ಶೀರ್ಷಿಕೋಪಾಖ್ಯಾನ! ಒಂದು ತಲೆಹರಟೆ
ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ ಗಮನಿಸಿ ಈ ಶೀರ್ಷಿಕೋಪಾಖ್ಯಾನ ಬರೆಯುತ್ತಿದ್ದೇನೆ, ಓದಿ ಆನಂದಿಸಿ.
ಪದ್ಧತಿ ಪಾಲಿಸುವ ಪತ್ರಿಕೆಯಾದ ಪ್ರಜಾವಾಣಿಯು, 'ಅಯೋಧ್ಯೆ : ಮೂರು ಪಾಲು' ಎಂಬ ಶೀರ್ಷಿಕೆ ನೀಡುವ ಮೂಲಕ ನೇರವಾಗಿ ವಿಷಯ ತಿಳಿಸುವ ತನ್ನ ಪದ್ಧತಿಯನ್ನು ಪಾಲಿಸಿದೆ. ಆದರೆ, ಇಡೀ ಅಯೋಧ್ಯೆ ಪಟ್ಟಣವೇ ಮೂರು ಪಾಲಾಗಬೇಕೆಂಬ ಅಪಾರ್ಥಕ್ಕೂ ಈ ಶೀರ್ಷಿಕೆ ಎಡೆಮಾಡಿಕೊಡುತ್ತದೆ!
ಕನ್ನಡ ಪ್ರಭವು, '೩ ಭಾಗ; ಭಾವೈಕ್ಯತೆಗೆ ಪಂಚಾಂಗ' ಎಂದು ತಲೆಬರಹ ನೀಡುವ ಮೂಲಕ ತನ್ನ ಭಾವೈಕ್ಯೋದ್ದೇಶವನ್ನು ಪ್ರಚುರಪಡಿಸಿದೆ.
ಉದಯವಾಣಿಯು, ತನ್ನ ಬೇರೆ ಬೇರೆ ಆವೃತ್ತಿಗಳಲ್ಲಿ, 'ಜೈ ಜನ್ಮಭೂಮಿ' ಎಂಬ ಆಕರ್ಷಕ ಶೀರ್ಷಿಕೆಯನ್ನೂ ಮತ್ತು 'ರಾಮಜನ್ಮಸ್ಥಾನ' ಎಂಬ, ಅರ್ಥಪೂರ್ಣವೆಂದುಕೊಂಡ, ಆದರೆ ಅತಿಸಾಮಾನ್ಯ ಶೀರ್ಷಿಕೆಯನ್ನೂ ನೀಡಿದೆ.
ಹೊಸತನದ ಹಂಬಲದ ವಿಜಯ ಕರ್ನಾಟಕವು, 'ರಾಮ ರಹೀಮ ನಿರ್ಮೋಹಿ' ಎಂದು ಹೊಸಬಗೆಯ, ಆದರೆ, ಅನಾಕರ್ಷಕ ತಲೆಬರಹ ನೀಡಿದೆ.
ವೈದಿಕ ಛಾಪಿನ ಪತ್ರಿಕೆಯಾದ ಸಂಯುಕ್ತ ಕರ್ನಾಟಕವು, 'ಶ್ರೀ ರಾಮ ಜಯಂ' ಎಂದು ಮಂತ್ರೋಪಮ ಶೀರ್ಷಿಕೆಯನ್ನೇನೋ ನೀಡಿದೆ, ಆದರೆ, 'ಹೇ ರಾಂ' ಎಂದು ಅದಕ್ಕೊಂದು ಹಿಂಬಾಲ ಸೇರಿಸಿ ವಿಪರೀತಾರ್ಥಕ್ಕೆ ಅವಕಾಶ ಮಾಡಿಕೊಟ್ಟಿದೆ!
ಹೊಸ ದಿಗಂತವು, 'ಜೈಶ್ರೀರಾಮ್' ಎಂದು ತನ್ನ ಧ್ಯೇಯಕ್ಕೆ ತಕ್ಕುದಾದ ಮತ್ತು ಅರ್ಥಗರ್ಭಿತ ಶೀರ್ಷಿಕೆ ನೀಡಿದೆಯಲ್ಲದೆ, ಉಪಶೀರ್ಷಿಕೆಯನ್ನೂ ಸೇರಿಸಿಕೊಂಡು ಓದಿದಾಗ, 'ಅಯೋಧ್ಯೆಯೇ ರಾಮಜನ್ಮಭೂಮಿ, ಜೈಶ್ರೀರಾಮ್’, ಎಂದು ವಿಜಯಘೋಷ ಮೊಳಗುವಂತೆ ಮಾಡಿ ಚಾತುರ್ಯ ತೋರಿದೆ!
ಯಾವ ಪತ್ರಿಕೆಯೂ ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಶೀರ್ಷಿಕೆಯ ಗೋಜಿಗೆ ಹೋಗದೆ ಸಾಮಾಜಿಕ ಹೊಣೆಗಾರಿಕೆ ಮೆರೆದಿರುವುದು ಸ್ವಾಗತಾರ್ಹ ಸಂಗತಿ.
ಒಂದು ವೇಳೆ ನಾನೇನಾದರೂ ಈ ಪತ್ರಿಕೆಗಳ ಸಂಪಾದಕನಾಗಿದ್ದರೆ ಯಾವ ಬಗೆಯ ಶೀರ್ಷಿಕೆಗಳನ್ನು ಕೊಡುತ್ತಿದ್ದೆ?
ಹೀಗೇ ಲಘುಲಹರಿಯಲ್ಲಿ ಬರೆದಿದ್ದೇನೆ, ಕಣ್ಣುಹಾಯಿಸಿ; ಗಂಭೀರವಾಗಿ ತೆಗೆದುಕೊಳ್ಳಬೇಡಿ.
ಇದ್ದದ್ದನ್ನು ಇದ್ದಂತೆ ಹೇಳುವ ಪದ್ಧತಿಯ ಪ್ರಜಾವಾಣಿ : 'ವಿವಾದಿತ ಸ್ಥಳ ಮೂರು ಭಾಗಗಳಲ್ಲಿ ಹಂಚಿಕೆ'
ವಿಮರ್ಶೋಪದೇಶಭರಿತ ಕನ್ನಡ ಪ್ರಭ : 'ಸರ್ವರಿಗೂ ಪಾಲು: ಸಾಮರಸ್ಯವೆ ಮೇಲು'
ಆರಕ್ಕೇರದ ಮೂರಕ್ಕಿಳಿಯದ ಧೋರಣೆಯ ಉದಯವಾಣಿ : 'ರಾಮಜನ್ಮಸ್ಥಾನ ಸುಭದ್ರ'
ಪದಚಾತುರ್ಯ, ಪ್ರಾಸ, ಅಕ್ಷರತ್ರಾಸಗಳಿಗೆ ಜೋತುಬೀಳುವ ವಿಜಯ ಕರ್ನಾಟಕ : 'ರಾಮ್ ಲಲ್ಲಾ, ಪೂರ್ತಿ ಇಲ್ಲ'
ಧರ್ಮವೆ ಜಯವೆಂಬ ದಿವ್ಯ ಮಂತ್ರ ಜಪಿಸುವ ಸಂಯುಕ್ತ ಕರ್ನಾಟಕ : ’ಸನಾತನ ಧರ್ಮಕ್ಕೆ ಜಯ; ಶ್ರೀರಾಮ ವಿಜಯ’
ತಾನು ನಂಬಿದ ಧ್ಯೇಯನಿಷ್ಠೆಯ ಗುರಿಕಾರ ಹೊಸ ದಿಗಂತ : 'ಅಂದು ದೇಶ ವಿಭಜನೆ, ಇಂದು ದೇಗುಲಸ್ಥಳ ವಿಭಜನೆ'
ಇತಿ ಶೀರ್ಷಿಕೋಪಾಖ್ಯಾನ.
(PS: 'ಪೂರ್ವಗ್ರಹ ಪೀಡಿತವಲ್ಲದ ಸ್ವಂತ ಶೀರ್ಷಿಕೆ ಏನೆಂದು ಎಲ್ಲಿ ಹೇಳಿದಿರಿ?' ಎಂದು ಪ್ರಶ್ನಿಸಿದ್ದಾರೆ ಮಿತ್ರ ಆಸು ಹೆಗ್ಡೆ. ಪೂರ್ವಗ್ರಹಪೀಡಿತವಲ್ಲದ ಸ್ವಂತ ಶೀರ್ಷಿಕೆ: ’ಸಹಬಾಳ್ವೆಯ ತೀರ್ಪು; ಸಹಮತದ ನೇರ್ಪು’)