ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?
ಬರಹ
ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?
ವಾಹನ ಖರೀದಿಸುವಾಗ ಇಂಧನ ದಕ್ಷತೆ,ವಿದ್ಯುತ್ ಬಳಸುವ ಸಾಧನ ಖರೀದಿಸುವಾಗ ವಿದ್ಯುತ್ ಬಳಕೆಯ ದಕ್ಷತೆಯ ಬಗ್ಗೆ ಗಮನ ನೀಡುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.ಆದರೆ ನೀರಿನ ಬಳಕೆಯನ್ನೂ ಮಾನದಂಡವಾಗಿ ಬಳಸುವಷ್ಟು ನೀರಿನ ಬಗ್ಗೆ ನಮ್ಮಲ್ಲಿ ಅನೇಕರಿಗೆ ಕಾಳಜಿಯಿರಲಿಕ್ಕಿಲ್ಲ.ವಾಶಿಂಗ್ ಮೆಶೀನ್ ಅಂತಹ ಸಾಧನ ಖರೀದಿಸುವಾಗ ಅದು ಬಟ್ಟೆ ಒಗೆಯಲು ಬಳಸುವ ನೀರಿನ ಪ್ರಮಾಣವೆಷ್ಟು ಎನ್ನುವುದನ್ನು ಜಾಹೀರು ಪಡಿಸುವುದನ್ನು ಕಡ್ಡಾಯವಾಗಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶವಿದೆ.ಇಂತಹ ನೀರಿನ ಬಗೆಗಿನ ವಿವರವನ್ನು ನೀಡುವುದನ್ನು ಕಡ್ಡಾಯವಾಗಿಸುವ ನೀರಿನ ದಕ್ಷತೆಯ ಕಾರ್ಯಾಲಯವನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ನೀರಿನ ಸಂಪನ್ಮೂಲದ ಸಚಿವಾಲಯವು ಸರಕಾರದ ಮೇಲೆ ಒತ್ತಡ ಹೇರಲಿದೆ.ಕೈಗಾರಿಕೆಗಳು,ರೈತರು ಬಳಸುವ ನೀರಿನ ಮೇಲೆ ಕಣ್ಣಿಟ್ಟು,ಅದನ್ನು ನಿಯಂತ್ರಿಸಲು ಮತ್ತು ಅವರ ನೀರಿನ ದಕ್ಷತೆಯನ್ನು ಹೆಚ್ಚಿಸಲು ಒತ್ತಾಯಿಸುವುದು ಈಗಿನ ಅಗತ್ಯವಾಗಿದೆ.ಸ್ವಾತಂತ್ರ್ಯ ಬಂದ ದಶಕದಲ್ಲಿ ಭಾರತದಲ್ಲಿ ಪ್ರತಿವ್ಯಕ್ತಿಗೆ ಐದುಸಾವಿರ ಘನಮೀಟರ್ ನೀರಿನ ಲಭ್ಯತೆಯಿದ್ದರೆ,ಈಗದು ಬರೇ ಸಾವಿರದ ಮುನ್ನೂರು ಘನಮೀಟರುಗಳಿಗೆ ಕುಸಿದಿದೆ.ಹಾಗಾಗಿ,ಈಗಿನ ಸನ್ನಿವೇಶದಲ್ಲಿ ನೀರಿನ ದಕ್ಷತೆಯ ಕಡೆ ಕಣ್ಣಿಡಬೇಕಾದ್ದು ಅನಿವಾರ್ಯವಾಗಿದೆ.
-------------------------------------------
ಟ್ವಿಟರ್ ಅಂತಹ ತಾಣಗಳಲ್ಲಿ,ಸಂದೇಶಗಳ ಉದ್ದ ಸೀಮಿತವಾಗಿರಬೇಕಾಗುತ್ತದೆ.ಇಂತಹ ತಾಣಗಳಲ್ಲಿ ನೀವು ನೋಡಿದ ಅಂತರ್ಜಾಲ ಪುಟದ ಕೊಂಡಿಯನ್ನು ನೀಡಲು ಸಮಸ್ಯೆಯಾಗುವುದಿದೆ.ಉದ್ದವಾದ ವಿಳಾಸವನ್ನು ಕಿರಿದಾಗಿಸುವುದು ಅಗತ್ಯವಾಗುತ್ತದೆ.http://bit.ly/ಅಂತಹ ತಾಣಗಳು ಇಂತಹ ವಿಳಾಸ ಕಿರಿದಾಗಿಸುವ ಸೇವೆ ಒದಗಿಸಿ,ಟ್ವಿಟರ್ ಬಳಕೆದಾರರಿಗೆ ನೆರವಾಗುತ್ತವೆ.ಈಗ ಗೂಗಲ್ ಕೂಡಾ http://goo.gl/ ಎನ್ನುವ ಇಂತಹ ಸೇವೆಯನ್ನು ನೀಡಲಾರಂಭಿಸಿದೆ.ಈ ಸೇವೆ ಒದಗಿಸಿದಾಗ,ಗೂಗಲ್‌ಗೆ ಬಳಕೆದಾರನು ಯಾವ ಪುಟಗಳ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎನ್ನುವ ಮಾಹಿತಿ ಸಿಗುತ್ತದೆ.ಇದು ಬಿಟ್.ಲೀಯಂತಹ ಜನಪ್ರಿಯ ಸೇವೆಗಳಿಗೆ ಯಾವ ರೀತಿ ಹಿನ್ನಡೆ ತರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.ಬಳಕೆದಾರನಿಗೆ ಬೇಕಾದ ಸರ್ವ ಸೇವೆಗಳನ್ನೂ ತಾನೇ ಒದಗಿಸಿ,ಅಗಾಧ ಸಂಖ್ಯೆಯ ಜನರ ಮಾಹಿತಿ,ಬಳಕೆ,ಅವರ ದತ್ತಾಂಶಗಳ ಮೇಲೆ ನಂಬಲು ಕಷ್ಟವಾಗುವಷ್ಟು ಹಿಡಿತ ಸಾಧಿಸುವ ಗೂಗಲ್ ಯತ್ನದ ಭಾಗವಾಗಿ ಈ ಹೆಜ್ಜೆಯನ್ನು ಕಾಣುವ ತಜ್ಞರಿದ್ದಾರೆ.
----------------------------------------
ಜೆಪೆಗ್ ಬದಲು webp
ಚಿತ್ರಗಳನ್ನು ಕಂಪ್ಯೂಟರಿನಲ್ಲಿ ಸಂಗ್ರಹಿಸುವಾಗ,ಬೇರೆ ಬೇರೆ ತೆರನ ಶೇಖರಣಾ ವಿಧಾನಗಳನ್ನು ಬಳಸಬಹುದು.ಕೆಲವು ವಿಧಾನಗಳಲ್ಲಿ ಚಿತ್ರವನ್ನು ಉಳಿಸಿದಾಗ,ಚಿತ್ರವನ್ನು ಶೇಖರಿಸಲು ಅಗತ್ಯವಾದ ಸ್ಮರಣಕೋಶದ ಸಾಮರ್ಥ್ಯ ಹೆಚ್ಚು,ಇನ್ನು ಕೆಲವು ರೀತಿಗಳಲ್ಲಿ ರೂಪಿಸಿದಾಗ,ಚಿತ್ರವು ಕಡಿಮೆ ಸ್ಮರಣಕೋಶ ಸಾಮರ್ಥ್ಯವನ್ನು ಬಳಸುತ್ತದೆ.ಜೆಪೆಗ್ ಇಂತಹ ರೂಪಿಸುವ ಜನಪ್ರಿಯ ವಿಧಾನವಾಗಿದೆ.ಅಂತರ್ಜಾಲದ ಹೆಚ್ಚಿನ ಚಿತ್ರಗಳು ಈ ರೀತಿಯಲ್ಲಿ ರೂಪಿಸಲಾಗಿರುವುದೇ ಹೆಚ್ಚು.ಈ ಶೈಲಿಯು ಚಿತ್ರವನ್ನು ತುಸು ಕೆಡಿಸಿದರೂ,ಕಡಿಮೆ ಸ್ಮರಣಕೋಶ ಸಾಮರ್ಥ್ಯವನ್ನು ಬಳಸುವುದರಿಂದ ಜನಪ್ರಿಯವಾಗಿದೆ.ಈಗ ಗೂಗಲ್ ಅಭಿವೃದ್ಧಿ ಪಡಿಸಿರುವ ವೆಬ್‌ಪಿ ಎನ್ನುವ ರೂಪಣಾ ವಿಧಾನವು ಜೆಪೆಗ್‌ಗಿಂತಲೂ ಶೇಕಡಾ ನಲುವತ್ತು ಕಡಿಮೆ ಸ್ಮರಣಸಾಮರ್ಥ್ಯವನ್ನು ಬಳಸುವುದಂತೆ.ಇದು ಹೊಸ ವಿಧಾನವಾದುದರಿಂದ ಬ್ರೌಸರ್,ಕ್ಯಾಮರಾ ಅಥವಾ ಚಿತ್ರವನ್ನು ಮಾರ್ಪಡಿಸುವ ತಂತ್ರಾಂಶಗಳಲ್ಲಿ ಇನ್ನೂ ಲಭ್ಯವಾಗಿಲ್ಲವೆನ್ನುವ ಸಮಸ್ಯೆಯಿದೆ.ಆದರೆ ನಿಧಾನವಾಗಿ,ತಂತ್ರಾಂಶಗಳಲ್ಲಿ ಮತ್ತು ಬ್ರೌಸರುಗಳಲ್ಲಿ,ಅಂತಹ ಸಾಮರ್ಥ್ಯವನ್ನು ಅಳವಡಿಕೆಯಾಗುವುದು ಶತಸಿದ್ಧ.ಈಗಿನ ಅಂತರ್ಜಾಲದ ಪುಟದ ಶೇಕಡಾ ಅರುವತ್ತೈದು ಭಾಗ ಚಿತ್ರಗಳೇ ಆಗಿರುತ್ತವೆ ಎನ್ನುವ ಅಂದಾಜು ಮಾಡಲಾಗಿದೆ.ಹಾಗಾಗಿ,ವೆಬ್‌ಪಿ ವಿಧಾನವನ್ನು ಬಳಸಿದ ಪುಟಗಳು ವೇಗವಾಗಿ ಲೋಡ್ ಆಗುವ ಲಾಭ ಬಳಕೆದಾರರಿಗೆ ಸಿಗಲಿದೆ.ಗೂಗಲಿನ ಮುಕ್ತ,ಬಳಸಲು ಯಾವುದೇ ರಾಯಧನ ಕೊಡಬೇಕಿಲ್ಲದ ವಿಡಿಯೋ ರೂಪಿಸುವ ವಿಧಾನವಾದ ವೆಬ್‌ಎಂ ಎನ್ನುವ ವಿಧಾನದಿಂದ ವೆಬ್‌ಪಿಯನ್ನು ವ್ಯುತ್ಪತ್ತಿ ಮಾಡಲಾಗಿದೆ.
--------------------------------------------------
ಅವಧಿಗಿಂತ ಮೊದಲೇ ಹುಟ್ಟಿದ ಮಕ್ಕಳು,ತಮ್ಮ ದೇಹದ ಶಾಖವನ್ನು ಕಾಪಿಡಲು ವಿಫಲವಾಗುವುದಿದೆ.ಇದಕ್ಕಾಗಿ ಕಂದಮ್ಮಗಳನ್ನು ಇಂಕ್ಯುಬೇಟರ್ ಎನ್ನುವ ಕೃತಕ ಕಾವುಪೆಟ್ಟಿಗೆಯಲ್ಲಿ ಇಡಬೇಕಾಗುತ್ತದೆ.ಹಳ್ಳಿಯಲ್ಲಿ ಇಂತಹ ಕಾವುಪೆಟ್ಟಿಗೆಗಳಿಲ್ಲದೆ,ಮಕ್ಕಳು ಸಾಯುವುದು ಸಾಮಾನ್ಯವಂತೆ.ಎಂಬ್ರೇಸ್ ಎನ್ನುವ ಚೀಲದಂತೆ ತೋರುವ ಕಾವುಪೆಟ್ಟಿಗೆಗಳು ಮಿತವ್ಯಯಿಯಾಗಿದ್ದು,ಮಕ್ಕಳ ದೇಹದ ಶಾಖವನ್ನು ಕಾಪಿಟ್ಟು,ಅವುಗಳ ಜೀವವನ್ನು ಉಳಿಸಲು ನೆರವಾಗುತ್ತವೆ.ಎಂಬ್ರೇಸ್ ಎನ್ನುವ ಲಾಭರಹಿತ ಸಂಸ್ಥೆಯು ಮಕ್ಕಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಬಳಸಬಹುದಾದ,ಕಾವುಪೆಟ್ಟಿಗೆಯನ್ನು ಅಭಿವೃದ್ಧಿಪಡಿಸಲು ಸಮರ್ಥವಾಗಿದೆ.ಇದಕ್ಕೆ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಪೂರೈಕೆ ಇದ್ದರೆ ಸಾಕಾಗುತ್ತದೆ.ಇದರಲ್ಲಿ ವಿದ್ಯುತ್ ಹೀಟರ್,ಮಗುವನ್ನು ಇರಿಸುವ ಬ್ಯಾಗ್,ಹೀಟರಿನ ಬಿಸಿಯನ್ನು ಕಾಪಿಡುವ ಮೇಣದ ಪದರ ಇತ್ಯಾದಿ ಭಾಗಗಳಿವೆ.
-----------------------------------------------
ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು,ರೈತರಿಗೆ ಸುಲಭ,ಅಗ್ಗ,ಪರಿಸರಸ್ನೇಹೀ ಮತ್ತು ಸಣ್ಣ ಯಂತ್ರಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಪಣತೊಟ್ಟ ಸ್ವದೇಶೀ ತಂತ್ರಜ್ಞರ ಸಮಾವೇಶವೇ ಸ್ವತಂಸಮ್.ಇದರ ಅಂತರ್ಜಾಲ ತಾಣ http://swatamsam.in.ಸ್ವದೇಶೀ ತಂತ್ರಜ್ಞರು ಗಾಂಧೀಜಯಂತಿಯಂದು ಆನೆಗುಡ್ಡೆಯ ಕುಂಭಾಷಿಯಲ್ಲಿ ಸಮಾವೇಶ ಏರ್ಪಡಿಸಿದ್ದರು.ಅಗ್ಗದ ಗೋಬರ್ ಗ್ಯಾಸ್ ಸಂಶೋಧಕ ಮೂಡಿಗೆರೆಯ ಕೃಷ್ಣರಾಜು ಮತ್ತು ಕಡಿಮೆ ಶ್ರಮದಾಯಕ ಸೈಕಲ್ ವಿನ್ಯಾಸ ರೂಪಿಸಿದ,ಬೆಂಗಳೂರಿನ ನಟರಾಜ್ ಅವರ ಪ್ರಾತ್ಯಕ್ಷಿಕೆಗಳು ಏರ್ಪಾಡಾಗಿದ್ದುವು.ರೈತರು ಕೃಷಿಯ ಜತೆಗೆ,ಸಿದ್ಧ ಸರಕನ್ನು ತಯಾರಿಸುವತ್ತ ಗಮನ ಹರಿಸಿದರೆ,ಅವರ ಆದಾಯ ಹೆಚ್ಚುತ್ತದೆ.ಹಳ್ಳಿಗಳಲ್ಲೂ ವರ್ಷಪೂರ್ತಿ ಉದ್ಯೋಗ ದೊರಕುತ್ತದೆ.ಇದರಿಂದ ಹಳ್ಳಿಗಳ ಪ್ರಗತಿ ಸಾಧ್ಯ.ಇದಕ್ಕೆ ಅನುಕೂಲವಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿರುವ ಸ್ವತಂಸಂ,ಅಗ್ಗದ ಗಿರಣಿ,ಅಕ್ಕಿಮಿಲ್,ಕಸದಿಂದ ವಿದ್ಯುತ್ ಇಂತಹ ಯೋಜನೆಗಳನ್ನು ಹಾಕಿಕೊಂಡಿದೆ.ತಂತ್ರಜ್ಞರಾದ ಕುಂಭಾಷಿಯ ಸಂಪತ್‌ಕುಮಾರ್ ಮತ್ತು ದ್ಯುತಿ ಟೆಕ್ನಾಲಜಿಯ ಹರ್ಷ ಸಾಲೀಮಠ ಸಮಾವೇಶವನ್ನು ಆಯೋಜಿಸಿದ್ದರು.
--------------------------------------
ಟ್ವಿಟರ್ ಚಿಲಿಪಿಲಿ
*ಆಪಲ್ ಹಣ್ಣಿನ ಬದಲು ಮರವೇ ನ್ಯೂಟನ್ ತಲೆ ಮೇಲೆ ಬಿದ್ದಿದ್ದರೆ,ಭೌತಶಾಸ್ತ್ರ ಇಷ್ಟು ಕಠಿನವಾಗ್ತಿರಲಿಲ್ಲವೇನೋ..
*ಹೆಂಗಸರ ಹೆಸರಲ್ಲಿ ಶೇಕಡಾ ಎಂಭತ್ತರಷ್ಟು ಜನರ ಹೆಸರಿನ ಕೊನೆಯ ಅಕ್ಷರ A,ಶೇಕಡಾ ಹದಿನೈದು ಜನರದ್ದು I ಅಕ್ಷರದಿಂದ ಕೊನೆಗೊಂಡರೆ ಇನ್ನು ಮೂರು ಶೇಕಡಾ ಹೆಂಗಸರ ಹೆಸರು, L ಅಕ್ಷರದಿಂದ ಕೊನೆಯಾಗುತ್ತವೆ.
*ಕಾಮನ್‌ವೆಲ್ತ್ ಗೇಮ್ಸ್ ಭಾರತಕ್ಕೆ ಸಿಗಲು ಎಪ್ಪತ್ತೆರಡು ದೇಶಗಳಿಗೆ ಲಂಚ ನೀಡಲಾಗಿತ್ತು..
*ಕಟ್ಟಾ ಕೆಟ್ಟ.
*ತಾರೀಕಿನ ತಾರೀಫು 10-10-10
------------------------------------------
ಓದುಗರ ಪ್ರತಿಕ್ರಿಯೆಗಳು
*ಅಪಘಾತಗಳ ವಿಶ್ಲೇಷಣೆಯಿಂದ "ಶ್ರುತ" ಪಡುವುದು ಎಂಬ ಪದಪ್ರಯೋಗ ಅರ್ಥವಾಗಲಿಲ್ಲ.ಗೂಗಲ್‌ನಲ್ಲಿ ಆ ಪದವಿರುವ ಪುಟಗಳು ಸಾಕಷ್ಟು ಸಿಕ್ಕಿದುವು:ಪ್ರಸನ್ನ(ಶ್ರುತ=ಕೇಳಿದ,ಆಲಿಸಿದ,ಸ್ಪಷ್ಟವಾಗು)
*ಉತ್ತಮ ಮಾಹಿತಿಯುಳ್ಳ ಬರಹಗಳಿವೆ-ಗೋಪಿನಾಥ
---------Udayavani
---------------Udayavaniepaper
----------------------------------


*ಅಶೋಕ್‌ಕುಮಾರ್ ಎ