ಖಲೀಲ್ ಗಿಬ್ರಾನ್ ಕಥೆಗಳು: ಬುದ್ಧಿವಂತ ರಾಜ
ಪ್ರಖ್ಯಾತ ಲೇಖಕ, ಕವಿ, ಕಲಾವಿದ ಖಲೀಲ್ ಗಿಬ್ರಾನ್-ನ ದಿ ವೈಸ್ ಕಿಂಗ್ ಕಥೆಯನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ.
ಬುದ್ಧಿವಂತ ರಾಜ
ಒಂದು ಸಣ್ಣ ರಾಜ್ಯ. ಆ ರಾಜ್ಯಕ್ಕೆ ಒಬ್ಬ ರಾಜ, ರಾಜನಿಗೆ ನೂರಾರು ಪ್ರಜೆಗಳು.
ರಾಜಧಾನಿ ಪಟ್ಟಣದಲ್ಲಿ ಅರಮನೆಯಿರುವ ಪ್ರದೇಶಕ್ಕೂ ಸಾಮಾನ್ಯ ಜನರಿರುವ ಗಲ್ಲಿಗೂ ಹೆಚ್ಚು ಅಂತರವಿಲ್ಲ. ಕುಡಿಯುವ ನೀರಿಗೂ ಒಂದೇ ಒಂದು ಮೂಲ, ಅದೇ ಒಂದು ದೊಡ್ಡ ಬಾವಿ. ಅದರಲ್ಲಿ ಯಾವಾಗಲೂ ದೊರೆಯುವ ಎಷ್ಟು ಬಗೆದರೂ ಸಿಗುವ ಸ್ಫಟಿಕ ಶುಭ್ರ ಸವಿಯಾದ ನೀರು. ಎಲ್ಲರಿಗೂ ಅದೇ ನೀರಿನ ಸ್ರೋತ.
ಒಂದು ರಾತ್ರಿ ಎಲ್ಲರೂ ಮಲಗಿರುವಾಗ ಮುದಿ ಮಾಟಗಾತಿಯೊಬ್ಬಳ ಆಗಮನ. ಆ ಬಾವಿಗೆ ಏಳು ಹನಿ ಕಷಾಯವೊಂದನ್ನು ಹಾಕಿದ್ದಾಯ್ತು. “ಇನ್ನು ಮುಂದೆ ಯಾರೇ ಈ ಬಾವಿ ನೀರು ಕುಡಿದಲ್ಲಿ ಕೂಡಲೇ ಹುಚ್ಚರಾಗಿ ಹೋಗುತ್ತಾರೆ” ಎಂಬ ಶಾಪ ಬೇರೆ.
ಮರುದಿನ ಎಲ್ಲಾ ಪ್ರಜೆಗಳೂ ನೀರು ಕುಡಿದರು, ಮತಿಭ್ರಷ್ಟರಾದರು, ಹುಚ್ಚರಂತೆ ಮಾತನಾಡಲಾರಂಭಿಸಿದರು. ಯಾಕೋ ರಾಜ ಹಾಗೂ ಮಂತ್ರಿ ಆ ನೀರು ಕುಡಿಯಲಿಲ್ಲ. ಅರಮನೆಯಲ್ಲಿದ್ದ ತಿಂಗಳಿಗೆ ಸಾಕಾಗುವ ನೀರಿನ ಸಂಗ್ರಹವನ್ನೇ ಕುಡಿಯುತ್ತಿದ್ದ. ಪ್ರಜೆಗಳೆಲ್ಲಾ ಹುಚ್ಚರಾದ ವಿಷಯ ತಿಳಿದ ರಾಜ ಆ ನೀರು ಕುಡಿಯದಿರಲು ನಿರ್ಧರಿಸಿದ.
ದಿನಗಳುರುಳಿದವು. ಪ್ರಜೆಗಳು ಮಾತನಾಡಲಾರಂಭಿಸಿದರು “ಛೀ ನಮಗೆಂಥಾ ರಾಜ ಸಿಕ್ಕಿದನಪ್ಪಾ, ಭಾರೀ ಹುಚ್ಚ. ಇಂಥಾ ಹುಚ್ಚ ನಮ್ಮ ರಾಜನಾಗಿದ್ದರೆ ನಾವೆಲ್ಲಾ ಉದ್ಧಾರವಾದ ಹಾಗೆಯೇ. ಹೇಗಾದರೂ ಮಾಡಿ ಈತನನ್ನು ಕೆಳಗಿಳಿಸಬೇಕು”. ದಿನದಿನಕ್ಕೂ ಈ ಕೂಗು ಜಾಸ್ತಿಯಾಗುತ್ತಲೇ ಹೋಯಿತು.
ರಾಜನಿಗೆ ಇದನ್ನು ಕೇಳಿ ಕೇಳಿ ಸಾಕಾಯಿತು. ಆ ಬಾವಿಯಿಂದ ನೀರು ತರಿಸಿ ಕುಡಿದೇ ಬಿಟ್ಟ. ತಾನೂ ಹುಚ್ಚನಾದ, ಹುಚ್ಚು ಹುಚ್ಚು ನಿರ್ಧಾರಗಳನ್ನು ಹೇರಿದ.
ಪ್ರಜೆಗಳೆಲ್ಲರೂ ಖುಷಿಯಾದರು, ತಮ್ಮ ರಾಜ ಮರಳಿ ಬುದ್ಧಿವಂತನಾದನೆಂದು ಸಂಭ್ರಮಿಸಿದರು.