ಇಬ್ಬಗೆ

ಇಬ್ಬಗೆ

ಬರಹ

ಇಬ್ಬಗೆ


------


 


ನನ್ನ ಪಕ್ಕ ಕೂತಿದ್ದವನ ಮುಖದಲ್ಲಿ ಬೆವರಿನ ಸೆಲೆಗಳೊಡೆಯುತ್ತಿದ್ದವು. ನಾನು "ಮಾದೇಶ್, ಎ.ಸಿ ಆನ್ ಮಾಡು" ಎಂದಾಗ ಆತ ನನ್ನನ್ನು ನೋಡಿ ಕಿಟಕಿಯ ಕಡೆ ಮುಖ ಮಾಡಿ ಮೌನಿಯಾದ. ಮಾದೇಶ ಎ.ಸಿ ಆನ್ ಮಾಡಿದ. ಬೆವರಿಂಗಲು ಹತ್ತು ನಿಮಿಷ ಹಿಡಿಯಿತು.


 


ಕಾರು ಸಾಗುತ್ತಿತ್ತು. ಮಾದೇಶ ಏ.ಸಿ ಆಫ಼್ ಮಾಡಿ ಅರ್ಧ ಗಂಟೆ ಆಗಿತ್ತು. ಬೆವರಿನ ಸೆಲೆಗಾಗಿ ನಾನು ಪಕ್ಕದವನ ಮುಖ ಹುಡುಕಿದೆ. ಸಿಗಲಿಲ್ಲ. ಇದ್ದಕ್ಕಿದ್ದಂತೆ ಆತ ಕಾರ್ ನಿಲ್ಲಿಸುವಂತೆ ಕೈಸನ್ನೆ ಮಾಡಿದ. ನಾನು ಹೊರಗೆ ನೋಡಿದೆ. ಶಿರಾಡಿ ಘಾಟಿಯ ನಡುವೆ ಎಲ್ಲೋ. ಕಾರಿನಿಂದ ಇಳಿದವನೇ, ಹಿಂದಿನ ದಿಕ್ಕಿನಲ್ಲಿ ಓಡಲು ಶುರು ಮಾಡಿದ. ನಾನು ಓಡಿದೆ. ಎರಡು ನಿಮಿಷ ಓಡಿ, ಪಕ್ಕೆ ಹಿಡಿದುಕೊಂಡು ನಿಂತು ಏದುತ್ತಿದ್ದ. ನಾನೂ ನನ್ನ ಹೊಟ್ಟೆ ಹಿಡಿದುಕೊಂಡು ಅವನ ಮುಂದೆ ನಿಂತೆ. ಆಕಾಶ ನೋಡುತ್ತ ಕಣ್ಣು ಮುಚ್ಚಿಕೊಂಡು ಕಾರ್ ಕಡೆಗೆ ಬಿಸಿಲಿನಲ್ಲಿ ಹೊಳೆಯುತ್ತಿದ್ದ ಹೊಸ ಡಾಂಬರಿನ ವಾಸನೆ ಮೂಸುತ್ತ ನಡೆದ.


 


ಹಾಸನದ ಹತ್ತಿರ ಕಾಮತ್ ನಲ್ಲಿ, ಲೆದರ್ ಕೇಸನ್ನು ನನ್ನ ಕೈಯಲ್ಲಿಟ್ಟು ನನ್ನ ಮುಖ ನೋಡಿದ. ನಾನು ಅವನ ಮುಖ ನೋಡುತ್ತ, ಅದನ್ನು ತೆರೆದೆ. ಅದರಲ್ಲಿದ್ದ ಹತ್ತಾರು ಡಾಲರ್ ನೋಟುಗಳ ಕಟ್ಟುಗಳನ್ನು ನೋಡುತ್ತಿದ್ದಂತೇ ಗಬಕ್ಕನೆ ಕಿತ್ತುಕೊಂಡು, ಕೇಸನ್ನು ಮುಚ್ಚಿ ಕಾರ್ ಒಳಗೆ ಹೋಗಿ ಕುಳಿತ. ಕುಳಿತು ಮುಖ ಮುಚ್ಚಿ ಬಿಕ್ಕತೊಡಗಿದ. ನಾನು ಮಾದೇಶನಿಗೆ ಹೇಳಿ ಒಂದು ಎಳನೀರು ಕೊಚ್ಚಿಸಿಕೊಂಡು ಕೊಟ್ಟೆ. ಗಟ ಗಟ ಕುಡಿದು, ದುಮುಗುಟ್ಟುತ್ತ ಹಿಂದಿನ ಸೀಟಿನಲ್ಲಿ ಒರಗಿ ನಿದ್ದೆ ಮಾಡಿದ. ಪಕ್ಕದಲ್ಲಿದ್ದ ಲೆದರ್ ಕೇಸಿನ ಮೇಲೆ ಅವನ ಕಣ್ಣೀರು ಹರಿದು ಕಾರಿನ ಸೀಟನ್ನು ತೋಯಿಸಿತ್ತು. ನಾನು ಬೀಡಿ ಹಚ್ಚಿ ಕುಳಿತೆ. ಮಾದೇಶನಿಗೆ ಅವನ ಗೆಳತಿ ಫ಼ೋನೆ ಮಾಡಿದ್ದರಿಂದ ಮತ್ತೆ ರಸ್ತೆಗಿಳಿಯಲು ಅರ್ಧ ಘಂಟೆ ತಡವಾಯಿತು. ಬೀಡಿಹೊಗೆಯ ಘಾಟಿಗೆ ಪಕ್ಕದವ ಎಚ್ಚರವಾದ. ಭಯಂಕರವಾಗಿ ಕೆಮ್ಮುತ್ತ ಏದುಸಿರು ಬಿಡುತ್ತ, ನನ್ನ ಕಪಾಳಕ್ಕೊಂದು ಬಿಗಿದ. ನಾನು ಅವನ ಕಡೆ ಕ್ರೂರವಾಗಿ ನೋಡಿ ಅರ್ಧ ಉರಿದಿದ್ದ ಬೀಡಿಯನ್ನು ಆಚೆಗೆಸೆದೆ. ಬೀಡಿಹೊಗೆ ಕಾರ್ ಒಳಗೆ ಸುತ್ತುಗಟ್ಟಿಕೊಂಡಿತ್ತು.


 


ಬೇಲೂರಿಗೆ ಬಂದು ತಲುಪಿದಾಗ ಮಾದೇಶ ನನ್ನ ಕೈಗೆ ಕಾರ್ ಒಪ್ಪಿಸಿ, ತಾರ್ಚ್ ಹಿಡಿದು, ಓಣಿಯೊಂದರಲ್ಲಿ ನುಸುಳಿದ. ನಾನು ಊರೊಳಕ್ಕೆ ಹೋಗಿ, ರೂಮ್ ಬುಕ್ ಮಾಡಿ ಆಸಾಮಿಯನ್ನು ಸೇರಿಸಿ, ಕಾರ್ ಒಳಗೆ ಬಂದು ಮಲಗಿದೆ. ಲೆದರ್ ಕೇಸು ಕಾರ್ ಒಳಗೇ ಇತ್ತು. ತಲೆ ಕೆರೆದುಕೊಂಡು ಕಾರನ್ನು ಹೆಚ್ಚು ಬೆಳಕಿಲ್ಲದಲ್ಲಿ ನಿಲ್ಲಿಸಿ, ಹೊಟೆಲ್ ಒಂದರಲ್ಲಿ ಊಟ ಮಾಡಿ ಬಂದು, ಕಾರ್ ಒಳಗೇ ಒರಗಿ ಮಲಗಿದೆ.


 


ಬೆಳಿಗ್ಗೆ ಎಚ್ಚರಾದಾಗ ಬೆವರಿನಿಂದ ತೊಯ್ದು ತೊಪ್ಪೆಯಾದದ್ದು ಅರಿವಾಯಿತು. ಎಚ್ಚೆತ್ತು ನೋಡಿದರೆ, ಕಾರಿನ ಹಿಂಬದಿಯ ಕಿಟಕಿಯ ಗಾಜು ಪುಡಿಯಾಗಿ ಮುಂದಿನ ಸೀಟಿನಲ್ಲಿ ಬಿದ್ದಿರುವುದು ಗೊತ್ತಾಯಿತು. ಕಾರ್ ಮುಂದೆ ಆಸಾಮಿ ಲೆದರ್ ಕೇಸನ್ನು ಹಿಡಿದು, ಕಾಲಗಲಿಸಿ ನಿಂತು ನನ್ನನ್ನೇ ನೋಡುತ್ತಿದ್ದ. ಒಂದೇ ದಿನದಲ್ಲಿ ಅವನ ಬಿಳೀ ಮೋರೆಯ ಮೇಲೆ ಕಪ್ಪನೆ ಗಡ್ಡ ಕಪ್ಪಗೆ ಕಾಣುವಷ್ಟು ಬೆಳೆದಿತ್ತು. ಸೂರ್ಯ ಕೋನವೊಂದರಿಂದ ಹಣೆಗೆ ಬಾರಿಸುತ್ತಿದ್ದ. ಕಣ್ಣು ಬಿಟ್ಟು ಪಂಚೆ ಸರಿಮಾಡಿಕೊಂಡು, ಇಳಿದು ಒಡೆದ ಕಿಟಕಿಯ ಕಡೆ ನೋಡಿದೆ.


 


ಮಾದೇಶ ಸುಮಾರು ಒಂದು ಘಂಟೆಯ ನಂತರ ಬಂದ. ಮುಖ ದಿಗಿಲುಗಟ್ಟಿತ್ತು. ಮುಖದ ಮೊಡವೆ ಕಜ್ಜಿ ಸಿಡುಬುಗಳೆಲ್ಲ ಆಳವಾದಂತೆ ಕಾಣಿಸುತ್ತಿದ್ದವು. "ರಿಪೋಲ್ಟ್ ಬತ್ತು...ಅಣ್ಣ ಏಡ್ಸು" ಎಂದು ಕಾರ್ ಚಾಲನೆ ಮಾಡಿದ. ನಾನು ಮುಂದೆ ಕೂತೆ. ಆಸಾಮಿ ಘಮ್ಮನೆ ಕ್ರೀಮ್ ಪೂಸಿಕೊಂಡಿದ್ದ. ಗೆಲುವಾಗಿದ್ದ.


 


ಕಾರು ಗುಂಡಿ ಗೊಟರುಗಳ ಎದುರು ಸೆಣಸಾಡುತ್ತ ಧೂಳೆಬ್ಬಿಸುತ್ತಿತ್ತು.


 


"ನೀನು ನಾಲಾಯಖ್ಖು" ಎಂದ ಹಿಂದೆ, ಗೆಲುವಾಗಿ.


"ಒಂದು ದಿನದ ಕೆಲಸ ಅಲ್ಲ ಇದು"


"ಆದ್ರೂ ನೀನು ನಾಲಾಯಖ್ಖು"


"ನಿಮಗೆ ಇಲ್ಲಿ ಏನೂ ಗೊತ್ತಿಲ್ಲ"


"ಸರಿ..ಆದರೂ ನೀನು ನಾಲಾಯಖ್ಖೇ".


 


 ಮತ್ತೆ ಒಂದು ಘಂಟೆ ಮೌನ. ಹಾಸನದ ಮೇಲೆ ಹೊಳೆನರಸೀಪುರದ ಹತ್ತಿರ ಕಾರ್ ನಿಲ್ಲಿಸಿ, ದೂರದಲ್ಲಿ ಕಾಣಿಸುತ್ತಿದ್ದ ಗೊಮ್ಮಟೇಶನ ವಿಗ್ರಹದ ತಲೆಯಂಥದ್ದನ್ನು ಕಣ್ಣು ಕೀಸಿ, ನೋಡುತ್ತ ಒಂದು ಘಂಟೆ ನಿಂತ. ಮಾದೇಶನ ನೆರೆಗೂದಲಿಂದ ಬಿದ್ದ ಹೇನೊಂದು ಕಾರಿನ ಸಂಧಿಯಲ್ಲಿ ತಪ್ಪಿಸಿಕೊಂಡದ್ದು ಕಾಣಿಸಿತು. ಹೊರಗೆ ಬಂದು ಬೀಡಿ ಹಚ್ಚಿದೆ.


 


ಒಳಗಿಂದ ತಲೆ ಹೊರಹಾಕಿ, ಬಿಸಿಲಿಗೆ ಮುಖಕೊಟ್ಟು, ಕಣ್ಣು ಮುಚ್ಚಿ, "ಅಣ್ಣ ಏಡ್ಸು" ಎಂದ.


"ಮಜಾ ಮಾಡು".


ಹಲ್ಲುಬಿಟ್ಟು ನಕ್ಕು, ಹೊರಗೆ ಹೋಗಿ, ಗದ್ದೆಗಳ ಕಡೆ ತಿರುಗಿಕೊಂಡು ಉಚ್ಚೆ ಹೊಯ್ಯತೊಡಗಿದ.


 


ಆಸಾಮಿ ಲೆದರ್ ಕೇಸನ್ನು ಎದೆಗವುಚಿಕೊಂಡು ಕುಳಿತ. ಮುಖ ಬಾಡಿತ್ತು.


 


ಕಾರು ಮತ್ತೆ ಓಡ ತೊಡಗಿತು. ಬೆಳಗೊಳದ ಬೆಟ್ಟ ಹತ್ತುತ್ತ ಆಸಾಮಿ ಅಳುತ್ತ ಇದ್ದ. ಮಾದೇಶ ಬರಲಿಲ್ಲ. ಕಾರೊಳಗೇ ಮಲಗಿಕೊಂಡು ಬಿಸಿಲು ನೊಣಗಳಿಂದ ತಪ್ಪಿಸಿಕೊಳ್ಳಲು ಪರದಾಡುವಂತಿದ್ದ. ನನ್ನ ಹೊಟ್ಟೆ ಹೊತ್ತುಕೊಂಡು ತಡೆತಡೆದು, ಏದುತ್ತ ಏರುತ್ತಿದ್ದೆ. ಆಸಾಮಿ ಲೆದರ್ ಕೇಸನ್ನು ಬುಟ್ಟಿಯಂತೆ ತಲೆಯ ಮೇಲೆ ಹೊತ್ತುಕೊಂಡು ನಡೆದ.


 


ಮೇಲೆ, ಗಾಳಿಗಾಗಿ ಜಾರು ಬಂಡೆಯ ಮೇಲೆ ಕುಳಿತು ಮೌನವಾಗಿದ್ದೆವು.


"ನೀನು ದಡ್ಡನೋ ಬುದ್ಧಿವಂತನೊ?" ಕೇಳಿದ.


ಗೊಂದಲಗೊಂಡು ನಿಧಾನಿಸಿ ಹೇಳಿದೆ. "ನಾನು ಬ್ರಾಹ್ಮಣ"


ಪೆಚ್ಚಾಗಿ ನಕ್ಕು ಸುಮ್ಮನಾದಂತೆ ಕಂಡಿತು. ಎದ್ದು ನನ್ನನ್ನು ತನ್ನ ಜೊತೆ ಬರದಂತೆ ಕೈಸನ್ನೆ ಮಾಡಿ ದೇವಾಲಯದ ಸುತ್ತ ಸುತ್ತಲು ಹೋದ. ನಾನು ಇಂದ್ರಗಿರಿ ನೋಡುತ್ತ ಬಿಸಿಲಿನಲ್ಲಿ ಗಾಳಿಗಾಗಿ ಕಾಯುತ್ತ ಕುಳಿತೆ.


 


ಅರ್ಧ ಘಂಟೆಯ ನಂತರ ಗೊಮ್ಮಟೇಶನನ್ನು ನೋಡೋಣ ಎನಿಸಿ ಎದ್ದೆ. ಆಸಾಮಿ ಇಳಿದು ಬರುತ್ತಿದ್ದ. ಗೆಲುವಾಗಿಗಿದ್ದಂತೆ ಕಂಡ. ಹತ್ತಿರ ಬಂದು


 


"ನಡಿ ಹೋಗಿ ಊಟ ಮಾಡೋಣ. ಹೊಟ್ಟೆ ಹಸೀತಿದೆ." ಎಂದು ಹೇಳಿದ. ನಾನು ಮಾತಾಡಲಿಲ್ಲ. ಎರಡೂ ಹುಬ್ಬುಗಳನ್ನು ಹಾರಿಸುತ್ತ ಮುಗುಳ್ನಕ್ಕು, ದಡ ದಡನೆ ಬೆಟ್ಟ ಇಳಿಯಲು ತಯಾರಾದ.


 


ನಾನು ನಿಂತುಕೊಂಡೇ ಅವನ ಎತ್ತರದ ಆಕೃತಿಯನ್ನು ನೋಡುತ್ತ ಗೊಂದಲಗೊಂಡೆ. ಅವನ ಕೈಯಲ್ಲಿ ಲೆದರ್ ಕೇಸ್ ಇರಲಿಲ್ಲ. ಹೊರಗಿನ ಬೆವರನ್ನು ಮೀರಿಸಿದ ಒಳಗಿನ ಬೆವರಿನ ಮೇಲೆ ಇದ್ದಿಕ್ಕಿದ್ದಂತೆ ತಂಗಾಳಿಯ ಒಂದು ಬೀಸು ಬೀಸಿದಂತಾಯಿತು.


 


ಇಳಿದಾಗ, ಮಾದೇಶ ಕಾರ್ ಒರೆಸುತ್ತಿದ್ದ. ಆಸಾಮಿ ಬಾನೆಟ್ ಮೇಲೆ ಕುಳಿತು ಗಾಳಿಯಲ್ಲಿ ಗಿಟಾರ್ ಬಾರಿಸುತ್ತ ಗುನುಗಿಕೊಳ್ಳುತ್ತಿದ್ದ. ಸೂರ್ಯ ನೆತ್ತಿಯ ಮೇಲಿದ್ದ. ನನ್ನ ಮೈ ಬಿಸಿಲಿನಲ್ಲಿ ಶೀಘ್ರವಾಗಿ ಕಪ್ಪಗಾಗಿಬಿಡಬಹುದೆಂದು ಅಂಜಿಕೆಯಾಗಿ ಕಾರ್ ಒಳಗೆ ಬಂದು ಕುಳಿತೆ.


 


                                                                                                              ರವಿಶಂಕರ