ಲಿನಕ್ಸಾಯಣ :- ಲಿನಕ್ಸ್ ಟೆಸ್ಟ್ ಡ್ರೈವ್

ಲಿನಕ್ಸಾಯಣ :- ಲಿನಕ್ಸ್ ಟೆಸ್ಟ್ ಡ್ರೈವ್

ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ ಅದನ್ನು ಬಳಸಿ ನೋಡಬಹುದು. ಅದಕ್ಕೆ ಈ ಲೇಖನ. ಒಮ್ಮೆ ಓದಿ, ಲಿನಕ್ಸ್ ಬಳಸಿ ನೋಡಿ.

ಲೈವ್ ಸಿ.ಡಿ

ಸಾಮಾನ್ಯವಾಗಿ ಲಿನಕ್ಸ್ ಸಿ.ಡಿ ಕೈಗೆ ಸಿಕ್ಕ ತಕ್ಷಣ ಅದನ್ನು ಉಪಯೋಗಿಸಿ ನಿಮ್ಮ ಕಂಪ್ಯೂಟರ್ ಬೂಟ್ ಮಾಡಿ ಲಿನಕ್ಸ್ ನಲ್ಲಿ ಕೆಲಸ ಮಾಡಬಹುದು. ಹೌದು, ಇನ್ಸ್ಟಾಲ್ ಮಾಡದೆಯೇ ಲಿನಕ್ಸ್ ಡೆಸ್ಕ್ಟಾಪ್ ನಿಮ್ಮ ಪರದೆಯ ಮುಂದೆ ಬರುತ್ತದೆ. ಲಿನಕ್ಸ್ ನ ಎಲ್ಲ ಮುಖ್ಯ ಡಿಸ್ಟ್ರಿಬ್ಯೂಷನ್ಗಳು ಇಂದು ಲೈವ್ ಸಿ.ಡಿ ಆವೃತ್ತಿಯಲ್ಲಿ ಸಿಗುತ್ತವೆ.

ಉಬುಂಟು, ಫೆಡೋರ, ಓಪನ್ ಸುಸೆ, ಕ್ನಾಪಿಕ್ಸ್, ಲಿನಕ್ಸ್ ಮಿಂಟ್ ಗಳ ವೆಬ್ ಸೈಟ್ ಗಳಿಂದ ನೀವು ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. .iso ಫೈಲ್ ಎಕ್ಸ್ಟೆಂಷನ್ ನ ಜೊತೆ ಸಿಗುವ ಈ ಫೈಲ್ ಗಳನ್ನು ನೀವು ಸಿ.ಡಿಗೆ ನಿರೋ, ಇತ್ಯಾದಿ ಸಾಪ್ಟ್ವೇರ್ ಗಳಿಂದ ಬರೆದುಕೊಂಡು ಉಪಯೋಗಿಸಿದರಾಯಿತು.

ಸೂಚನೆ:- ನಿಮ್ಮ ಕಂಪ್ಯೂಟರ್ ಅನ್ನು ಸಿ.ಡಿ ಮೂಲಕ ಬೂಟ್ ಮಾಡಲು ನೀವು ಬಯೋಸ್ ಅನ್ನು ಸ್ವಲ್ಪ ಬದಲಿಸಿಕೊಳ್ಳಬೇಕು. ಇಲ್ಲವೆಂದರೆ ಕಂಪ್ಯೂಟರ್ ಬೂಟ್ ಆಗುವ ಸಮಯದಲ್ಲಿ ಕಾಣುವ POST ಸ್ಕೀನ್ ನಲ್ಲಿ ಕಾಣುವ BOOT OPTIONS ನ ಮುಂದಿರುವ ಫಂಕ್ಷನ್ ಕೀ (ಸಾಮಾನ್ಯವಾಗಿ ಇದು F10 ಆಗಿರುತ್ತದೆ) ಕ್ಲಿಕ್ಕಿಸಿ, ಸಿ.ಡಿ ಯನ್ನು ಸಿ.ಡಿ ಡ್ರೈವ್ ನಲ್ಲಿ ಹಾಕಿ, ಮೆನುವಿನಲ್ಲಿ ಸಿ.ಡಿ ಸೆಲೆಕ್ಟ್ ಮಾಡಿಕೊಂಡರಾಯ್ತು.

ಸಾಮಾನ್ಯವಾಗಿ ಲೈವ್ ಸಿ.ಡಿ ಯಲ್ಲಿ ಕಂಪ್ಯೂಟರ್ ಉಪಯೋಗಿಸುವಾಗ ಅದು ನಿಧಾನ ಎಂದೆನಿಸುತ್ತದೆ. ಏಕೆಂದರೆ ಪ್ರತಿಯೊಂದು ತಂತ್ರಾಂಶವನ್ನು ನಿಮ್ಮ ಕಂಪ್ಯೂಟರ್ ಸಿ.ಡಿ ಇಂದ ಓದಿಕೊಳ್ಳಬೇಕಾಗುತ್ತದೆ. ಲಿನಕ್ಸ್ ಇನ್ಸ್ಟಾಲ್ ಮಾಡಿಕೊಂಡರೆ ಲಿನಕ್ಸ್ ಎಷ್ಟು ಬೇಗ ಕೆಲಸ ಮಾಡುತ್ತದೆ ಎಂದು ನೀವು ಅರಿತುಕೊಳ್ಳಬಹುದು.

ನಿಮ್ಮ ಸಿಸ್ಟಂ ಅನ್ನು ಮತ್ತೆ ಸಾಮಾನ್ಯವಾಗಿ ಉಪಯೋಗಿಸಲು, ಸಿ.ಡಿ ಅನ್ನು ಡ್ರೈವ್ ನಿಂದ ತೆಗೆದು ರೀಸ್ಟಾರ್ಟ್ ಮಾಡಿ.

ಲೈವ್ ಯು.ಎಸ್.ಬಿ

ನಿಮ್ಮ ಬಳಿ ಯು.ಎಸ್.ಬಿ ಡ್ರೈವ್ ಇದೆಯೇ? ಅದನ್ನು ನಿಮ್ಮ ಕಂಪ್ಯೂಟರಿನಲ್ಲಿ ಲಿನಕ್ಸ್ ಬಳಸಲು ಉಪಯೋಗಿಸಬಹುದು. ಹೌದು, ಕಂಪ್ಯೂಟರಿಗೆ ನೇರವಾಗಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಳುವುದರ ಬದಲು ನಿಮ್ಮ ಬಳಿ ಇರುವ ಯು.ಎಸ್.ಬಿ ಬಳಸ ಬಹುದು.

Unetbootin ಎಂಬ ತಂತ್ರಾಂಶ ಬಳಸಿ ಲಿನಕ್ಸ್ ಸಿ.ಡಿಯನ್ನು ಯು.ಎಸ್.ಬಿ ಗೆ ಇಳಿಸಿಕೊಳ್ಳಬಹುದಾಗಿದೆ. ಇತ್ತೀಚೆಗೆ ಲಿನಕ್ಸ್ ಡಿಸ್ಟ್ರಿಬ್ಯೂಷನ್ಗಳು ನೇರವಾಗಿ ಯು.ಎಸ್.ಬಿ ಗೆ ಎಂದೇ ಡೌನ್ಲೋಡ್ ಗೆ ಸಿಗುತ್ತಲಿವೆ.

ಯು.ಎಸ್.ಬಿ ಬೂಟ್ ಮಾಡಲು ಮೊದಲೇ ಹೇಳಿದಂತೆ, POST ಸ್ಕ್ರೀನ್ ನಲ್ಲಿ ಸಿಗುವ ಬೂಟ್ ಆಪ್ಶನ್ ನ ಕೀ ಒತ್ತಿ ಯು.ಎಸ್.ಬಿ ಆಯ್ದುಕೊಂಡರಾಯ್ತು.

Wubi – ವಿಂಡೋಸ್ ಇನ್ಸ್ಟಾಲರ್

ಲಿನಕ್ಸ್ ನಿಮ್ಮ ವಿಂಡೋಸ್ ಒಳಗೆ ಮತ್ತೊಂದು ತಂತ್ರಾಂಶದಂತೆ ಕೆಲಸ ಮಾಡಿದ್ರೆ? ಹೌದು ಇದು ಸಾಧ್ಯ, ಉಬುಂಟು ಸಿ.ಡಿ ಯನ್ನು ನೀವು ವಿಂಡೋಸ್ ರನ್ ಮಾಡೋವಾಗ ಬಳಸಿದರೆ, ಉಬುಂಟುವನ್ನು ಅಲ್ಲೇ ಇನ್ಸ್ಟಾಲ್ ಮಾಡ್ಲಿಕ್ಕೆ ನೀವು ಅಣಿ ಆಗಬಹುದು. ೫ ಜಿ.ಬಿ ಸ್ಪೇಸ್ ಇದ್ರೆ ಆಯ್ತು. ಯಾವುದೇ ಪಾರ್ಟೀಷನ್ ಇತ್ಯಾದಿಗಳ ರಗಳೆ ಇಲ್ಲದೆ ನೀವು ಲಿನಕ್ಸ್ ಇನ್ಸ್ಟಾಲ್ ಮಾಡಿಕೊಂಡು ಬಳಸಬಹುದು.

ವರ್ಚುಅಲೈಸೇಷನ್ (Virtualization)

ಇತ್ತೀಚೆಗೆ ಪೇಟೆಯಲ್ಲಿ ಸಿಗುವ ಕಂಪ್ಯೂಟರ್ ಗಳ ಕಾರ್ಯಕ್ಷಮತೆ ಎಷ್ಟಿರುತ್ತದೆ ಎಂದರೆ, ಒಂದು ಆಪರೇಟಿಂಗ್ ಸಿಸ್ಟಂನ ಒಳಗೆ ಇನ್ನೂ ಒಂದೆರಡು ಆಪರೇಟಿಂಗ್ ಸಿಸ್ಟಂಗಳನ್ನು ನೆಡೆಸಬಹುದು. ಅಂದರೆ, ನೀವು ಮೂರು ನಾಲ್ಕು ಕಂಪ್ಯೂಟರ್ ಗಳನ್ನು ಇಟ್ಟುಕೊಂಡು ಒಂದೊಂದರಲ್ಲೂ ಒಂದೊಂದು ಆಪರೇಟಿಂಗ್ ಸಿಸ್ಟಂ ಇನ್ಸ್ಟಾಲ್ ಮಾಡಿನೋಡಬೇಕಿಲ್ಲ. ನಿಮ್ಮ ಕೆಲಸಕ್ಕೆ ಬೇಕಾದ ಆಪರೇಟಿಂಗ್ ಸಿಸ್ಟಂ ಅನ್ನು ವರ್ಚುಯಲೈಸೇಷನ್ ತಂತ್ರಜ್ಞಾನ ಬಳಸಿ ನಿಮ್ಮ ಮೂಲ ಆಪರೇಟಿಂಗ್ ಸಿಸ್ಟಂನೊಳಗೇ ಮತ್ತೊಂದು ಕಂಪ್ಯೂಟರ್ ಕಾಣುವಂತೆ ಮಾಡಬಹುದು.

VMware, VirtualBox ನಂತಹ ಸಾಪ್ಟ್ವೇರುಗಳನ್ನು ಇನ್ಸ್ಟಾಲ್ ಮಾಡಿಕೊಂಡು, ಅವುಗಳ ಮೂಲಕ ವಾಸ್ತವಿಕ/ವರ್ಚುಅಲ್ ವಾಗಿ ವಿಂಡೋಸ್ ನಲ್ಲಿ ಲಿನಕ್ಸ್, ಲಿನಕ್ಸ್ ನಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಗಳನ್ನು ಇನ್ಸ್ಟಾಲ್ ಮಾಡಿ ಉಪಯೋಗಿಸಬಹುದು. ನಿಮ್ಮ ಕಂಪ್ಯೂಟರಿನ ಎಲ್ಲ ಬಿಡಿಭಾಗಗಳೂ ಈ ವರ್ಚುಅಲ್ ಆಪರೇಟಿಂಗ್ ಸಿಸ್ಟಂ ಜೊತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಬಲ್ಲವು. ನಿಮ್ಮ ಕಂಪ್ಯೂಟರ್ ನ ಮೂಲ ಆಪರೇಟಿಂಗ್ ಸಿಸ್ಟಂ ಇದನ್ನು ತನ್ನ ಗೆಸ್ಟ್ ಅಥವಾ ಅತಿಥಿಯಂತೆ ತಿಳಿಯುತ್ತದೆ.

ಲಿನಕ್ಸ್ ಇನ್ಸ್ಟಾಲ್ ಮಾಡಿಕೊಂಡು ಉಪಯೋಗಿಸುವುದನ್ನು ಕಲಿಯ ಬೇಕು ಎಂದೆನಿಸಿದವರಿಗೆ ವರ್ಚುಅಲೈಸೇಷನ್ ಒಂದು ವರದಾನವೇ ಸರಿ.

ಕೊನೆಯ ಹನಿ:-

ಏನೇ ಇರಲಿ, ಲಿನಕ್ಸ್ ಅನ್ನು ಸಂಪೂರ್ಣ ಆಸ್ವಾದಿಸಲಿಕ್ಕೆ ನೀವು ಅದನ್ನು ಇನ್ಸ್ಟಾಲ್ ಮಾಡಿಯೇ ತೀರಬೇಕು. ಒಮ್ಮೆ ಉಪಯೋಗಿಸಿ ನೋಡಿ. ಏನಾದರೂ ತೊಂದ್ರೆ ಇದ್ರೆ ಲಿನಕ್ಸಾಯಣ ಇದೆಯಲ್ಲ.

Rating
No votes yet

Comments