ಕಡ್ಡಾಯ ಮತದಾನವೇ ಪರಿಹಾರವಲ್ಲ!

ಕಡ್ಡಾಯ ಮತದಾನವೇ ಪರಿಹಾರವಲ್ಲ!



ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ  ಕುಲಗೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಕಿಂಚಿತ್ತಾದರೂ ಬದಲಾವಣೆ ಆದೀತೆನ್ನುವುದು ಕನಸಿನ ಮಾತು. ವಿದ್ಯಾವಂತರು ಮತನೀಡದೇ ಉಳಿಯುವುದರಿಂದ, ಯೋಗ್ಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತು, ಅಯೋಗ್ಯರು ಗೆದ್ದುಬಂದಿದ್ದಾರೆನ್ನುವುದು ಸತ್ಯಕ್ಕೆ ದೂರವಾದ ಮಾತು.

ಅದು, ಸದ್ಯಕ್ಕೆ ನಮ್ಮ ಮುಂದಿರುವ ಸಮಸ್ಯೆಯೇ ಅಲ್ಲ. ಮುಖ್ಯ ಸಮಸ್ಯೆಯೆಂದರೆ, ಯೋಗ್ಯ ಅಭ್ಯರ್ಥಿಗಳೇ ರಾಜಕೀಯ ಕಣಕ್ಕೇ ಧುಮುಕುತ್ತಿಲ್ಲ ಎನ್ನುವುದು. ಪಕ್ಷಭೇದವಿಲ್ಲದೇ ಎಲ್ಲಾ ಪಕ್ಷಗಳಿಂದಲೂ ಚುನಾವಣಾ ಕಣಕ್ಕೆ ಇಳಿಸಲ್ಪಡುತ್ತಿರುವ ಅಭ್ಯರ್ಥಿಗಳು ಒಂದೋ ರಟ್ಟೆ ಬಲವುಳ್ಳವರು ಅಥವಾ ಹಣಬಲವುಳ್ಳವರು. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಕನಿಷ್ಠ ಅರ್ಹತೆ ಅಥವಾ ಯೋಗ್ಯತೆಯ ಪರಿಗಣನೆ ಇರುವುದೇ ಇಲ್ಲ. ಯಾವನೇ ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯಾಗಿರಬೇಕು. ಅಲ್ಲದೇ ಗೆಲ್ಲುವುದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವನಾಗಿರಬೇಕು. ಅಂಥ ಅಭ್ಯರ್ಥಿಗಳು ಪೈಪೋಟಿಗೆ ನಿಂತವರಂತೆ ತಮ್ಮಿಂದಾದಷ್ಟು ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ಗೆದ್ದು ಬಂದನಂತರ ತಾನು ಖರ್ಚು ಮಾಡಿದ ಹಣದ ಹತ್ತರಷ್ಟು ಸಂಪಾದನೆ ಮಾಡುವುದೊಂದೇ ಆತನ ಮೂಲ ಉದ್ದೇಶವಾಗಿರುತ್ತದೆ. ಅದು ನ್ಯಾಯವೇ ಆಗಿದೆ. ಯಾವೊಬ್ಬನೂ ತಾನು ಖರ್ಚುಮಾಡಿದ್ದನ್ನು ವಾಪಾಸು ಗಳಿಸುವ ಪ್ರಯತ್ನ ಮಾಡದೇ ಉಳಿದರೆ ದಡ್ದನೆನಿಸಿಕೊಳ್ಳುತ್ತಾನೆ. ವಿದ್ಯಾವಂತ ಮತದಾರನ ಮಂದೆ ಹೆಚ್ಚಿನ ಆಯ್ಕೆಗಳೇ ಇಲ್ಲ. ಆತನ ಪಾಲಿಗೆ ಎಲ್ಲರ ಮುಖಗಳೂ ಒಂದೇ ತೆರನಾಗಿರುತ್ತವೆ. ಎಲ್ಲಾ ಪಕ್ಷಗಳೂ ಒಂದೇ ಆಗಿರುತ್ತವೆ. ಆತ ಯಾರಿಗೆ ಮತ ನೀಡಿದರೂ ಆತನ ಜೀವನ ಶೈಲಿಯಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆಯೇ ಇರುವುದಿಲ್ಲ. ಇನ್ನು ಅವಿದ್ಯಾವಂತ ಮತದಾರರ ಪಾಲಿಗೂ ಆಯ್ಕೆಗಳಿಲ್ಲ. ಅವರ ಪಾಲಿಗೆ ಇರುವುದು ತಮ್ಮ ಕೈಗೆ ಸಿಕ್ಕಿದ ನೋಟಿನ ಮತ್ತು ಆ ನೋಟು ನೀಡಿದವರ ಗುರುತು ಮಾತ್ರ. ಪಕ್ಷ ಮತ್ತು ಅಭ್ಯರ್ಥಿ ಇವೆಲ್ಲ್ಲಾ ಅವರ ಪಾಲಿಗೆ ಗೌಣ.

ಹಾಗಾದರೆ ಇಂದಿನ ಆವಶ್ಯಕತೆ ಏನು?

ನಮ್ಮ ನಾಡಿನಲ್ಲಿ ಮಾಮೂಲಿ ಜವಾನನಿಂದ ಮತ್ತು ಸೈನಿಕನಿಂದ ಹಿಡಿದು, ಯಾವುದೇ ಉನ್ನತ ದರ್ಜೆಯ ಕೆಲಸಕ್ಕೆ ಸೇರಬೇಕಾದರೂ ಕನಿಷ್ಟ ವಿದ್ಯಾರ್ಹತೆಯ ಅಗತ್ಯ ಇದೆ. ಹಾಗಾಗಿ ಯಾವುದೇ ಚುನಾವಣೆಯಲ್ಲಿ  ಅಭ್ಯರ್ಥಿಯಾಗಲೂ ಕನಿಷ್ಠ ವಿದ್ಯಾರ್ಹತೆ ನಿರ್ಧರಿತವಾಗಬೇಕು. ಅಂತೆಯೇ ನಿವೃತ್ತಿಗೂ ವಯಸ್ಸು ನಿರ್ಧರಿತವಾಗಬೇಕು. ಹತ್ತಾರು ಪಕ್ಷಗಳ ಪ್ರಸ್ತುತ ಪದ್ಧತಿಗಿಂತ ದ್ವಿಪಕ್ಷ ಪದ್ಧತಿ ಜಾರಿಯಾಗಬೇಕು. “ಒಂದೋ ಇಲ್ಲಿರು. ಇಲ್ಲಾ ಅಲ್ಲಿರು. ಎರಡೂ ಇಲ್ಲಾಂದ್ರೆ ತೆಪ್ಪಗೆ ತನ್ನ ಮನೆಯಲ್ಲಿರು”, ಅನ್ನುವ ಪದ್ಧತಿ ಬರಬೇಕು . ಚುನಾವಣೆಯಲ್ಲಿ ಒಂದು ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿ, ಕನಿಷ್ಟ ಮುಂದಿನ ಮಹಾ ಚುನಾವಣೆಯ ತನಕ ಅದೇ ಪಕ್ಷದ ಸದಸ್ಯನಾಗಿರಬೇಕು. ಆರಿಸಿ ಹೋದ ಅಭ್ಯರ್ಥಿ ತನ್ನ ಕ್ಷೇತ್ರದ ಜನರ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವವನಾಗಿರಬೇಕು. ತನ್ನ ಕ್ಷೇತ್ರ ಮತ್ತು ಪಕ್ಷಕ್ಕೆ ನಿಷ್ಠಾವಂತನಾಗಿರಬೇಕು. ಮುಂದಿನ ಮಹಾಚುನಾವಣೆಯ ತನಕ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಹಾಗೊಮ್ಮೆ ನೀಡಿದರೆ ಮುಂದಿನ ಮೂರು ಮಹಾಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಬೇಕು. ಇನ್ನೊಂದು ಪ್ರಮುಖವಾದ ಆವಶ್ಯಕತೆ ಏನೆಂದರೆ ಯಾವುದೇ  ಚುನಾವಣೆಗಳಲ್ಲಿ, ಯಾರಿಗೂ ಮತನೀಡದೇ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಸೌಲಭ್ಯವನ್ನು ಮತದಾರನಿಗೆ ಒದಗಿಸಿರಬೇಕು. ಹಾಗೆ ತನ್ನ ಕ್ಷೇತ್ರದ ಮತದಾರರಿಂದ ತಿರಸ್ಕೃತರಾದ ಅಭ್ಯರ್ಥಿಗಳು ಮುಂದಿನ ಮೂರು ಮಹಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳಬೇಕು. ಓರ್ವ ಸದಸ್ಯ ಹಠಾತ್ ನಿಧನಾರಾದಾಗ ಅಥವಾ ಅನಾರೋಗ್ಯಪೀಡಿತನಾಗಿ ರಾಜಕೀಯ ನಿವೃತ್ತನಾದಾಗ, ಆತನ ಸಂಬಂಧಿಕರಿಗೆ ಅವಕಾಶವನ್ನು ಕಲ್ಪಿಸುವಾಗಲೂ ಅರ್ಹತೆಯ ಮಾನದಂಡವನ್ನು ಉಪಯೋಗಿಸಿರಲೇಬೇಕು. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ಆಸ್ತಿಪಾಸ್ತಿಗಳ ವಿವರವನ್ನು ಪ್ರತಿ ವರ್ಷ ಆಯಾ ಕ್ಶೇತ್ರದ ಮತದಾರರ ಮುಂದೆ, ಸೂಕ್ತ ದಾಖಲೆಗಳ ಸಮೇತ  ಬಹಿರಂಗಪಡಿಸಬೇಕು.

ಈ ಎಲ್ಲಾ ವ್ಯವಸ್ಥೆ ಜಾರಿಯಾದ ನಂತರ ಕಡ್ಡಾಯ ಮತದಾನದ ಕಾನೂನು ಕೂಡ ಜಾರಿಯಾಗಬೇಕು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸಬೇಕು. ಆಗಲಷ್ಟೇ, ಮತದಾನ ಮಾಡದ ವಿದ್ಯಾವಂತ ಮತದಾರರನ್ನು ಸಾರಸಗಟಾಗಿ ಎಲ್ಲರೂ ದೂರಬಹುದು. ಎಲ್ಲಿಯ ತನಕ ಈ ಭ್ರಷ್ಟ ರಾಜಕೀಯ ವ್ಯವಸ್ಥೆ ಹೀಗೆಯೇ ಮುಂದುವರಿಯುತ್ತದೆಯೋ, ಅಲ್ಲಿಯತನಕ, ಮತದಾನ ಮಾಡದ ವಿದ್ಯಾವಂತ ಮತದಾರರನ್ನು ಸುಖಾಸುಮ್ಮನೇ ದೂರಿ ಏನೂ ಪ್ರಯೋಜನವಿರದು.

*****

ಈ ಬರಹ, ಉದಯವಾಣಿಯ ಮಣಿಪಾಲ, ಹುಬ್ಬಳ್ಳಿ ಮತ್ತು ಮುಂಬಯಿ ಆವೃತ್ತಿಗಳಲ್ಲಿ, ಬುಧವಾರ, ೨೭ ಅಕ್ಟೋಬರ್ ೨೦೧೦ ರಂದು ಪ್ರಕಟಗೊಂಡಿರುತ್ತದೆ.

Rating
No votes yet

Comments