ಗಾಂಧಿ ಜಯಂತಿ ಶುಭಾಷಯಗಳು
ನೋಡ್ರಲಾ ಗಾಂಧಿ ಗೊತ್ತೇನ್ರಲಾ ನಿಮಗೆ ಅಂದಾ ಗೌಡಪ್ಪ. ಅದೇ ನಮ್ಮ ಕಾಂಗ್ರೆಸ್ ಅಧ್ಯಕ್ಸೆ ಸೋನಿಯಾ ಗಾಂಧಿ. ಏ ಥೂ. ರಾಹುಲ್ ಗಾಂಧಿ. ಅವರು ಅಲ್ಲ ಕಲಾ ಅವರ ಅಜ್ಜ ಕಲಾ. ಅವರು ಉಪ್ಪಿಗಾಗಿ ಹೋರಾಟ ಮಾಡಿದಾರೆ ಕಲಾ ಅಂದ ಗೌಡಪ್ಪ. ಅಲ್ರೀ ಗೌಡರೆ ಯಾರಾದರೂ ಮನೆಗೆ ಮಜ್ಜಿಗೆ ಅನ್ನಕ್ಕೆ ಉಪ್ಪು ಕೊಡಿರಿ ಅಂದ್ರೆ ಕೊಡೋರು. ಅದಕ್ಕೂ ಹೋರಾಟ ಮಾಡಬೇಕಾ ಅಂದಾ ಸುಬ್ಬ. ಅದಲ್ಲಾ ಕಲಾ, ದಂಡಿ ಸತ್ಯಾಗ್ರಹ ಕಲಾ ಅಂದ ಗೌಡಪ್ಪ. ಮಹಾತ್ಮಾ ಗಾಂಧೀಜಿ ಬಗ್ಗೆ ಎಲ್ಲಾ ಹೇಳಿದ ಗೌಡಪ್ಪ. ಸರಿ ಹಂಗಾದ್ರೆ ನಾವು ಗಾಂಧಿ ಜಯಂತಿ ಮಾಡುವ ಅಂದೆ.
ಲೇ ಮೆರವಣಿಗೆಗೆ ಯಾರಾದ್ರೂ ಗಾಂಧಿ ಆಗ್ ಬೇಕಲಾ ಅಂದ ಗೌಡಪ್ಪ. ನೋಡ್ರಲಾ ತೆಳ್ಳಗೆ ಇರಬೇಕು ಅನ್ನುವಷ್ಟರಲ್ಲಿ ಎಲ್ಲರೂ ಕಟ್ಟಿಗೆ ಒಡೆಯೋ ಕಿಸ್ನನ್ನ ನೋಡಿದ್ರೂ, ಏ ನಾನು ಆಗಲ್ಲಪ್ಪ ಅಂದ ಕಿಸ್ನ. ಯಾಕಲಾ. ನಾನು ಗಾಂಧಿ ಆಗಬೇಕು ಅಂದ್ರೆ ಗಾಂಧಿಗೆ ಪಕ್ಕ ಇರೋ ತರಾ ಹೆಣ್ಣು ಐಕ್ಳು ನನ್ನ ಪಕ್ಕದಾಗೂ ಇರಬೇಕು ಅಂತಾ ಕಂಡೀಸನ್ ಹಾಕಿದ. ಸರಿ ಅಂದ ಗೌಡಪ್ಪ. ಅವರ ಮನ್ಯಾಗೆ ಇರೋ ಕಾಡು ಹೆಣ್ಣು ಐಕ್ಳನ್ನ ಕಳಿಸಿದ್ದ. ಆಫ್ರಿಕದೋರು ಜೊತೆಗೆ ಗಾಂಧಿ ಅನ್ನೋವು ಐಕ್ಳು. 500ರೂಪಾಯಿ ಕಿಸ್ನಂಗೆ ಕೊಟ್ವಿ, ಎರಡು ಗಾಡಿ ಕಟ್ಟಿಗೆ ರೇಟ್ ಕಲಾ ಅಂದಾ ಸುಬ್ಬ.
ಕಿಸ್ನ ಕಟಿಂಗ್ ಸೇವಿಂಗ್ ಮಾಡದೆ ಸಾನೇ ದಿನಾ ಆಗಿತ್ತು. ಮಗಂದು ಹೇನು ಬೇರೆ ಆಗಿತ್ತು. ಸುಬ್ಬ ಮತ್ತು ನಿಂಗ ಅವನನ್ನ ಸೈಕಲ್ನಾಗೆ ತ್ರಿಬ್ಸ್ ಕೂರಿಸಿಕೊಂಡು ಕಟಿಂಗ್ ಸಾಪ್ ರಂಗನ ತಾವ ಹೋದರು. ಹಿಂದಗಡೆ ಗಾಲಿಯಲ್ಲಿ ಬ್ಲೋ ಇಲ್ಲಾ ಕನ್ರಲಾ ಅಂತಿದ್ದ ಗೌಡಪ್ಪ. ಮಗಂದು ಬರೇ ರಿಮ್ನಾಗೆ ಹೋದಂಗೆ ಕಾಣೋದು. ಸೇವಿಂಗ್ ಕ್ರೀಮ್ ಇಲ್ಲಾ ಅಂತಾ ಸಾನೇ ನೀರಾಕಿ ಎಲ್ಲಾ ಬೋಳಿಸಿದ್ದ. ಮಗಂದು ರಕ್ತಾ ಬತ್ತಾ ಇತ್ತು. ಪಟಿಕ ಮತ್ತು ಅರಿಸಿನ ಹಚ್ಚಿದ್ದ.
ಮಿರಿಂಡಾ ಮಾಡಿಸ್ಕಂಡ್ ಬಂದ ಸುಬ್ಬ. ಏನ್ಲಾ ತಿರುಪತಿ ಹೋಗಿದ್ದೇನಲಾ ಅಂತಾ ಜನಾ ಕೇಳಿದ್ರೆ. ನಮ್ಮ ಅವ್ವ ಸತ್ತೋಗವ್ಳೆ ಅನ್ನೋನು. ಅವನ ಅವ್ವ, ಬದುಕಿದ್ದಾಗಲೇ ಬಡ್ಡೇ ಹೈದ್ನೆ ಹೊಗೆ ಹಾಕಿಸ್ತೈಲ್ಯೋ ಅಂತಾ ಬಡ್ಕಂತಾ ಇತ್ತು. ಕನ್ನಡಿಯಲ್ಲಿ ನೋಡಿಕೊಂಡು, ಇವನು ಯಾರಲಾ ಅಂತಿದ್ನಂತೆ ಕಿಸ್ನ. ಲೇ ಇನ್ನೊಂದು 6ತಿಂಗಳು ಕಟಿಂಗ್ ಮಾಡಿಸೋದು ಉಳೀತು ಅನ್ನೋನು. ಸಿಟ್ಟಿಗೆ ಕಟ್ಟಿಂಗ್ ರಂಗ ನಾಕು ಕಡೆ ಕುರುಪು ಹಾಕಿದ್ದ. ಹಳೇ ಬ್ಯಾಲೆನ್ಸ್ ಕೊಟ್ಟಿಲ್ಲಾ ಅಂತಾ, ಪೋಲಿಸ್ನೋರು ಪೋಟೋ ಬೇರೆ ಹೊಡಕಂಡು ಹೋಗಿದ್ರು. ಗಲಭೆ ಏನಾದ್ರೂ ಆದ್ರೆ ಅರೆಸ್ಟ್ ಮಾಡಕ್ಕೆ ಅಂತಾ. ರೌಡಿ ಲೀಸ್ಟ್್ನಾಗೆ ಕಿಸ್ನ. ಯಾಕಲಾ. ಕುರುಪು ಅಂಗೆ ಐತೆ ಕಲಾ ಅನ್ನೋನು ಸುಬ್ಬ.
ಸರಿ ಗಾಂಧಿ ರೆಡಿ ಆತು. ಸಿದ್ದೇಸನ ಗುಡಿ ಮುಂದೆ ಕಾರ್ಯಕ್ರಮ ಸಿದ್ದತೆ ಮಾಡಿರಿ ಅಂಗೇ ಮಕ್ಕಳಿಗೂ ಬರಕ್ಕೆ ಹೇಳ್ರಿ ಅಂದೋನು ಗೌಡ, ಪಂಚೆ ಎತ್ಕಂಡು ಕಾಲು ಕೆರ್ಕಂತಾ ಮನೆ ಕಡೆ ಹೊಂಟ. ಏ ಥೂ.
ಸರಿ ಕಿಸ್ನಂಗೆ ಮೊದಲು ವೈಟ್ ಪ್ರೈಮರ್ ಹೊಡೆದ್ವಿ. ಏಕ್ ಧಮ್ ಪೇಂಟ್ ಹೊಡೆದರೆ ಕೂರಕ್ಕಿಲ್ಲಾ ಅಂತಾ. ಸರಿ ಆಮ್ಯಾಕೆ ಒಂದು ಎರಡು ಲೀಟರ್ ಸಿಲವರ್ ಪೇಂಟ್ ತಂದು 30ರೂಪಾಯಿ ಅಂಗೆ ಸೊಸೈಟಿಯಿಂದ ಸೀಮೆಎಣ್ಣೆ ತಂದು ಮಿಕ್ಸ್ ಮಾಡಿ ದೇವಸ್ಥಾನದ ಗೋಡೆಗೆ ಹೊಡೆದಂಗೆ ಹಳೇ ಬ್ರಸ್ನಾಗೆ ಹೊಡೆದ್ವಿ. ಮಗಾ ಉರಿತತೆ ಅನ್ನೋನು. ಗೌಡಪ್ಪ ಅವನು ಏನಂದ್ರೂ ಬಿಡಬೇಡ್ರಲಾ ಅಂತಾ ಆರ್ಡರ್ ಮಾಡಿದ್ದ. ಅಂತೂ ಗಾಂಧಿ ಸಿದ್ದವಾಗಿದ್ದ. ಅವನಿಗೆ ಗೌಡಪ್ಪನ ಮದುವೇಲಿ ಕೊಟ್ಟಿದ ಕೋಲನ್ನ ಕೊಟ್ಟಿದ್ವಿ. ಮಗಂದು ಗೆದ್ದಿಲು ತಿಂದಿತ್ತು. ಜೋರಾಗಿ ಒತ್ತಿದ್ರೆ ಪುಡಿ ಉದರೋದು. ನೋಡಲಾ ನೀನು ಅಲುಗಾಡಿದ್ರೆ ಕಾಸು ಕೊಡಕ್ಕಿಲ್ಲ ಅಂತ ಕಿಸ್ನಂಗೆ ಗೌಡಪ್ಪ ಕಂಡೀಸನ್ ಹಾಕಿದ್ದ.
ಸರಿ ಟ್ರಾಕ್ಟರ್ ಮೇಲೆ ಹತ್ತಿಸಿದ್ವಿ. ಸಾಲೆ ಮಕ್ಕಳು ಹಿಂದೆ ಮೆರವಣಿಗೆ. ಮಗಾ ಕಿಸ್ನ ಸೇಮ್ ಗಾಂಧಿ ತರಾನೇ ನಿಂತಿದ್ದ, ಟ್ರಾಕ್ಟ್ರ್ ಬ್ರೇಕ್ ಹಾಕಿದ್ರೆ ಎಂದಿರನ್ ರಜನಿ ತರಾ ಅಲ್ಲಾಡೋನು. ರೋಬೋಟ್ ಗಾಂಧಿ. ರಾಜಮ್ಮ ಮೆರವಣಿಗೆ ಮುಗಿದ ಮೇಲೆ ಈ ಗಾಂಧಿನಾ ನಮ್ಮನೇಗೆ ಕೊಡ್ರಿ ಅಂದ್ಲು. ಕಿಸ್ನ ಹೂಂ ಅನ್ರಲಾ ಅಂತಿದ್ದ. ನಿಂಗೆ ಯಾಕವ್ವಾ. ನಮ್ಮನ್ಯಾಗೆ ನನ್ನ ಮಗಳು ಗಾಂಧಿ ಅಂದರೆ ಯಾರು ಅಂತಾಳೆ ತೋರಿಸಿ ಉಣ್ಣಸಿಕ್ಕೆ ಅಂದ್ಲು ರಾಜಮ್ಮ. ಏ ಥೂ ಹೋಗವ್ವಾ. ಅಟ್ಟೊತ್ತಿಗೆ ಹರೀಶ್ ಆತ್ರೇಯಯವರ ಕಡೆಯೋರು ನಾಥೂರಾಮ್ ಗೋಡ್ಸೆ ಅಭಿಮಾನಿಗಳು ನಾವು ಎಂದು ಗಾಂಧಿ ಪ್ರತಿಮೆ ಅಂತಾ ಕಿಸ್ನಂಗೆ ಒಂದು ನಾಕು ಬಿಟ್ಟು ಸಗಣಿ ಎರೆಚಿ ಹೋದ್ರು. ವಾಸನೆಗೆ ಟ್ರಾಕ್ಟರ್ ಪಕ್ಕ ವಾಂತಿ ಮಾಡ್ತಿದ್ದ. ನೋಡ್ರಲಾ ಗಾಂಧಿ ಪ್ರತಿಮೆ ದೋಸೆ ಹುಯ್ತಾವ್ನೆ ಅನ್ನೋವು ಐಕ್ಳು.
ಸರಿ ಕೆಟ್ಟ ಬಿಸಿಲು ಬೆಳಗ್ಗೆ 9ಕ್ಕೆ ಸುರುವಾದ ಮೆರವಣಿಗೆ ಸಂಜೆ 4ಕ್ಕೆ ಮುಗೀತು. ಮಧ್ಯ ಮಧ್ಯ ಕಿಸ್ನಂಗೆ ತಲೆ ಮೇಲೆ ಕೊಡದಾಗೆ ನೀರು ಹುಯ್ತಾ ಇದ್ವಿ. ಅಂಗೇ ಪಾನಕ ಸೇವನೆ ಮಾಡಿಸ್ತಾ ಇದ್ವಿ. ಲೇ ಕೆರೆತಾವ ಹೋಗ್ ಬೇಕ್ರಲಾ ಅನ್ನೋನು. ಮಗಂದು ಬೆಳಗ್ಗೆಯಿಂದ ಸಂಜೆ ತನಕ ಅಂಗೇ ಇದ್ದಿದ್ದಕ್ಕೆ ಕಿಡ್ನಿಯಲ್ಲಿ ಸ್ಟೋನ್ ಆಗಿತ್ತಂತೆ. ಒಡೆಸೋಕ್ಕೆ ಕಲ್ಲು ಒಡ್ಡರನ್ನ ಕರೆಸಿದ್ದ. ಚಾಣ ಸುತ್ತಿಗೆ ತಗೊಂಡು ಬಂದಿದ್ರು. ಏ ಇದು ಆ ಕಲ್ಲು ಅಲ್ರೀ ಅಂತಾ ಡಾಕಟರು ಅಂದ್ ಮ್ಯಾಕೆ 10ಸಾವಿರ ರೂಪಾಯಿ ಗೌಡಪ್ಪನೇ ಕೊಟ್ಟಿದ್ದ. ಲೇ ಟ್ರಾಕ್ಟರ್ ತಳ ಸಾನೇ ಬಿಸಿ ಆಗೈತೆ ಇಳಿಸ್ರಲಾ ಅನ್ನೋನು ಕಿಸ್ನ. ಇಳಿದ್ರೆ ಕಾಸು ಕೊಡಕ್ಕಿಲ್ಲಾ ಅಂತಿದ್ದ ಮಗಾ ಗೌಡಪ್ಪ. ಮಗಂದು ಕಾಲು ಸೀದೋದ ತವಾ ಆಗಿತ್ತು. ಐಕ್ಳು ನೋಡಲಾ ಗಾಂಧಿ ಎಂದು ಕಲ್ಲು ಹೊಡೆಯೋರು. ಮಗಂದು ರಕ್ತ ಬಂತು. ಗಾಂಧಿ ಪ್ರತಿಮೆಯಲ್ಲಿ ಕೆಂಪು ರಕ್ತ ಅಂತಾ ಪತ್ರಿಕೇಲಿ ಸುದ್ದಿ ಆಗಿತ್ತು.
ಸರೀ ಸಂಜೆ ತಾವ ಕಾರ್ಯಕ್ರಮ. ಗೌಡಪ್ಪ ಸುರು ಹಚ್ಕಂಡ. ನೋಡ್ರಲಾ ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಾವ್ರೆ ಅಂಗೇ ಉಪ್ಪಿನ ಸತ್ಯಾಗ್ರಹ ಮಾಡವ್ರೆ ನೀವೆಲ್ಲಾ ಅವರಂಗೆ ಆಗಬೇಕು ಅಂದ. ಮೊದಲು ನೀನು ಆಗಲೇ ಅಂದ್ರು ಜನಾ, ಸುಮ್ಕೆ ಕೂತ. ಅಟ್ಟೊತ್ತಿಗೆ ಸುಬ್ಬ ಮಕ್ಕಳು ಯಾರಾದ್ರೂ ಮಾತಾಡಿ ಅಂದ. ನಿಂಗನ ಮಗ ಸಣ್ಣ ನಿಂಗ ಬಂದು ಸುರುಹಚ್ಕಂಡ. ನೋಡಿ ನಾವು ಗಾಂಧೀಜಿ ತರಾ ನಿರಾಶಾವಾದಿಗಳು ಆಗಿರಬೇಕು. ಚಾ ಚಲ್ಟಾ ಇಲ್ಲದೇ ಚಾ ಕುಡಿಬೇಕು. ಸಾನೇ ಹಾಲು ಕೇಳಬಾರದು ಅಂದ. ಮಗಾ ಚಾ ಅಂಗಡಿ ಬುದ್ದಿ ಎಲ್ಲಿ ಹೋಯ್ತದೆ ಅಂದ ಗೌಡಪ್ಪ. ಅಂಗೇ ಬರೀ ಲಂಗೋಟಿಯಲ್ಲಿ ಜೀವನ ಸಾಗಿಸಬೇಕು ಅಂದೋನು ಸ್ಟೇಜ್ನಾಗೆ ಇದ್ದ ಲೋಟ ಎಲ್ಲಾ ಬಕ್ಕಿಟ್ನಾಗೆ ಹಾಕ್ಕಂಡು ಅವರ ಅಪ್ಪ ನಿಂಗಂಗೆ ಕೊಟ್ಟ. ಮಗಾ ನಿಂಗ ಅಲ್ಲೇ ಬಿಸೆಲೆರಿ ವಾಟರ್ನಾಗೆ ಸಬೀನಾ ಹಾಕಿ ಲೋಟಾ ತೊಳೆದ. ಗೌಡಪ್ಪ ಕುಡಿಯೋಕ್ಕೆ ನೀರು ಅಂದ್ರೆ ಬಾವಿ ನೀರು ಕೊಟ್ಟಿದ್ದಾತು.
ಬೆಳಗ್ಗೆ ರಂಗನ ಕಟ್ಟಿಂಗ್ ಸಾಪ್ ತಾವ ನೋಡಿದ್ರೆ ಸಾನೇ ರಸ್. ಎಲ್ಲಾ ಐಕ್ಳು ತಲೆ ಬೋಳಿಸ್ಕಂತಾ ಇದ್ರು. ಯಾಕ್ರಲಾ. ನಾವು ಗಾಂಧಿ ವಾದಿಗಳು ಅಂದ್ವು. ಮಗಾ ಕಟಿಂಗ್ ಸಾಪ್ ರಂಗ. ಒಂದೇ ಬ್ಲೇಡ್ನಾಗೆ 10ಜನಕ್ಕೆ ಮಾಡ್ತಾ ಇದ್ದ. ಐಕ್ಳೆಲ್ಲಾ ಲಂಗೋಟ್ಯಾಗೆ ಬತ್ತಾ ಇದ್ವು. ಮಳೆಗಾಲ ಆಗಿದ್ರಿಂದ ಎಲ್ಲಾವೂಕ್ಕೂ ಜರಾ ಬಂದಿತ್ತು. ನಿಂಗನ ಮಗ ಸಣ್ಣ ನಿಂಗ ಲೇ ಗೌಡ ನಿಮ್ಮನೇ ಐಕ್ಳುನ್ನ ನನ್ನ ಸೇವೆಗೆ ಕಳಿಸಲಾ ಅಂದಿದ್ದ. ಸಾರ್ವಜನಿಕ ಆಸ್ಪತ್ರಾಗೆ ಲೈನುಕೆ ಮಲುಗಿಸಿದ್ವಿ.ಎಲ್ಲಾವುಕ್ಕೂ ಒಂದೇ ಪೈಪ್ನಾಗೆ ಟ್ರಿಪ್ಸ್. ಸಾರ್ಟೇಜ್.
ಗಾಂಧಿ ಎಲ್ರಲಾ ಅಂದ್ರೆ. ಮಗಾ ಕಿಸ್ನ ಲೇ ಕಚ್ಚೆ ಪಂಚೆ ಬತ್ತಾ ಇಲ್ಲ ಅಂದ. ಯಾಕಲಾ. ಲೇ ಸುಬ್ಬ ಪಂಚೆ ಸಮೇತ ಪೇಂಟ್ ಹೊಡದವ್ನೆ ಕಲಾ ಅಂದ. ಸರಿ ಬಚ್ಚಲು ಉಜ್ಜೋ ತಂತಿ ಬ್ರಸ್ನಾಗೆ ಎಲ್ಲಾ ಪೇಂಟ್ ತೆಗಿದ್ವಿ. ಕಿಸ್ನನ ಬಾಡಿ ಆಸಿಡ್ ದಾಳಿ ಮಾಡಿದಂಗೆ ಆಗಿತ್ತು. ಪೇಂಟ್ ಜೊತೆಗೆ ಚರ್ಮಾನೂ ಹೋಗಿತ್ತು.
ಏನ್ರಲಾ ಇದು ಅಂದ ಗೌಡಪ್ಪ. ಗಾಂಧಿ ಜಯಂತಿ ಮಹಾತ್ಮೆ ಅಂದ ಸುಬ್ಬ. ಗೌಡನ ಹೆಂಡರು ಗಾಂಧಿ ಪ್ರತಿಮೆ ಯಾರಿಗೂ ಕೊಡಬೇಡಿ ನಮ್ಮನ್ಯಾಗಿರೋ ಕೊಟ್ಟಿಗ್ಯಾಗೆ ಇಡಿ ಅಂದ್ಲು. ಲೇ ಅವನು ಕಿಸ್ನ ಕನೇ. ಅಂದ್ ಮ್ಯಾಕೆ ಏಥೂ ಅಂತು. ಈಗ ಕಿಸ್ನ ತೊನ್ನು ಬಂದೋರು ತರಾ ಆಗಿದಾನೆ. ಕಿಸ್ನ ಗಾಂಧಿ ಆಗಲಾ ಅಂದ್ರೆ ಅಂಗೇ ಕೊಡಲಿ ತಗೊಂಡು ಬೆನ್ನು ಹತ್ತುತಾನೆ.
Comments
ಉ: ಗಾಂಧಿ ಜಯಂತಿ ಶುಭಾಷಯಗಳು