ಕರ್ನಾಟಕ ಕುಲಪುರೋಹಿತರ ಆತ್ಮಚರಿತ್ರೆಯಿಂದ - ಭಾಗ ೧
(ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ 'ನನ್ನ ಜೀವನಸ್ಮೃತಿಗಳು' ಪುಸ್ತಕದಿಂದ ಆಯ್ದ ಕೆಲವು ಕುತೂಹಲಕರ ಭಾಗಗಳು )
ನನ್ನಂತೆಯೇ ನನ್ನ ಸರಿ ಜೋಡಿಯ ಅನೇಕ ವಿದ್ಯಾರ್ಥಿಗಳು ಇದ್ದರು . ಅವರಲ್ಲಿ ಯಾರೂ ಆಗಿನ ಕಾಲಕ್ಕೆ ನನ್ನಂತೆ ಕರ್ನಾಟಕದ ಸೇವೆಯನ್ನು ಮಾಡುವದಕ್ಕೆ ಧೃಡ ಸಂಕಲ್ಪ ಮಾಡಿ ಮುಂದೆ ಬರಲಿಲ್ಲ . ಅದಕ್ಕೇನು ಕಾರಣ ? ನನ್ನ ಮೇಲೆಯೇ ಗೃಹ ಸಂಸ್ಕಾರಗಳೂ ಬಾಹ್ಯಸಂಸ್ಕಾರಗಳೂ ಅಷ್ಟೇಕೆ ಬಲವಾದ ಪರಿಣಾಮವನ್ನುಂಟುಮಾಡಿದವು? ಎಂಬ ಪ್ರಶ್ನೆಗಳಿಗೆ ಉತ್ತರಕೊಡುವದು ಕಠಿಣ. ಆ ಸಂಸ್ಕಾರ ಬೀಜಗಳು ಫಲಿತವಾಗುವದಕ್ಕೆ ಬೇಕಾಗುವ ಯೋಗ್ಯ ಭೂಮಿಯು ನನ್ನ ದೇಹವಾಗಿರಬೇಕೆಂಬುದಷ್ಟೇ ಉತ್ತರವನ್ನು ನಾನು ಕೊಡಬಲ್ಲೆನಲ್ಲದೆ , ಹೆಚ್ಚಿನ ಉತ್ತರ ಕೊಡಲಾರೆ. ಅದು ನನ್ನ ಹಿಂದಿನ ಜನ್ಮದ ಪುಣ್ಯವೆಂದೇ ಅನ್ನಬೇಕು. ಗೃಹಸಂಸ್ಕಾರ , ಸಾರ್ವಜನಿಕ ಸಂಸ್ಕಾರ , ಇವುಗಳ ಜೊತೆಗೆ ಅನುಕೂಲ ವಾತಾವರಣ ಮತ್ತು ಪ್ರಾರಬ್ಧ ಕರ್ಮದ ಮೂಲಕ ಪ್ರಾಪ್ತವಾದ ಯೋಗ್ಯಭೂಮಿ ಇವೇ ಮುಂತಾದವೆಲ್ಲವೂ ಕೂಡಿದರೆ ಮಾತ್ರವೇ ಮನುಷ್ಯನಿಗೆ ತನ್ನ ಜೀವಿತವನ್ನು ಯಾವುದೊಂದು ಧ್ಯೇಯಕ್ಕೆ ಅರ್ಪಿಸುವ ಪುಣ್ಯವು ಪ್ರಾಪ್ತವಾಗುತ್ತದೆ. ನನ್ನ ಜೀವನದಲ್ಲಿ ೧೯೦೫-೦೬ನೇ ಸುಮಾರಿಗೆ ಆ ತರಹದ ಸಂಯೋಗವುಂಟಾಯಿತು. ಅಂತಲೇ ನನ್ನಂಥ ಅಲ್ಪನಿಗೂ ನನ್ನ ಯೋಗ್ಯತೆ ಮೀರಿ ಹತ್ತುಪಟ್ಟು ಕಾರ್ಯಮಾಡುವದು ಸಾಧ್ಯವಾಯಿತು. ನಾನೇನೂ ಅಲೌಕಿಕ ಪುರುಷನೇನೂ ಅಲ್ಲ . ಮಹಾವಿಭೂತಿಯಲ್ಲಿ ಇರುವಂಥ ಯಾವುದೊಂದು ಗುಣವೂ ನನ್ನಲ್ಲಿ ಇಲ್ಲ . ಅಸಾಮಾನ್ಯದ ಬುದ್ಧಿಮತ್ತೆ ನನ್ನಲ್ಲಿ ಇಲ್ಲ , ಅದ್ಭುತವಾದ ಕ್ರಿಯಾಶಕ್ತಿಯುಳ್ಳವನು ನಾನಲ್ಲ. ಅಪ್ರತಿಮ ಯೋಗಶಕ್ತಿಯೂ ಕೂಡ ನನ್ನಲ್ಲಿ ಇಲ್ಲ . ಆದರೆ ಕರ್ನಾಟಕದ ಯಾವತ್ತೂ ಬಗೆಯ ಚಟುವಟಿಕೆಗಳ ದೃಷ್ಟಿಯಿಂದ , ನನ್ನ ಸುದೈವದ ಮೂಲಕ ನನ್ನ ಜೀವನಕ್ಕೆ ಒಂದು ವಿಶಿಷ್ಟಸ್ಥಾನವು ನನಗೆ ಕೂಡ ತಿಳಿಯದಂತೆ ಪ್ರಾಪ್ತವಾಗಿದೆ.
........
ಆಗ ರಾಜಕಾರಣದಲ್ಲಿ ಸಂಪೂರ್ಣ ಕತ್ತಲು , ವಾಙ್ಮಯದ ಜೀವನವು ನಿರ್ಜೀವ ಜೀವನವು ; ಸಾರ್ವಜನಿಕ ಜೀವನವು ನಿಸ್ಸಾರ ಜೀವನವು ; ಕರ್ನಾಟಕತ್ವದ ಕಲ್ಪನೆ ಯಾರ ಕನಸು ಮನಸಿನಲ್ಲೂ ಸ್ಪಷ್ಟವಾಗಿ ಮೂಡಿದ್ದಿಲ್ಲ . ಇಂಥ ಪರಿಸ್ಥಿತಿಯಲ್ಲಿ ನಾನು ಕರ್ನಾಟಕಕ್ಕೆ ಬಂದುದು. ಮೊದಲಿಗೆ ದೇಶಸೇವೆಗಾಗಿ ನಾನು ಧಾರವಾಡಕ್ಕೆ ಬಂದವನಲ್ಲ . ಹೊಟ್ಟೆ ಹೊರಕೊಳ್ಳಲು ನಾನು ಇಲ್ಲಿಗೆ ಬಂದವನಲ್ಲ. ಆಗ ನನ್ನಲ್ಲಿ ಉದಾತ್ತವಾದ ನಿಶ್ಚಿತ ಧ್ಯೇಯಗಳಿರಲಿಲ್ಲ; ಉಜ್ವಲವಾದ ದೇಶಭಕ್ತಿ ಇರಲಿಲ್ಲ ; ನಿಸ್ಸೀಮವಾದ ಸ್ವಾರ್ಥತ್ಯಾಗ ಮಾಡಬೇಕೆಂಬ ಉತ್ಕಟ ಇಚ್ಛೆ ಇರಲಿಲ್ಲ. ಆಗಿನ ನನ್ನ ಭಂಡವಲ ಎಂದರೆ , ನನ್ನ ಆತ್ಮದ ಮೂಲಶಕ್ತಿ ಮತ್ತು ಆ ಮೂಲಶಕ್ತಿಗೆ ನನ್ನ ಗೃಹಸಂಸ್ಕಾರ ಮತ್ತು ಬಾಹ್ಯ ಸಂಸ್ಕಾರಗಳಿಂದ ದೊರೆತ ಅಸ್ಪಷ್ಟವಾದ ಪುಷ್ಟಿ. ಇವೇ ಮುಂದೆ ನನ್ನ ಇಡೀ ಜೀವನಕ್ರಮವನ್ನು ಬೇರೊಂದು ದಿಸೆಗೆ ಹಚ್ಚಲಿಕ್ಕೆ ಹೇಗೆ ಕಾರಣೀಭೂತವಾದವೆಂಬುದರ ಇತಿಹಾಸವು ಮನೋರಂಜಕವೂ ಭೋದಪ್ರದವೂ ಆಗಿದೆ. ಅದನ್ನು ಮುಂದಿನ ಪ್ರಕರಣದಲ್ಲಿ ನೋಡೋಣ.
(ಮುಂದುವರಿಯುವುದು)
Comments
Re: ಕರ್ನಾಟಕ ಕುಲಪುರೋಹಿತರ ಆತ್ಮಚರಿತ್ರೆಯಿಂದ - ಭಾಗ ೧