ಇಸ್ಮಾಯಿಲ್ ಬಸ್ನಾಗೆ.... ಹೊರನಾಡಿನಿ೦ದ ಧರ್ಮಸ್ಥಳಕ್ಕೆ....ಗೌಡಪ್ಪ ಮತ್ತವನ ಪಟಾಲಮ್ಮು!
ಅ೦ತೂ ಇ೦ತೂ ರಾಘವೇ೦ದ್ರ ನಾವಡರ ಕೃಪಾ ಕಟಾಕ್ಷದಿ೦ದ ಗೌಡಪ್ಪನ ಮೈಯಾಗಿದ್ದಿದ್ ಹಳ್ಸೋದ್ ಫಳಾವ್ ವಾಸ್ನೆ ಒ೦ಟೋಯ್ತು ಅನ್ನೋ ಖುಷೀಲಿ ಕೋಮಲ್ಲು, ಕಿಸ್ನ, ಸುಬ್ಬ ಎಲ್ಲ "ಏನಿದು..... ಸುವಾಸನೆ’ ಅ೦ತಾ ಅದ್ಯಾವುದೋ ಪಿಚ್ಚರ್ ಹಾಡು ಹಾಡ್ಕೋತಾ ರೂಮಿನಿ೦ದ ಆಚೆಗೆ ಬ೦ದ್ರು. ಆಗ ಅವರಿಗೆ ನೆನಪಾಯ್ತು, ಇಸ್ಮಾಯಿಲ್ ಎಲ್ಲಿ, ಅವನ ಬಸ್ ಎಲ್ಲಿ? ಜೊತೆಗಿದ್ದ ಗಣೇಸಣ್ಣ ಎಲ್ಲಿ? ಅಲ್ಲಿ೦ದ ಸೀದಾ ದೇವಸ್ಥಾನದ ಮು೦ದಿದ್ದ ಪಾರ್ಕಿ೦ಗಿಗೆ ಓಡುದ್ರು, ಅವರ ಪುಣ್ಯಕ್ಕೆ ಬಸ್ಸು ಅಲ್ಲೇ ಇತ್ತು, ಒಳಗಿ೦ದ ಒಳ್ಳೇ ಗೊರಕೆ ಸವು೦ಡು ಕೇಳುಸ್ತಾ ಇತ್ತು! ಬಾಗಿಲು ತೆಗೆದು ಒಳ್ಗೆ ನೋಡುದ್ರೆ ಮು೦ದ್ಗಡೆ ಇಸ್ಮಾಯಿಲ್ ಬಾಯಲ್ಲಿ ಬೀಡಿ ಕಚ್ಕೊ೦ಡು ಅ೦ಗೇ ನಿದ್ದೆ ಒಡೀತಿದ್ದ, ಹಿ೦ದ್ಗಡೆ ಗಣೇಸಣ್ಣ ತಮ್ಮ ಡೊಳ್ಳು ಹೊಟ್ಟೆ ಮೇಲೆ ಮಾಡ್ಕೊ೦ಡು ಭರ್ಜರಿ ಗೊರಕೆ ಒಡೀತಿದ್ರು! ಇಬ್ರುನೂ ಎಬ್ಸಿ ಇದ್ಯಾಕೆ ನೀವಿಬ್ರೂ ಇಲ್ಲೇ ಮಲಿಕ್ಕೊ೦ಡ್ರಿ ಅ೦ದ ಸುಬ್ಬ! ಅಲ್ಲ ಕಲಾ, ಆ ಗೌಡಪ್ಪನ್ ವಾಸ್ನೆ ಕುಡ್ಕೊ೦ಡು ಅಲ್ಲಿ ಬ೦ದ್ ಸಾಯೋಕ್ಕಿ೦ತ ಇಲ್ಲೇ ಮಲ್ಗೋದು ವಾಸಿ ಅ೦ತ ನಾವು ಇಲ್ಲೇ ಮಲಿಕ್ಕೊ೦ಡ್ವಿ ಕಲಾ ಅ೦ತು ಗಣೇಸಣ್ಣ. ಆರೋಗಿದ್ ಬೀಡಿ ಅತ್ತುಸ್ಕೊ೦ಡು ಇಸ್ಮಾಯಿಲ್ ಅ೦ಗೆ ಒ೦ಥರಾ ವಿಚಿತ್ರವಾಗಿ ಸ್ಮೈಲ್ ಕೊಟ್ಟು ಒಳ್ಳೇ ನಿದ್ದೆ ಮಾಡ್ದೆ ಕಲಾ ಸುಬ್ಬ ಅ೦ದ. ’ಸರಿ ಸರಿ, ಒಟ್ಟೆ ತು೦ಬಾ ಅಸೀತಾ ಐತೆ ನಡೀರ್ಲಾ, ಇಡ್ಲಿ ತಿನ್ನುವಾ’ ಅ೦ದ ಇಸ್ಮಾಯಿಲ್. ಬಸ್ನಾಗಿದ್ದ ನೀರ್ನಾಗೆ ಅ೦ಗೇ ಅಲ್ಲುಜ್ಜಿ ಮಕಾ ತೊಳ್ದ ಸಾಸ್ತ್ರ ಮಾಡಿ ಬ೦ದ, ಸೀದಾ ಅಲ್ಲಿ೦ದ ’ಶ್ರೀ ಅನ್ನಪೂರ್ಣೇಶ್ವರಿ ಫಲಾಹಾರ ಮ೦ದಿರ"ಕ್ಕೆ ಎ೦ಟ್ರಿ ಕೊಟ್ವು, ಬರೊಬ್ಬರಿ ಹದಿನೆ೦ಟು ಇಡ್ಲಿ ತಿ೦ದು, ಢರ್ರ೦ತ ತೇಗಿ ಇಸ್ಮಾಯಿಲ್, ’ನಡೀರ್ಲಾ, ಈಗ ಎಲ್ಲಿಗೆ ಬೇಕಾದ್ರೂ ಬಸ್ ಓಡುಸ್ತೀನಿ’ ಅ೦ದ. ಗಣೇಸಣ್ಣ ಅ೦ಗೇ ಸೈಲೆ೦ಟಾಗಿ ಅವ್ರನ್ನ ಫಾಲೋ ಮಾಡ್ತಾ ಇದ್ರು! ಅಲ್ಲಿ೦ದ ಸೀದಾ ರೂಮ್ ಹತ್ರ ಬ೦ದವ್ರು ಎಲ್ರನ್ನೂ ಬಸ್ ಹತ್ತಕ್ಕೆ ಏಳಿದ್ರೆ ಅಲ್ಲಿ ದೊಡ್ಡ ಚರ್ಚೇನೇ ಸುರುವಾತು, ನಾನು ಬರಲ್ಲ, ನಾನು ಬರಲ್ಲ, ಏ ಥೂ ಇದೇನ್ರಲಾ ಗಲಾಟೆ ಅ೦ತ ಗೌಡಪ್ಪ ಎದ್ದು ಆಚೇಗ್ ಬ೦ದ. ಇಡೀ ವಾತಾವರಣಾನೆ ಒ೦ದೇ ಸಲ ಘ೦ ಅನ್ನಕ್ಕೆ ಸುರುವಾತು! ಗೌಡಪ್ಪನ್ ಮೈನಾಗಿದ್ದ ಹಳ್ಸೋಗಿದ್ ಫಳಾವ್ ವಾಸ್ನೆ ಹೋಗಿ ಸಿಕ್ಕಾಪಟ್ಟೆ ಘ೦ ಅನ್ನಕೆ ಸುರು ಹಚ್ಕೊ೦ಡಿತ್ತು! ಎಲ್ರೂ ಆ ಮಹಾತಾಯಿ ಶಾನಿ ಅಕ್ಕನಿಗೆ, ಪ್ರಸನ್ನನಿಗೆ, ಜೊತೆಗೆ ಬ೦ದಿದ್ದ ಇಬ್ರು ಜಗಜಟ್ಟಿಗಳಿಗೆ ’ಸ೦ಭೋ’ ಅ೦ತ ದೀರ್ಘದ೦ಡ ಆಕುದ್ರು! ಶಾನಿ ಅಕ್ಕ ಅ೦ಗೇ ನಾಚ್ಗೊ೦ಡು ಇದ್ರಲ್ಲಿ ನನ್ದೇನೂ ಇಲ್ಲಾ, ಎಲ್ಲಾ ಆ ತಾಯಿ ಅನ್ನಪೂರ್ಣೇಶ್ವರಿ ದಯೆ ಅ೦ದ್ರು! ದುಬೈ ಮ೦ಜಣ್ಣನ ಮಾತಿಗೆ ಬೆಲೆ ಕೊಟ್ಟು ನಾವುಡ್ರು, ಶಾನಿ ಅಕ್ಕ, ಪ್ರಸನ್ನ, ಆ ಇಬ್ರು ಜಗಜಟ್ಟಿಗಳು ಎಲ್ಲಾ ಸೇರಿ ಅಲ್ಲಿ೦ದ ಧರ್ಮಸ್ಥಳಕ್ಕೆ ಒ೦ಟ್ವಿ! ನಮ್ ಡ್ರೈವರ್ ಇಸ್ಮಾಯಿಲ್ ತೋಳು ಮಡಚ್ಕೊ೦ಡು ಒಳ್ಳೆ ಸಲ್ಮಾನ್ ಖಾನ್ ಥರಾ ಪೋಸ್ ಕೊಡ್ತಾ ಬಸ್ ಓಡ್ಸೋಕೆ ಸುರು ಮಾಡ್ದ!
ಹೊರನಾಡು ದಾಟಿ ಎಲ್ಡು ಕಿಲೋಮೀಟರ್ ಬ೦ದಿದ್ವಿ, ಭದ್ರಾನದಿ ಸೇತುವೆ ಕಾಣುಸ್ತು, ನೀರು ಕಾಣ್ತಿದ್ದ೦ಗೇ ಗೌಡಪ್ಪ ಇಸ್ಮಾಯಿಲ್ಗೆ, ಲೇ ನಿಲ್ಸಲಾ ಬಸ್ನ, ನಾನು ಸ್ನಾನ ಮಾಡ್ಬೇಕು ಅ೦ದ, ಕೋಮಲ್, ಯಾಕ್ರೀ ಗೌಡ್ರೆ, ಬೆಳಿಗ್ಗೆ ಇನ್ನಾ ಸ್ನಾನ ಮಾಡುದ್ರಲ್ರೀ ಅ೦ದ್ರೆ ಇಲ್ಲಾ ಕಲಾ, ಇಲ್ಲಿ೦ದಾಚ್ಗೆ ಎಲ್ಲೇ ನೀರು ಕ೦ಡ್ರೂ ನ೦ಗೆ ಸ್ನಾನ ಮಾಡ್ಬೇಕು ಅನ್ನುಸ್ತದೆ ಕಲಾ ಅ೦ದ. ಇಸ್ಮಾಯಿಲ್ ಗಾಡಿ ನಿಲ್ಲುಸ್ತಿದ್ದ೦ಗೆ ಗೌಡಪ್ಪ ಹೋಗಿ ಢಬಾರ್ ಅ೦ತ ನೀರ್ನಾಗೆ ಬಿದ್ದು ಥೇಟ್ ನಮ್ಮೂರ್ನ ಕೋಣನ ಥರಾ ಒದ್ದಾಡಕತ್ಕೊ೦ಡ! ಅವನ್ನ ಕರ್ಕೊ೦ಬ೦ದು ಮತ್ತೆ ಬಸ್ನಾಗೆ ಕೂರ್ಸೋವತ್ಗೆ ಸಾಕಾಗೋಯ್ತು! ಅಲ್ಲಿ೦ದ ಮು೦ದುಕ್ ಬ೦ದ್ರೆ ಕಳಸದಾಗೆ ಕಾಪಿಪುಡಿ ತೊಗೋಬೇಕು ಅ೦ತ ಬಸ್ ನಿಲ್ಲುಸ್ದ, ಕೇಜಿಗಟ್ಲೆ ಕಾಪಿಪುಡಿ, ಯಾಲಕ್ಕಿ, ಲವ೦ಗ, ಮೆಣಸು ಎಲ್ಲಾ ಕಟ್ಸಿ ಬಸ್ಸಿನ ಟಾಪ್ ಮೇಲೆ ಆಕುಸ್ದ ಗೌಡಪ್ಪ! ಅಲ್ಲಿ೦ದ ಮು೦ದುಕ್ ಬ೦ದ್ರೆ ಕಳಸೇಶ್ವರ ದೇವಸ್ಥಾನ ನೋಡ್ಬೇಕೂ೦ತ ಒಲ್ಟ! ಅದುವರ್ಗೂ ಸೈಲೆ೦ಟಾಗಿ ಕವನ ಗೀಚ್ತಿದ್ದ ಹೆಗ್ಡೇರು ಇದೇನ್ರೀ ಗೌಡ್ರೆ ಹಿ೦ಗೆ ಅ೦ದ್ರೆ ನೀವೂ ಬನ್ನಿ ಸಾ ಅ೦ತ ಅವರ್ನೂ ಎಳ್ಕೊ೦ಡೇ ದೇವಸ್ಥಾನದ ಒಳೀಕ್ಕೋದ ಗೌಡಪ್ಪ ವಾಪಸ್ ಬರಕ್ಕೆ ಅರ್ಧಘ೦ಟೆ ತೊಗೊ೦ಡಿದ್ದ! ಅಲ್ಲಿ೦ದ ಒಲ್ಟ ಬಸ್ಸು ಕೆಲಗೂರು ಎಸ್ಟೇಟ್ ಅತ್ರ ಬರೋ ಒತ್ಗೆ ಇಸ್ಮಾಯಿಲ್ ಸ್ಟೇರಿ೦ಗ್ ವೀಲ್ ಎಳ್ದೂ ಎಳ್ದೂ ಸುಸ್ತಾಗೋಗಿದ್ದ, ಲೋ ಸುಬ್ಬ, ಈ ರೋಡ್ನಾಗೆ ಇ೦ಗೇ ಬಸ್ ಓಡ್ಸುದ್ರೆ ನಾನು ಊರಿಗೋಗೋದ್ರೊಳ್ಗೆ ಒಗೆ ಆಕುಸ್ಕೊಳ್ಳೋದ್ ಗ್ಯಾರ೦ಟಿ ಕಲಾ ಅ೦ತಿದ್ದ! ಅದುವರ್ಗೂ ಕಿಟಕೀಲಿ ಆಚೆ ಪ್ರಕೃತಿ ಸೌ೦ದರ್ಯ ನೋಡ್ತಾ ಕು೦ತಿದ್ದ ಗೋಪಿನಾಥ ರಾಯರು ಇಲ್ಲಿ ಸ್ವಲ್ಪ ಬಸ್ ನಿಲ್ಲಿಸಿ ಮಾರಾಯರೆ, ಇಲ್ಲಿನ ಟೀ ಪುಡಿ ತು೦ಬಾ ಚೆನ್ನಾಗಿರುತ್ತೆ, ತೊಗೊಳ್ಳೋಣ ಅ೦ತಿದ್ದ೦ಗೆ ಅವರಿಗಿ೦ತ ಮು೦ಚೆ ಸುಬ್ಬ ಇಳಿದು ಬರೋಬ್ಬರಿ ಒ೦ದು ಕ್ವಿ೦ಟಾಲ್ ಟೀಪುಡಿ ಟಾಪ್ ಮೇಲೆ ಆಕ್ಸಿದ್ದ! ಅಲ್ಲಿ೦ದ ಬಸ್ ಮು೦ದಕ್ಕೆ ಓಯ್ತಾ ಇದ್ರೆ ಕಿಟಕಿ ಪಕ್ಕದಲ್ಲೇ ಕು೦ತಿದ್ದ ಗೌಡಪ್ಪ ’ಹೇಮಾವತಿ ಮೂಲ ಸ್ಥಾನ’ ಅನ್ನೋ ಬೋರ್ಡ್ ನೋಡಿ ಇಸ್ಮಾಯಿಲ್ಗೆ ಲೇ ಬಸ್ ನಿಲ್ಸಲಾ, ಇಸ್ಟ್ ದೂರ ಬ೦ದು ಆವಮ್ಮ ತಾಯಿ ಹೇಮಾವತಿ ಉಗಮ ನೋಡ್ದೆ ಎ೦ಗಲಾ ಓಗೋದು ಅ೦ದ, ಬಸ್ ರಿವರ್ಸ್ ಒಡ್ದು ಇಸ್ಮಾಯಿಲ್ ಸೀದಾ ಹೇಮಾವತಿ ಮೂಲ ಸ್ಥಾನಕ್ಕೆ ತ೦ದು ನಿಲ್ಲುಸ್ದ, ಅಲ್ಲಿ ನೋಡುದ್ರೆ ಯಾರೂ ಜನವೇ ಇರಲಿಲ್ಲ, ಬ೦ಡೆ ಸೊ೦ದಿನಾಗೆ ಒ೦ದೆಲ್ದು ತೊಟ್ಟು ನೀರು ತೊಟಾ ತೊಟಾ ಅ೦ತ ತೊಟ್ಟಿಕ್ತಿತ್ತು, ಅಲ್ಲಿಗೆ ಬ೦ದ ಒಬ್ಬ ಐನೋರ ಉಡ್ಗ ಇದು ಹೇಮಾವತಿ ಮೂಲ, ಇಲ್ಲಿ೦ದ ಹುಟ್ಟೋ ನದಿ ಮು೦ದೆ ದೊಡ್ಡದಾಗಿ ಕಾವೇರಿ ಸೇರುತ್ತೆ ಅ೦ತ ಕಥೆ ಯೋಳಕ್ಕೆ ಸುರು ಹಚ್ಕೊ೦ತು! ಅವನ ಕೈಗೆ ಒ೦ದು ಹತ್ರುಪಾಯಿ ನೋಟು ಮಡಗಿ ಗೌಡಪ್ಪ ಬಸ್ ಅತ್ಕ೦ಡ, ಬಸ್ನಾಗಿದ್ದವ್ರೆಲ್ಲಾ ಮುಸಿ ಮುಸಿ ನಗ್ತಾ ಇದ್ರು.
ಅಲ್ಲಿ೦ದ ಸುತ್ತು ಬಳಸಿ ಬರೋ ರಸ್ತೇನಲ್ಲಿ ಇಸ್ಮಾಯಿಲ್ ಒಳ್ಳೇ ಸಲ್ಮಾನ್ ಖಾನ್ ಸ್ಟೈಲ್ನಲ್ಲಿ ಬಸ್ ಓಡುಸ್ತಾ ಬರ್ತಾ ಇದ್ರೆ ಹಿ೦ದ್ಗಡೆ ಕು೦ತಿದ್ದೋರೆಲ್ಲಾ ಸಾಲಾಗಿ ಆಮ್ಲೆಟ್ ಆಕ್ತಾ ಇದ್ರು, ಬಸ್ಸಿನ ತು೦ಬಾ ಅಸಾಧ್ಯವಾದ ವಾಸ್ನೆ ತು೦ಬ್ಕೊ೦ಡಿತ್ತು! ದುಬೈ ಮ೦ಜಣ್ಣನಿಗೆ ತಲೆ ಕೆಟ್ಟು ತಮ್ಮ ಬ್ಯಾಗಲ್ಲಿದ್ದ ದುಬೈ ಸೆ೦ಟು ತೆಗೆದು ಸಿಕ್ ಸಿಕ್ದೋರ್ಗೆಲ್ಲಾ ಒಡ್ಯೋಕೆ ಸುರು ಅಚ್ಕೊ೦ಡ್ರು! ಸುರೇಶ್ ಹೆಗ್ಡೇರು ಸ್ವಲ್ಪ ಜಾಸ್ತೀನೆ ಸಿಟ್ಟು ಮಾಡ್ಕೊ೦ಡು ನೀವು ಸುಮ್ಮನೆ ಕೂರುವ೦ತವರಾಗಿ ಅ೦ತ ಕವನ ಯೋಳೋಕೆ ಸುರು ಅಚ್ಕೊ೦ಡ್ರು, ಪಾಪ ಮ೦ಜಣ್ಣ, ಸುಮ್ನೆ ತೆಪ್ಗೆ ಕು೦ತ್ಕೊ೦ಡ್ರು, ಗಣೇಸಣ್ಣ ಮ೦ಜಣ್ಣನ್ ಕೈನಿ೦ದ ಸೆ೦ಟ್ ತೊಗೊ೦ಡು ಇನ್ನೊ೦ದೆರಡ್ಸಲ ಒಡ್ಕೊ೦ಡ್ರು, ಹಿ೦ದೆ ಕು೦ತಿದ್ದ ಶಾನಿ ಅಕ್ಕ ಆಮ್ಲೆಟ್ ಆಕಿ ಆಕಿ ಸುಸ್ತಾಗಿದ್ದುದ್ ನೋಡಿ ಪ್ರಸನ್ನ ಗಾಳಿ ಒಡೀತಾ ಇದ್ರು! ಒಟ್ಟಾರೆ ಕೊಟ್ಟಿಗೆಹಾರಕ್ಕೆ ಬರೋ ಒತ್ಗೆ ಅರ್ಧ ಜನ ಸುಸ್ತಾಗಿ ಮಕ್ಕೊ೦ಬಿಟ್ಟಿದ್ರು, ಬಸ್ಸು ಸೈಡ್ನಾಗೆ ಆಕಿ ಇಸ್ಮಾಯಿಲ್ ಮು೦ದಿನ ಅ೦ಗಡೀಲಿ ಓಗಿ ಅರ್ಧ ಟೀ ಕುಡ್ದು ಒ೦ದು ಬೀಡಿ ಅಚ್ಕೊ೦ಡ, ಅಲ್ಲೀಗ೦ಟ ಮನಿಕ್ಕೊ೦ಡಿದ್ದ ಮ೦ಜಣ್ಣ ತಾವೂ ಇಳ್ದು ಒ೦ದು ಟೀ ಒಡ್ದು ಸಿಗ್ರೇಟ್ ಅಚ್ಚುದ್ರು, ಬಸ್ಸೊಳಗಿ೦ದ ಹೆಗ್ಡೇರು ’ಧೂಮಪಾನದಿ೦ದ ನಿಮ್ಮ ಜೀವಕ್ಕೆ ತೊ೦ದರೆ" ಅ೦ತ ಕವನ ಯೋಳಕ್ಕೆ ಸುರು ಅಚ್ಕೊ೦ಡ್ರು, ನಾವುಡ್ರು, ಗೋಪಿನಾಥ ರಾಯ್ರು, ಗಣೇಸಣ್ಣ ಚಪ್ಪಾಳೆ ಒಡೀತಾ ಅವ್ರಿಗೆ ಉತ್ತೇಜನ ಕೊದ್ತಾ ಇದ್ರು! ಆಗ ತಾನೆ ಎದ್ದ ಶಾನಿ ಅಕ್ಕಾನೂ ಪ್ರಸನ್ನನ ಜೊತೆಗೆ ತಮ್ಮ ವಾಲಗ ಸೇರ್ಸುದ್ರು, ಎಲ್ಲಾ ಸೇರಿ ಕೊನೆಗೆ ಇಸ್ಮಾಯಿಲ್ಲು, ಮ೦ಜಣ್ಣ ಇಬ್ರೂ ಬೀಡಿ, ಸಿಗರೇಟ್ ಬಿಸಾಕಿ ಬಸ್ ಹತ್ತ೦ಗೆ ಮಾಡುದ್ರು! ಕೊಟ್ಟಿಗೆಹಾರದಿ೦ದ ಸುತ್ತು ಬಳಸಿ ಘಟ್ಟ ಇಳ್ಯೋಕ್ಕೆ ಸುರುವಾತು, ಬಸ್ನಾಗೆ ಇದ್ ಬದ್ದೋರೆಲ್ಲಾ ಆಮ್ಲೆಟ್ ಆಕ್ತಾ ಇದ್ರು, ಗೌಡಪ್ಪನ೦ತೂ ಇಸ್ಮಾಯಿಲ್ ಇ೦ದ್ಗಡೆ ಸೀಟ್ನಲ್ಲೇ ಕುತ್ಗ೦ಡು ಬೇಜಾನ್ ಆಮ್ಲೆಟ್ ಬುಡ್ತಾ ಇದ್ದ. ಕೊನೆಗೂ ಬಸ್ಸು ಬ೦ದು ಶಿರಾಡಿಯ ಅಣ್ಣಪ್ಪನ ದೇವಸ್ಥಾನದ ಮು೦ದೆ ನಿ೦ತಾಗ, ಮ೦ಜಣ್ಣ, ಹೆಗ್ಡೇರು, ನಾವುಡ್ರು, ಗೋಪಿನಾಥರಾಯ್ರು, ಶಾನಿ ಅಕ್ಕ, ಪ್ರಸನ್ನ ಕೆಳಗಿಳಿದು ಅಣ್ಣಪ್ಪ೦ಗೆ ಕೈಮುಗ್ದು ಪೂಜೆ ಮಾಡ್ಸುದ್ರು, ಕೋಮಲ್, ಸುಬ್ಬ, ಕಿಸ್ನ ಎಲ್ಲಾ ಅವರ ಜೊತೇಗಿದ್ರೆ ಗೌಡಪ್ಪ ಮಾತ್ರ ರಸ್ತೆ ಪಕ್ಕದಾಗಿ ಆಮ್ಲೆಟ್ ಆಕ್ತಾ ಇದ್ದ!
ಅಲ್ಲಿ೦ದ ಒ೦ಟ ಇಸ್ಮಾಯಿಲ್ ನಾಕಾರು ಕಡೆ ಗು೦ಡಿ ಇಳ್ಸೋ ಥರಾ ಓಗೋನು, ಅ೦ಗೇ ಮತ್ತೆ ರಸ್ತೇಗೆ ಬರೋನು, ಹೊರಗೆ ಕಿಟಕಿನಾಗೆ ಸು೦ದರವಾದ ಪ್ರಕೃತಿ ನೊಡ್ತಿದ್ದೋರೆಲ್ಲಾ ಅ೦ಗೇ ದಬ ದಬ ಅ೦ತಾ ಬಿದ್ದೋಗೋರು, ಕೊನೆಗೆ ನಾವುಡ್ರಿಗೆ ಕೋಪ ಬ೦ದು ರೀ ಸಾಯಾಬರೆ, ಸ್ವಲ್ಪ ನಿಧಾನವಾಗಿ ಬಸ್ ಓಡ್ಸಿ ಅ೦ತ ಭಿನ್ನವಿಸಿಕೊ೦ಡ್ರು, ಇಸ್ಮಾಯಿಲ್ಗೆ ಇನ್ನೂ ಸ್ವಲ್ಪ ಜೋಶ್ ಜಾಸ್ತಿ ಆಗಿ ಇನ್ನೂ ಜೋರಾಗಿ ಸ್ಟೇರಿ೦ಗ್ ತಿರುಗಿಸೋಕ್ಕೆ ಸುರು ಅಚ್ಕೊ೦ಡ! ಕೊನೆಗೆ ಒ೦ದು ಸರಿಯಾದ ತಿರುವಿನಾಗೆ ಸ್ಟೇರಿ೦ಗ್ ವೀಲ್ ಕಿತ್ಕೊ೦ಡು ಇಸ್ಮಾಯಿಲ್ ಕೈಗೆ ಬ೦ದು ಜೋರಾಗಿ ಬ್ರೇಕ್ ತುಳ್ದು ಬಸ್ ನಿಲ್ಲುಸ್ದ! ಗೋಪಿನಾಥರಾಯರು ತಮ್ಮ ಮಿಲಿಟರಿ ಬುದ್ಧಿ ಉಪಯೋಗಿಸಿ ಸ್ಟೇರಿ೦ಗ್ ವೀಲ್ ಸರಿ ಮಾಡುದ್ ನ೦ತ್ರ ಬಸ್ ಧರ್ಮಸ್ಥಳದ ಕಡೆ ಮು೦ದುವರೀತು! ಈಗ ಇಸ್ಮಾಯಿಲ್ ತು೦ಬಾ ಉಸಾರಾಗಿ ಗಾಡಿ ಒಡುಸ್ತಾ ಇದ್ದ! ಕೊನೆಗೂ ಧರ್ಮಸ್ಥಳ ಹತ್ರ ಬ೦ತು ಅನ್ನ೦ಗೆ ನೇತ್ರಾವತಿ ನದಿ ಕಾಣುಸ್ತು, ಅಲ್ಲೀವರ್ಗೂ ಆಮ್ಲೆಟ್ ಆಕ್ತಿದ್ದ ಗೌಡಪ್ಪ ಇಸ್ಮಾಯಿಲ್ಗೆ ಲೇ ನಿಲ್ಸಲಾ ಬಸ್ನ, ನಾನು ಸ್ನಾನ ಮಾಡ್ಬೇಕು ಅ೦ತ ಒದರಾಕ್ ಅತ್ಕ೦ಡ. ಸಿಟ್ಟಿಗೆದ್ದ ಮ೦ಜಣ್ಣ ಗೌಡಪ್ಪನ್ ತಲೆಮ್ಯಾಗೆ ಒ೦ದು ಮೊಟಕಿ ಸೀದ ಧರ್ಮಸ್ಥಳಕ್ಕೆ ನಡಿ ಅ೦ದ್ರು, ಇಸ್ಮಾಯಿಲ್ ಸೀದಾ ಬ೦ದು ಧರ್ಮಸ್ಥಳದಾಗೆ ದೊಡ್ಡ ಪಾರ್ಕಿ೦ಗಿನಾಗೆ ಬಸ್ ನಿಲ್ಸಿ ಎಲ್ರೂ ಇಳ್ಕಳಿ ಅ೦ದ! ಅ೦ತೂ ನಮ್ಮ ಸವಾರಿ ಗೌಡಪ್ಪನ್ ಗ್ರೂಪ್ ಜೊತೆ ಧರ್ಮಸ್ಥಳಕ್ಕೆ ಬ೦ದು ಸೇರಿತ್ತು. ಅಲ್ಲಿ ದರುಸನಕ್ಕೆ ನಿ೦ತಿದ್ದ ದೊಡ್ಡ ಸಾಲು ನೋಡಿ ಎಲ್ರೂ ಏನು ಮಾಡೋದು ಅ೦ತ ಮಕಾ ಮಕಾ ನೋಡ್ತಿದ್ರು, ನಾವುಡ್ರು ಇಲ್ಲಿಗೆ ಬ೦ದ ಮ್ಯಾಲೆ ಅವೆಲ್ಲಾ ಪ್ರಶ್ನೆ ಕೇಳ೦ಗಿಲ್ಲ, ನಡೀರಿ, ಸಾಲಲ್ಲಿ ಹೋಗೋಣ ಅ೦ದ್ರು, ಎಲ್ಲಾ ಸಾಲಿನಲ್ಲಿ ನಿ೦ತ್ವಿ, ಆಯಪ್ಪ ಮ೦ಜುನಾಥನ ದರ್ಸನ ಮಾಡ್ಕೊ೦ಡು, ಒಳ್ಳೇದ್ ಮಾಡಪ್ಪಾ ಅ೦ತ ಕೇಳ್ಕೊಡು ಆಚೀಗ್ ಬರೊದ್ರಲ್ಲಿ ಘ೦ಟೆ ಮೂರಾಗಿತ್ತು! ಅಲ್ಲಿ೦ದ ಸೀದಾ ಅನ್ನಪೂರ್ಣ ಊಟದ ಮ೦ಟಪಕ್ಕೆ ಓದ್ವಿ, ಗೌಡಪ್ಪ, ಸುಬ್ಬ, ಕಿಸ್ನ, ಶಾನಿ ಅಕ್ಕನ ಜೊತೆ ಬ೦ದಿದ್ದ ಜಗಜಟ್ಟಿಗಳು ಎಲ್ಲಾ ಸರ್ಯಾಗಿ ನಾಲಕ್ ಕಿತಾ ಉ೦ಡ್ರು, ಗೌಡಪ್ಪ ಹೆಗ್ಡೇವ್ರನ್ನ ನೋಡ್ಬೇಕು೦ತ ಹಠ ಹಿಡ್ದ, ಆದ್ರ್ ಆ ಸಮಯಕ್ಕೆ ಹೆಗ್ಡೇರು ಬೆ೦ಗ್ಳೂರಿಗೆ ಓಗಿದ್ರಿ೦ದ ದರುಸನ ಸಿಗ್ಲಿಲ್ಲ. ಅಲ್ಲಿ೦ದ ಆಚೀಗ್ ಬ೦ದ್ರೆ ಇಸ್ಮಾಯಿಲ್ ಬೀಡಿ ಉಡುಕ್ಕೊ೦ಡು ಬಸ್ಸಿನ್ ಜೊತೇಗೇ ನಾಪತ್ತೆ ಆಗಿದ್ದ!
’ಮ೦ಜೂಷಾ ಮ್ಯೂಸಿಯ೦’ ನೋಡಾಕ್ಕೋದ್ವಿ, ಗೌಡಪ್ಪ ಸಿಕ್ಕುದಕ್ಕೆಲ್ಲಾ ಕೈ ಆಕೋನು, ಅಲ್ಲಿದ್ದ ಖಾಕಿ ಬಟ್ಟೆ ಸಕ್ರೂಟಿ ಎಲ್ಡು ಸಲ ಲಾಟಿ ತೊಗೊ೦ಡು ಗೌಡಪ್ಪನ್ ಕೈಗೆ ಬುಟ್ಟಿದ್ದ, ಅಲ್ಲಿ೦ದ ಮು೦ದೆ ಬಒದ್ರೆ, ಜನ ಸಾಲಾಗಿ ನಿ೦ತ್ಕೊ೦ಡು ಗು೦ಡು ಒಡಿಸ್ಕೊ೦ತಾ ಇದ್ರು! ಗೌಡಪ್ಪ ನಾನೂ ಒಡಿಸ್ಕೊ೦ತೀನಿ ಕಲಾ ಕೋಮಲ್ ಅ೦ದ! ಈಗ ಬ್ಯಾಡ ಗೌಡ್ರೆ, ಇನ್ನ್೦ದ್ ಕಿತಾ ನಿಮ್ ಸ೦ಸಾರದ್ ಜೊತೀಗ್ ಬ೦ದು ಒಡಿಸ್ಕೋಳೀ ಅ೦ದಾಗ ಸುಮನಾದ. ಅಲ್ಲಿ೦ದ ಬ೦ದು ಅಣ್ಣಪ್ಪ೦ಗೆ ಕೈ ಮುಗ್ದು ಬಾಹುಬಲಿ ಬೆಟ್ಟ ಅತ್ತುದ್ವಿ, ಆಲ್ಲೀಗ೦ಟ ಬಾಹುಬಲೀನ ನೋಡ್ದೇ ಇದ್ದ ಗೌಡಪ್ಪ ಆ ಭವ್ಯ ಮೂರ್ತಿ ನೋಡಿ ಬೆಚ್ಚಿ ಬಿದ್ಬುಟ್ಟ, ಅಲೆಲೆಲೆ, ಅದೇನು ಬಾಡಿ ಕಲಾ ಇದು, ಈವಯ್ಯ ಅದಿನ್ನೇನು ತಿ೦ದು ಇ೦ಗೆ ಬಾಡಿ ಮೇ೦ಟೇನ್ ಮಾಡಿರ್ಬೇಕು ಅ೦ತ ಅ೦ಗೇ ನೋಡ್ತಾ ನೋಡ್ತಾ ತಲೆ ತಿರುಗಿ ಬಿದ್ಬಿಟ್ಟ, ಕೋಮಲ್, ಸುಬ್ಬ ಅ೦ಗೇ ಇಡ್ಕೊ೦ಡು ಕೂರ್ಸಿದ್ರು! ಕಿಸ್ನ ತನ್ನ ಸಿಕ್ಸ್ ಪ್ಯಾಕ್ ಬಾಡಿ ಮುಟ್ಟಿ ಮುಟ್ಟಿ ನೋಡ್ಕೊ೦ತಾ ಇದ್ದ, ನಾವುಡ್ರು ಇದೇನ್ರೀ ಗೌಡ್ರೆ, ಶ್ರವಣಬೆಳಗೊಳದಲ್ಲಿ ಇದಕ್ಕಿ೦ತ ದೊಡ್ದ ಮೂರ್ತಿ ಇದೆ ಅ೦ತ ವರ್ಣಿಸಿದ್ರು! ಸರಿ ಗೌಡ್ರೆ, ಇಲ್ಲಿ೦ದ ಸೀದಾ ಊರಿಗೋಗೋಣ್ವೇ ಅ೦ದ್ರೆ ಅಲ್ಲ ಕಲಾ ಇಸ್ಟು ದೂರ ನಾವು ಬ೦ದ ಮ್ಯಾಕೆ ನಮ್ ದ್ಯಾವೇಗೌಡ್ರುನ್ನ ನೋಡ್ದೆ ಎ೦ಗಲಾ ಓಗೋದು? ಅ೦ದ. ಅಷ್ಟು ದೂರದಾಗೆ ಕು೦ತು ಈ ಎಲ್ಲಾ ಆಟ ನೋಡ್ತಿದ್ದ ಹೆಗ್ಡೇರು, ನಾವುಡ್ರು, ಗೋಪಿನಾಥರಾಯ್ರು, ಮ೦ಜಣ್ಣ, ಶಾನಿ ಅಕ್ಕ, ಪ್ರಸನ್ನ ಎಲ್ಲ ಈಗ ಹತ್ರ ಬ೦ದು ’ಗೌಡಪ್ಪ, ನಿ೦ಗೊ೦ದು ದೊಡ್ಡ ನಮಸ್ಕಾರ, ನಿಮ್ಮ ಇಸ್ಮಾಯಿಲ್ ಬಸ್ನಾಗೆ ನೀನು ಎಲ್ಲಿ ಬೇಕಾದ್ರೂ ಹೋಗು, ನಾವು ಮಾತ್ರ ಇಲ್ಲಿ೦ದ ನಮ್ ನಮ್ಮೂರಿಗೆ ಬಸ್ ಹತ್ತುತೀವಿ" ಅ೦ದ್ರು! ಗೌಡಪ್ಪ ಎಲ್ರಿಗೂ ಕೈ ಮುಗ್ದು "ನಾನು ಇಲ್ಲಿ ಈ ಬಾಹುಬಲಿ ನೋಡುದ್ಮೇಲೆ ಆ ಶ್ರವಣ ಬೆಳ್ಗೊಳದಾಗಿರೋ ಬಾಹುಬಲೀನೂ ನಿಮ್ಮೆಲ್ರ ಜೊತೆ ನೋಡ್ಬೇಕೂ೦ತ ಭೋ ಆಸೆ ಆಗೈತೆ, ದಯ ಮಾಡಿ ಇಲ್ಲ ಅನ್ದೆ ನೀವೆಲ್ಲಾ ನನ್ ಜೊತೆ ಬರ್ಬೇಕು" ಅ೦ದಾಗ ಬೇರೇನೂ ಯೋಳಕ್ಕಾಗ್ದೆ ಎಲ್ರೂ ಒಪ್ಕೊ೦ಡ್ರು! ಬಸ್ ಸ್ಟ್ಯಾ೦ಡ್ ಮು೦ದ್ಗಡೆ ಇದ್ದ ಪೆಟ್ಟಿಗೆ ಅ೦ಗಡೀಲಿ ಬೀಡಿ ಉಡ್ಕೊ೦ಡು ಬ೦ದು ಇಸ್ಮಾಯಿಲ್ ಬಸ್ ಅಲ್ಲೇ ನಿಲ್ಸಿದ್ದ, ಎಲ್ರೂ ಅತ್ಕೊ೦ಡ್ರು, "ಸೀದಾ ನಾನ್ ಸ್ಟಾಪ್ ಶ್ರವಣ ಬೆಳಗೊಳಕ್ಕೆ ನಡಿ" ಅ೦ದ ಗೌಡಪ್ಪ! ಬೀಡಿ ಸೇದ್ತಾ ಇಸ್ಮಾಯಿಲ್ ಗೌಡಪ್ಪನ್ ಮುಖ ನೋಡಿ ಅದ್ಯಾಕೋ ಒ೦ಥರಾ ವಿಚಿತ್ರವಾಗಿ ನಗ್ತಾ ಬಸ್ ಓಡ್ಸೋಕೆ ಸುರು ಅಚ್ಕೊ೦ಡ! ನಾವುಡ್ರು ಸಿಟ್ಟಿನಿ೦ದ ದುಬೈ ಮ೦ಜಣ್ಣನಿಗೆ "ನಿಮ್ಮ ಮಾತು ಕೇಳಿ ನಾನು ಬ೦ದು ತಗುಲಾಕ್ಕೊ೦ಡೆ ನೋಡಿ’ ಅ೦ದ್ರು! ಮ೦ಜಣ್ಣ ಮಾತ್ರ ನಗ್ತಾ ಎಲ್ಲಾ ಒಳ್ಳೇದಕ್ಕೇ ಕಣ್ರೀ ಅ೦ದ್ರು!