ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೯

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೯

ಕೆಲ ಕಾರಣಗಳಿಂದಾಗಿ ಕೆಲದಿನ ಈ ಸರಣಿಯನ್ನು ಮುಂದುವರೆಸಲು ಆಗಿರಲಿಲ್ಲ. ಶ್ರೀ ವಿನಯ ಅವರು ಈಗಾಗಲೇ ೨ ಬ್ಲಾಗ್ ಗಳನ್ನು ಬರೆದಿದ್ದಾರೆ. ಅಲ್ಲಿಂದ ನಾನು ಮುಂದುವರೆಸುತ್ತಿದ್ದೇನೆ. ಅವರು ಬರೆದ ಬ್ಲಾಗ್ ಗಳ ಕೊಂಡಿ ಇಲ್ಲಿವೆ....

 

ರಾಷ್ಟ್ರೀಯ ಸ್ವಯಂಸೇವಕ ಸಂಘ-೭

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ೮

 

ಸರಸಂಘಚಾಲಕರಾಗಿ....


    ಬೆಳೆಯುತ್ತಿರುವ ಸಂಘಟನೆಯನ್ನು ಸುಸೂತ್ರವಾಗಿ ನಡೆಸಿಕೊಂಡುಹೋಗಲು ಯೋಗ್ಯವ್ಯವಸ್ಥೆಯೊಂದು ಅಗತ್ಯವಿತ್ತು. ೧೯೨೮ರ ಅಕ್ಟೋಬರ್ ೧೯ರಂದು ಡಾಕ್ಟರ್ ಜೀ ಅವರು ಎಲ್ಲ ಶಾಖೆಗಳ ಸಂಘಚಾಲಕರಿಗೆ ಸೂಚನಾಪತ್ರವೊಂದನ್ನು ಕಳುಹಿಸಿ ನವೆಂಬರ್ ೯, ೧೦ ರಂದು ಒಂದು ವಿಷೇಶ ಬೈಠಕ್ ಏರ್ಪಡಿಸಿದರು.

    ಈ ಬೈಠಕ್ ನಲ್ಲಿ ಬಿಚ್ಚು ಮನದಿಂದ ವಿಚಾರ ವಿನಿಮಯ ನಡೆದು ಸಂಘಟನೆಯ ಹಿತದೃಷ್ಟಿಯಿಂದ ಕುಟುಂಬದ ಮಾದರಿಯಲ್ಲಿ ಏಕಚಾಲಕಾನುವರ್ತಿತ್ವದ ರಚನೆ ಸಂಘಕ್ಕೆ ಬೇಕೆಂದು ಎಲ್ಲರೂ ನಿರ್ಧರಿಸಿದರು. ದಿನಾಂಕ ೧೦ರ ಸಂಜೆ ಮೋಹಿತೆ ಸಂಘಸ್ಥಾನದಲ್ಲಿ ನಾಗಪುರದ ಎಲ್ಲ ಸ್ವಯಂಸೇವಕರ ಏಕತ್ರೀಕರಣದಲ್ಲಿ ಧ್ವಜದಬಳಿ ಡಕ್ಟರ್ ಜೀ ನಿಂತಿದ್ದ ಅವಕಾಶನೋಡಿ ಶ್ರೀ ಅಪ್ಪಾಜಿ ಜೋಶಿ ಅವರು ಎಲ್ಲರಿಗೂ ಪೂರ್ವ ಸೂಚನೆ ಕೊಟ್ಟು ಎತ್ತಿದ ಧ್ವನಿಯಲ್ಲಿ "ಸರಸಂಘಚಾಲಕ ಪ್ರಣಾಮ್ ೧-೨-೩" ಎಂದು ಆಜ್ನೆ ಕೊಟ್ಟರು. ಸೇರಿದ ಸ್ವಯಂಸೇವಕರೆಲ್ಲರು ಸರಸಂಘಚಾಲಕ ಡಕ್ಟರ್ ಜೀ  ಅವರಿಗೆ ಪ್ರಣಾಮ ಸಲ್ಲಿಸಿದರು. ನಂತರ ಶ್ರೀ ವಿಶ್ವನಾಥ ಕೇಳ್ಕರ್ ಅವರು ಏಕಚಾಲಕಾನುವರ್ತಿತ್ವದ ಕಲ್ಪನೆಯನ್ನು ಮನೋಜ್ನವಾಗಿ ವಿವರಿಸಿದರು.

    ಇದೇ ಸಂದರ್ಭದಲ್ಲಿ, ಶ್ರೀ ಬಾಳಜಿ ಹುದ್ದಾರ್ ಅವರು ಸರಕಾರ್ಯವಾಹರಾಗಿಯೂ ಮಾರ್ತಾಂಡರಾವ್ ಜೋಗ್ ಅವರು ಸರಸೇನಾಪತಿಯಾಗಿಯೂ ಘೋಷಿತರಾದರು.

    ಸಂಘದ ಸ್ವಯಂಸೇವಕರೆಲ್ಲರೂ ಒಂದು ಕುಟುಂಬ. ಸರಸಂಘಚಾಲಕರು ಈ ಕುಟುಂಬದ ಮುಖ್ಯಸ್ಥರು. ಸ್ವಂತಕ್ಕೆ ಎಲ್ಲ ತೊಂದರೆಗಳನ್ನು ಸಹಿಸಿಕುಟುಂಬದ ಪಾಲನೆ ಪೋಷಣೆಮಾಡುವ ಹೊಣೆ ಅವರದು. ಸಂಘದಲ್ಲಿನ ಏಕಚಾಲಕಾನುವರ್ತಿತ್ವದಲ್ಲಿ ಲೋಕತಂತ್ರದ ವಿಚಾರವಿನಿಮಯ ಹಾಗೂ ಏಕತಂತ್ರದ ಅನುಶಾಸನಗಳ ಸುಂದರ ಸಮನ್ವಯವಾಗುವಂತೆ ರಚನೆ ಮಾಡಲಾಯಿತು.

ಸಂಘಪರಿವಾರದ ಹಿರಿಯ

    ಸರಸಂಘಚಾಲಕ ಪದದಬಗ್ಗೆ ೧೯೩೩ರಲ್ಲಿ ಡಾಕ್ಟರ್ ಜೀ (ತಮ್ಮ ಕೈನಿಂದಲೇ) ಬರೆದ ಟಿಪ್ಪಣಿ ಉದ್ಬೋಧಕವಾಗಿದೆ.

    ಕರ್ತವ್ಯ ಭಾವನೆಯಿಂದ ಕಾರ್ಯದ ಭಾರಹೊರುವ ಮನಸ್ಸಿನ ಸಿದ್ಧತೆ ಮತ್ತು ನಾಯಕತ್ವದ ರತ್ನ ಸಿಂಹಾಸನವನ್ನು ತನ್ನದೆಂದು ಭಾವಿಸದೇ ಅಲ್ಲಿ ಹಿಂದೂ ರಾಷ್ಟ್ರಪುರುಷನ ಪಾದುಕೆಗಳನ್ನು ಪ್ರತಿಷ್ಠಾಪಿಸುವ ವೈರಾಗ್ಯ ಮತ್ತು ಸೇವಾಭಾವಗಳು ಅವರ ಶಬ್ದಗಳಲ್ಲಿ ಈ ಟಿಪ್ಪಣಿಯಲ್ಲಿ ಮೂರ್ತಿಭವಿಸಿವೆ.

    ೧. ಈ ಸಂಘದ ಜನ್ಮದಾತ ಅಥವಾ ಸ್ಥಾಪಕ ನಾನಲ್ಲ. ತಾವೆಲ್ಲರೂ ಅಂಬುದನ್ನು ಚನ್ನಾಗಿ ಬಲ್ಲೆ.
    ೨. ನಿಮ್ಮ ಇಚ್ಛೆಯಂತೆ ಮತ್ತು ಆಜ್ನೆಯಂತೆ ನೀವು ಸೃಷ್ಟಿಸಿದ ಈ ಸಂಘದ ತಾಯಿಯ ರೀತಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ.
    ೩. ಇನ್ನು ಮುಂದಕ್ಕೆ ನೀವು ಬಯಸುವವರೆಗೆ ಮತ್ತು ನಿಮ್ಮ ಅನುಮತಿ ಇರುವವರೆಗೆ ನಾನು ಈ ಕಾರ್ಯವನ್ನು ಮಾಡುವೆನು. ಈ ಕಾರ್ಯವನ್ನು ಮಾಡುವಾಗ ಎಂತಹ ವಿಪತ್ತುಗಳೇ ಬರಲಿ, ಮಾನಾಪಮಾನ ಸಹನೆ ಮಾಡುವ ಸಂದರ್ಭಗಳೇ ಬರಲಿ ನಾನು ಎಂದಿಗೂ ಹೆಜ್ಜೆಯನ್ನು ಹಿಂದಿಡಲಾರೆ.
    ೪. ಈ ಕಾರ್ಯವನ್ನು ಮಾಡಲು ನಾನು ಅನರ್ಹನಾಗಿದ್ದೇನೆ ಆದ್ದರಿಂದ ಸಂಘಕ್ಕೆ ಹಾನಿಯಾಗುತ್ತಿದೆ ಎಂದು ಕಂಡುಬಂದರೆ ಇನ್ನೊಬ್ಬ ಯೋಗ್ಯವ್ಯಕ್ತಿಯನ್ನು ನೀವು ಆಯ್ದುಕೊಳ್ಳಿರಿ.
    ೫. ನಿಮ್ಮ ಆಜ್ನೆಯಂತೆ ಎಷ್ಟು ಸಂತೋಷದಿಂದ ನಾನು ಈ ಪದವಿಯನ್ನು ಅಂಗೀಕರಿಸಿದೆನೋ, ಅಷ್ಟೇ ಸಂತೋಷದಿಂದ ನೀವು ನಿಯುಕ್ತಿಮಾಡುವ ಹೊಸ ವ್ಯಕ್ತಿಗೆ ಎಲ್ಲ ಅಧಿಕಾರಸೂತ್ರಗಳನ್ನು ವಹಿಸಿಕೊಟ್ಟು ನಾನು ಆತನ ಆಜ್ನೆಯನ್ನು ಪಾಲಿಸುವ ಸಾಮಾನ್ಯ ಸ್ವಯಂಸೇವಕನಾಗಿ ಕೆಲಸ ಮಾಡುವೆನು.
    ೬.  ಏಕೆಂದರೆ, ನನ್ನ ಮಟ್ಟಿಗೆ ಹೇಳುವುದಾದರೆ, ನನಗೆ ನನ್ನ ವ್ಯಕ್ತಿತ್ವ ಹಿರಿದಲ್ಲ. ಸಂಘದ ಕಾರ್ಯ ಹಿರಿದು. ಮತ್ತು ಸಂಘದ ಹಿತಕ್ಕಾಗಿ ಯಾವುದೇ ಕೆಲಸ ಮಾಡಲು ನನಗೆ ಎಂದಿಗೂ ಅವಮಾನವೆನಿಸದು.
    ೭. ಸರಸಂಘಚಾಲಕರ ಆಜ್ನೆಯನ್ನು ಸ್ವಯಂಸೇವಕರು ಯಾವುದೇ ಪರಿಸ್ಥಿತಿಯಲ್ಲೂ ಮೀನ-ಮೇಷ ಎಣಿಸದೇ ಪಾಲಿಸುವುದು ಅವಶ್ಯಕ ’ಮೂಗಿಗಿಂತ ಮೂಗುತಿಭಾರ’ ಆಗುವಂತಹ ಸ್ಥಿತಿ ಸಂಘದಲ್ಲಿ ಎಂದಿಗೂ ಉಂಟಾಗಬಾರದು. ಅದೇ ಸಂಘ ಕಾರ್ಯದ ಯಶಸ್ಸಿನ ರಹಸ್ಯ.
    ೮. ಆದರಿಂದ ಸ್ವತ: ಆಜ್ನಾಪಾಲನೆ ಮಾಡುವುದು ಮತ್ತು ಅನ್ಯ ಸ್ವಯಂಸೇವಕರು ಆಜ್ನಾಪಾಲನೆ ಮಾಡುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸ್ವಯಂಸೇವಕನ ಆದ್ಯ ಕರ್ತವ್ಯವಾಗಿದೆ.
   

Rating
No votes yet