ಧನ್ಯೆ, ಭಾರತಿ! ಧನ್ಯ, ಭಾರತೀಯ ಪ್ರಜಾಸತ್ತೆ!

ಧನ್ಯೆ, ಭಾರತಿ! ಧನ್ಯ, ಭಾರತೀಯ ಪ್ರಜಾಸತ್ತೆ!

ಬರಹ

ರಾಜ್ಯದ ಆಡಳಿತ ಪಕ್ಷದಲ್ಲಿ ಕೇಳಿದಿರಾ ‘ಮತ್ತೆ ಬಂಡಾಯದ ರಣ ಕಹಳೆ’? ಕಂಡಿರಾ “ಕುದುರೆ ವ್ಯಾಪಾರ” ಆರಂಭ? ಏನಿದೀ ಈಗ ಇಂಥಾ ಬೀದೀ ನಾಯಿ ಜಗಳ? ಇದಕ್ಕೆ ಯಾರು ಬೇಡಿ ಹಾಕಬೇಕು, ಲೋಕಾಯುಕ್ತ? ಚುನಾವಣಾ ಆಯೋಗ? ನ್ಯಾಯಾಂಗ?


ಇಲ್ಲ, ಇವು ಯಾವವೂ ಈಗ ಸ್ಪಂದಿಸುವುದಿಲ್ಲ! ವೋಟು ಹಾಕಿ ಕಳಿಸಿದವರ ರಕ್ತವಷ್ಟೇ ಕುದಿಯಬೇಕು; ಅವರು ಹಲ್ಲು ಕಡೆದು, ಮುಂದಿನ ಚುನಾವಣೆಯಲ್ಲಿ ಇವರಿಗೆ ಬುದ್ಧಿ ಕಲಿಸಬೇಕು ಎಂದು ಮೈ ಪರಚಿಕೊಳ್ಳಬೇಕು. ಆದರೆ ಅದು ಬಡವನ ಕೋಪ! ಅವರ ದವಡೆಗೆ ಮೃತ್ಯುವಷ್ಟೇ! ಇಲ್ಲಿ, ನಮ್ಮ ವೋಟಿನಿಂದ ನಮ್ಮ ಸಂಕಲ್ಪ-ನಿರ್ಧಾರಗಳು ಸಾಕಾರವಾಗುವುದು ಎಂದೆಂದಿಗೂ ಇಲ್ಲ! ಅದು ನಮಗೂ ಅಪ್ಪಟವಾಗಿ ಗೊತ್ತು. ಆದರೂ ನಮ್ಮದೂ ಪ್ರಜಾಪ್ರಭುತ್ವ ಎಂದು ನಾವೇ ಗೌರವ ಕೊಟ್ಟುಕೊಳ್ಳುತ್ತೇವೆ!


ಜತೆಗೆ, ತಿಳಿದವರೆಂದುಕೊಂಡಿರುವವರಿಂದ ಇನ್ನೊಂದು ಮಿಥ್ಯಾರೋಪ, ‘ಸಭ್ಯರು ರಾಜಕೀಯಕ್ಕೆ ಬರುವುದಿಲ್ಲ’ ಎಂದು. ಅವರು ಬಂದರೆಂದೇ ಇಟ್ಟುಕೊಳ್ಳಿ, ಇದು, ವಿಷದ ಕರಿನೀರಿನ ಹೊಂಡಕ್ಕೆ ಒಂದು ತೊಟ್ಟು ಹಾಲಿನ ಹನಿ ಹಾಕಿದಂತಾಗುತ್ತದೆ, ಅಷ್ಟೆ! ಅವರ ಸಭ್ಯತೆಯೇನೋ ಹಾರಿಹೋಗುತ್ತದಾದರೂ, ಹೊಂಡವೇನೂ ಅಮೃತವಾಗುವುದಿಲ್ಲ! ಇಂದು ರಾಜಕೀಯವೆನ್ನುವುದು, ಹಿಂದೆ Underworld ಎಂದು ತಿರಸ್ಕಾರದಿಂದ ಕರೆಯಲಾಗುತ್ತಿದ್ದ ನರಕದ ಬಹಿರಂಗ ರೂಪವಾಗಿದೆಯೇ ಹೊರತು, ಧ್ಯೆಯ-ಸಿದ್ಧಾಂತ ಆಧಾರಿತ ಸಮಾಜಸೇವೆಯಾಗಿ ಉಳಿದೇ ಇಲ್ಲ.


ದೇಶವನ್ನು ದಲಿತರು, ಅಲ್ಪಸಂಖ್ಯಾತರು ಎಂದೂ, ಈಗ ಕುರುಬರು, ಬಣಜಿಗರು, ಬೋವಿಗಳು ಇತ್ಯಾದಿ ಸಹಸ್ರ-ಸಹಸ್ರ ಜಾತಿ, ಉಪಜಾತಿಗಳೆಂದೂ ಸಿಗಿದಿಡುವುದೇ ಈ ಪ್ರಜಾಪ್ರಭುತ್ವದ ಆರಂಭ! ಜನಪ್ರತಿನಿಧಿಯಾಗುವವರು ಸಮಾಜದ ಬಹು ಜನತೆಯ ನಂಬಿಕೆ, ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಳ್ಳಬೇಕೆಂಬ ಕಾನೂನಿನ ಕಡ್ಡಾಯವೇನಿಲ್ಲ. ಗೆಲುವು ನಿರ್ಧಾರವಾಗುವುದು Margin ಆಧಾರದ ಮೇಲೆ. ಮುತ್ಸದ್ದಿ ಮಹೋದಯರು ಪರಿಣಿತಿ ಸಾಧಿಸುವುದು ಎದುರಾಳಿಗಿಂತಾ ನಾಲ್ಕಾರು ಔಒಟು ಹೆಚ್ಚು ’ಗಿಂಜಿಕೊಳ್ಳುವ’  ರಾಜಕೀಯ Engineering ನಲ್ಲಿ!


ಸರ‍್ಕಾರದ ಇಡೀ ಸಂಪನ್ಮೂಲದ ಆಮಿಶವೊಡ್ಡಿ ಗೂಂಡಾ ಪಡೆ ಕಟ್ಟಿಕೊಳ್ಳುವ ದಾದಾಗಳು, ಹಣ-ಹೆಂಡ-ತೋಳ್ಬಲದ Technique ನಿಂದ ಶೇ. 20-25 ವೋಟ್ ಗಳಿಸಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ; ಸಭ್ಯರೂ, ಸಂಸ್ಕೃತಿವಂತರೂ ಎಂದುಕೊಳ್ಳುವ ನಾವು ಉಳಿದ ಶೇ. 75-80ರ ಪೈಕಿ ಇರುತ್ತೇವೆ! ನಮ್ಮ ನಾಚಿಕೆ, ಸಿಟ್ಟು, ಸಿಡಿಕು, ಶಾಪಗಳನ್ನು ಯಾರು ಕೇಳುತ್ತಾರೆ?


ಈ ಅವಹೇಳನ, ಆಡಳಿತರೂಢ ಪಕ್ಷಕ್ಕೆ ಮಾತ್ರವೇ ಸಿಮಿತವಲ್ಲ. ‘ಎಲ್ಲಿ ತಮ್ಮನ್ನೇ ಮಾರಿಕೊಂಡುಬಿಡುತ್ತಾರೋ’ ಎಂಬ “ಕುದುರೆ ವ್ಯಾಪಾರ”ಕ್ಕಂಜಿ, ವಿರೋಧಪಕ್ಷದ ಯಜಮಾನರುಗಳು, ತಮ್ಮ ಪಕ್ಷದ ಶಾಸಕರುಗಳನ್ನು, ಪರಿಷೆ ದನಗಳಂತೆ, ‘ಹೈ-ಹೈ’ ‘ಹಚ-ಹಚ’ ಎಂದು ಅಟ್ಟಿಕೊಂಡು ನೆರೆ ರಾಜ್ಯಗಳ ರೆಸಾರ‍್ಟುಗಳಿಗೆ ವಲಸೆ ಹೊಗುತ್ತಿದ್ದಾರಂತೆ! ಧನ್ಯೆ, ಭಾರತಿ! ಧನ್ಯ, ಭಾರತೀಯ ಪ್ರಜಾಸತ್ತೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet