“ವಿಶ್ವಾಸ”ದ ಶಾಸಕಾಂಗದ “ರೇಟ್” ಮತ್ತು ಪೇಟೆ ಮಂಡಕ್ಕಿ ರೇಟ್!
ಸಾವಿರ-ಸಾವಿರ ದೀನರಿಗೆ ಬದುಕು ಕೊಟ್ಟ ಶಿವಸ್ವರೂಪೀ ಸ್ವಾಮಿಗಳ ಸ್ಮಾರಕಕ್ಕೆ ಮುಖ್ಯಮಂತ್ರಿಗಳು ಸರಕಾರದ ವತಿಯಿಂದ ಐದು ಕೋಟಿ ರೂಪಾಯಿಗಳ ಉದಾರ ಅನುದಾನ ಘೊಷಿಸಿದರು. ಅದೇ, ವಿಶ್ವಾಸ ಮತದ ನಿಷ್ಠೆಗಾಗಿ ಶಾಸಕರನ್ನು ಖರೀದಿಸಲು (ಗುಲಾಮಗಿರಿ ದೇಶದಲ್ಲಿ ಎಂದೂ ಕಾಯ್ದೇಶೀರವಲ್ಲದಿದ್ದರೂ!) ಪಕ್ಷಗಳು 20ರಿಂದ 40 ಕೋಟಿಯವರೆಗೆ ಬಿಡ್ ಕೂಗುತ್ತಿರುವ ಸುದ್ದಿ ಬಹಿರಂಗ ಗುಟ್ಟಾಗಿರುವುದೇ! ಈ ಹಿನ್ನೆಲೆಯಲ್ಲಿ ಸರಕಾರದ ಆ ಔದಾರ‍್ಯ ಉದಾರವೇ?
ಇಪ್ಪತ್ತೋ, ಮುವತ್ತೋ, ಮೂವತ್ತೈದಕ್ಕೋ Deal ಕುದುರಿಸಿಕೊಳ್ಳಬಹುದಾದ ನವಫುಢರಿಗಳಿಗೆ, ಸದ್ಯಕ್ಕಂತೂ Heart-searching ಎಂಬ ‘ಕಂದಾಚಾರ’ಕ್ಕೆ ಟೈಂ ಇಲ್ಲದಿರಬಹುದು, ಆದರೆ ಎಗ್ಗಿಲ್ಲದ ಈ ಐಶಾರಾಮಿಯಿಂದ ಹಾನಿಯಂತೂ ಖಂಡಿತಾ ಉಂಟು. ಅದು ದೇಶಕ್ಕೆ - ಅಂದರೆ ನಮಗೆ, ಜನತೆಗೆ. ಈ ಹಾನಿಯೂ ಬರೀ “ನೈತಿಕತೆಯ ಬದನೆಕಾಯಿ ಪುರಾಣ”ವಲ್ಲ, ಮೂರ್ತ ಸ್ವರೂಪದ, ಲೆಕ್ಕಾಚಾರಕ್ಕೆ ಸಿಕ್ಕುವ Macro-economics ಆಗಿರುವುದೇ! ಇದು ಅರ್ಥವಾಗುವಷ್ಟು ‘ವಿದ್ಯೆ’ ಆ ‘ಫಲಾನುಭವಿ’ಗಳಿಗಿರಲಿ, ಸರಾಸರಿ ಜನಸಾಮಾನ್ಯಕ್ಕಾದರೂ ಉಂಟೇ?
ದೇಶದ ಉತ್ಪಾದಕತೆಗೆ ರಾಜಕಾರಣಿಗಳ ಕೊಡುಗೆಯಾದರೂ ಏನು? ಶೂನ್ಯಕ್ಕೇ ಹತ್ತಿರ. ಹೀಗಾಗಿ ಆ ಕುಬೇರರ ಬಳಿ ಸಂಗ್ರಹವಿರುವ, ಸಂಗ್ರಹವಾಗುವ ಕೋಟಿಗಳಿಗೂ ನಿಜವಾದ ‘ವೀರ‍್ಯ’ವಿರುವುದಿಲ್ಲ; Intrinsic Value ಇಲ್ಲದ ಸುಳ್ಳು ಮುಖಬೆಲೆಯ ‘ಷಂಡ’ ಧನರಾಶಿ, ಅದು! ಆ ಉಬ್ಬರದಿಂದಲೇ ಪೇಟೆಯಲ್ಲಿ ಮಂಡಕ್ಕಿ ಪುರಿಯೂ ಲೀಟರ್‌ಗೆ 20 ರೂಪಾಯಿಯಾಗುವುದು!
ರಾಜಕೀಯದ ಈ High-stake ಜೂಜಾಟಕ್ಕೂ, ನಿರ‍್ಲಿಪ್ತರಾದ ನಮಗೂ ಇರುವ ‘ಬಾದರಾಯಣ ಸಂಬಂಧ’ ಇದು!