ಸಾಹಿರ್ ಲೂಧಿಯಾನ್ವಿ ಮತ್ತು ಸುರೇಶ್ ಹೆಗ್ಡೆ
ಉರ್ದು ಕವಿ, ಹಿಂದಿ ಚಲನಚಿತ್ರಗೀತಕಾರ ಸಾಹಿರ್ ಲೂಧಿಯಾನ್ವಿ ಓರ್ವ ಭಗ್ನಪ್ರೇಮಿ. ಆತನ ಪ್ರೇಮ ಭಗ್ನಗೊಂಡದ್ದು ಒಮ್ಮೆಯಲ್ಲ, ಎರಡು ಬಾರಿ. ಅಮೃತಾ ಪ್ರೀತಮ್ ಮತ್ತು ಸುಧಾ ಮಲ್ಹೋತ್ರಾ ಇಬ್ಬರೂ ಆತನಿಗೆ ಗಗನಕುಸುಮಗಳಾದರು. ವಿವಾಹಕ್ಕೆ ಕೋಮು ಅಡ್ಡಬಂದಿತ್ತು. ಭಗ್ನಪ್ರೇಮದ ಹತಾಶೆ ಸಾಹಿರ್‌ನನ್ನು ಮದಿರೆಯ ದಾಸನನ್ನಾಗಿಸಿತು. ಅದೇ ವೇಳೆ ಇದೇ ಹತಾಶೆಯು ಆತನಿಂದ ಭಾವಪೂರ್ಣ ಕಾವ್ಯವನ್ನೂ ಸೃಷ್ಟಿಸಿತು.
’ಕಭೀ ಕಭೀ’ ಹಿಂದಿ ಚಲನಚಿತ್ರದಲ್ಲಿ ಸಾಹಿರ್‌ನ ಹೃದಯದಾಳದ ಅಂತಹ ಕೆಲ ಪಲುಕುಗಳನ್ನು ನಟ ಅಮಿತಾಭ್ ಬಚ್ಚನ್‌ನ ಬಾಯಿಂದ ನುಡಿಸಲಾಗಿದೆ. ಅಂತಹ ಒಂದು ಪಲುಕನ್ನು ಸಂಪದಿಗ ಮಿತ್ರ ಆತ್ರಾಡಿ ಸುರೇಶ್ ಹೆಗ್ಡೆ ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ:
http://sampada.net/blog/asuhegde/15/10/2010/28507
ಆಸು ಹೆಗ್ಡೆ ಅವರು ಸಮರ್ಥವಾಗಿ ಭಾವಾನುವಾದ ಮಾಡಿದ್ದಾರೆ.
(’ಭಟಕ್ ರಹೀ ಹೈ ಅಂಧೇರೋ ಮೇ ಜಿಂದಗೀ ಮೇರೀ’ ಎಂಬ ಸಾಲನ್ನು ’ಅಂಧಕಾರದಲ್ಲೇ ಈ ಜೀವನ ತಂತಾನೇ ಸಾಗುತ್ತಿಹುದಲ್ಲಾ...’ ಎಂದು ಅರ್ಥಯಿಸುವುದಕ್ಕಿಂತ, ’ಕತ್ತಲಲಿ ವಿಚಲಿತಗೊಂಡು ಅಂಡಲೆಯುತಿದೆ ಬದುಕು’ ಎಂದು ಅರ್ಥೈಸುವುದು ಮೂಲಕ್ಕೆ ಹೆಚ್ಚು ಹತ್ತಿರವೆನ್ನಿಸುತ್ತದೆ.)
’ಕಭೀ ಕಭೀ’ ಚಿತ್ರವು ತೆರೆಕಂಡ (ಫೆಬ್ರುವರಿ ೧೯೭೬) ಐದು ವರ್ಷಗಳೊಳಗೇ ಸಾಹಿರ್ ನಿಧನಹೊಂದಿದ (ಅಕ್ಟೋಬರ್ ೧೯೮೦).