ಇ-ಲೋಕ-೫

ಇ-ಲೋಕ-೫

ಬರಹ

ಬರೇ ಫೋನಲ್ಲವಿದು,ಐಫೋನ್

iphone ಐಪಾಡ್ ಎಂಬ ಸಂಗೀತ ಮುದ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕೆಂದಾಗ ನುಡಿಸುವ ಸೌಲಭ್ಯ ನೀಡುವ ಸಾಧನವನ್ನು ಕಂಪ್ಯೂಟರ್‍ ಕಂಪೆನಿ ಹೊರತಂದು ಹಿಟ್ ಆದುದು ಈಗ ಹಳೆ ಸುದ್ದಿ.ಸದ್ಯ ಐಪಾಡ್ ಕಿಸೆಯಲ್ಲಿರಿಸಿ ಅತ್ತಿತ್ತ ಒಯ್ಯಬಲ್ಲ ಸಂಗೀತ ಸಾಧನಗಳ ಮಾರುಕಟ್ಟೆಯ ಶೇಕಡಾ ಎಪ್ಪತ್ತೈದು ಭಾಗವನ್ನು ಪಡೆದಿದೆ.ಆಪಲ್ ಕಂಪೆನಿ ಈ ಸೌಲಭ್ಯವಿರುವ ಫೋನನ್ನೂ ಮಾರುಕಟ್ಟೆಗೆ ತರಬಹುದೆಂದು ಗುಸುಗುಸು ಹಬ್ಬಿತ್ತು. ಅದೀಗ ನಿಜವಾಗಿದೆ. ಈ ವಾರ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜಾಬ್ ಅಂತರ್ಜಾಲ ಲಭ್ಯವಿರುವ,ಸಂಗೀತ ಮುದ್ರಿಕೆಗಳನ್ನು ಆಲಿಸಬಹುದಾದ, ದೂರವಾಣಿ ಕರೆ ಮಾಡಬಹುದಾದ ಮಾತ್ರವಲ್ಲದೆ ವಿಡಿಯೋವನ್ನು ಕಿರು ಸ್ಪರ್ಶಸಂವೇದಿ ತೆರೆಯಲ್ಲಿ ನೋಡುವ ಸೌಲಭ್ಯ ನೀಡುವ ಐಫೋನನ್ನು ಮಾರುಕಟ್ಟೆಗೆ ಪರಿಚಯಿಸಿದರು.ಇಷ್ಟು ಸಾಲದಿದ್ದರೆ ಕ್ಯಾಮರಾವೂ ಇದೆ.ಬೆಲೆ ಐನೂರು ಡಾಲರು. ನಾಲ್ಕು ಮತ್ತು ಎಂಟು ಗಿಗಾಬೈಟು ಸಂಗ್ರಹ ಸಾಮರ್ಥ್ಯದ ಎರಡು ಆಯ್ಕೆಯಿದೆ. ಬೆಲೆ ಕ್ರಮವಾಗಿ ಐನೂರು ಮತ್ತು ಏಳುನೂರು ಡಾಲರುಗಳು.ಆದರೆ ಫೋನ್ ಸೌಲಭ್ಯ ಏಟಿ&ಟಿ ಕಂಪೆನಿಯ ಸಿಂಗ್ಯುಲ್ಯಾರ್‍ ಸೆಲ್‌ಫೋನ್ ಜಾಲದಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ.

ಆಪಲ್ ಕಂಪೆನಿ ಇದರ ಜತೆಗೆ ಟಿವಿ ಸೆಟ್ ಟಾಪ್ ಪೆಟ್ಟಿಗೆಯನ್ನೂ ಬಿಡುಗಡೆ ಮಾಡಿದೆ. ಇದು ಕಂಪ್ಯೂಟರಿನ ಡಿಜಿಟಲ್ ಸಂಕೇತಗಳನ್ನು ಟಿವಿಗೆ ಬೇಕಾಗುವ ಸಾದೃಶ ಸಂಕೇತವಾಗಿ ಬದಲಾಯಿಸಿ ಕೊಡಬಲ್ಲುದು. ಹೀಗಾಗಿ ಸಿಡಿ,ಡಿವಿಡಿಯನ್ನು ಕಂಪ್ಯೂಟರಿನಲ್ಲಿ ಹಾಕಿ,ಟಿವಿಯಲ್ಲಿ ವೀಕ್ಷಣೆ ಸಾಧ್ಯ.ಅಂತರ್ಜಾಲದಿಂದ ಇಳಿಸಿಕೊಂಡ ಚಲನಚಿತ್ರಗಳನ್ನು ಟಿವಿಯಲ್ಲಿ ನೋಡಲು ಈ ಮೂಲಕ ಸುಲಭ ಸಾಧ್ಯ. ಈ ಸಾಧನಗಳನ್ನು ಹೊರತರುವುದರೊಂದಿಗೆ ಮ್ಯಾಕ್ ಶ್ರೇಣಿಯ ಕಂಪ್ಯೂಟರ್‍ ಮತ್ತು ತಂತ್ರಾಂಶ ಅಭಿವೃದ್ಧಿ ಪಡಿಸುತ್ತಿದ್ದ ಆಪಲ್ ಕಂಪ್ಯೂಟರ್‍ಸ್ ಕಂಪೆನಿ, ಇಲೆಕ್ಟ್ರಾನಿಕ್ಸ್ ಸಾಧನಗಳನ್ನೂ ತಯಾರಿಸುವ ಕಂಪೆನಿಯಾಗಿ ಬಿಟ್ಟಿದೆ. ಹಾಗಾಗಿ ತನ್ನ ಹೆಸರನ್ನೂ ಆಪಲ್ ಇಂಕ್ ಎಂದು ಬದಲಿಸಿಕೊಂಡಿದೆ.
ಸಿಂಗ್ಯುಲ್ಯಾರ್‍ ಜಾಲದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವುದು ಒಂದು ತೊಂದರೆಯೇ. ಜತೆಗೆ ಶರವೇಗದ ಅಂತರ್ಜಾಲ ಸೇವೆ ಒದಗಿಸುವ ತಂತ್ರಜ್ಞಾನ 3Gಗೆ ಅವಕಾಶವಿಲ್ಲದಿರುವುದು ಐಫೋನಿನ ಮುಖ್ಯ ಕೊರತೆ. ಐಫೋನ್ ಹೆಸರಿನ ಬಳಕೆಯ ಬಗೆಗೂ ವಿವಾದ ಎದ್ದಿದೆ. ಸಿಸ್ಕೋ ಕಂಪೆನಿಯ ಅಂತರ್ಜಾಲ ದೂರವಾಣಿಗೂ ಅದೇ ಹೆಸರು ಮೊದಲಿನಿಂದಲೂ ಬಳಕೆಯಾಗುತ್ತಿದೆ.

ಬಾಹ್ಯಾಕಾಶ ಕೇಂದ್ರದ ಸಮಸ್ಯೆ ಪರಿಹಾರಕ್ಕೆ ಗಗನಯಾತ್ರಿಗಳಿಂದ ವ್ಯಾಯಾಮ?
ಕಳೆದ ಬಾರಿ ಜಿಎಸ್‌ಎಲ್‌ವಿ ಉಡ್ಡಯನದ ಕಹಿ ಅನುಭವದ ನಂತರ ಇಸ್ರೋದ ಈ ಸಲದ ಪಿಎಸ್‌ಎಲ್‌ವಿ ಉಡ್ಡಯನ ಯಶಸ್ವಯಾಗುವ ಲಕ್ಷಣವಿದೆ. ಕಾರ್ಟೊಸಾಟ್ ಎಂಬ ಭಾರತೀಯ ಉಪಗ್ರಹದ ಜತೆಗೆ ಇಂಡೋನೇಶ್ಯಾ ಮತ್ತು ಅರ್ಜೆಂಟಿನಾದ ಉಪಗ್ರಹಗಳನ್ನೂ, ಪುನರ್ಬಳಕೆ ಮಾಡಬಲ್ಲ ಬಾಹ್ಯಾಕಾಶ ಕೋಶವನ್ನೂ ಕಕ್ಷೆಗೆ ಮುಟ್ಟಿಸಿದೆ. ಇನ್ನು ಪುನರ್ಬಳಕೆ ಮಾಡಲಾಗುವ ಕೋಶ ಭೂಮಿಗೆ ಯಶಸ್ವಿಯಾಗಿ ಮರಳಬಲ್ಲುದೇ ಎನ್ನುವುದನ್ನು ಕಾದು ನೋಡಬೇಕಿದೆ.ಚಂದ್ರಾಯಣ ಯೋಜನೆಗೆ ಇದರ ಯಶಸ್ಸು ಮುಖ್ಯ.
ಇದೇ ವೇಳೆ ಭಾರತೀಯ ಮೂಲದ ಸುನೀತಾರವರು ನೆಲೆಸಿರುವ ಅಂತಾರ್‍ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹಳೆಯ ಸೌರ ಫಲಕಗಳನ್ನು ಮುಚ್ಚಬೇಕಿದೆ. ಆದರೆ ಫಲಕಗಳು ಅರ್ಧ ಮುಚ್ಚಿ ತೊಂದರೆ ಕೊಡುತ್ತಿವೆ. ಈ ಸಮಸ್ಯೆ ಪರಿಹರಿಸುವುದು ಹೇಗೆಂದು ವಿಜ್ಞಾನಗಳು ತಲೆಕೆಡಿಸಿಕೊಳ್ಳುತ್ತಿದ್ದಾರಂತೆ. ಮರಳಿ ಯತ್ನವ ಮಾಡು ಎನ್ನುವುದು ಒಂದು ಪರಿಹಾರವಾದರೂ, ಬೇರೆ ಮಾರ್ಗಗಳ ಬಗೆಗೂ ಅವರ ಆಲೋಚನೆ ಸಾಗಿದೆ. ಕಳೆದ ಬಾರಿ ಬಾಹ್ಯಾಕಾಶ ಕೇಂದ್ರದಲ್ಲಿ ಯಾತ್ರಿಯೋರ್ವ ವ್ಯಾಯಾಮ ಮಾಡಿದ ವೇಳೆ, ಬಾಹ್ಯಾಕಾಶ ಕೇಂದ್ರ ಕಂಪಿಸಿ, ಸೌರ ಫಲಕಗಳು ದಿಢೀರನೆ ಕುಸಿದದ್ದು ಯಾರಿಗೋ ನೆನಪು ಬಂತು. ಅದನ್ನೇ ಮತ್ತೆ ಮಾಡಿನೋಡಬಾರದೇಕೇ ಎಂದು ಅವರಿಗನಿಸಿದೆ.

ಅಂಟಾರ್ಕಟಿಕಾದಲ್ಲೂ ಶರವೇಗದ ಅಂತರ್ಜಾಲ
ಅಂಟಾರ್ಕಟಿಕಾದಲ್ಲಿ ಬೀಡುಬಿಟ್ಟಿರುವ ವಿಜ್ಞಾನಗಳೂ ದಿನವೊಂದಕ್ಕೆ ಹದಿನೈದು ಗಿಗಾಬೈಟುಗಳಷ್ಟು ಮಾಹಿತಿಯನ್ನು ತಮ್ಮ ಮುಖ್ಯ ಕೇಂದ್ರಗಳ ಜತೆ ವಿನಿಮಯ ಮಾಡಿಕೊಳ್ಳಲು ಶಕ್ತರು ಎನ್ನುವುದು ನಂಬಲು ಕಷ್ಟ. ಇರಿಡಿಯಂ ಉಪಗ್ರಹ ಜಾಲದ ಉಪಗ್ರಹಗಳು ಈ ಸೇವೆ ಒದಗಿಸಲು ಸಹಾಯ ಮಾಡುತ್ತವೆ.ಎಂಭತ್ತರ ದಶಕದಲ್ಲೇ ಇಲ್ಲಿನ ಕೇಂದ್ರಕ್ಕೆ ಉಪಗ್ರಹ ಸಂಪರ್ಕ ಇದ್ದರೂ ಅದರ ಸಾಮರ್ಥ್ಯ ಅತ್ಯಲ್ಪವಾಗಿತ್ತು.ಮುಂದಿನ ಕೆಲವರ್ಷಗಳಲ್ಲಿ ಅಂಟಾರ್ಕಟಿಕಾದಲ್ಲಿ ರೇಡಿಯೋ ದೂರದರ್ಶಕವನ್ನು ಸ್ಥಾಪಿಸಿದ ಬಳಿಕ ದಿನವೊಂದಕ್ಕೆ ಟೆರಾಬೈಟಗಳಷ್ಟು ಮಾಹಿತಿಯನ್ನು ಮುಖ್ಯಕೇಂದ್ರಕ್ಕೆ ಕಳುಹಿಸಬೇಕಾದೀತು. ಸಮೀಪದ ಕೇಬಲ್ ಸಂಪರ್ಕ ಮೂರು ಸಾವಿರ ಕಿಲೋಮೀಟರ್‍ ದೂರದಲ್ಲಿರುವುದು ಶರವೇಗದ ಸಂಪರ್ಕವನ್ನು ಉತ್ತಮ ಪಡಿಸಲು ಇರುವ ಅಡ್ಡಿಯಾಗಿದೆ.ಈಗಲೂ ದಿನದ ಹನ್ನೊಂದು ಗಂಟೆ ಮಾತ್ರಾ ಸಂಪರ್ಕದ ಗುಣಮಟ್ಟ ಉತ್ತಮವಿದ್ದು ಉಳಿದ ವೇಳೆ ವೇಗ ಆಮೆಗತಿಗಿಳಿಯುತ್ತದೆ.

ಮನೆಯಲ್ಲೂ ಕಂಪ್ಯೂಟರ್‍ ಜಾಲ:ಬಿಲ್ ಗೇಟ್ಸ್ ಅಭಿಪ್ರಾಯ
ಮನೆಗಳಲ್ಲೂ ಹಲವು ಕಂಪ್ಯೂಟರುಗಳನ್ನು ಬಳಸುವುದೀಗ ವಿದೇಶಗಳಲ್ಲಿ ಸಾಮಾನ್ಯ. ಮನೆಮಂದಿಯೆಲ್ಲಾ ತಮ್ಮ ಮಾಹಿತಿ,ಕಡತಗಳನ್ನು ಒಂದೆಡೆ ದಾಸ್ತಾನಿಟ್ಟು ಬೇಕಾದಾಗ ಬಳಸಲಾಗುವಂತೆ ಸೇವಾದಾತೃ ಕಂಪ್ಯೂಟರನ್ನು(ಸರ್ವರ್‍) ಬಳಸಲಾರಂಭಿಸುವುದು ಸೂಕ್ತವೆಂದು ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್ ಅಭಿಪ್ರಾಯ.ಮೈಕ್ರೋಸಾಪ್ಟ್‌ನ ಹೊಸ ನಿರ್ವಹಣಾ ತಂತ್ರಾಂಶ ವಿಸ್ಟಾದಲ್ಲಿ ಅಂತರ್ಜಾಲ ಟಿವಿ ವೀಕ್ಷಣೆಗೆ ಅನುಕೂಲ ಇದೆ.ಸ್ಪರ್ಶ ಸಂವೇದಿ ಕಂಪ್ಯೂಟರ್‍ ತೆರೆ ಇನ್ನು ಅವಶ್ಯ ಎಂದು ಗೇಟ್ಸ್ ಲಾಸ್‌ವೇಗಸ್‌ನ ಬಳಕೆದಾರರ ಇಲೆಕ್ಟ್ರಾನಿಕ್ಸ್ ಜಾತ್ರೆಯ ಸಂದರ್ಭದ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದ್ದಾರೆ.
*ಅಶೋಕ್‌ಕುಮಾರ್‍ ಎ