ಗೌಡಪ್ಪನ ಮಹಾ ಸ್ನಾನ!
ಪಾಪ, ಗೌಡಪ್ಪನ ಟೇಮು ಚೆನ್ನಾಗಿಲ್ಲ ಅನ್ಸುತ್ತೆ. ಎಲ್ಲಾ ಸೇರಿ ಹಿಡಿದು ಜಗ್ಗಿ ಎಳೆದು ಗೌಡಪ್ಪ ಹೈರಾಣಾಗಿ ಹೋಗಿದ್ದರು. ಸುಗರ್ ಇದ್ರೂನೂ ಊಟದಾಸೆಯಿಂದ ಕೋಮಲ್‌ನ ಅಂಗಿಯ ಚುಂಗು ಹಿಡಿದು ಅಲ್ಲೀವರೆಗೂ ಬಂದಿದ್ದ ಗೌಡಪ್ಪ ಬರಿಯ ಸಹಜ ಕುತೂಹಲದಿಂದ ಕನ್ನಡಕ ಕಾಣಿಸ್ತಾ ಇಲ್ಲ ಎಂದುದಕ್ಕೇ, ನಸಗುನ್ನಿ ಕಾಯಿ ಹಾಕಿ ಸ್ನಾನ ಮಾಡ್ಸಿ ಲಗಾಡಿ ತೆಗ್ದೇ ಬಿಟ್ರಲ್ರೀ ನಾವಡರೇ....
ಮೊದಲೇ ಮೂರ್ಛೆ ತಪ್ಪಿಸೋ ಅಂತ ವಾಸ್ನೆಯ ಗೌಡಪ್ಪ ಮೈಯಿಡೀ ರಪರಪನೆಯೂ, ಪರಪರನೆಯೂ ಕೆರೆದೂ ಕೆರೆದೂ ಒಂಥರ ಪೂರ್ತಿ ಹುಚ್ಚನಂತೆಯೇ ಆಗಿ ಹೋಗಿದ್ದರು. ಮೈಮೇಲೆ ಲಾಡಿ ಜೋತಾಡುತ್ತಿದ್ದ ಬರಿಯ ಬಿಬಿಸಿ(ಬರೆಬರೆ ಚಡ್ಡಿ) ಬಿಟ್ಟರೆ ಇನ್ಯಾವ ವಸ್ತ್ರವೂ ಇರಲಿಲ್ಲ. ಒಂದು ಕಾಲದಲ್ಲಿ ಶ್ವೇತವರ್ಣದ್ದಾಗಿದ್ದು, ಇಂದು ಯಾವ ಬಣ್ಣವೆಂದು ಖಚಿತವಾಗಿ ಹೇಳಲಾರದ ಬಣ್ಣಕ್ಕೆ ತಿರುಗಿದ್ದ ದೋತರ, ಸಲ್ಟುಗಳೆಲ್ಲ ಕೆರೆತಕ್ಕೆ ಸಿಕ್ಕಿ ಎಲ್ಲಿ ಉದುರಿ ಹೋಗಿದ್ದವೋ. ನಸಗುನ್ನಿ ಮಹಾತ್ಮೆಯ ತುರಿಕೆಯಿಂದಾಗಿ ಹುಣ್ಣಾಗಿ ಮೈಯಿಂದ ಅಂಟು ಸುರಿದು, ಹಳಸಲು - ಗಬ್ಬು ವಾಸನೆಗೆ ಇನ್ನೊಂದು ಹೊಸ ವಾಸನೆ ಸೇರಿ ಪರಿಸರವಿಡೀ ಕೇನೆ (ಸುವರ್ಣಗಡ್ಡೆ ಗಿಡ) ಹೂವು ಅರಳಿದಂತಹ ಕಾಂಪಾರಿ ಸ್ಮೆಲ್ಲು. ಅವ್ರು ಹೊಟ್ಟೆ ತುಂಬ ಉಂಡು ಹೊರನಾಡಿಂದ ಹೊರಟ ಮೇಲೆ ನಿಮ್ಗೆ ಪರ್ವಾಗಿಲ್ಲ. ಆದರ್ರೆ 24 ಗಂಟೆಯೂ ಗೌಡಪ್ಪಗೇ ನೇತು ಹಾಕೊಂಡಿರುವ ಕೋಮಲ್ ಗತಿ ಏನು?
ಯೋಚಿಸಿಯೇ ಯೋಚಿಸಿದೆ. ಈ ಯೋಚನೆಯಿಂದಲೇ ಭಯಂಕರವಾದ ವ್ಯಾಕುಲತೆಗೆ ಬಿದ್ದ ನಾನು ಅರ್ಧಲೀಟರ್ ಡೆಟಾಲ್, ಅರ್ಧ ಕಿಲೋ ಹತ್ತಿ, ಒಂದಷ್ಟು ಬೋರಿಕ್ ಪೌಡರ್, ಅಬ್ಸಾರ್ಬ್ ಪೌಡರ್, ಒಂದು ಡಜನ್ ಸ್ನಾನದ ಸೋಪು, ಬ್ರಶ್ಶು, ಒಗೆದು ಶುಚಿಯಾಗಿದ್ದ ಟವೆಲ್ಲು, ಒಂದು ಜೋಡಿ ಉಡುಪನ್ನೆಲ್ಲ ನನ್ನ ಜರ್ನಿ ಬ್ಯಾಗಿಗೆ ತುರುಕಿದೆ. ನಾನಿಲ್ಲದಾಗ ಬಟ್ಟೆಗಳನ್ನು, ಪುಸ್ತಕಗಳನ್ನು, ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಲ್ಲಿ ಎಸೆಯಬಾರದು ಎಂಬುದಾಗಿ ನನ್ನ ಗಂಡನಿಗೆ ಹೆಂಡತಿಯ ಗತ್ತಿನಲ್ಲಿ ಬೈಯ್ದು, ಜತೆಯಲ್ಲಿ ಇರಲಿ ಎಂದು ಪ್ರಸನ್ನನನ್ನೂ ಕರೆದು ಇಬ್ಬರು ಗಟ್ಟಿಯಾಳುಗಳೊಂದಿಗೆ ಹೊರಟೆ...
ಅಷ್ಟರಲ್ಲೀ....
ಶಾನಕ್ಕಾ... ನಾವು ಹೋಗುವುದಾದರೂ ಎಲ್ಲಿಗೇ ಎಂಬುದಾಗಿ ಗಟ್ಟಿಯಾಳುಗಳಿಬ್ಬರೂ ಒಕ್ಕೊರಲಿನಿಂದ ಕೇಳಿದರು. ಶುರುವಿಂದ ಹೇಳಬೇಕಲ್ಲವೇ ಎಂಬ ಉದಾಸೀನ ಕಾಡಿತು. ಆದರೇ ಹೇಳದೆ ಇರುವಂತೆಯೂ ಇಲ್ಲ. ಲಿನಕ್ಸ್, ವಿಂಡೋಸ್ ಎಂದೆಲ್ಲಾ ಗುನುಗುತ್ತಾ ಲ್ಯಾಪ್‌ಟ್ಯಾಪನ್ನು ಟಾಪಲ್‌ಡೌನ್ ಮಾಡಿದ್ದ ಪ್ರಸನ್ನನಿಗೆ- ಪುಟ್ಟಾ, ಮೂರೋತ್ತು ಕಂಪೀಟರು ಆರೋಗ್ಯಕ್ಕೆ ಒಳ್ಳೇದಲ್ಲ ಎಂದು ಪುಸಲಾಯಿಸಿ, ಕೋಮಲಣ್ಣನ ಗೌಡಪ್ಪನ ಸುದ್ದಿಯನ್ನು ಇವರಿಗೆ ಹೇಳು; ಅದರಲ್ಲೂ ಆತನ ಕೊಳಕು ಮತ್ತು ಹಳಸಲು ವಾಸನೆಗೆ ಹೆಚ್ಚಿನ ಮಹತ್ವ ನೀಡತಕ್ಕದ್ದು ಎಂಬುದಾಗಿ ತಾಕೀತು ಮಾಡಿ, ಬಸ್ಸಿನೊಂದಿಗೆ ಓಡಲಾರದೆ ನಿಂತ ಘಾಟಿಯ ಮರಗಿಡಗಳೊಂದಿಗೆ ಅಚ್ಛಾದಿತ ಹಸಿರಿನ ಸೌಂದರ್ಯವನ್ನು ಸವಿಯುತ್ತಾ ತೂಕಡಿಸಲಾರಂಬಿಸಿದೆ. ಎಷ್ಟೊತ್ತು ಹಾಗಿದ್ದೆನೋ, "ಸ್ಟರ್ನಿಂಗ್‌ನಲ್ಲಿ ಎದುರಿನಿಂದ ಪೀಡಾಗಿ ಬಂದ ಬಸ್ಸನ್ನು ಕಂಡು ಡ್ರೇವರಣ್ಣ ಗಕ್ಕನೆ ಬ್ರೇಕ್ ಮೆಟ್ಟಿದಾಗ" ತೂಕಡಿಸುತ್ತಿದ್ದ ನನ್ನ ತಲೆ ಎದುರಿನ ಕಂಬಿಗೆ ಬಡಿದು ಎಚ್ಚರವಾಗುವುದಕ್ಕೂ, ಸೀಟಿನಲ್ಲೇ ಒಂದು ಫೀಟು ಮೇಲಕ್ಕೆ ಹಾರಿ ಕುಳಿತ ಸಣಕಲ ಪ್ರಸನ್ನ ಇದು ಗೌಡಪ್ಪನ ಕಥೆ ಎಂದು ಹೇಳುವುದಕ್ಕೂ ಸರಿ ಹೋಯ್ತು.
ಅಷ್ಟರಲ್ಲಿ ಆ ಇಬ್ಬರು ಜಟ್ಟಿಗಳು ಈಗ ನಾವಾದರೂ ಹೊರನಾಡಿಗೆ ಹೊರಟದ್ದು ಯಾತಕ್ಕೆ ಎಂದು ನನ್ನನ್ನು ಪ್ರಶ್ನಿಸಿದರು. ಈ ಗೌಡಪ್ಪನನ್ನು ಕ್ಲೀನ್ ಮಾಡುವುದೇ ನಮ್ಮೀ ಪಯಣದ ಉದ್ದೇಶ ಎಂದೆ. ಗರಡಿಯ ವ್ಯಾಯಾಮದಿಂದ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಆ ಇಬ್ಬರಿಗೂ ನನ್ನ ಉತ್ತರ ಕೇಳಿದ್ದೇ, ಜಂಘಾಬಲವೇ ಉಡುಗಿದಂತಾಯಿತು. ಆ ಪರಿಯಲ್ಲಿ ಪ್ರಸನ್ನ ವಿವರಿಸಿದ್ದ, ವಾಸನೆಯನ್ನು. ಅವರನ್ನು ಸಮಾಧಾನಿಸಿ, ಆಧುನಿಕವಾದ ಸೋಪು, ಬ್ರಶ್ಶು, ಲಿಕ್ವಿಡ್ಡೂ ಇದೆ; ನೀರಿನ ವ್ಯವಸ್ಥೆ ನಾವಡರು ಮಾಡುತ್ತಾರೆಂದೆ. ಇಷ್ಟಕ್ಕೂ ಮೊದಲನೆಯ ದಿನ, ಡೆಟ್ಟಾಲಿನಲ್ಲಿ ಅದ್ದಿದ ಹತ್ತಿಯಿಂದ ಗೌಡಪ್ಪನನ್ನು ಶುಚಿಗೊಳಿಸಿ ಬೋರಿಕ್ ಪೌಡರ್ ಹಚ್ಚುವುದೆಂದೂ, ಮರುದಿನ ಮಹಾ ಸ್ನಾನ ಎಂದೂ ಪ್ರೋಗ್ರಾಂ ಫಿಕ್ಸ್ ಮಾಡಿದೆವು.
ಅತ್ತ, ನಮ್ಮ ಬರುವಿನ ಅರಿವೇ ಇಲ್ಲದ ನಾವಡ ಆಂಡ್ ಗ್ಯಾಂಗ್, ಗೌಡಪ್ಪನಿಗೆ ನೀಡಿದ ಟಾಂಗ್ ಕುರಿತೇ ಮಾತನಾಡುತ್ತಾ, ನಗುತ್ತಾ ಕುಳಿತಿದ್ದರು. ಪ್ರಸನ್ನ ಮತ್ತು ಜಟ್ಟಿಗಳಿಬ್ಬರನ್ನು ಅಲ್ಲೇ ನಿಲ್ಲಿಸಿ, ಒಳಗೆ ತೆರಳಿದ ನಾನು ನಾವುಡರೇ... ಅಂದೆ. ಮುಖ ಗೊತ್ತಿತ್ತಲ್ಲಾ.... ಅದ್ಕೆ ಯಾರಮ್ಮಾ ನೀವು, ಇಲ್ಲೇನು? ಊಟವಾಯ್ತೆ, ದೇವಿದರ್ಶನ ಆಯ್ತೇ... ಏನಾದರೂ ಸಹಾಯ ಬೇಕಿತ್ತೇ ಎಂದು ಮುಂದೆ ಬಂದರು. ನಾನು ನನ್ನ ಅಳಿದುಳಿದಿರುವ ಇಪ್ಪತ್ತೆಂಟೂ ಚಿಲ್ಲರೆ, ನಕಲಿ, ಅಸಲಿ ಹಲ್ಲುಗಳನ್ನು ಬಿಟ್ಟು ನಾನು ಶಾನಿ ಅಂದೆ. ಒಮ್ಮೆಗೆ ಖುಷಿಯಾದ ಅವರು ಹೋಯ್, ಕೋಮಲ್, ರಾಯ್ರೆ ಶಾನಿ ಬಂದಿದ್ದಾರೆ ಎಂದು ಜೋರಾದ ಸವುಂಡಿನಿಂದಲೇ ಹೇಳಿದರು. ಅಲ್ಲಿ ಸುರೇಶ್ ಹೆಗ್ಡೆಯವರು,
ವಾಸನೇ....
ನಮ್ಮ ಗೌಡಪ್ಪನ ವಾಸನೆ ಭಾರೀ
ತಡೆಯಲಾರದೇ ಓಡಿದರೆಲ್ಲರೂ ಹಾರೀ...
ಎಂಬೆನೋ ಪ್ರಾಸಬದ್ಧವಾದುದನ್ನು ಬರೆಯುತ್ತಿದ್ದರು.
ತುಂಟತನದಿಂದ ಕಣ್ಣು ಮಿಟುಕಿಸುತ್ತಾ ಬಂದ ಕೋಮಲ್‌ನ ತಲೆಗೊಂದು ಮೊಟಕಿ, ಹೊರಗೆ ನೋಡಿ, ಪ್ರಸನ್ನ ಇದ್ದಾರೆ ಅಂದೆ. ಕನ್ನಡಕ ಏರಿಸುತ್ತಾ ಮಂಜಣ್ಣನೂ, ಅವರ ಹಿಂದೆ ಗೋಪ್ಯಣ್ಣನೂ ಬಂದ್ರು. ಗಣೇಸ ಎನ್ನುತ್ತಾ ಅತ್ತಿತ್ತ ನೋಡಬೇಕಿದ್ದರೆ, ನನ್ನ ಇಂಗಿತವನ್ನು ಅರಿತವರಂತೆ ಮಂಜಣ್ಣ, ಗಣೇಸ ಇಸ್ಮಾಯಿಲ್ಲು ಬಸ್ಸೂ ಅಂತ ಪುತಕ್ಕನೆ ನಕ್ಕರು.
ಎಲ್ಲವರು? ನಮ್ಮ ಹೀರೋ ಎಂದೆ. ಯಾರು ನಾವಡರೇ ಎಂಬ ಮರು ಪ್ರಶ್ನೆ ತೂರಿ ಬಂತು. ಇಲ್ಲಾರೀ ನಮ್ಮ ಪ್ರಸಂಗದ ಹೀರೋ ಗೌಡಪ್ಪ ಎಂದೆ. ನನ್ನ ಯೋಜನೆಯನ್ನು ಕ್ಷಿಪ್ರವಾಗಿ ವಿವರಿಸಿ, ಅವರೆಲ್ಲರನ್ನು ಒಪ್ಪಿಸಿ, "ಅಯ್ಯೋ.. ಅಮ್ಮಾ..... ತಾಯೀ...." ಎಂದು ಗೂರಲು ಸ್ವರ ಹೊರಡಿಸುತ್ತಾ ಬಿದ್ದಿದ್ದ ಗೌಡಪ್ಪರ ಕೋಣೆಗೆ ನಾವೆಲ್ಲ ಢೀಂಗ್ಣ.... ಢೀಂಗ್ಣ... ಢೀಂಗ್ ಎಂದು ನಡೆದೆವು.
ನಮ್ಮ ಯೋಜನೆಯಂತೆಯೇ ಎಲ್ಲವೂ ನಡೆದು, ಮರುದಿನ ಒರೆಸಿ, ತಿಕ್ಕಿ, ನೀರೆರಚಿ ಸುಸ್ತಾಗಿ ಹೋದದ್ದು ನಮ್ಮ ಜಟ್ಟಿಗಳು. ಕೊನೆಯ ರವುಂಡಿನಲ್ಲಿ ಬಕೆಟ್ ನೀರಿಗೆ ಮಂಜಣ್ಣನ ಬಳಿ ಕಾಡಿಬೇಡಿ ದುಬೈ ಸೆಂಟ್ ಹೊಯ್ದು ಹೇಗಾದರೂ ಹಳಸಲು ವಾಸ್ನೆಯ ಮಟ್ಟ ಗಣನೀಯವಾಗಿ ಇಳಿದಿತ್ತು. ಬಳಿಕ ಡಿಯೋಡ್ರೆಂಟ್ ಸುರಿದು, ನವರತ್ನ ಕೂಲ್ ಕೂಲ್ ಪೌಡರ್ ಬಳಿದು, ಶುಚಿಯಾದ ಉಡುಪು ತೊಡಿಸಿದಾಗ ಸುವಾಸನೆಯ ಘಮ ಬೀರುತ್ತಾ ಗೌಡಪ್ಪ ಲವಲವಿಕೆಯಿಂದ ಎದ್ದೇ ಬಿಟ್ರಲ್ಲಾ...
ಗೌಡ್ರೇ ಹೆಂಗಿದೀರೀ ಎಂಬ ಕ್ಷೇಮ ಸಮಾಚಾರದ ಮಾತನ್ನಾಡಿದೆ. ಅವರ ಮೂಗಿನ ಹೊಳ್ಳೆಗಳು ಅರಳಿದ್ದು ಏನೋ ವಾಸನೆಯನ್ನು ಗ್ರಹಿಸುವಂತಿದ್ದು, ಏ ಥೂ.. ಇದೇನಮ್ಮೀ ಮೈಯಾಗೆ ಕೆಟ್ಟ ವಾಸ್ಣೇ ಬತ್ತೈತಿ.. ಯಾಕೋ ಎಲ್ಲ ಸರೀಗಿಲ್ಲ... ಅನ್ನಬೇಕಿದ್ದರೆ ಕೋಮಲ್ ಪಿಸಪಿಸ ನಗುತ್ತಿದ್ದರು. ಪ್ರಸನ್ನ ಎಲ್ಲೆಂದು ನೋಡಿದರೆ, ಗೋಪಿನಾಥ ರಾಯರು ಪ್ರಸನ್ನನಿಗೆ ನೀರು ಕುಡಿಸುತ್ತಾ ಗಾಳಿ ಹಾಕುತ್ತಿದ್ದರು!