ಆ ದಿನಗಳು...
ಸ್ವಲ್ಪ ಉದ್ದವಾದ ಲೇಖನ....ಬೇಸರ ಪಟ್ಟುಕೊಳ್ಳದೆ ಓದುವಿರೆಂದು ಭಾವಿಸುವೆನು.....
ಆವಾಗ.... ಬೇಸಿಗೆ ರಜೆಯ ನಂತರ ಜೂನ್ ನಲ್ಲಿ ಶಾಲೆಗಳು ತೆರೆದವು.
ನಾವು ನಮ್ಮ ನಮ್ಮ ಡೆಸ್ಕಿನಲ್ಲಿ ಕುಳಿತೆವು..
ಆವಾಗ....ಪುಸ್ತಕದ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ
ನಿಂತು, ಕೊಳ್ಳುತ್ತಿದ್ದೆವು ಪುಸ್ತಕಗಳನ್ನು...
ಅವಾಗ....ನಮಗೆ ಎರಡೆರಡು ಭಾನುವಾರಗಳು ಬೇಕಿತ್ತು, ಸೋಮವಾರಗಳು ಬೇಕಿರಲಿಲ್ಲ.,,
ಆದರು ಸಾಲಿನಲ್ಲಿ ನಿಲ್ಲುತ್ತಿದ್ದೆವು ಬೆಳಗಿನ ಪ್ರಾರ್ಥನೆಗಾಗಿ...
ಕಲಿಯಲು ಶುರು ಮಾಡಿದೆವು ಸ್ಲೇಟು, ಬಳಪಗಳನ್ನು ಬಳಸಿ...
ಮುಂದುವರೆದು ಬರೆಯಲು ಬಳಸಿ ಫೌಂಟೆನ್ ಪೆನ್, ಬಾಲ್ ಪೆನ್ ಹಾಗು ಮೈಕ್ರೋ ಟಿಪ್ ಪೆನ್ಗಳನ್ನು.
ಆವಾಗ.... ಲೆಕ್ಕ ಕಲಿಯಲು ಬಳಸಿದೆವು ಮಗ್ಗಿ ಪುಸ್ತಕಗಳನ್ನು...
ನಂತರದಲ್ಲಿ ಕ್ಯಾಲ್ಕ್ಯುಲೆಟರ್ ಹಾಗು ಕಂಪ್ಯೂಟರ್ ಗಳನ್ನು...
ಆವಾಗ....ಒಬ್ಬರೊನ್ನಬ್ಬರು ಓಡಿಸಿಕೊಂಡು ಹೋಗುತ್ತಿದ್ದೆವು ಬಿಡುವಿನ ವೇಳೆಯಲ್ಲಿ ಶಾಲೆಯ ಪ್ರಾಂಗಣದಲ್ಲಿ..
ಆಟದ ಮೈದಾನದಲ್ಲಿ, ಮರಗಳ ಕೆಳಗೆ, ಹಾಗು ಸೈಕಲ್ ಸ್ಟಾಂಡಿನಲ್ಲಿ...
ಆವಾಗ....ಪ್ರಪಂಚದ ಎಲ್ಲ ಬಣ್ಣಗಳನ್ನು, ಕಾಣುತ್ತಿದ್ದೆವು ಗುರುವಾರಗಳಂದು,
ಆವಾಗ.....ವಾರದಲ್ಲಿ ಒಂದು ದಿನ ಬರುವ ದೈಹಿಕ ಶಿಕ್ಷಣ ತರಗತಿಗೆ ಕಾಯುತ್ತಿದ್ದೆವು...ಮಳೆಗಾಲಕ್ಕೂ ಹೆಚ್ಚಾಗಿ...
ಆವಾಗ.... ಕ್ರಿಕೆಟ್ ಆಡಲು ಬಳಸುತ್ತಿದ್ದೆವು ಬ್ಯಾಟ್ ಆಗಿ ಪುಸ್ತಕದ ರಟ್ಟುಗಳನ್ನು,
ಬಾಲ್ ಆಗಿ ಕುತ್ತಿಗೆಯ ಟೈಗಳನ್ನು ಸುತ್ತಿ....
ಆವಾಗ....ಕೆಲವರು ಆಡುತ್ತಿದ್ದರು ಕಬಡ್ಡಿ, ಖೋ ಖೋ ..ಸುಡುವ ಬಿಸಿಲನ್ನು ಲೆಕ್ಕಿಸದೆ..
ಮತ್ತೆ ಕೆಲವರು ಪುಸ್ತಕದ ಕ್ರಿಕೆಟನ್ನು ಶಾಲೆಯ ತರಗತಿಗಳ ಒಳಗೆ...
ಜಗಳಗಳು ಆಗುತ್ತಿದ್ದರು ದ್ವೇಷವಿರಲಿಲ್ಲ..ಸ್ಪರ್ಧೆಗಳಿದ್ದರು ಸ್ವಾರ್ಥವಿರಲಿಲ್ಲ...
ಆವಾಗ....ಊಟದ ವೇಳೆಯಲ್ಲಿ ಹಾಗು ಬಿಡುವಿನ ವೇಳೆಯಲ್ಲಿ
ಕ್ರಿಕೆಟ್ ಪ್ರತ್ಯಕ್ಷ ಪ್ರಸಾರ ನೋಡಲು..ಆಶ್ರಯಿಸುತ್ತಿದ್ದದ್ದು ಎದುರುಗಡೆ ಮನೆಯ ಕಿಟಕಿಗಳು...
ಆವಾಗ....ಗಂಟೆ ಐದಾದರೆ ಕೆಲವರು ಮನೆ ಕಡೆ ಓಡುತ್ತಿದ್ದರೆ....ಮಿಕ್ಕ ಕೆಲವರು ಓಡುತ್ತಿದ್ದರು
ಶಾಲೆಯಲ್ಲಿ ಬದಿಯಲ್ಲಿ ಮಾರುತ್ತಿದ್ದ ಸೀಬೇಕಾಯಿ, ಕಡಲೆಕಾಯಿ, ಕುಲ್ಫಿ ಐಸ್ ಗಾಡಿಗಳ ಕಡೆ...
ಕಳೆದು ಹೋದವು ಆ ದಿನಗಳು,
ಶಾಲೆಯ ಆಟದ ದಿನಗಳು, ಶಾಲೆಯ ವಾರ್ಷಿಕೋತ್ಸವಗಳು,ಅದಕ್ಕೆ ನಡೆಸುತ್ತಿದ್ದ ತಿಂಗಳ ತಯಾರಿಗಳು,
ಅರ್ಧ ವಾರ್ಷಿಕ, ವಾರ್ಷಿಕ ಪರೀಕ್ಷೆಗಳು,,ಹಾಗು ಬಹಳ ಖುಷಿ ತರುತ್ತಿದ್ದ ಬೇಸಿಗೆ ರಜೆಗಳು...
ಕಳೆದು ಹೋದವು ಆ ದಿನಗಳು..
ನಾವು ಕಲಿತೆವು, ನಲಿದೆವು, ಆಟವಾಡಿದೆವು, ಗೆದ್ದೆವು, ಸೋತೆವು, ನಕ್ಕೆವು, ಅತ್ತೆವು, ಹೊಡೆದಾಡಿದೆವು,
ತಿಳಿದೆವು....ಸ್ನೇಹಿತರ ಜೊತೆ ಕಳೆದ ಆ ಸಂಭ್ರಮದ ಕ್ಷಣಗಳು...ಆ ಅನುಭವಗಳು...ಮತ್ತಷ್ಟು...
ಕಳೆದು ಹೋದವು ಆ ದಿನಗಳು..
ಮೊದಲು ಸ್ನೇಹಿತರ ಜೊತೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದೆವು......ಈಗ ಮಾತನಾಡಿಸಲು ಸಮಯವೇ ಇಲ್ಲ...
ಕಳೆದು ಹೋದವು ಆ ದಿನಗಳು...
ಮೊದಲು ಆಡುತ್ತಿದ್ದೆವು ರಸ್ತೆಯಲ್ಲೇ...ಈಗ ಕೋಡಿಂಗ್ ಮಾಡುತ್ತೇವೆ ಲ್ಯಾಪ್ಟಾಪ್ ಜೊತೆ ರಸ್ತೆಯಲ್ಲೇ...
ಕಳೆದು ಹೋದವು ಆ ದಿನಗಳು....
ಮೊದಲು ನಕ್ಷತ್ರಗಳು ಕಾಣಿಸುತ್ತಿದ್ದವು ರಾತ್ರಿಯಲ್ಲಿ....ಈಗ ಕೋಡಿಂಗ್ ಕೆಲಸ ಮಾಡದಿದ್ದರೂ ಕಾಣಿಸುವುದು ಅದೇ ನಕ್ಷತ್ರಗಳು...
ಕಳೆದು ಹೋದವು ಆ ದಿನಗಳು....
ಮೊದಲು ಗೆಳೆಯರ ಜೊತೆ ಹರಟುತ್ತಿದ್ದೆವು ಎಲ್ಲೆಂದರಲ್ಲಿ....ಈಗ ಹರಟುವೆವು ಬರೀ ಚಾಟ್ ರೂಮುಗಳಲ್ಲಿ...
ಕಳೆದು ಹೋದವು ಆ ದಿನಗಳು.....
ಮೊದಲು ಓದುತ್ತಿದ್ದೆವು ಉತ್ತೀರ್ಣರಾಗಲು...ಈಗ ಓದುತ್ತೇವೆ ಕೆಲಸ ಉಳಿಸಿಕೊಳ್ಳಲು...
ಕಳೆದು ಹೋದವು ಆ ದಿನಗಳು.....
ಮೊದಲು ಕಿಸೆಯಲ್ಲಿ ಹಣವಿಲ್ಲದಿದ್ದರು ಮನಸ್ಸು ತುಂಬಾ ಸಂಭ್ರಮದಿಂದಿರುತ್ತಿತ್ತು....ಈಗ ಇದೆ ಎ.ಟಿ.ಎಂ ಹಾಗು ಕ್ರೆಡಿಟ್ ಕಾರ್ಡುಗಳು...ಆದರೆ ಖಾಲಿ ಖಾಲಿ ಮನಸ್ಸುಗಳು...
ಕಳೆದು ಹೋದವು ಆ ದಿನಗಳು....
ಮೊದಲು ಕಿರುಚುತ್ತಿದ್ದೆವು ರಸ್ತೆಯಲ್ಲೇ....ಈಗ ಮನೆಯಲ್ಲೂ ಕಿರುಚುವುದಿಲ್ಲ...
ಇನ್ನು ಕಳೆದುಕೊಂಡಿದ್ದು ಸಾಕು....ಮುಂದೊಂದು ದಿನ ಹೀಗೆ ವ್ಯಥೆ ಪಡುವ ಹಾಗಾಗದಿರಲಿ......ಈಗಲಾದರೂ ಸ್ವಲ್ಪ ಸ್ನೇಹಿತರ ಜೊತೆ, ಕುಟುಂಬದವರ ಜೊತೆ ಸಮಯ ಕಳೆಯಲು ಪ್ರಯತ್ನ ಮಾಡೋಣ...