ಕನಕ ಪುರಂದರರ ಕಟಕಟೆಯಲ್ಲಿ ಕಚಡಾ ರಾಜಕಾ’ರಣಿ’ಗಳು

ಕನಕ ಪುರಂದರರ ಕಟಕಟೆಯಲ್ಲಿ ಕಚಡಾ ರಾಜಕಾ’ರಣಿ’ಗಳು

ಬರಹ


* ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
  ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ
- ಬಾಗಿಲನು ತೆರೆದು ಕುರ್ಚಿಯನು ಕೊಡೊ ದೊರೆಯೆ
   ತಾಗಿದರು ಬಿಸಿ, ಆಗಲಿಲ್ಲವೆ ಉರಿ, ಯಡಿ ದೊರೆಯೆ

* ಹೂವ ತರುವರ ಮನೆಗೆ ಹುಲ್ಲ ತರುವೆ
  ಆವ ಪರಿಯಲಿ ಸಲಹೊ ದೇವ ಚಿನ್ಮಯನೇ
- ಹೂವ ನೀಡ್ವರ ಕಿವಿಗೆ ಹೂವನಿಡುವೆ
   ನೋವ ನೀಡ್ವುದೆ ನಿನ್ನ ಕುಟಿಲ ಹೇ ಯಡಿಯೇ

* ಈತನೀಗ ವಾಸುದೇವನೂ; ಲೋಕದೊಡೆಯ
  ಈತನೀಗ ವಾಸುದೇವನೂ
  ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
  ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ
- ಈತನೀಗ ರೇಣುಕಾರ್ಯನೂ; ಗುಂಪಿನೊಡೆಯ
   ಈತನೀಗ ರೇಣುಕಾರ್ಯನೂ
   ಈತನೀಗ ರೇಣುಕಾರ್ಯ ಈ ಸಮಸ್ತ ಗುಂಪಿನೊಡೆಯ
   ಹೇಸಿಗೆಟ್ಟ ಶಾಸಕರನು ಕೂಡಿ ಯಡಿಯ ಕುಣಿಸುವಾತ

* ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿರದು
  ಮುಂದರಿದು ಹರಿಪಾದ ಹೊಂದುವುದು ಲೇಸು
- ಎಂದಿದ್ದರೀ ಯಡಿಯಮೇಲೆ ನಂಬಿಕೆಯಿರದು
   ಮುಂದರಿದು ಹೊಸ ಮೈತ್ರಿ, ಹೊಸ ಲೀಡ್ರೆ ಲೇಸು

* ಭಜಿಸಿ ಬದುಕೆಲೊ ಮನುಜ ಮನ ಮುಟ್ಟಿ ಹರಿಯ
  ಅಜ ಭವೇಂದ್ರಾದಿ ವಂದಿತ ಪಾದ ಯುಗವಾ
- ಭುಜಿಸೆ ಬದುಕೆಲೊ ಪಾಪಿ ಅಧಿಕಾರ ಸಿರಿಯ
   ನಿಜ ನೀನು ರಾಜಕಾರಣಿಯೆಂಬ ಗಡವ

+ ಡೊಂಕು ಬಾಲದ ನಾಯಕರೇ
   ನೀವೇನೂಟವ ಮಾಡಿದಿರಿ
- ಕೊಂಕುಬುದ್ಧಿಯ ನಾಯಕರೇ
   ನೀವೇನಾಟವನಾಡಿದಿರಿ

+ ಧರ್ಮವೆ ಜಯವೆಂಬ ದಿವ್ಯಮಂತ್ರ
   ಮರ್ಮವನರಿತು ಮಾಡಲುಬೇಕು ತಂತ್ರ
- ಮರ್ಮವೆ ಜಯವೆಂಬ ದಿವ್ಯಮಂತ್ರ
   ಕರ್ಮ ನಿಮದು, ಮಾಡುವೆವ್ ನಾವ್ ಕುತಂತ್ರ

+ ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
   ಚಿಂತೆಯನು ಬಿಟ್ಟು ಶ್ರೀಹರಿಯ ನೆನೆ ಮನವೆ
- ಸ್ವಂತ ಪಕ್ಷದ ಜನಕೆ ಕಿಂಚಿತ್ತು ದಯೆಯಿಲ್ಲ
   ಚಿಂತೆಯಾಗಿದೆ ಎನಗೆ ಎನ್ನ ಕುರ್ಚಿಯದೆ

+ ಆರು ಹಿತವರು ನಿನಗೆ ಈ ಮೂವರೊಳಗೆ
   ನಾರಿಯೋ ಧಾರುಣಿಯೊ ಬಲು ಧನದ ಸಿರಿಯೋ
- ಆರು ಹಿತವರು ನಮಗೆ ಈ ಮೂವರೊಳಗೆ
   ಕಳ್ಳನೋ ಸುಳ್ಳನೋ ಬಲು ಚತುರ ಖಳನೋ

+ ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
   ಕಲ್ಲುಸಕ್ಕರೆ ಕೊಳ್ಳಿರೋ
   ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
   ಫುಲ್ಲಲೋಚನ ಶ್ರೀ ಕೃಷ್ಣನಾಮವೆಂಬ
   ಕಲ್ಲುಸಕ್ಕರೆ ಕೊಳ್ಳಿರೋ
-  ಕಲ್ಲು ಸಿಕ್ಕರೆ ಕೊಳ್ಳಿರೋ ನೀವೆಲ್ಲರು
    ಕಲ್ಲು ಸಿಕ್ಕರೆ ಕೊಳ್ಳಿರೋ
    ಕಲ್ಲು ಸಿಕ್ಕರೆ ಮಜಾ, ಬಲ್ಲವರೆ ಬಲ್ಲರು
    ಕೊಲ್ಲಬಹುದೈ ಹೊಡೆದು ಈ ರಾಜಕಾರ್ಣಿಗಳ
    ಕಲ್ಲು ಸಿಕ್ಕರೆ ಕೊಳ್ಳಿರೋ