ಬರಲಿ ರಾಮದೇವರ ಪಕ್ಷ ಆದರೆ....
ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ.
ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸೀತು!
ದೇಶದ ಉದ್ದ, ಅಗಲ, ಆಳದ ಪೂರ್ತಿ ಹಬ್ಬಿ ಹರಡಿರುವ ಭ್ರಷ್ಟಾಚಾರದ ಬಗ್ಗೆ ಯೋಗ ವೈದ್ಯರು ಚೇತೋಹಾರಕವಾದ ಸಿಡಿ-ಮಿಡಿ ಹಾರಿಸಿದ್ದಾರೆ. ಒಳ್ಳೆಯದು ಜತೆಗೆ, ಭ್ರಷ್ಟಾಚಾರದ “ಮೂಲವ್ಯಾಧಿ” ಮತ್ತು “ವ್ಯಾಧಿಯ ಮೂಲ”ದ ಪರಿಚಯವೂ ಅವರಿಗಿದೆ ಎಂದು ಭಾವಿಸೋಣ!
ಸಂಸತ್ತು, ಶಾಸಕಾಂಗ, ಪಾಲಿಕೆ, ಪಂಚಾಯತಿ ಇತ್ಯಾದಿ ಯಾವುದೇ ಚುನಾಯಿತ ವ್ಯವಸ್ಥೆಯೂ ಇಂದು ಜನತೆಯ ನೈಜ ಪ್ರಾತಿನಿಧಿಕವಲ್ಲ. ಹಣ, ಹೆಂಡ, ಬಲ, ದಬಾ-ದುಬಿಗಳ ಬಲಾತ್ಕಾರದಿಂದ ಸೆಳೆದುಕೊಂಡ ಶೇ. 25-30ರಷ್ಟು ಜನಬೆಂಬಲದಿಂದಲೇ ಈ ಸಂಸ್ಥೆಗಳು ರಚಿತವಾಗಿಹೋಗುತ್ತವೆ. ನಮ್ಮ ಚುನಾವಣಾ ಕಾಯ್ದೆಯ “ಔದಾರ‍್ಯ“ದಿಂದಾಗಿ ‘ಕಾಂಜಿ-ಪೀಂಜಿ’ಗಳೂ ಚುನಾವಣೆಗೆ ನಿಲ್ಲುತ್ತಾರೆ; ವೋಟು ಹಂಚಿ ಹಲಾಲ್ ಆಗುವುದು ಗ್ಯಾರಂಟಿಯಾಗುತ್ತದೆ. ಮೆಜಾರಿಟಿ ವೋಟು, ಸೋತ ನೂರಾರು ಅಭ್ಯರ್ಥಿಗಳ ರೂಪದಲ್ಲಿ ಕಸಬುಟ್ಟಿಗೆ ಬೀಳುತ್ತದೆ; “ಹುಚ್ಮುಂಡೆ ಮದ್ವೇಲಿ” ಒಬ್ಬ “ಜಾಣ” ಫಲ “ಉಣ್ಣುತ್ತಾನೆ”! ಇಂಥವರಿಂದಾದ ಚುನಾಯಿತ ಸಂಸ್ಥೆಗಳು ಇಡೀ ಜನಾಂಗದ ಮೇಲೆ ಅಧಿಕಾರ ಘೋಷಿಸಿಕೊಳ್ಳುತ್ತವೆ!
ಇದರ ಸಂಕೀರ್ಣ ಪರಿಣಾಮವೇ, ನಾವು ದಿನನಿತ್ಯ ಕಂಡುಂಡನುಭವಿಸುತ್ತಿರುವ ದೇಶದ ಛಿದ್ರೀಕರಣ, ರಾಜಕೀಯದ ಅಪರಾಧೀಕರಣ, ಚುನಾವಣೆಯ ಗೂಂಡಾತನ, ಆಡಳಿತ ವ್ಯವಸ್ಥೆಯ ಪಾಳೇಗಾರಿಕೆಯಂತಹ ವಿದ್ಯಮಾನಗಳು!
ಬಾಬಾ ರಾಮದೇವರು, ರಾಮದೇವರಂತೆ ಪ್ರಾಮಾಣಿಕವಾಗಿ ಬರುವುದೇ ಆದರೆ, ಕಸದ ಬುಟ್ಟಿಗೆ ಬೀಳುತ್ತುರುವ ಶೇ. 70-75ರಷ್ಟು ಬಾಯಿಲ್ಲದ ಪ್ರಾಮಾಣಿಕ ಮತದಾರರ ಬೆಂಬಲ ಅವರಿಗೆ ದೊರೆತೀತು. ಅಧಿಕಾರಕ್ಕೆ ಬಂದಾಗ, ಚುನಾವಣಾ ಕಾಯ್ದೆ ಸುಧಾರಿಸಿ, ಕ್ಷೇತ್ರದ ಶೇ. 50+ ಚಲಾಯಿತ ಅರ್ಹ ಮತ ಪಡೆದವರು ಮಾತ್ರಾ ಜನಪ್ರತಿನಿಧಿಯಾಗುವಂತೆ ಮಾಡುವುದಾದರೆ ದೇಶದ ಪ್ರಜಾಸತ್ತೆ ಅವರಿಗೆ ಚಿರಕೃತಜ್ಞವಾಗಿದ್ದೀತು. ಇದೊಂದು ಹಗಲುಗನಸಲ್ಲವೇ?!