ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ!

ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ!

ಬರಹ

     ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿನ ಸಮಯ. ಗುರುವಿಗೆ ಏನಾದರೂ ಹಣ್ಣನ್ನು ತಿನ್ನಬೇಕೆಂದು ಅನ್ನಿಸಿ ತನ್ನ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲವೆನಿಸಿ, ಪಕ್ಕದಲ್ಲಿಯೇ ಇದ್ದ ಶಿಷ್ಯನಿಗೂ ಕೊಡುವುದಕ್ಕೆಂದು ಹಣ್ಣನ್ನು ಎರಡು ಭಾಗ ಮಾಡಿ, ಶಿಷ್ಯನಿಗೆ ಒಂದನ್ನು ಕೊಟ್ಟು ತನ್ನ ಭಾಗದ ಮೂಸಂಬಿಯನ್ನು ತಿನ್ನಲು ಪ್ರಾರಂಭಿಸಿದ.

     "ಗುರುಗಳೇ, ನೀವು ಮಾಡುವ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ಹಾಗಿದ್ದ ಮೇಲೆ, ಈ ಮೂಸಂಬಿಯನ್ನು ಇಬ್ಭಾಗ ಮಾಡಿ ಹಂಚಿಕೊಳ್ಳುವುದರ ಮೂಲಕ ನನಗೇನಾದರೂ ಹೊಸ ಸಂದೇಶ ಕೊಡುತ್ತಿದ್ದೀರಾ?" ಕೇಳಿದ ಶಿಷ್ಯ. ಗುರು ಏನೂ ಉತ್ತರ ಹೇಳದೆ ಸುಮ್ಮನೆ ತನ್ನ ಪಾಡಿಗೆ ತಾನು ಮೂಸಂಬಿ ತಿನ್ನುವುದರಲ್ಲಿ ತಲ್ಲೀನನಾಗಿದ್ದ.
     "ನೀವು ಮೌನವಾಗಿದ್ದೀರಿ ಅಂದರೆ ಏನನ್ನೋ ಆಳವಾಗಿ ಚಿಂತಿಸುತ್ತಿದ್ದೀರಿ ಅಂತನ್ನಿಸುತ್ತೆ" ಮುಂದುವರೆದ ಶಿಷ್ಯ ಹೇಳಿದ "ಓಹೋ, ಹೀಗಿರಬೇಕು: ಮೂಸಂಬಿ ತಿಂದಾಗ ಸಿಗುವ ಆನಂದ ಹಣ್ಣಿನಲ್ಲಿದೆಯೋ ಅಥವಾ ಅದನ್ನು ಅನುಭವಿಸುವ ನಾಲಗೆಯಲ್ಲಿದೆಯೋ ಎಂಬ ವಿಷಯದ ಬಗ್ಗೆ ನೀವು ಗಾಢವಾಗಿ ಆಲೋಚಿಸುತ್ತಿರಬೇಕು, ಅಲ್ಲವ್?". ಗುರು ಈಗಲೂ ಏನೂ ಮಾತಾಡಲಿಲ್ಲ.
     ಇದರಿಂದ ಉತ್ತೇಜಿತನಾದ ಶಿಷ್ಯ ಮುಂದುವರೆದ; "ನಿಜ ಗುರುಗಳೆ, ಜೀವನದಲ್ಲಿ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ನನಗೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ! ತಪ್ಪಿದ್ದಲ್ಲಿ ತಿದ್ದಿ. ಹಣ್ಣನ್ನು ತಿಂದಾಗ ಸಿಗುವ ಆನಂದ ಬರಿಯ ಹಣ್ಣಿನಲ್ಲೂ ಇಲ್ಲ ಅಥವ ಬರಿಯ ನಾಲಗೆಯಲ್ಲೂ ಇಲ್ಲ. ಅದು ತಿನ್ನಲ್ಪಡುವ ವಸ್ತು ಮತ್ತು ಅದನ್ನು ಅನುಭ....". ಶಿಷ್ಯನ ಮಾತನ್ನು ಅರ್ಧಕ್ಕೇ ತಡೆದ ಗುರು ಹೇಳಿದ "ಸಾಕು ಮಾಡು ನಿನ್ನ ಹುಚ್ಚು ವಿಚಾರಗಳನ್ನು! ನಾನು ಬಿಸಿಲಿನಲ್ಲಿ ತಂಪಾಗಿರುತ್ತೆ ಅಂತ ಮೂಸಂಬಿಯೊಂದನ್ನು ತಿನ್ನಲು ಹೊರಟೆ. ಪಕ್ಕದಲ್ಲೇ ಇದ್ದೆಯಲ್ಲ ಅಂತ ನಿನಗೂ ಅರ್ಧ ಕೊಟ್ಟೆ, ಅಷ್ಟೆ. ನಿನಗೆ ಬೇಕಿದ್ದಲ್ಲಿ ಮೂಸಂಬಿಯನ್ನು ತಿಂದು ಆನಂದ ಅನುಭವಿಸು. ಮೂಸಂಬಿ ತಿನ್ನುವಾಗ ಸಿಗುವ ಆನಂದದ ಬಗ್ಗೆ ಕೂಡ ಯೋಚಿಸುತ್ತ ಆ ಆನಂದವನ್ನು ಕಳೆದುಕೊಳ್ಳಬೇಡ. ಝೆನ್ ಎಂದರೆ ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು".