ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್

ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್

ಬರಹ

ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್

ಸ್ಟಕ್ಸ್‌ನೆಟ್ ಎನ್ನುವ ಕಂಪ್ಯೂಟರ್ ವರ್ಮ್ ಈಗ ಹಬ್ಬುತ್ತಿದೆ.ಕಂಪ್ಯೂಟರ್ ಜಾಲಗಳಲ್ಲಿರುವ ವಿದ್ಯುತ್ ಸ್ಥಾವರ,ಕಂಪ್ಯೂಟರ್ ನಿಯಂತ್ರಿತ ಸ್ಥಾವರಗಳ ಕೆಲಸವನ್ನು ಕೆಡಿಸುವ ಕೆಲಸವನ್ನದು ಮಾಡಬಲ್ಲುದು.ಇದರ ಮೂಲ ಯಾವುದು ಎನ್ನುವುದು ಇನ್ನೂ ಪತ್ತೆಯಾಗದಿದ್ದರೂ,ಇಂತಹ ಗಂಭೀರ ಅನಾಹುತಗಳಿಗೆ ಕಾರಣವಾಗಬಲ್ಲ ಕಂಪ್ಯೂಟರ್ ವರ್ಮ್,ವ್ಯಕ್ತಿ ಮೂಲವಾಗಿರದೆ,ಯಾವುದಾದರೂ ದೇಶ ಅಥವ ಸಂಸ್ಥೆ ಇದರ ಹಿಂದಿರಬಹುದು ಎನ್ನುವ ಗುಮಾನಿ ತಜ್ಞರದ್ದು.ಸ್ಥಾವರಗಳ ನಿಯಂತ್ರಣವನ್ನು ವರ್ಮ್ ತನ್ನ ಕೈಗೆ ತೆಗೆದುಕೊಂಡಿದ್ದು,ಕಂಪ್ಯೂಟರ್ ಜಾಲಗಳ ನಿರ್ವಾಹಕರುಗಳ ಗಮನಕ್ಕೆ ಬರದಂತೆ ಮಾಡುವುದು ಈ ವರ್ಮಿನ ವಿಶೇಷ.
-----------------------------------------
ಫೇಸ್‌ಬುಕ್ ಸ್ಥಗಿತ
ಕಳೆದ ಬುಧವಾರ ಮತ್ತು ಗುರುವಾರಗಳಂದು ಎರಡು ದಿನ,ಯುವಜನರ ಮೆಚ್ಚಿನ ತಾಣ ಫೇಸ್‌ಬುಕ್ ತೊಂದರೆಗೀಡಾಯಿತು.ಬಳಕೆದಾರರು ತಾಣವನ್ನು ಬಳಸಲು ಸಾಧ್ಯವಾಗದೆ ಹೋಯಿತು.ಗುರುವಾರ ಎರಡೂವರೆ ಗಂಟೆಗಳ ಕಾಲ ತಾಣ ಸಮಸ್ಯೆಯಿಂದ ಬಾಧಿತವಾಗಿ,ಅದರ ಏಳು ದಶಲಕ್ಷದಷ್ಟು ಜನ ಬಳಕೆದಾರರು ತೊಂದರೆ ಅನುಭವಿಸಿದರು.ಕಳೆದ ನಾಲ್ಕು ವರ್ಷಗಳಲ್ಲೇ ಇಷ್ಟು ಹೆಚ್ಚು ಹೊತ್ತು ತಾಣ ತೊಂದರೆಗೀಡಾದ್ದದ್ದು ಇದೇ ಮೊದಲು.ದತ್ತಾಂಶ ನಿರ್ವಹಣೆಯಲ್ಲಿ ಬಳಸಲ್ಪಡುವ ತಂತ್ರಾಂಶದಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣವಿರಬಹುದು ಎಂದು ತರ್ಕಿಸಲಾಗಿದೆ.ಸಣ್ಣ ಸಮಸ್ಯೆಯನ್ನು ಸರಿಪಡಿಸುವ ಯತ್ನದಲ್ಲಿ ದತ್ತಾಂಶ ನಿರ್ವಹಣಾ ತಂತ್ರಾಂಶದ ಮೇಲೆ ಅತೀವ ಒತ್ತಡ ಬಿದ್ದು,ತಾಣವನ್ನು ಸ್ಥಗಿತಗೊಳಿಸಬೇಕಾಯಿತು.ನಂತರ ತೊಂದರೆಯನ್ನು ಪತ್ತೆ ಹಚ್ಚಿ ಸರಿ ಪಡಿಸಿದ ನಂತರವಷ್ಟೇ,ಬಳಕೆದಾರರು ತಾಣಕ್ಕೆ ಬರಲು ಅನುಮತಿಸಬೇಕಾಯಿತು ಎಂದು ಪೇಸ್‌ಬುಕ್ ವಿವರಿಸಿ,ಬಳಕೆದಾರರಿಗಾದ ತೊಂದರೆಗೆ ವಿಷಾದ ಸೂಚಿಸಿತು.
---------------------------------------------
ಚಾಮರಾಜ ಸವಡಿ
ಚಾಮರಾಜ ಸವಡಿಯವರು ಮಾಧ್ಯಮಗಳ ಪರಿಣತ.ಕೊಪ್ಪಳ ಜಿಲ್ಲೆಯ ಅಳವಂಡಿಯವರು.ಸದ್ಯ ಸ್ವ-ಉದ್ಯೋಗ ಮಾಡುತ್ತಿದ್ದಾರೆ.ಪತ್ರಕರ್ತರಾಗಿ ದುಡಿದ ಅನುಭವವೂ ಸಾಕಷ್ಟಿದೆ.ಟಿವಿ ನ್ಯೂಸ್ ಚಾನೆಲ್‌ಗಳಲ್ಲಿಯೂ ಕೆಲಸ ಮಾಡಿರುವ ಚಾಮರಾಜ ಸವಡಿಯವರ ಬರವಣಿಗೆಯಲ್ಲಿ ಆರೋಗ್ಯ,ಮಾನವಿಕ ಸಂಬಂಧಗಳು,ಸಹಜ ಕೃಷಿ,ಅಭಿವೃದ್ಧಿ,ವ್ಯಕ್ತಿತ್ವ ವಿಕಸನ ಮುಂತಾದ ವಿಚಾರಗಳನ್ನು ಕಾಣಬಹುದು.http://matumanikya.blogspot.com ಮತ್ತು http://chamarajsavadi.blogspot.com/ ಇವರ ಬ್ಲಾಗುಗಳು.
-------------------------------------------------
ಟ್ವಿಟರ್ ಸಂದೇಶದ ಮೂಲಕ ಹಣಪಾವತಿ?
ಟ್ವಿಟರ್ ಸಂದೇಶ ಕಳುಹಿಸಿ,ಅದರ ಮೂಲಕ ಸಂದೇಶ ಕಳುಹಿಸಿದಾತನ ಖಾತೆಯಿಂದ,ಸಂದೇಶದಲ್ಲಿ ಹೆಸರು ಸೂಚಿಸಿದ ಬಳಕೆದಾರನ ಪೇಪಾಲ್ ಖಾತೆಗೆ ಹಣಸಂದಾಯ ಮಾಡುವ ನೀಡುವ ಸೋಶಿಯಲ್ ಪೇ ಎನ್ನುವ ಸೇವೆಯನ್ನು ಮಣಿಪಾಲದ ತರುಣ ಇಂಜಿನಿಯರ್ ಕಾರ್ತಿಕ್ ಕಸ್ತೂರಿ ರೂಪಿಸಿದ್ದಾರೆ.ಸೋಶಿಯಲ್‌ಪೇ ಸೇವೆಗೆ ನೋಂದಾಯಿಸಿಕೊಂಡು,ಪೇಪಾಲ್‌ನ ಖಾತೆಯಿಂದ ಪಾವತಿಸಬಹುದಾದ ಗರಿಷ್ಥ ಹಣಪಾವತಿಯ ಮಿತಿ,ಪಾವತಿಯ ಮೇಲಿನ ಸಂಖ್ಯೆಯ ಮಿತಿಯನ್ನು ನಿಗದಿ ಪಡಿಸಿ,ಭದ್ರತೆಯನ್ನೂ ಒದಗಿಸಬಹುದು.ಟ್ವಿಟರ್ ಮತ್ತು ಪೇಪಾಲ್ ತಾಣಗಳು ಒದಗಿಸುವ ತಂತ್ರಾಂಶ ಅಭಿವೃದ್ಧಿ ಪಡಿಸಲು ಒದಗಿಸುವ ಅನುಕೂಲತೆಗಳನ್ನು ಬಳಸಿಕೊಂಡು ಈ ಸೇವೆಯನ್ನು ಅಭಿವೃದ್ಧಿ ಪಡಿಸಲಾಗಿದೆ.ಪೇಪಾಲ್‌ಎಕ್ಸ್ ಡೆವಲಪರ್ಸ್ ಚಾಲೆಂಜ್ ಸ್ಪರ್ಧೆಗೇ ಈ ಸೇವೆಯ ಪ್ರಸ್ತಾವವನ್ನು ಸಲ್ಲಿಸಲಾಗಿದೆ.ಟ್ವಿಟರ್ ಸಂದೇಶದ ಮೂಲಕ ಹಣಪಾವತಿ ಸಾಧ್ಯವಾದರೆ,ಅದೊಂದು ಹೊಸ ಶಕೆಯ ಆರಂಭಿಸಲಿದೆ ಎಂದರೆ ತಪ್ಪಿಲ್ಲ.ಟ್ವಿಟರಿಗೆ ಮೊಬೈಲ್ ಮೂಲಕವೂ ಸಂದೇಶಗಳನ್ನು ರವಾನಿಸಬಹುದಾದ್ದರಿಂದ,ಹಣ ಪಾವತಿಯನ್ನೂ ಮೊಬೈಲ್ ಮೂಲಕವೂ ಮಾಡಬಹುದು.ಫೇಸ್‌ಬುಕ್ ಮೂಲಕವೂ ಇದೇ ರೀತಿ ಪಾವತಿ ಸಂದೇಶಗಳನ್ನು ಮಾಡಬಹುದು.ಹಣ ಪಾವತಿ ಸೌಲಭ್ಯದ ದುರುಪಯೋಗವಾಗದಂತೆ ಇದನ್ನು ನಿರ್ವಹಿಸಲು ಸಾಧ್ಯವಾದರೆ,ಪೇಪಾಲ್ ಈ ಸೇವೆಗೆ ಮಾನ್ಯತೆ ನೀಡುವ ಸಂಭವವಿದೆ.ಹಾಗಾಗುತ್ತದೆಯೇ ಎನ್ನುವುದನ್ನು ಕಾದುನೋಡಬೇಕಷ್ಟೇ.
-------------------------------------------------
ಟ್ವಿಟರ್ ಚಿಲಿಪಿಲಿ
*mouseನ ಬಹುವಚನ mice ಆದರೆ spouseನ ಬಹುವಚನ spice ಅಲ್ಲವೇ?
*ಹುಡುಗರು ಗುಲಾಬಿಯಂತೆ,ಚುಚ್ಚುವ ಮುಳ್ಳಿನ ಬಗ್ಗೆ ಎಚ್ಚರಿಕೆಯಿಂದಿರಬೇಕು.
*ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಕೆಲದೇಶಗಳು ಬಹಿಷ್ಕರಿಸಿದರೆನಂತೆ?,ಭಾರತಕ್ಕೆ ಪದಕಗಳ ಸಂಖ್ಯೆ ಹೆಚ್ಚಾಗುತ್ತದೆ.
----------------------------------------------------
ಓದುಗರ ಪ್ರತಿಕ್ರಿಯೆಗಳು
ಓದುಗ ಶ್ರೀನಿವಾಸ ಬಂಗೋಡಿಯವರು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಬಗೆಗಿನ ಬರಹಕ್ಕೆ ಪ್ರತಿಕ್ರಿಯಿಸಿ,ಬ್ರೌಸರಿನ ಹೊಸ ಆವೃತ್ತಿ ಇನ್ನೂ ಬೀಟಾ ಹಂತದಲ್ಲಿದೆ.ಅದು ವಿಂಡೋಸ್7 ಮತ್ತು ವಿಂಡೋಸ್ ವಿಸ್ತಾಗಳಿಗೆ ಮಾತ್ರಾ ಲಭ್ಯವಿದೆ ಎಂದು ತಿಳಿಸಿದ್ದಾರೆ.ಗೂಗಲ್ ದಿಡೀರ್ ಶೋಧ ಸೇವೆ ಈಗ ಭಾರತದಲ್ಲೂ ಲಭ್ಯವಿರುವ ಬಗ್ಗೆ ವಾಸುದೇವ ಕಾಮತ್ ಮತ್ತು ಪ್ರಸನ್ನ ಶಂಕರಪುರ ಅವರುಗಳು ಓದುಗರ ಗಮನ ಸೆಳೆದಿದ್ದಾರೆ.ಗೋವರ್ಧನ್ ಹೆಗ್ಡೆಯವರು ವಿಡಿಯೋಗಿರ್ಮಿಟ್.ಕಾಮ್ videogirmit.com ತಾಣದಲ್ಲಿ ಕನ್ನಡದ ಟಿವಿ ಸೀರಿಯಲುಗಳ ಹಳೆಯ ಕಂತುಗಳನ್ನು ನೋಡಬಹುದು ಎನ್ನುವ ಮಾಹಿತಿ ನೀಡಿದ್ದಾರೆ.
------------------------------------------------------------
ಮರಣ ಸಂದೇಶ
ವಾಹನ ಚಲಾಯಿಸುವಾಗ ಮೊಬೈಲ್ ಕಿರು ಸಂದೇಶಗಳನ್ನು ರವಾನಿಸಿ ಅಪಘಾತಗಳು ಸಂಭವಿಸುವುದಿದೆ.ಇಂತಹ ಅಪಘಾತಗಳಿಂದ ಹದಿನಾರು ಸಾವಿರಕ್ಕೂ ಅಧಿಕ ಜನರು ಪ್ರಾಣತೆತ್ತಿದ್ದಾರೆ ಎಂದು ಉತ್ತರ ಟೆಕ್ಸಾಸ್‌ನ ಸಂಶೋಧಕರು ಅಂದಾಜು ಮಾಡಿದ್ದಾರೆ.2002-2007ರ ನಡುವಣ ಅಪಘಾತಗಳ ವಿಶ್ಲೇಷಣೆಯಿಂದ ಇದು ಶ್ರುತ ಪಟ್ಟಿದೆ.ಕಿರು ಸಂದೇಶಗಳ ಕಾರಣದಿಂದ ಈ ಐದು ವರ್ಷಗಳಲ್ಲಿ ಸರಾಸರಿ 4600 ಜನರು ಸತ್ತ್ತಿದ್ದಾದ್ದಾರೆ.ಒಂದು ವೇಳೆ ಕಿರುಸಂದೇಶಗಳ ಹಾವಳಿ ಇಲ್ಲವಾದರೆ,ಇದರ ಅರೆವಾಸಿ ಜನರು ಸಾಯುತ್ತಿದ್ದರು ಎಂದು ಅವರ ಲೆಕ್ಕಾಚಾರ.ಅಮೆರಿಕಾದಲ್ಲಿ ಶೇಕಡಾ ತೊಂಭತ್ತೊಂದು ಜನರು ಮೊಬೈಲ್ ಫೋನ್ ಬಳಸುತ್ತಿದ್ದಾರೆ.ದಶಕದ ಹಿಂದೆ ಇದು ಶೇಕಡಾ ಮೂವತ್ತು ಇತ್ತು.ವಾಹನ ಚಲಾಯಿಸುವಾಗ ಗಮನ ಬೇರೆಡೆ ಹೋಗಿ ಅಪಘಾತ ಸಂಭವಿಸುವ ಪ್ರಮಾಣ ಶೇಕಡಾ ಹನ್ನೊಂದರಿಂದ ಹದಿನಾರಕ್ಕೆ ಏರಿದೆ.ಇದರಲ್ಲಿ ಮೊಬೈಲ್ ಫೋನ್‍ಗಳ ಪಾತ್ರವೇ ಹಿರಿದು.

Udayavani Unicode
Udayavani
*ಅಶೋಕ್‌ಕುಮಾರ್ ಎ