ಈ ರಾಜ್ಯದ ಸಂಸತ್ ಸದಸ್ಯರಲ್ಲಿ ನಂದೊಂದು ಬಿನ್ನಹ!

ಈ ರಾಜ್ಯದ ಸಂಸತ್ ಸದಸ್ಯರಲ್ಲಿ ನಂದೊಂದು ಬಿನ್ನಹ!

ರಾಜ್ಯದ ಸಂಸತ್  ಸದಸ್ಯರಲ್ಲಿ ನನ್ನದೊಂದು ಬಿನ್ನಹ, ನಮ್ಮೆಲ್ಲರ ಶಾಂತಿಗಾಗಿ,
ನಮ್ಮನ್ನು ಇಲ್ಲಿ ನಮ್ಮಷ್ಟಕ್ಕೆ ಬಿಟ್ಟು, ದೆಹಲಿಯಲ್ಲೇ ಕೆಲಸಮಾಡಿ ಈ ರಾಜ್ಯಕ್ಕಾಗಿ;

ರಾಜ್ಯದಲ್ಲಿ ನಾವು ಆರಿಸಿ ಕೂರಿಸಿರುವ ಸರಕಾರ ಇರುವುದು ನಮ್ಮೆಲ್ಲರಿಗಾಗಿ,
ಆ ಸರಕಾರ ತನ್ನ ಅವಧಿ ಪೂರ್ತಿ ಕೆಲಸಮಾಡಲು ಬಿಡಿ, ರಾಜ್ಯದ ಏಳಿಗೆಗಾಗಿ;

ದಿನ ಬೆಳಗಾದರೆ, ಹೊಸ ಹೊಸ ಕೀಟಲೆ ಕೊಡುವುದನ್ನು ಇನ್ನಾದರೂ ನಿಲ್ಲಿಸಿ,
ಈ ನಾಡಿನ ಜನತೆಯ ಶಾಂತಿಗಾಗಿ, ನೀವೂ ದಯವಿಟ್ಟು ಕೊಂಚ ಸಹಕರಿಸಿ;

ರೋಸಿ ಹೋಗಿದ್ದಾರೆ ಜನತೆ, ನಿಮ್ಮ ಈ ಪುರುಸೊತ್ತಿನ ದೊಂಬರಾಟಗಳಿಂದ,
ನಿಮಗಾದರೆ ಅದುವೇ ಕಾಯಕ, ನಮಗೆ ದಿನವೂ ಬರೀ ಕಿರಿಕಿರಿ ಅವುಗಳಿಂದ;

ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಅನುಭವಿಸಿದ್ದು, ನಿಜಕ್ಕೂ ನಿಮ್ಮಿಂದಾಗಿ,
ನಿಮ್ಮನ್ನು ಆರಿಸಿದ್ದು ದೆಹಲಿಯಲ್ಲಿ ಕಾರ್ಯ ಮಾಡಲು, ನಮ್ಮ ಪ್ರತಿನಿಧಿಗಳಾಗಿ;

ಕೆಲಸವಿಲ್ಲದ ಆಚಾರಿ ಮಗುವಿನ ಅಂಡನ್ನು ಕೆತ್ತಿದನೆಂಬುದು ಹಳೇ ಗಾದೆಮಾತು,
ನೀವು ಆಡಿದ ಆಟವೂ ರಾಜ್ಯಕ್ಕೆ ಬಲು ನಷ್ಟಮಾಡಿದೆ, ಇದೂ ಸತ್ಯವಾದ ಮಾತು;

ಏನೂ ಅಭಿವೃದ್ಧಿಯಾಗಿಲ್ಲ ಎನ್ನುವುದಕ್ಕೆ ಮೊದಲು, ಮಾಡಲು ಬಿಟ್ಟಿದ್ದೀರಾ ಹೇಳಿ,
ನಿಮ್ಮ ತಂತ್ರಗಳಿಗೆ ಪ್ರತಿತಂತ್ರ ಹೂಡುವುದರಲ್ಲೇ ಕಾಲ ಕಳೆದು ಹೋಯ್ತು ಕೇಳಿ;

ನೀವು ಹೀಗೇ ಆಡುತ್ತಿದ್ದರೆ, ನಿಮ್ಮೆಲ್ಲರ ಭವಿಷ್ಯವನ್ನೂ ಈ ಜನರೇ ನಿರ್ಧರಿಸುತ್ತಾರೆ,
ಇಂದಿನ ಸದಸ್ಯತ್ವ ಖಾಯಂ ಅಲ್ಲ, ಮುಂದಿನ ಬಾರಿ ನಿಮ್ಮನ್ನೂ ಸೋಲಿಸುತ್ತಾರೆ!
*********
ಆತ್ರಾಡಿ ಸುರ‍ೇಶ ಹೆಗ್ಡೆ


Rating
No votes yet

Comments