ಶಂಕರ್ ನಾಗ್: ಒಂದು ನುಡಿ ನಮನ....

ಶಂಕರ್ ನಾಗ್: ಒಂದು ನುಡಿ ನಮನ....

ಬರಹ

ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ... ಇದೇ ದಿನ...


ಅಂದು ಭಾನುವಾರ.., ಸಂಜೆಯ ವಾರ್ತೆಯ ಸಮಯ. ಆ ಸಮಯದಲ್ಲಿ ದೂರದರ್ಶನದ ಹೊರತಾಗಿ ಟಿ.ವಿ ಯ ಬೇರೆ ಮನೋರಂಜನೆ ಇರದಿದ್ದ ಕಾಲ. ವಾರ್ತೆ ನೋಡುತ್ತಿದ್ದ ನಮಗೆ ಕೆಳಗೆ ಸ್ಕ್ರಾಲಿನಲ್ಲಿ ಬಂದ ಸುದ್ದಿ ನಿಜಕ್ಕೂ ಗರಬಡಿಸಿತ್ತು. "ಪ್ರಸಿದ್ದ ಚಿತ್ರನಟ ಶಂಕರ್ ನಾಗ್ ರವರು ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಅಪಘಾತ ದಾವಣಗೆರೆಯ ಅನಾಗೋಡು ಹಳ್ಳಿಯ ಬಳಿ ನೆಡೆದಿದೆ.." ಎಂದು ಸ್ಕ್ರಾಲ್ ಆಗುತ್ತಿತು. ಇಂದು ಸಹ ನೆನಪಿದೆ... ಅಂದು ಬರಬೇಕಿದ್ದ ರಾಜ್ ರವರ ಚಲನ ಚಿತ್ರದ ಬದಲು ನಿಮ್ಮ ಚಿತ್ರ "ಆಟೋ ರಾಜಾ" ಚಿತ್ರವನ್ನ ಹಾಕಿದ್ದರು. ಮಾರನೆಯ ದಿನ "ಸಂಯುಕ್ತ ಕರ್ನಾಟಕ" ದಲ್ಲಿ ನೀವು ಚಲಿಸುತ್ತಿದ್ದ ಕಾರ್ ಅಪಘಾತದಲ್ಲಿ ಮುಂಭಾಗ ಪೂರ್ಣ ಜಜ್ಜಿ ಹೋಗಿದ್ದ ಚಿತ್ರ ನೋಡಿದಾಗ ಕೊನೆಯ ಕ್ಷಣದಲ್ಲಿ ನೀವು ಅದೆಷ್ಟು ನೋವು ಅನುಭವಿಸಿದ್ದೀರಿ ಎಂದು ಮನವು ಮರುಗಿತ್ತು. ನಿಮ್ಮ ಚಿತ್ರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಯ ಅಭಿಮಾನಿ ನಾನು. ಬಹುಶ: ಆ ಕಾಲದಲ್ಲಿ ನಿಮ್ಮಷ್ಟು ಪರಿಣಾಮಕಾರಿಯಾಗಿ ನಟಿಸಿದ ಸಮಕಾಲಿನ ನಟರು ಇನ್ನೊಬ್ಬರು ಇರಲಿಕಿರಲಿಲ್ಲವೇನೋ..!!. ನಿಮ್ಮ ಅಣ್ಣ ಅನಂತ್ ರವರ ಅಭಿನಯದ ಮೋಡಿಯಲ್ಲಿ ಮುಳುಗಿದ್ದ ಜನರಿಗೆ ನಿಮ್ಮ ಮೊದಲನೆ ಚಿತ್ರ "ಒಂದಾನೊಂದು ಕಾಲದಲ್ಲಿ" ದಲ್ಲೇ ಮಿಂಚಿನ ಸಂಚಲನ ಮೂಡಿಸಿದ್ದೀರಿ. ನಂತರ ನೀವು ಇಟ್ಟ ಹೆಜ್ಜೆ ಸಿಂಹ ನೆಡಿಗೆ ಯೆನ್ನಬಹುದು. ಒಂದೇ, ಎರಡೇ... ಚಿತ್ರ ನಿರ್ದೇಶನ, ನಾಟಕ, ನಟನೆ... ಹು:, ಕತ್ತಲಿನಲ್ಲಿ ಹೊಳೆಯುವ ದಿವ್ಯಜ್ಯೋತಿಯಂತೆ ಬೆಳಗಿದ್ದೀರಿ ನೀವು. ೧೨ ವರ್ಷದ ನಿಮ್ಮ ಆ ಪಯಣದಲ್ಲಿ ಕನ್ನಡಿಗರ ಮನದ ಸಾಮ್ರಾಜ್ಯವನ್ನ ಆಳಿಬಿಟ್ಟಿರಿ. ನಿಮ್ಮ ಕಾರಾಟೆ ಸ್ಟಂಟ್ಸ್, ನಿಮ್ಮ ಅಭಿನಯದ ಸ್ಟೈಲ್, ದೈಲಾಗ್ ಡೆಲಿವರಿ, ಗಡಸು ಧ್ವನಿ... ನಿಮ್ಮ ಮ್ಯಾನರಿಸ್ಮ್... ಆ ಕಾಲದ "ಕ್ಲೀನ್ ಶೇವ್ಡ್" ನಟರ ಮುಂದೆ ಒಂದು ಅಪರೂಪವೆನ್ನುವ ಮುಖ ಗುಣ... ಭವಿಷ್ಯದ ಬೆಳಕಾಗಿದ್ದೀರಿ ನೀವು. ಕನ್ನಡದ ಸಿನಿಮಾಕ್ಕಾಗಿ ನಾವು ಚೆನ್ನೈಗೆ ಹೋಗುತ್ತಿದ್ದ ಸಮಯದಲ್ಲಿ ನಿಮ್ಮ "ಸಂಕೇತ್ ಸ್ಟುಡಿಯೋ" ಕರ್ನಾಟಕದಲ್ಲಿ ಅರಂಭವಾಗಿ ಮಾಡಿದ ಕ್ರಾಂತಿ ಕನ್ನಡ ಚಿತ್ರತಂತ್ರಝಾನಕ್ಕೆ ಮುನ್ನುಡಿ. ನಿಮ್ಮ ಸದಾಭಿರುಚಿಯ ಚಿತ್ರಗಳು "ಗೀತಾ", "ಜನ್ಮಜನ್ಮದ ಅನುಬಂಧ", "ಮಿಂಚಿನ ಓಟ"..., ಚಿತ್ರದ ಜೊತೆಯಲ್ಲಿ ಇರುತ್ತಿದ್ದ ಸುಮಧುರ ಸಾಹಿತ್ಯ, ಸಂಗೀತ... ನಿಮ್ಮ ಚಿತ್ರನಿರ್ಮಾಣದ ಕಳಕಳಿಗೆ ಸಾಕ್ಷಿ. "ಜೊತೆಯಲ್ಲಿ...ಜೊತೆಯಲಿ ಇರುವೆನು ಹೀಗೆ ಎಂದೂ..." ೨೯ ವರ್ಷದ ನಂತರವೂ ಈಗಿನ ಜನರ ಬಾಯಲ್ಲಿ, ಮನದಲ್ಲಿ ಅಚ್ಚಳಿಯದೇ ಉಳಿದಿರುವುದೇ ಸಾಕ್ಷಿ.


ನಮ್ಮ ಬಾಲ್ಯದ "ಬುಕ್ ಮಾರ್ಕ್" -- "ಮಾಲ್ಗುಡಿ ಡೇಸ್" ನ ಮರೆಯಲು ಸಾಧ್ಯವುಂಟೇ...?. ಕಲ್ಪನಿಕ ಕಥೆಯನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಪರಿಯಿದೆಯಲ್ಲಾ... ಅದು ನಿಮ್ಮನ್ನು ಬಿಟ್ಟು ಬೇರೆ ಯಾರು ತಾನೇ ಮಾಡಿಯಾರು...!. ಅಷ್ಟೆಲ್ಲಾ ಕನಸ ಹೊತ್ತಿದ್ದ ನೀವು ಅಲ್ಪಸಮಯದಲ್ಲೇ ಬೆಳೆದ ಪರಿಯನ್ನ ನೋಡಿ ಆ ದೇವರೇ ಬೇಸರಪಟ್ಟನೇನೋ...!. ದುರಂತ ಅಂತ್ಯ ಕರುಣಿಸಿಬಿಟ್ಟ ನಿಮಗೆ. ಬದುಕಿದ್ದರೆ ಇಂದು ೫೬ ವರ್ಷದವರಾಗಿರುತ್ತಿದ್ದೀರಿ ನೀವು. ಕಣ್ಣೆದುರಿಗೆ ಇಲ್ಲದಿದ್ದರೆನಂತೆ..., ಅಭಿಮಾನಿಯ ಹೃದಯದಲ್ಲಿ, ಸ್ವಾಭಿಮಾನಿ ಹುಡುಗರ ಆಟೋದಲ್ಲಿ, ರಂಗಶಂಕರದಲ್ಲಿ, ಕನ್ನಡ ಚಿತ್ರದಲ್ಲಿ, ನಿಮ್ಮನ್ನು "ಮಿಮಿಕ್ರಿ" ಮಾಡುವ ಜನರಲ್ಲಿ ಚಿರಕಾಲ ಉಳಿದಿರುತ್ತೀರಿ ನೀವು.


ಬಹುಶ: ನಮಗೆಲ್ಲಾ ಅಶ್ಚರ್ಯ್ವೆನಿಸಬಹುದು, ನಿಮ್ಮ ಸುಂದರ ಬೆಂಗಳೂರಿನ ಮುಂದಾಲೋಚನೆ.., ಹೊರದೇಶದಲೆಲ್ಲೋ ನೋಡಿದ ರೈಲನ್ನ ಇಲ್ಲಿ ಸುರಂಗ ಮಾರ್ಗವಾಗಿ--ಅಂಡರ್ ಗ್ರೌಂಡ್ (ಮೆಟ್ರೋ ಟೈಪ್) ಓಡಿಸುವಂತೆ ಮಾಡಿದ ಪ್ಲಾನ್, ಈ ಡಿಸಂಬರ್ ನಲ್ಲಿ ಚುಕು-ಬುಕು ಎನುವ "ನಮ್ಮ ಮೆಟ್ರೋ" ನೊಡನೆ ನಿಮ್ಮ ಕನಸ್ಸು ಸಾಕಾರವಾಗಬಹುದು.... ಕನ್ನಡ ಚಿತ್ರರಂಗವನ್ನ ಇಂದು ನೀವು ನೋಡಿದ್ದರೆ ಬಹಳ ನೊಂದುಬಿಡುತ್ತಿದ್ದರೇನೋ.. ಏನು ಮಾಡೋದು, ನಾವೆಲ್ಲಾ ನಿಮ್ಮ ಕೌಶಲ್ಯತೆ, ಮಾರ್ಗದರ್ಶನ ಪಡೆಯುವ ಭಾಗ್ಯವೇ ಇರಲ್ಲಿಲ್ಲವೆನಿಸುತ್ತದೆ. ಅಂದು ನೀವು ಆ ಕಾಲದಲ್ಲಿ ಮೂಡಿಸಿದ ಆ ಹೊಸ ಅಲೆ ಬಹುಶ: ಈ ತಲೆಮಾರಿನ ಸಾವಿರಾರು ತಲೆಗಳ ಕೈಯಲ್ಲೂ ಮಾಡಲು ಸಾಧ್ಯವಿಲ್ಲ.


ನೀವೇ ಹೇಳಿದಂತೆ "ನೋಡಿ ಸ್ವಾಮಿ..., ನಾವಿರೋದೇ ಹೀಗೆ...", ನಿಮ್ಮ ಆ "ಸ್ಟೈಲ್", ನಿಮ್ಮಂತೆ ಮತ್ತೆ ಯಾರೂ ಹುಟ್ಟಿಬರಲಾರರೇನೋ...!


ಶಂಕರ್ ನಾಗ್ ಅವರ ಮಧುರ ನೆನಪಿನ ಚಿತ್ರಗಳು ಅವರದೆ ತಾಣದಲ್ಲಿ : http://www.shankarnag.in/gallery.html