ಅಡಗಿ ಕೂತಿದ್ದ ಭಾಷೆ
Ethnologue ಎನ್ನುವ ಭಾಷೆಗಳ ಅಧ್ಯಯನಕ್ಕಾಗೇ ಇರುವ ಪತ್ರಿಕೆ ಪ್ರಕಾರ ಇದುವರೆಗೂ ನಮಗೆ ಗೊತ್ತಿರುವ ವಿಶ್ವದ ಭಾಷೆಗಳು ೬೯೦೯. ಈಗ ಭಾರತದಿಂದಲೇ ಮತ್ತೊಂದು ಭಾಷೆಯ ಪ್ರವೇಶವಾಗಿದೆ ಅರುಣಾಚಲ ಪ್ರದೇಶದಿಂದ. National Geographic's Enduring Voices ನವರು ನಡೆಸಿದ ಅಧ್ಯಯನದಿಂದ ಈ ರೋಚಕ ಸಂಗತಿ ತಿಳಿದು ಬಂತು. “ಕೋರೋ” ಎಂದು ಕರೆಯಲ್ಪಡುವ ಈ ಭಾಷೆಯನ್ನು ಕೇವಲ ೮೦೦ ರಿಂದ ೧೨೦೦ ಜನ ಮಾತನ್ನಾಡುತ್ತಾರಂತೆ. ಇಂಥದ್ದೇ ಮತ್ತೊಂದು ಅಪರೂಪದ “ಬೊ” ಎನ್ನುವ ಅಂಡಮಾನ್ ದ್ವೀಪದ ಭಾಷೆ ಆ ಭಾಷೆಯನ್ನಾಡುವ ಕೊನೆಯ ವ್ಯಕ್ತಿ ಕಳೆದ ವರ್ಷ ಸಾಯುವುದರೊಂದಿಗೆ ಅವನೊಂದಿಗೇ ಸ್ವರ್ಗ ಸೇರಿಕೊಂಡಿತು. ಧಾರ್ಮಿಕವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತವೂ ಅದೇ ದಾರಿ ಹಿಡಿಯಬಹುದು ಎನ್ನುವ ಆತಂಕವಿತ್ತು ಮೊದಲು.
ಕೋರೋ ಭಾಷೆ ಆಡುವ ಯುವಜನರು ಕ್ರಮೇಣ ಹಿಂದಿ ಮತ್ತು ಆಂಗ್ಲ ಭಾಷೆಗಳ ಕಡೆ ಒಲವನ್ನು ತೋರಿಸಲು ತೊಡಗಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅದೂ ಸಹ “ಬೊ” ಭಾಷೆಯ ದಾರಿ ಹಿಡಿದರೆ ಅಚ್ಚರಿ ಪಡಬೇಕಿಲ್ಲ. ಮೇಲೆ ಹೇಳಿದ ಭಾಷೆ ಯೊಂದಿಗೆ ಅರುಣಾಚಲ ಪ್ರದೇಶದಲ್ಲಿ ಸುಮಾರು ೧೨೦ ಭಾಷೆಗಳಿವೆಯಂತೆ. “ಕೋರೋ” ಭಾಷೆ “ಅಕಾ” ಎನ್ನುವ ಮತ್ತೊಂದು ಅರುಣಾಚಲದ ಭಾಷೆಯ ರೂಪವೆಂದೇ ಮೊದಲಿಗೆ ಊಹಿಸಲಾಗಿತ್ತು. ಏಕೆಂದರೆ ಕೋರೋ ಮತ್ತು “ಅಕಾ” ಭಾಷೆಯನ್ನಾಡುವ ಜನ ವೇಷ ಭೂಷಣ ಮತ್ತು ಅಡುಗೆ ಮುಂತಾದುವುಗಳಲ್ಲಿ ಒಂದೇ ರೀತಿಯ ಆಚರಣೆಗಳನ್ನು ಹೊಂದಿದ್ದರು ಮತ್ತು ಭಾಷೆಗಳು ಬೇರೆ ಬೇರೆಯದಾದರೂ ಅವರೊಳಗೆ (ಭಾಷಾಂತರ) ವಿವಾಹಗಳು ಏರ್ಪಡುವುದೂ ಉಂಟು. ಪ್ರೇಮಿಸಲು ಭಾಷೆಯ ಅವಶ್ಯಕತೆ ಅಲ್ಲ ಇರೋದು ಎನ್ನುವುದಕ್ಕೆ “ಕೋರೋ” ಮತ್ತು ““ಅಕಾ”” ಭಾಷಿಕರೇ ಸಾಕ್ಷಿ ನಿಲ್ಲುವರು, ಅಲ್ಲವೇ?
ಭಾಷೆಗಳು ಎಷ್ಟೊಂದು ಸ್ವಾರಸ್ಯವೆಂದರೆ ದ್ರಾವಿಡ ಭಾಷೆಗಳು ಭಾರತದಲ್ಲಿ ಮಾತ್ರ ಎಂದು ಅರಿತಿದ್ದ ನಮಗೆ ಆಫ್ಘಾನಿಸ್ತಾನದ ಪ್ರಾಂತ್ಯವೊಂದರಲ್ಲಿ ಬ್ರಾಹೂಯಿ ಎನ್ನುವ ಭಾಷೆ ದ್ರಾವಿಡ ಕುಟುಂಬಕ್ಕೆ ಸೇರಿದ್ದು ಎಂದು ತಿಳಿದಾಗ ವಿಶ್ವ ಭಾವನಾತ್ಮಕವಾಗಿ ನಿಜಕ್ಕೂ ಕುಬ್ಜ ಎಂದು ತೋರಿತು.
೬೯೦೯ ಭಾಷೆಗಳಲ್ಲಿ ಸುಮಾರು ಅರ್ಧದಷ್ಟು ಸಂಖ್ಯೆಯ ಭಾಷೆಗಳು ಕೊನೆ ಯುಸಿರೆಳೆಯುತ್ತಿವೆ ಎನ್ನುವ ಆಘಾತಕಾರಿ ಸತ್ಯವನ್ನೂ National Geographic's Enduring Voices ಸಂಸ್ಥೆ ಹೊರಗೆಡಹಿದೆ. ಕೋರೋ ಭಾಷೆ ಲಿಪಿಯಿಲ್ಲದ ಭಾಷೆ, ಕೊಂಕಣಿ ಮತ್ತು ತುಳು ರೀತಿ.
ಸ್ವಾರಸ್ಯ(?) ವೆಂದರೆ ಈಶಾನ್ಯ ಭಾರತದ ಅರುಣಾಚಲ ಪ್ರದೇಶಕ್ಕೆ ಹೋಗಿ ಆ ಹೊಸ ಭಾಷೆಯ ಸೊಗಡನ್ನು ಕೇಳಿ ನೋಡಿ ಆನಂದಿಸೋಣ ಎಂದರೆ ಅಲ್ಲಿಗೆ ಹೋಗಲು “ವಿಶೇಷ ಅನುಮತಿ” permit ಬೇಕು. ನಾವೆಲ್ಲಾ ಟೀಕಿಸಲು, ದೇಶ ವಿರೋಧಿಗಳ ರಾಜ್ಯ ಎಂದು ಹಳಿಯುವ ಕಾಶ್ಮೀರಕ್ಕೆ ಹೋಗಲು ನಮಗೆ ಯಾವುದೇ ಪರವಾನಗಿ ಬೇಡ, ಕಾಶ್ಮೀರಿಗಳಂತೆಯೇ ಭಾರತೀಯರಾದರೆ ಸಾಕು. ಪರವಾನಗಿ ಪಡೆಯಬೇಕಾದ ಮತ್ತೆರಡು ರಾಜ್ಯಗಳೆಂದರೆ “ಮಿಜೋರಾಂ” ಮತ್ತು “ನಾಗಾಲ್ಯಾಂಡ್”.