ಕಾಮನ್‌ವೆಲ್ತ್ ಗೇಮ್ಸ್-ಉದ್ಘಾಟನಾ ಸಮಾರಂಭದ ಹೈಲೈಟ್ಸ್

ಕಾಮನ್‌ವೆಲ್ತ್ ಗೇಮ್ಸ್-ಉದ್ಘಾಟನಾ ಸಮಾರಂಭದ ಹೈಲೈಟ್ಸ್

ರವಿವಾರ(೩-೧೦-೧೦) ಸಂಜೆ ಲುಂಬಿನಿ ಗಾರ್ಡನ್‌ಗೆ ಹೋಗಿದ್ದೆ. ಹೆಬ್ಬಾಳ ಓವರ್‌ಬ್ರಿಡ್ಜ್ ದಾಟಿದ ಮೇಲೆ, ಕೃಷ್ಣರಾಜಪುರ ಕಡೆ ಹೋಗುವ ರಿಂಗ್‌ರೋಡ್‌ನಲ್ಲಿ ಸುಮಾರು ಒಂದು ಕಿ.ಮೀ. ಮುಂದಕ್ಕೆ ರಸ್ತೆಯ ಎಡಪಕ್ಕದಲ್ಲಿ ಇದೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳವಿದೆ.


ಒಳಗೆ ಹೋಗುವಾಗಲೇ "ರೂಬಿಕ್‌ಕ್ಯೂಬ್‌" ತರಹದ ಫುಟ್‌ಪಾತ್ ಚೆನ್ನಾಗಿದೆ. ಒಂದು ಬದಿಯಲ್ಲಿ ಉದ್ದಕ್ಕೂ ಕೆರೆ( ಬೋಟಿಂಗ್ ವ್ಯವಸ್ಥೆ ಇದೆ), ಇನ್ನೊಂದು ಬದಿಯಲ್ಲಿ ಮಕ್ಕಳಿಗೆ ವಿವಿಧ ತರಹದ ಆಟಗಳು ಹಾಗೂ ವಿವಿಧ ತಿನಿಸುಗಳ ಮಳಿಗೆಗಳಿವೆ.


ಎಂಟ್ರೆನ್ಸ್ ಫೀ ೩೦ ರೂ ಸ್ವಲ್ಪ ಜಾಸ್ತಿ ಅಂತ ನನಗನಿಸಿತು. ೫೦ರೂ ಅಲ್ಲ,೧೦೦ ರೂ ಮಾಡಿದರೂ ಅಲ್ಲಿನ ರಶ್ ಕಮ್ಮಿಯಾಗಲಿಕ್ಕಿಲ್ಲ.


ಸಂಜೆ ಕಳೆಯುತ್ತಿದ್ದಂತೆ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಆರಂಭವಾಯಿತು. ಕಲಾಂ,ಮನ್‌ಮೋಹನ್ ಸಿಂಘ್, ಚಾರ್ಲ್ಸ್ ಮತ್ತವರ ಪತ್ನಿ, ಪ್ರತಿಭಾಪಾಟೀಲ್ ಒಬ್ಬೊಬ್ಬರಾಗಿ ಬಂದು ತಮಗಾಗಿ ಕಾದಿರಿಸಿದ ಸ್ಥಳದಲ್ಲಿ ಆಸೀನರಾದರು. ನಾನೂ ಪಕ್ಕದ chairನಲ್ಲಿ ಕುಳಿತೆ. (ನಮ್ಮ ಮನೆಯ ಟಿ.ವಿ.ಪಕ್ಕದಲ್ಲಿದ್ದ chair). ಮನೆಯಾಕೆ ಬಿಸಿಬಿಸಿ ಟೀ ತಂದಿಟ್ಟಳು. ಜತೆಗೆ ಹುರಿದ ಗೋಡಂಬಿ. ಒಂದೇ ಏಟಿಗೆ ತಿಂದು ಕುಡಿದು ಅಡುಗೆ ಕೋಣೆ ಕಡೆ ನೋಡುತ್ತಿದ್ದೆ- ಇನ್ನೇನು ತಿನ್ನಲು ಬರಬಹುದೆಂದು..


ದೊಡ್ಡ ಬಲೂನ್ ಮೇಲೇರುತ್ತಿದ್ದಂತೆ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು.-ರಿದಮ್ಸ್ ಆಪ್ ಇಂಡಿಯಾ- ಎಷ್ಟೊಂದು ವಾದ್ಯಗಳು, ಒಂದೊಂದೇ ತಂಡ ವಾದ್ಯಗಳನ್ನು ಬಾರಿಸುತ್ತ ಬರುವಾಗ- ಏನು ಹೇಳಲಿ ಅದರ ಅಂದವಾ- ನಾನೇನಾದರು ಸ್ಟೇಡಿಯಂ‌ನಲ್ಲಿರುತ್ತಿದ್ದರೆ- ಕೆಳಗಿಳಿದು ಅವರ ಜತೆ "ಸಿದ್ದು" ಸ್ಟೆಪ್ ಹಾಕಿ ಡ್ಯಾನ್ಸ್ ಮಾಡುತ್ತಿದ್ದೆ...


ನನ್ನ ಫ್ರೆಂಡ್‌ನ ಫೋನ್ ಬಂತು. ಬಹಳದಿನಗಳ ನಂತರ ಫೋನ್ ಮಾಡಿದ್ದರಿಂದ -ಬೆಂಗಳೂರ ಮಳೆ, ಅಯೋಧ್ಯೆ ತೀರ್ಪು, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಇತ್ಯಾದಿ ಮಾತನಾಡಿದೆವು.


ಹರಿಹರನ್ ಹಾಡು ಹೇಳುತ್ತಿದ್ದರು. ಹಾಡಿಗಿಂತ ಮಕ್ಕಳ ಡ್ಯಾನ್ಸ್ ಚೆನ್ನಾಗಿತ್ತು. ಡ್ಯಾನ್ಸ್ ಮಾಡುತ್ತಿದ್ದ ಮಕ್ಕಳು ತಲೆಮೇಲೆ ಬಿಳಿಬಟ್ಟೆ ಹಿಡಕೊಂಡು ಕೆಳಗಿನಿಂದ ಬಣ್ಣದಲ್ಲಿ ಏನೋ ಗೀಚುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಮೇಲಿನಿಂದ ನೋಡಿದರೆ ಮೆಹಂದಿ ಹಾಕಿದ ಕೈಗಳ ಚಿತ್ರ ಕಾಣಿಸಿತು! ಅದ್ಭುತ..ಸೂಪರ್ಬ್..


"ಅನ್ನ ಆರುತ್ತಿದೆ. ಬೇಗ ಬನ್ನಿ" ಎಂದು ನನ್ನಾಕೆಯ ಒತ್ತಾಯವಾದುದರಿಂದ ಊಟಕ್ಕೆ ಹೋದೆ.


ಯೋಗ,ಜ್ಞಾನ ವೃಕ್ಷ, ಬೆಳಕಲ್ಲೇ ಮಾನವನ ಆಕೃತಿ(ಬುದ್ಧ?) ಚಕ್ರಗಳು, ಅರ್ಥವಾಗದಿದ್ದರೂ ನೋಡಲು ಚೆನ್ನಾಗಿತ್ತು.


ಒಂದೊಂದೇ ತಂಡಗಳು ಪಥಸಂಚಲನ ಮಾಡುತ್ತಾ ಬರುತ್ತಿತ್ತು. ಅವರ ಎದುರಿಗೆ ದೇಶದ ಹೆಸರು ಹಿಡಕೊಂಡು ಮುಂದಿನಿಂದ ಬರುತ್ತಿದ್ದ ಹುಡುಗಿಯರ ಒಂದೊಂದು ತರಹದ ಡ್ರೆಸ್‌ಗಳು ಚೆನ್ನಾಗಿತ್ತು. ನನ್ನ ಡ್ರೆಸ್‌ಗೆ (ನಾಳೆ ಕೆಲಸಕ್ಕೆ ಹೋಗಲು) ಇನ್ನೂ ಇಸ್ತ್ರಿ ಹಾಕದ್ದು ನೆನಪಾಗಿ , ಇಸ್ತ್ರಿ ಪೆಟ್ಟಿಗೆ ಬಿಸಿಯಾಗಲು ಇಟ್ಟೆ.


"ಸಾಕಯ್ಯ ನಿಲ್ಸು. ಏನಯ್ಯಾ, ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಹೈಲೈಟ್ಸ್ ಹೇಳುತ್ತೇನೆ ಎಂದು ಹೇಳಿ ಲುಂಬಿನಿ ಗಾರ್ಡನ್, ಟೀ, ಊಟ,ಡ್ರೆಸ್ ಬಗ್ಗೆ ಹೇಳುತ್ತಿದ್ದೀಯಲ್ಲಾ..ಸರಿನಾ?" ಅಂತ ನೀವು ಹೇಳಿದ್ರಾ?


"ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ" live ತೋರಿಸುತ್ತೇವೆ ಎಂದು ಹೇಳಿ ಜಾಹೀರಾತಿನ ಮೇಲೆ ಜಾಹೀರಾತು ಟಿ.ವಿಯವರು ತೋರಿಸಲಿಲ್ಲವಾ. ಹಾಗೇ ನಾನೂ ಹೈಲೈಟ್ಸ್ ಜತೆ ನನ್ನ ವಿಷಯಾನೂ ಜಗಜ್ಜಾಹೀರು ಮಾಡಿದೆ.


-ಗಣೇಶ.


(ಚಿತ್ರಗಳು-ನೆಟ್‌ನಿಂದ)


 

Rating
No votes yet

Comments