ದಸರಾ...ನನ್ನೀ ಮನದ ನೆನಪಿನ ಮೆರವಣಿಗೆ...
ಮೈಸೂರು ದಸರಾ ಎಷ್ಟೋಂದು ಸುಂದರಾ...೬೦, ೭೦ ರ ದಶಕದಲ್ಲಿ ನಾವಿದ್ದದ್ದು ಮೈಸೂರಿನ ಅರಮನೆಯ ಬಳಿ. ದಸರಾ ಹಬ್ಬ ಹತ್ತಿರವಾಗುತ್ತಿದ್ದಂತೆ ದಿನವೂ ಆನೆಗಳನ್ನು ತಾಲೀಮಿಗೆಂದು ಕರೆತರುತ್ತಿದ್ದ ಆನೆಗಳನ್ನು ಮಾವುತರು ಅಗ್ರಹಾರ, ಮಾರುಕಟ್ಟೆಗಳಿಗೆ ಕರೆತರುತ್ತಿದ್ದರು. ಅದರ ಹಿಂದೆ ನಮ್ಮ ವಾನರ ಸೈನ್ಯದ ದಂಡು. ಆನೆ, ಹಸುಗಳಿಗಾಗಿ ಅಲ್ಲಲ್ಲಿ ನೀರಿನ ತೊಟ್ಟಿಗಳು ಇರುತ್ತಿದ್ದವು. ಅದರ ಬಳಿ ನೀರಿಗಾಗಿ ಆನೆಗಳನ್ನು ನಿಲ್ಲಿಸುತ್ತಿದ್ದರು. ಅವು ಲದ್ದಿ ಹಾಕಿದಲ್ಲಿ ಹೇ ಎಂದು ತುಳಿಯುತ್ತಿದ್ದ ಪಡ್ಡೆ ಹುಡುಗರು, ಅವು ಮುಂದೆ ಸಾಗಲು ಬಿಡುತ್ತಿರಲಿಲ್ಲ. ಮನೆಯ ಮುಂದೆ ನಿಂತು ಮೊರದಲ್ಲಿ ಬೆಲ್ಲ, ಅಕ್ಕಿ, ಕಾಯಿ, ಹಣ್ಣು ಕೊಡುತ್ತಿದ್ದ ಹೆಂಗಸರು ಮಾವುತನಿಗೂ ಹತ್ತು ಪೈಸೆ ನೀಡುತ್ತಿದ್ದರು. ಅಲ್ಲದೇ ಪೇಪರ್‌ನಲ್ಲಿ ಹಬ್ಬಕ್ಕಾಗಿ ಮಾಡಿದ್ದ ಕರಿದ ತಿನಿಸುಗಳನ್ನು ಸುತ್ತಿ ಕೊಡುತ್ತಿದ್ದರು. ಹಾಥಿ ಭೀ ಖುಷ್ ಸಾಥೀ ಭೀ ಖುಷ್! ದೂರ ನಿಂದು ಹೆದರಿ ಹೆದರಿ ಅದರ ಮೈ, ಸೊಂಡಿಲು ಮುಟ್ಟಿ, ಬಿಸಿಲು ಮಳೆ ಲೆಕ್ಕಿಸದೆ ಸಾಕಷ್ಟು ದೂರ ಆನೆಯ ಹಿಂದೆ ದಂಡು, ದಂಡಾಗಿ ಮಕ್ಕಳ ಹಿಂಡಿನಲ್ಲಿ ಓಡುತ್ತಿದ್ದೆವು. ಅದೇನೋ ಖುಷಿ, ಅದೆಂಥಾ ಸಂಭ್ರಮವದಾಗಿತ್ತು. ಅದೊಂದು ಸುಂದರ ಬಾಲಕಾಂಡ. ಆ ಆನೆಗ ಜೊತೆ ಓಡಿದ್ದನ್ನು ನೆನೆದರೆ "ಆ ದಿಗ್ಗಜದ ಮುಂದೆ ನಮ್ಮ ಕುಬ್ಜತೆಯ ಅರಿವಾಗುತ್ತದೆ".
ಮಹಾರಾಜರ ಕಾಲದಲ್ಲಿ, ದಸರೆಗೆ ಮಾತ್ರವಲ್ಲದೆ ಬೇರೆ ಸಮಯಗಳಲ್ಲೂ ಆನೆಗಳನ್ನು ನೋಡಿಕೊಳ್ಳಲು ಮಾವುತರಿದ್ದರು. ಇದೀಗ ಗಜಶಾಲೆ, ಆನೆಕರವಟ್ಟಿ ಹೆಸರು ಹಾಗೂ ನೆನಪು ಮಾತ್ರ. ಜಯಚಾಮರಾಜೇಂದ್ರ ಒಡೆಯರ ಅಂಬಾರಿ ಆನೆಯ ಹೆಸರು ಸುಂದರರಾಜ ಎಂದು ನೆನಪು.
ಜಂಬೂ ಸವಾರಿಯಂದು ೭೫೦ ಕಿಲೋ ತೂಕದ ಚಿನ್ನದ ಅಂಬಾರಿ ಹೊರುವ ಪಟ್ಟದ ಆನೆಯೇ ನಾಯಕ. ಇವನ ಸುತ್ತಲೂ ಅವನೊಂದಿಗೆ ಮಂದಗಮನೆಯರಾಗಿ ಹೆಜ್ಜೆ ಹಾಕುವ ಗಜಗಾಮಿನಿಯರು. ಆನೆಯ ನಡಿಗೆಯ ಸೊಬಗು ನೋಡಲು ಬಲು ಚೆಂದ. ಮಂದಗತಿಯಲಿ, ರಾಜಗಾಂಭೀರ್ಯದಿಂದ ಅರಮನೆಯ ಆವರಣದಿಂದ ೨.೫ ಕಿ.ಮೀ ದೂರ ಇರುವ ಬನ್ನಿ ಮಂಟಪದತ್ತ ಅಲಂಕೃತಗೊಂಡು ನಡೆವ ಗಜಸಮೂಹದ ಸೊಬಗನ್ನು ನೋಡಲು ಕಣ್ಣೆರಡು ಸಾಲದು. ಈ ಅತ್ಯಾಕರ್ಷಕ ಮೆರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಚಿತ್ರಗಳು, ಪೊಲೀಸ್ ಬ್ಯಾಂಡ್, ಕುದುರೆ, ಕಾಲಾಳುಗಳು, ಪೋಲೀಸ್ ಬ್ಯಾಂಡ್, ಕುದುರೆ, ಕಾಲಾಳು, ನಂದಿಧ್ವಜ. ಅವದ ಜೊತೆಗೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಕುಸ್ತಿ, ಜಟ್ಟಿ ಕಾಳಗ, ಮಲ್ಲಯುದ್ಧ, ನಾಟಕ, ಜನಪದ ಕುಣಿತ ಮುಂತಾದ ಕಲೆಗಳ ಪ್ರದರ್ಶನ, ಪಾರಿತೋಷಕಗಳು ಸಾಂಸ್ಕೃತಿಕ ಪರಂಪರೆಯನ್ನು ಸೃಷ್ಟಿಸಿದವು.
ಈ ಮೆರವಣಿಗೆಯನ್ನು ವೀಕ್ಷಿಸಲು ಬರುತ್ತಿದ್ದ ಜನರು ಮಳೆ ಬಿಸಿಲೆನ್ನದೆ ಮನೆಯ ಮಾಳಿಗೆ, ಮರ, ಉಪ್ಪರಿಗೆಗಳ ಮೇಲೆ ಕಾದು ಕುಳಿತಿರುತ್ತಿದ್ದರು. ಈ ಜಂಬೂ ಸವಾರಿಯ ವೀಕ್ಷಣೆಗಾಗಿ ವಿದೇಶಗಳಿಂದ ಆಗಮಿಸುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಮೆರವಣಿಗೆಯು ಬನ್ನಿ ಮಂಟಪದತ್ತ ಸಾಗುತ್ತಿತ್ತು. ಅಂಬಾರಿ ಹೊತ್ತ ಗಜರಾಜ ಸಾಗುತ್ತ್ದಿದಂತೆಯೇ ಲಕ್ಷಾಂತರ ಜನರ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಬನ್ನಿ ಮಂಟಪದತ್ತ ತೆರಳಿ, ಬನ್ನಿ ವೃಕ್ಷದ ಪೂಜೆ. ಆನಂತರ ಪಂಜು ಪ್ರದರ್ಶನ. ಆನಂತರ ಮೆರವಣಿಗೆ ಅರಮನೆಗೆ ವಾಪಸ್. ದಾರಿಯ ಇಕ್ಕೆಲೆಗಳಲ್ಲಿ ತುಂಬಿ ನಿಂದಿರುತ್ತಿದ ಜನ ಸಂದಣಿ ಅಂಬಾರಿಯ, ರಾಜರ ದರುಶನದ ನಂತರ ಜನ ಚದುರಿ ಹೋಗುತ್ತಿದ್ದರು. ೧೯೭೨ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ೩೬೨ ವರ್ಷಗಳ ಸಂಪ್ರದಾಯ ಕೊನೆಗೊಂಡಿತು.
ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಆ ಸಂಪ್ರದಾಯ, ಸಂಸ್ಕೃತಿಗಳ ಜವಾಬ್ದಾರಿ ಕರ್ನಾಟಕ ಸರಕಾರ ವಹಿಸಿಕೊಂಡಿದೆ. ಈ ಎಲ್ಲ ಸಂಪ್ರದಾಯಗಳು ಕಾಲಕ್ಕನುಗುಣವಾಗಿ ಕೆಲವು ಮಾರ್ಪಾಡುಗಳೊಂದಿಗೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಇಂದು ಮಹಾರಾಜರ ಬದಲಾಗಿ, ಸಾಹಿತ್ಯ, ಸಂಸ್ಕೃತಿ ಪ್ರಾಮುಖ್ಯರಿಂದ ಈ ಉತ್ಸವ ಪ್ರಾರಂಭಗೊಳ್ಳುತ್ತದೆ. ಜಂಬೂಸವಾರಿಯಲ್ಲಿ ಮಹಾರಾಜರ ಚಿನ್ನದ ಅಂಬಾರಿಯಲ್ಲಿ ಇದೀಗ ದೇವಿ ಚಾಮುಂಡಾಂಬಿಕೆ ವಿರಾಜಮಾನಗೊಳ್ಳುತ್ತಾಳೆ. ಹಿಂದಿನ ವೈಭವದ ಕುರುಹಾಗಿ ಇಂದೂ ಕರ್ನಾಟಕ ಸರಕಾರ ಈ ಉತ್ಸವದ ಉಸ್ತುವಾರಿ ವಹಿಸಿಕೊಂಡಿದೆ.
ಅಂದಿನ ವೈಭವ ಇಲ್ಲದಿದ್ದರೂ ಕಾಲಕ್ಕನುಗುಣವಾಗಿ ಪರಂಪರೆಯ ಸಂಪ್ರದಾಯದ ಮೆರವಣಿಗೆ ನಡೆಯುತ್ತದೆ. ಇಂದೂ ಅರಮನೆ, ಮೆರವಣಿಗೆ ಸಾಗುವ ರಸ್ತೆಗಳಲ್ಲಿ, ಅಂಗಡಿಗಳಲ್ಲಿ, ಮನೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ. ಹಾದಿಯುದ್ದಕ್ಕೂ ಹಾಕಿದ ರಂಗವಲ್ಲಿ, ಮದುವೆಯ ಮನೆಯಂತೆ ಕಂಗೊಳಿಸಿ ಸಂಭ್ರಮದ ವಾತಾವರಣವನ ಕಾಣಬಹುದಾಗಿದೆ. ಮೈಸೂರಿನ ಅರಮನೆಯ ದೀಪಾಲಂಕಾರ ನೋಡಲು ಬಲು ಸೊಗಸು. ಇಂದು ಈ ಅವಧಿಯಲ್ಲಿ ಅರಮನೆಯ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಮತ್ತು ಕ್ರೀಡಾ ಸ್ಫರ್ಧೆಗಳನ್ನು ಏರ್ಪಡಿಸುತ್ತದೆ.
ವೈಭವೋಪೇತವಾಗಿ ಇಲ್ಲದಿದ್ದರೂ ಸರಳ ರೀತಿಯಲಿ ಮೈಸೂರು ದಸರಾ ಎಷ್ಟೋಂದು ಸುಂದರಾ ಎಂಬ ಈ ಪಾರಂಪರಿಕ ಆಚರಣೆಯ ಮಹತ್ವ ಹೀಗೆಯೇ ಮುಂದುವರೆಯಲಿ.
ಅಂದು ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ, ಇಂದು ಅಂಬಾರಿ ಒಳಗೆ ಚಾಮುಂಡಿ ಕಂಡೆ....