವ್ಯಾಪಿಸಿವೆ.ಮಂದಿರವೂ ಬೇಡ, ಮಸೀದಿಯೂ ಬೇಡ ಎನ್ನುವ ಕೂಗು ಎದ್ದಿದೆ.

ಕೆಲವು ಪರಿಸ್ಥಿತಿಗಳು ಲವಲೇಶವೂ ಬದಲಾಗಿಲ್ಲ. ರಾಮನಿಗೆಂದು ಕಟ್ಟಿದ್ದ "ತಾತ್ಕಾಲಿಕ" ಜೋಪಡಿ-ಗುಡಿ ಇದ್ದ ಹಾಗೆ ಇದೆ. ಪೋಲಿಸ್ ಪಹರೆ ಮುಂದುವರೆದಿದೆ. ಮಂದಿರ ಪರ ಮತ್ತು ವಿರೋಧವಾಗಿ ಅಂತರಜಾಲದಲ್ಲಿ, ಟೀವಿ ಕಾರ್ಯಕ್ರಮಗಳಲ್ಲಿ ಕಂಠ-ಕುಟ್ಟಣಿ ಶೋಷಣೆ ಅವ್ಯಾಹತವಾಗಿ ಸಾಗಿದೆ. ಹಿಂದು-ಮುಸ್ಲಿಮ್ ಒಡಕು ಮತ್ತು  ಮತ-ಬ್ಯಾಂಕ ರಾಜಕಾರಣದಲ್ಲಿ ಏನೂ ವ್ಯತ್ಯಾಸವಿಲ್ಲ. ಬಾಂಗ್ಲಾದೇಶದಿಂದ ಆಗುತ್ತಿರುವ ನಿಶ್ಯಬ್ದ ಪ್ರವಾಹ ಮತ್ತು ಪಾಕಿಸ್ತಾನದಿಂದ ನಡೆಸುವ ಪರೋಕ್ಷ ಕದನಗಳು ನಿಲ್ಲುವ ಸೂಚನೆಯಿಲ್ಲ.ಆದರೆ ಇವೆಲ್ಲದರ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡ ಹಾಗೆ ಕಾಣುವುದಿಲ್ಲ.

ವೈಯಕ್ತಿಕವಾಗಿ, ಬಾಳು ಅನೇಕ ಪಾಠಗಳನ್ನು  ನನಗೆ ಕಲಿಸಿದೆ. ದೃಷ್ಟಿಕೋನಗಳು ಬದಲಾಗಿವೆ. ಆ ಕಟ್ಟಡವನ್ನು ಹಾಗೆ ಒಡೆಯಬಾರದಿತ್ತು ಎಂದು ನನಗೆ ಹಲವು ಸಲ ಅನ್ನಿಸಿದೆ. ಬಿಜೇಪಿಯ ಪೊಳ್ಳು ಅಶ್ವಾಸನೆಗಳನ್ನು ನಂಬಿ ಮತ ಹಾಕಿದಕ್ಕೆ ನನ್ನಂತ ಹಲವರಿಗೆ ಹೇಸಿಗೆಯಾಗುತ್ತಿದೆ. ಬಿಸಿ ನೆತ್ತರಿನ ಆವೇಶ ಇಳಿದು ಮಕ್ಕಳಾದ ಮೇಲೆ ಮನುಷ್ಯ ಬದಲಾಗುತ್ತಾನೆ. ನಮ್ಮ ತತ್ವ , ನಂಬಿಕೆಗಳಿಗೆ ನಮ್ಮ  ಬದುಕನ್ನು ಪಣವಾಗಿಸಬಹುದು. ನಮ್ಮ ಮಕ್ಕಳನ್ನ್ದು ಒಡ್ದುವುದು ಅಷ್ಟು ಸುಲಭವಲ್ಲ. ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ಹೂಡಿರುವಾಗ ಸ್ಥಿರತೆ ಹೆಚ್ಚು ಹಿತವಾಗುತ್ತದೆ.ಆ ಘಟನೆಯ ನಂತರ ವರ್ಷದಲ್ಲಿ ಯಾವುದೇ ಮಗು ಹುಟ್ಟಿದ್ದರೆ ಈ ದಿನಗಳಲ್ಲಿ  ಅದಕ್ಕೆ ನನಗೆ ಹೆಚ್ಚುಕಡಿಮೆ ಅಂದು ಇದ್ದಷ್ಟೇ  ವಯಸ್ಸು. ನಮ್ಮ ಆಂಗ್ಲ ವಾಹನಿಗಳನ್ನೇ  "ನಂಬು"ವುದಾದರೆ ಇಂದು ಆ ಹುಡುಗರು  ಆ ಜಾಗದಲ್ಲಿ ಬಯಸುವುದು  ಆಸ್ಪತ್ರೆ, ಪಾರ್ಕು ಇಲ್ಲವೇ ಡಿಸ್ಕೋ !

ತೀರ್ಪಿಗೇಕೆ ಆತುರ? "ನಿರಾಸಕ್ತ " ಜನತೆ

ಅಲಹಾಬಾದ್ ಹೈಕೋರ್ಟು ಇಂದು ತೀರ್ಪು ನೀಡಲು ಮುಂದಾಗದಿದ್ದರೆ, ಈ ವಿಷಯದ ಬಗ್ಗೆ ಬಹಳಷ್ಟು ಜನರಿಗೆ ಆಸಕ್ತಿಯೇ ಇರಲಿಲ್ಲ.ನನ್ನ ಕೈಕೆಳಗೆ ಕೆಲಸ ಮಾಡುವ ೨೫ರ ಆಸುಪಾಸಿನ ಹುಡುಗರಿಗೆ ಇದು ಚರ್ಚೆಯ ಸಂಗತಿಯೇ ಅಲ್ಲ. ಇದರಿಂದ ರಜೆ ಘೋಷಣೆಯಾದೀತೆ ಎನ್ನುವುದೇ ಮುಖ್ಯ ಆಸಕ್ತಿ. ಇವೆಲ್ಲಾ ನನ್ನ ಸ್ವಂತ ಅನುಭವಕ್ಕೆ ದಕ್ಕಿದ ಸಂಗತಿಗಳು.ಕೋರ್ಟು ಇದನ್ನು ಮುಂದಿನ ಶತಮಾನಕ್ಕೆ ಯಾಕೆ ಮುಂದೂಡಲಿಲ್ಲ ಎಂದು ಒಂದು ವರ್ಗದ ಜನರ ಕೊರಗು.  ಆಂಗ್ಲ ವಾಹನಿಗಳಲ್ಲಿ ಬರುವ ಪಂಡಿತರಂತೂ ನುಡಿಮುತ್ತುಗಳನ್ನು ಉದುರಿಸಿದ್ದಾರೆ. ಉದಾಹರಣೆಗೆ,

  • ದೇಶ ವಿವಾದವನ್ನು ಬಿಟ್ಟು ಮುಂದೆ ಸಾಗಿದೆ. ರೊಟ್ಟಿ-ಬಟ್ಟಿ-ಹಟ್ಟಿಯ ಮುಂದೆ ಮಂದಿರ-ಮಸೀದಿ ನಿಲ್ಲುವುದಿಲ್ಲ.
  • ಈಗಿನ ಪೀಳಿಗೆಗಳಿಗೆ ಮಧ್ಯಕಾಲದ ಚರಿತ್ರೆಯ ಜಗಳಗಳಲ್ಲಿ ಆಸಕ್ತಿ ಇಲ್ಲ.
  • ಅಯೋಧ್ಯೆಯ ವಿವಾದ ಕೇವಲ ಹಕ್ಕು-ವ್ಯಾಜ್ಯ( title suit)  ಮಾತ್ರ.
  • ಇತಿಹಾಸದ ತಪ್ಪುಗಳನ್ನು ಸರಿಪಡಿಸಲಾಗದು. ಮಂದಿರವನ್ನು ಒಡೆದು ಮಸೀದಿಯನ್ನು ಕಟ್ಟಿದ್ದರೂ ಅದು ಪ್ರಸ್ತುತವಲ್ಲ.
  • ಇದಕ್ಕೆ ಪರಿಹಾರ ಮಾತುಕತೆಯಿಂದ ಮಾತ್ರ ಸಾಧ್ಯ.
  • ವ್ಯತರಿಕ್ತವಾಗಿ , ಇದಕ್ಕೆ ಪರಿಹಾರ ಕೋರ್ಟಿನ ತೀರ್ಪಿನಿಂದ ಮಾತ್ರ್ಸ ಸಾಧ್ಯ.
  • ಪುರಾಣಗಳು ಮತ್ತು ಮೌಖಿಕ ಪರಂಪರೆಗಳು ಸತ್ಯಶೋಧಕ ಆಧಾರಗಳಲ್ಲ.


ಕೆಲವು ಪ್ರಶ್ನೆಗಳು

ಹಾಗಿದ್ದರೆ  ಅಂದು ಇಡೀ ದೇಶವನ್ನು ಧ್ರುವೀಕರಿಸಿದ ಈ ವಿವಾದಕ್ಕೆ ಏನು ಮಹತ್ವವೇ ಇಲ್ಲವೇ? ನನ್ನಂತೆ ಲಕ್ಷಗಟ್ಟಲೇ ಹಿಂದುಗಳಲ್ಲಿ ಅಂದು ಜಾಗೃತವಾದ ಪ್ರಜ್ಞೆ ಕೇವಲ ರಾಜಕೀಯ ತಂತ್ರಗಾರಿಕೆಯ ಫಲವೇ?  ಭಾರತದ ಚರಿತ್ರೆಯ ಹಲವು ಘಟನೆಗಳು ನಮ್ಮ ಇಂದಿನ ಸ್ಥಿತಿಯ ವಿಶ್ಲೇಷಣೆಗೆ ಅಪ್ರಸ್ತುತವೆ? ಕೇವಲ ಆರ್ಥಿಕ ಅಬಿವೃದ್ಧಿಯಿಂದ ಹಿಂದು -ಮುಸಲ್ಮಾನರ ನಡುವಿನ ಕಂದಕಗಳೆಲ್ಲಾ ಮುಚ್ಚಿಹೋಗುತ್ತವೆಯೆ? ಬ್ರ‍ಿಟಿಷರಿಂದ  ನಾವು ಸುಮಾರು ೧೦೦ ವರ್ಷಗಳಿಂದ ಎರವಲು ಪಡೆದ ಕೋರ್ಟು-ಕಾನೂನಿನಡಿಯಲ್ಲಿ ನಮ್ಮ  ಶತಮಾನಗಳ ಸಾಂಸ್ಕೃತಿಕ ತಿಕ್ಕಾಟಗಳನ್ನು ಪರಿಹರಿಸಬಹುದೆ? ನಮ್ಮ ರಾಜಕೀಯ ಮತಬ್ಯಾಂಕಿನ ಲೆಕ್ಕಾಚಾರದಿಂದ  ಮುಕ್ತವಾಗುತ್ತಿದೆಯೆ?


ಇದು ನಿಜವೇ ಆಗಿದ್ದರೆ, ಇಂಡಿಯಾ- ಫಸ್ಟ್ ಎಂಬ  ಘೋಷಣೆ, ಯಾರಿಂದಲೋ ಸೆಕ್ಯುಲರ್ ಕಾವ್ಯವಾಚನ, ರಾಜಕಾರಣಿಗಳಿಂದ ಶಾಂತಿಗಾಗಿ ವಿನಂತಿ, ಈ ಬಿಗಿ ಭದ್ರತೆ ಮತ್ತು ಎಸೆಮ್ಮಸ್ಸುಗಳ ಮೇಲೆ ನಿರ್ಬಂಧಗಳೆಲ್ಲಾ ಯಾಕೆ ಬೇಕು? ಶಾಲೆ- ಕಾಲೇಜುಗಳಿಗೆ ರಜೆ ಯಾಕೆ? ತೀರ್ಪನ್ನು ಮುಂದೂಡಲು  ಪರೋಕ್ಷ ಯತ್ನಗಳೇಕೆ?

ಇಂದಿನ ತೀರ್ಪಿನ ಮೇಲಿನ ತೀರ್ಪು

ಇಂದು ತೀರ್ಪು ಬರಲಿದೆ. ಇದು ಅಗತ್ಯವಾಗಿ ಎಂದೋ ನಡೆಯಬೇಕಾಗಿದ್ದ ಸಂಗತಿ. ೬೦ ವರ್ಷಗಳು ಅತಿರೇಕವಾಯಿತು. ತೀರ್ಪಿನ ಮೇಲೆ  ಮೇಲ್ಮನವಿ ಹೋಗುವುದು ಶತಸ್ಸಿದ್ಧ.  ಕೆಲವು ಜಟಿಲ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ ಉತ್ತರ ಕೊಡುವ ಯತ್ನ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿ ಆಗಲಿದೆ.ಆ ನೈತಿಕ ಸ್ಥೈರ್ಯವನ್ನು ತೋರಿದ ನ್ಯಾಯಮೂರ್ತಿಗಳಿಗೆ  ಅಭಿನಂದನೆ  ಸಲ್ಲಬೇಕು. ಎರಡು ದಶಕಗಳ ಹಿಂದೆ ನನ್ನಲ್ಲಿ ಸ್ಪಷ್ಟವಾಗಿದ್ದ ಸರಿ-ತಪ್ಪುಗಳ ಅಂತರ ನನಗೆ ಈಗ ಸಡಿಲವಾದಂತೆ ಅನ್ನಿಸುತ್ತೆ. ನ್ಯಾಯಮೂರ್ತಿಗಳ ಕೆಲಸ ಸುಲಭವಲ್ಲ .  ತೀರ್ಪಿನ ಬಗ್ಗೆ ಊಹಾಪೋಹ ಸಲ್ಲದು. ಆದರೆ, ಬರುವ ತೀರ್ಪು ಬಹಳ ಜನರಿಗೆ ನೋವು,ನಿರಾಸೆಯನ್ನುಂಟು ಮಾಡುವುದು ಖಚಿತ.

ಮುಂದಿನ ಭಾಗ ನಿರೀಕ್ಷಿಸಿ :   ತೀರ್ಪು- ಟಿಪ್ಪಣಿ