ಕಚ್ಚಾಟ ಒಳ್ಳೆಯದು
ನಮ್ಮ ನಾಯಕರು ನಾಯಿಗಳಹಾಗೆ ಕಚ್ಚಾಡುತ್ತಿರುವುದರಿಂದ ನಾಡಿನ ಪ್ರಜೆಗಳಿಗೆ ಒಳ್ಳೆಯದೇ ಆಗಿದೆ. ’ಕ್ಷಣಕ್ಷಣದ ಸುದ್ದಿಗಾಗಿ ನೋಡ್ತಾ ಇರ್ತೀವಿ ಟಿವಿ ನ್ಯೂಸ್’ ಅಂತ ಅಹರ್ನಿಶಿ ವಾರ್ತಾಲಾಪ ನೋಡುವುದರಲ್ಲೇ ಪ್ರಜೆಗಳು ತಲ್ಲೀನರಾಗಿದ್ದಾರೆ. ಸೆಕೆಂಡಿಗೆರಡರಂತೆ ಕಾಣಿಸಿಕೊಳ್ಳುವ ಬ್ರೇಕಿಂಗ್ ನ್ಯೂಸ್‌ಗಳಂತೂ ಪ್ರಜೆಗಳನ್ನು ರೋಮಾಂಚನಗೊಳಿಸುತ್ತಿವೆ. ಒಟ್ಟಾರೆಯಾಗಿ, ಕಾಸು ಖರ್ಚಿಲ್ಲದೆ ಮನೆಯಲ್ಲಿಯೇ ಪ್ರಜೆಗಳಿಗೆ ಭರ್ಜರಿ ಮನೋರಂಜನೆ ದೊರಕುತ್ತಿದೆ.
ಪ್ರಜೆಗಳು ನ್ಯೂಸ್ ನೋಡುವುದರಲ್ಲಿ ಬ್ಯುಸಿಯಾಗಿರುವುದರಿಂದಾಗಿ ಅವರಿಗೆ ತಮ್ಮೆಲ್ಲ ಸಮಸ್ಯೆಗಳೂ ಮರೆತೇಹೋಗಿವೆ. ಸರ್ಕಾರ ಉಳಿಯುವುದೇ, ಅಳಿಯುವುದೇ ಎಂಬ ಸಸ್ಪೆನ್ಸ್ ಅವರಿಗೆ ಒಂಥರಾ ಥ್ರಿಲ್ ನೀಡುತ್ತಿದೆ. ಈ ಥ್ರಿಲ್‌ನ ಮುಂದೆ ಸಮಸ್ಯೆಗಳೆಲ್ಲ ಡಲ್. ಇಷ್ಟಕ್ಕೆಲ್ಲ ಕಾರಣರಾದ ನಾಯಿಗಳಿಗೆ, ಕ್ಷಮಿಸಿ, ನಾಯಕರಿಗೆ ಧನ್ಯವಾದಗಳು.
ಆದದ್ದೆಲ್ಲ ಒಳ್ಳಿತೇ ಆಯಿತು
ನಮ್ಮ ಶಾಸಕರ ಸೇವೆಗೆ ಸಾಧನ ಸಂಪತ್ತಾಯಿತು
ಅಂಡಿಗೆ ಕುರ್ಚಿ ಬಲಪಡಿಸಲಿಕೆ
ಮಂಡೆಗಳನ್ನು ಎಣಿಸುತಲಿದ್ದರು
ಉಂಡು ತೇಗುವರ ಹೊಟ್ಟೆಯ ತುಂಬಿಸೆ
ಅಂಡಿಗೆ ಕುರ್ಚಿ ಬಲವಾಯ್ತಯ್ಯ
ಆದದ್ದೆಲ್ಲ ಒಳ್ಳಿತೇ ಆಯಿತು
ಈ ನಡುವೆ, ’ಅನರ್ಹ ಶಾಸಕರಿಗೆ ಅವರೇನು ಹುಣಿಸೆಬೀಜ ಕೊಟ್ರಾ?’ ಅಂತ ಪ್ರತಿಪಕ್ಷಿಗಳ ಕುರಿತು ಸಾಮ್ರಾಟ್ ಚಕ್ರವರ್ತಿಯವರು ಸವಾಲ್ ಹಾಕಿದ್ದಾರೆ. ಪ್ರತಿಪಕ್ಷಿಗಳು ಹುಣಿಸೆಬೀಜ ಕೊಡಲಿಲ್ಲ, ಹುಣಿಸೆಮರ ಕೊಟ್ಟರು. ದೆವ್ವಗಳಿಗೆ ಹುಣಿಸೆಮರ ಬಲು ಇಷ್ಟ. ನಿಷ್ಠಾಂತರಿಗಳಿಗೆ ದುಡ್ಡಿನ ದೆವ್ವ ಹಿಡಿದಿದೆಯಷ್ಟೆ.
ದೆವ್ವ ಬಿಡಿಸಲು ಸಾಮ್ರಾಟ್ ಪಕ್ಷ ಬೇವಿನ ಮರ ಕೊಟ್ಟಿತು. ಅನರ್ಹತೆಯೆಂಬ ಕಹಿಬೇವು. ದೆವ್ವ ಬಿಡಿಸಲು ಬೇವಿನಸೊಪ್ಪು ಬಳಸುತ್ತಾರೆ.
ಒಟ್ಟಾರೆ, ದುರ್‌ನಾಟಕದ ಪರಿಸ್ಥಿತಿ ಈಗ ಹೇಗಾಗಿದೆಯಪ್ಪಾ ಅಂದರೆ,
ಆಪರೇಷನ್ ಕಂಡು ಪ್ರತಿಪಕ್ಷ
ಪರೇಷಾನ್ ಆಗಿದೆ;
ರೇಷನ್ ಸಿಗದೆ ಬಡಜನತೆ
ಷನ್‌ಖ ಊದುತ್ತಿದೆ;
ಷನ್‌ಭೋ ಶಂಕರ
ಕೇಎಸ್ಸೀಶ್ವರ
ಎಂಥ ಗತಿ ಬಂತೋ
ಯಡಿಯೂರ!
ಇಂತಹ ಪರಿಸ್ಥಿತಿಯಲ್ಲೂ ಕೊರಡು ಕೊನರುವುದೆಂದರೆ ಆಶ್ಚರ್ಯವಲ್ಲವೆ? ಇಲ್ಲದಿದ್ದರೆ, ಕನಡಾ ಬಂದ್ಕೇಸಿ ಸರ್‍ಯಗೆ ಮಾಟ್ಲಾಡಾನಿಕಿ ಬರ್‍ದೇ ಇರೋ ಬಿಶ್ರೀರಾಮುಲು ಅವರು ವಿಕ ಪತ್ರಿಕೆಯಲ್ಲಿ ಕನ್ನಡದ ಲೇಖನ ಬರೆಯೋದಂದ್ರೆ ಏನು?! ನಾನು ಇನ್ನು ರಾಜಕೀಯ ಕಟಕಿಗಳ ಮಟ್ಟಿಗೆ ಶಸ್ತ್ರಸಂನ್ಯಾಸ ಸ್ವೀಕರಿಸುವುದೊಳ್ಳೆಯದು. ಆದರೇನು ಮಾಡುವುದು,
ಬಿಟ್ಟೆನೆಂದರೆ ಬಿಡದೀ ಮಾಯೆ
ಕೆಟ್ಟ ರಾಜಕಾರಣಿಗಳ ಛಾಯೆ
ಸೊಟ್ಟ ನುಡಿಯುವುದೆ ಗತಿಯಾಯ್ತೆನಗೆ
ಬಿಟ್ಟೆನಿದೋ ಈ ಚಟ ಈ ಘಳಿಗೆ