ಚಹಾ - ಕಾಫಿಯ ಪುರಾಣ
ಬೆಳಿಗ್ಗೆ ಎದ್ದ ತಕ್ಷಣ ೮೦% ಜನರು ಕುಡಿಯುವ ಚಹಾ - ಕಾಫಿಯ ಪುರಾಣ ಯಾರಿಗಾದರೂ ಗೊತ್ತ? ಅಷ್ಟಾದಶ ಪುರಾಣಗಳಲ್ಲಿ ೧೯ನೆ ಪುರಾಣದಲ್ಲಿ ಪೇಯಪರ್ವದ ೪೨೦ ನೆ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ.
"ನಭಯಂ ಚಾಸ್ತಿ ಜಾಗೃತ:". ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ. ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ. ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.
ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಬೇರಿನ ಆರ್ತನಾದ ಕೇಳಿಸಿತು.
ಈಗ ಬೇರುಗಳು ಎಲ್ಲಿ ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ. ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ ಓ ತರುಲತೆಗಳೇ, ಓ ಪಶು ಪಕ್ಷಿಗಳೇ....ಕಂಡಿರ ನನ್ನ
ಸೀತೆಯನ್ನು ಎಂದು ಕೇಳುತ್ತ ಹೋಗುತ್ತಾನಂತೆ. ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು.. ಗೊತ್ತಾಯ್ತ.. ಆ ಆರ್ತನಾದ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?
ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು.
ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಚೆ ತಪ್ಪಿದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು. ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ
ಕೆಳಗೆ ಬಿಸುಟು ಹೋಗಿದ್ದಾರೆ. ರಾಮರಾಜ್ಯದಲ್ಲಿ ಇದು ನ್ಯಾಯವೇ?? ಎಂದು ಕೇಳಿದಾಗ ರಾಮ ಹೇಳಿದ ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವಜನ್ಮದ ಕರ್ಮಫಲ.
ನಾನು ವಿಧಿಗೆ ವಿರುದ್ಧವಾಗಿ ನಿನ್ನ ಬದುಕಿಸಲಾರೆ. ಆದರೆ ನನ್ನ ತಮ್ಮನ ಪ್ರಾಣ ಉಳಿಸಿದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು ಹರಸಿದ...
ಅದರ ಅವತಾರವೇ ನಮ್ಮ ಕಲಿಯುಗದ ಚಹಾ...
ಇನ್ನೂ ಸಂಶಯವೇ??? ನೋಡಿ ಈಗಲೂ ಅಷ್ಟೇ ....ರಾತ್ರಿಯಿಡೀ ಮೂರ್ಚೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ?? ಅದರ
ಕರ್ಮಫಲ ಇನ್ನೂ ಬಿಟ್ಟಿಲ್ಲವೇನೋ ಎಂಬಂತೆ ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ? ಅಷ್ಟೇ ಅಲ್ಲ ಸಂಜೀವಿನಿಯನ್ನು ತಂದ ಹನುಮಂತ ಯಾವ ಮೂಲಿಕೆ
ಎಂದು ತಿಳಿಯದಿದ್ದರೂ "ದೂರ ದೃಷ್ಟಿ" ಯಿಂದ ಇಡೀ ಪರ್ವತವನ್ನು ಹೊತ್ತು ತಂದ ಹಾಗೆ ಭಾರತಕ್ಕೆ ಚಹಾ ತಂದವರು ಜೆಮ್ ಶೆಡ್ ಜಿ ಟಾಟಾ ಅವರು ಫಾರಸೀ ಆಗಿದ್ದರು.. ನೋಡಿದೀರಾ ??
Far = ದೂರ, See = ದೃಷ್ಟಿ. ಹೀಗೆ ಇವರು ಕೂಡ ದೂರ ದೃಷ್ಟಿಯಿಂದಲೇ ಚಹಾವನ್ನು ಭಾರತಕ್ಕೆ ತಂದರು. ಅಲ್ಲದೆ ರಾಮನು ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ
ಚಹಾಕ್ಕೆ "ಕಾನನ ದೇವನ ಚಹಾ" (Kannan Devan Tea ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟಿದ್ದಾರೆ..
ಇದ್ರೂ ಚಹಾದ ಪುರಾಣವಾದರೆ ಕಾಫಿ ಇದಕ್ಕೂ ಹಳೆಯದು. ಸಮುದ್ರ ಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ ಸೇರಿ ಸಮುದ್ರಮಥನ ನಡೆಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ
ಪರಸ್ಪರ ಹಂಚಿಕೊಂಡರು. ನಡುವೆ "ಕಾಲ ಕೂಟ" ವೆಂಬ ಕಾರ್ಕೋಟಕ ವಿಷ ಬರಲು ಈಶ್ವರ ಅದನ್ನು bottom sip ಮಾಡಿ ಕುಡಿದ. ನಂತರ ಪೀಯುಶ (ಅಮೃತ) ಹುಟ್ಟಿಕೊಂಡಿತು. ಅಸುರರಿಗೆ
ಮೋಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಶವನ್ನು ಸ್ವರ್ಗಲೋಕಕ್ಕೆ ತೆಗೆದುಕೊಂಡು ಹೋಗುವಾಗ "Hello excuse me boss" ಎಂಬ ಸ್ವರ ಕೇಳಿತು. ತಿರುಗಿ ನೋಡಿದರೆ
ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ?? ಏನು ನಮ್ಮ ಭೂಮಿಗೆ ಬಂದು ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಹೋಗುತ್ತಿದ್ದಿರ?? ನಮ್ಮ ಭೂಮಿ
ಬಳಸಿದ ಬಾಡಿಗೆ ಯಾರು ಕೊಡುತ್ತಾರೆ?? ನಮಗೂ ಅಮ್ರುತದಲ್ಲಿ ಪಾಲು ಬೇಕು ಎಂದು ಎಲ್ಲರು ಜಗಳ ಶುರು ಮಾಡಿದರು. ಆಗ ದೇವರು ಓಹೋ, ಅಮೃತ ಬೇಕಾ?? ಕಾಳಕೂಟ ಕೂಡ ಅಲ್ಲಿಂದಾನೆ
ಬಂದಿದ್ದು.. ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು. ಮಾವರು ಕಾಲಕೂಟದಿಂದ ಹೆದರಿದಂತೆ ಕಂಡರೂ, ಪಾಲು ಸಿಗದೇ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಆಮೇಲೆ ದೇವಗುರು ಬೃಹಸ್ಪತಿ, ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮೇಷ್ಟ್ರು ಕುಳಿತು ಒಂದು ಸಂಧಾನಕ್ಕೆ ಬಂದರು... ಕಾಲಕೂಟದಿಂದ "ಕಾ" ಮತ್ತು ಪೀಯುಶದಿಂದ
"ಪೀ" ತೆಗೆದು "ಕಾಪೀ" ಮಾಡಿ ಮಾನವರಿಗೆ ಕೊಟ್ಟರು. ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ವಲ್ಪ ಮಾನವರ Favour ಆಗಿ ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರ ಮೊದಲ ಮೂರು ಅಕ್ಷರಗಳನ್ನು
ತೆಗೆದು "BRU " ಎಂದು ಅದಕ್ಕೆ ನಾಮಕರಣ ಮಾಡಿದರು. ಇದನ್ನು ಕುಡಿದು ಮಾನವರಿಗೆ ನಶೆ ಏರಿದ್ದರಿಂದ ಇದನ್ನು "ನಶೆ ಕಾಫಿ" ಎಂದರು. ಅದೇ ಕಲಿಯುಗದ "Nescafe " ಆಯಿತು. ಹೀಗೆ ಸುರ - ಅಸುರರ
ಸಹಕಾರದಿಂದ ಕಾಫಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು ಕುಡಿಯುವಾಗ ನಾವು "ಸುರ್ರ್ ಸುರ್ ರ್ರ್ ರ್ರ್ " ಎಂದು ಶಬ್ದ ಮಾಡುತ್ತಾ ಅವರನ್ನು ನೆನೆಯುತ್ತೇವೆ.
------------------------------------------------------ಅಥ ಚಹಾ ಕಾಫಿ ಪುರಾಣಂ ಸಮಾಪ್ತಂ------------------------------------------------------------------------------