“ಯಡಿಯೂರಪ್ಪ ಅತಂತ್ರ” - ಪ್ರಜಾಸತ್ತಾ ವ್ಯವಸ್ಥೆ “ಸುತಂತ್ರವೇ?”

“ಯಡಿಯೂರಪ್ಪ ಅತಂತ್ರ” - ಪ್ರಜಾಸತ್ತಾ ವ್ಯವಸ್ಥೆ “ಸುತಂತ್ರವೇ?”

ಬರಹ

‘ಯಡಿಯೂರಪ್ಪ ಅತಂತ್ರ’ - ಇದು ಅಕ್ಟೋಬರ್ 7ರ ಪ್ರಜಾವಾಣಿ  ಧ್ವಜ ಶೀರ್ಷಿಕೆ.


ಅದೇ ಸಂಪಾದಕೀಯದಲ್ಲಿ ವರ್ಣಿಸಿದ್ದಾರೆ, ಇದು ಯಡಿಯೂರಪ್ಪನವರ ಸ್ವಯಂಕೃತ ಅಗ್ನಿ ಪರೀಕ್ಷೆ ಅಂತೆ. ಇರಬಹುದು ಆದರೆ ಗೆಲ್ಲುವುದು, “ಕುದುರೆ ಕೊಳ್ಳುವ” ಬಲ-ಚಾಣಾಕ್ಷತೆಯ ಮೇಲಲ್ಲದೆ, ಉದಾತ್ತ ತತ್ವ-ಸಿದ್ಧಾಂತದ ಮೇಲಲ್ಲ, ಅಲ್ಲವೇ?


ವೋಟು ಹಾಕಿ ಕಳಿಸಿದವರ ರಕ್ತ ಕುದಿಯಿತೇನೋ; ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮೈ ಪರಚಿಕೊಂಡರೇನೋ. ಪಾಪ, ಅದು ಬಡವನ ಕೋಪ! ನಮ್ಮೀ ಪ್ರಜಾಪ್ರಭುತ್ವದಲ್ಲಿ, ನಮ್ಮ ವೋಟಿನಿಂದ ನಮ್ಮ ಸಂಕಲ್ಪ-ನಿರ್ಧಾರಗಳು ಸಾಕಾರವಾಗುವುದು ಎಂದಾದರೂ ಉಂಟೇ?!


ಹಿಂದೆ Underworld ಎಂದು ತಿರಸ್ಕಾರದಿಂದ ಕರೆಯಲಾಗುತ್ತಿದ್ದ ನರಕದ ಬಹಿರಂಗ ರೂಪವಷ್ಟೇ ಇಂದಿನ ರಾಜಕೀಯ! ಧ್ಯೆಯ, ಸಿದ್ಧಾಂತ, ಸಮಾಜಸೇವೆಗಳಿಂದ ಇದು ಗಾವುದ-ಗಾವುದ ದೂರ!


ದಲಿತರು, ಅಲ್ಪಸಂಖ್ಯಾತರು ಎಂದಷ್ಟೇ ಇದ್ದ ವೋಟ್ಬ್ಯಾಂಕ್ ಜತೆಗೆ ಇಂದು, ಕುರುಬರು, ಬಣಜಿಗರು, ಬೋವಿಗಳು ಇತ್ಯಾದಿ ಸಹಸ್ರ-ಸಹಸ್ರ ಜಾತಿ, ಉಪಜಾತಿಗಳಲ್ಲೂ ದೇಶವನ್ನು ಸಿಗಿದಿಡಲಾಗುತ್ತಿದೆ. ಜನಪ್ರತಿನಿಧಿಯಾಗುವವರು ಸಮಾಜದ ಬಹು ಜನತೆಯ ನಂಬಿಕೆ, ಪ್ರೀತಿ, ವಿಶ್ವಾಸಗಳಿಗೂ, ನಂಬಿಕೆಗೂ ಅರ್ಹರಾಗಿರಬೇಕೆಂಬ ಕಾನೂನಿನ ಕಡ್ಡಾಯವೇನೂ ಇಲ್ಲ; Margin ಮೇಲಷ್ಟೇ ಗಲುವು ನಿರ್ಧಾರವಾಗುತ್ತದೆ. ಎದುರಾಳಿಗಿಂತಾ ನಾಲ್ಕಾರು ಓಟು ಹೆಚ್ಚು ಗುಂಜಿಕೊಳ್ಳುವುದೇ ಇಲ್ಲಿ ಯಶಸ್ವೀ ಚುನಾವಣಾ Engineering!


ಸರ್ಕಾರದ ಎಲ್ಲಾ ಸಂಪನ್ಮೂಲದ ಆಮಿಶ-ಬಾಜಿ ಒಡ್ಡಿ ತಮ್ಮ ತಮ್ಮ ಗೂಂಡಾ ಪಡೆ ಹುರಿದುಂಬಿಸುವ ಕಟ್ಟಿಕೊಳ್ಳುವ ದಾದಾಗಳು, ಅದರ ಮೂಲಕ ಹಣ-ಹೆಂಡ-ತೋಳ್ಬಲಗಳಿಂದ ಶೇ. 20-25 ವೋಟ್ ಗಳಿಸಿ ಗೆದ್ದೇಬಿಡುತ್ತಾರೆ; ಸಭ್ಯರೂ, ಸಂಸ್ಕೃತಿವಂತರೂ ಎಂದು ಕೊಚ್ಚಿಕೊಳ್ಳುವ ನಾವು ಉಳಿದ ಶೇ. 75-80ರ ಪೈಕಿ ಮೂಲೆಗುಂಪಾಗಿರುತ್ತೇವೆ! (ಹೋಗಿ ವೋಟ್ ಮಾಡುವುದಿಲ್ಲವೆಂದಲ್ಲ. ಹಾಕಿದ ಅಷ್ಟೂ ವೋಟು ಸೋತ ಅಭ್ಯರ್ಥಿಗಳ ರೂಪದಲ್ಲಿ ಸದನದ ಹೊರಗೇ ಉಳಿದಿರುತ್ತದೆ! ಈ ವ್ಯವಸ್ಥೆಯಲ್ಲಿ, ಯಾವುದೇ ಸದನವೂ ನಿಜವಾದ ಅರ್ಥದಲ್ಲಿ “ಪ್ರಾತಿನಿಧಿಕ” ಆಗಿರುವುದೇ ಇಲ್ಲವೆಂಬ ಘೋರ ಸತ್ಯವನ್ನು ಮನಸ್ಸಿಗೆ ಹಾಕಿಕೊಳ್ಳಬೇಕಾಗಿ ಪ್ರಾರ್ಥನೆ!)


ಈಗ ಆಡಳಿತ ಪಕ್ಷದ ಅಯೋಮಯವಿರಲಿ, ವಿರೋಧಪಕ್ಷದ ಯಜಮಾನರುಗಳು ಸಹ, ತಮ್ಮ ಶಾಸಕರು, ‘ಎಲ್ಲಿ ತಮ್ಮನ್ನೇ ಮಾರಿಕೊಂಡುಬಿಡುತ್ತಾರೋ’ ಎಂಬ “ಕುದುರೆ ವ್ಯಾಪಾರ”ಕ್ಕಂಜಿ, ಅವರನ್ನು ಪರಿಷೆ ದನಗಳಂತೆ, ‘ಹೈ-ಹೈ’ ‘ಹಚ-ಹಚ’ ಎಂದು ಅಟ್ಟಿಕೊಂಡು ನೆರೆ ರಾಜ್ಯಗಳ ರೆಸಾರ್ಟುಗಳಿಗೆ ವಲಸೆ ಹೊಗುತ್ತಿದ್ದಾರಂತಲ್ಲಾ! ನಮಗೂ ನಾಚಿಕೆ ಎನ್ನುವುದಿದೆಯೇ?!