ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

ನಡುರಾತ್ರಿ.........


ನೆಟ್‌ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್‌ಲ್ ಬೆಳಕಲ್ಲಿ ಹೊರಟಿದ್ದೆ.


"ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು.


"ಯಾರದ್ರೀ ಅದು?" "ಅಲಾರ್ಮ್ ಕಣೇ.. ನೀನು ಮಲಗು, ಟೀ ಮಾಡಿ ಕರೀತೇನೆ" ಎಂದೆ. ಪಕ್ಕಕ್ಕೆ ತಿರುಗಿ ಹಾಯಾಗಿ ಮಲಗಿದಳು. ಅಬ್ಬಾ..


ಕೋಣೆಯಿಂದ ಹೊರಬಂದು ಮೊಬೈಲ್ ನೋಡಿದೆ-ಗೋಪಿನಾಥರು ಫೋನ್ ಮಾಡಿದ್ದು. ರಿಂಗ್ ಮಾಡಿದೆ. " ನಾಳೆ ಬೆಳಗ್ಗೆ ೬ ಗಂಟೆಗೆ ಸುರೇಶ್ ಮನೆಗೆ ಬನ್ನಿ. ಅಲ್ಲಿಂದ ಕೋಮಲ್ ಹಳ್ಳಿಗೆ ಹೋಗಲಿಕ್ಕಿದೆ. ವಿಷಯ ಅಲ್ಲೇ ಹೇಳ್ತೇನೆ." ಎಂದು ಫೋನ್ ಇಟ್ಟರು.


ಬೆಳಗ್ಗೆದ್ದು ಮನೆಗೆಲಸ ಎಲ್ಲಾ ಮುಗಿಸಿ ಹೊರಡುವಾಗ ೭ ಗಂಟೆನೇ ಆಯಿತು. ಸುರೇಶ್ ಮನೆ ತಲುಪುವಾಗ ಗೋಪಿನಾಥರು ಕೋಪಿನಾಥರಾಗಿದ್ದರು.ಸ್ಟಾರ್ಟ್ ಮಾಡಿ ರೆಡಿಯಾಗಿದ್ದ ಕಾರೊಳಗೆ ತಳ್ಳಿದರು. ಕಾರೊಳಗೆ ನೋಡಿದರೆ ನಾವು ೩ ಜನ ಅಷ್ಟೇ.. " ಸೀಟು ಖಾಲಿಯಿತ್ತು. ನನ್ನ ಹೆಂಡತಿಯನ್ನೂ ಕರಕೊಂಡು ಬರುತ್ತಿದ್ದೆ." ಅಂದೆ.


"ಹೋಗುತ್ತಿರುವುದು ಕೋಮಲ್ ಮದುವೆಗಲ್ಲಾ.. ಗೌಡ್ರ ಟೀಂ‌ಗೆ ಡ್ರಾಮಾ ಹೇಳಿಕೊಡಲು.."


"ಡ್ರಾಮಾ!!!!!!!! ಕಾರು ನಿಲ್ಲಿಸ್ರೀ....... ಇಲ್ಲಾಂದ್ರೆ ಕಿಟಕಿಯಿಂದ ಹೊರಗೆ ಹಾರ್ತೀನಿ. ನನಗೆ ಡ್ರಾಮಾ ಗೀಮಾ" ಅನ್ನೋವಾಗಲೇ ಡ್ರೈವರ್ ಸೀಟಲ್ಲಿದ್ದ ಸುರೇಶರು............................


"ಗೌಡರ ತೋಟ


ಕ್ರಿಮಿಕೀಟ"


ಎರಡೇ ವಾಕ್ಯದಿಂದ ನನ್ನನ್ನು ಸುಮ್ಮನಾಗಿಸಿದರು.


"ಸರಿ ಸರಿ. ಸುರೇಶರೆ, ನಾನು ನಾಷ್ಟಾನೂ ಮಾಡದೇ ಬಂದಿದ್ದೇನೆ. ಇನ್ನು ಗೌಡರ ಮನೆಯಲ್ಲಿ ನಾಷ್ಟಾನಾ!? ಅವರ ಮನೆಯಿಂದ ಕೆರೆಗೆ ಎಷ್ಟು ದೂರಾ?" ಎಂದೆ.


"ಹ್ಹ ಹ್ಹ ಗಣೇಶ, ಭಯಪಡಬೇಡ


ನಾಷ್ಟಾಕ್ಕೆ ಚಿತ್ರಾನ್ನ, ಇಡ್ಲಿ ವಡ


ಊಟಕ್ಕೆ ಪುಳಿಯೊಗರೆ ಮೊಸರನ್ನ


ಪ್ಯಾಕ್ ಮಾಡಿ ಇಟ್ಟಿದ್ದೇವೆ ಎಲ್ಲವನ್ನ"


ಸುರೇಶರು ಹೇಳಿದಾಗ ನನಗೆ ಸಮಾಧಾನವಾಯಿತು. ಗೋಪಿನಾಥರಿಗೆ ಅಲ್ಲೂ ಕವಿತೆ ಕಂಡಿತು. ವ್ಹಾ ವ್ಹಾ ಎಂದು ಇಬ್ಬರೂ ಕವಿತೆ ಬಗ್ಗೆ ಚರ್ಚಿಸುತ್ತಿದ್ದರು. ಕೋಮಲ್ ಹಳ್ಳಿಯಲ್ಲಿ ಇನ್ನೇನು ರಾಮಾಯಣ ನಡೆಯುವುದೋ ಎಂಬ ಯೋಚನೆ ಬಂದರೂ, ಕವಿಗೋಷ್ಠಿಯನ್ನು ಡಿಸ್ಟರ್ಬ್ ಮಾಡುವುದು ಬೇಡ ಎಂದು ಹಿಂದಿನ ಸೀಟಲ್ಲಿ ಕಾಲು ಚಾಚಿ ಮಲಗಿದೆ.


-ಗಣೇಶ.

Rating
No votes yet

Comments