ಈ ‘ಅತಿಬುದ್ಧಿವಂತ’ರಿಗೆ ‘ತಬ್ಬಲಿತನ’ದ ಪರಿಕಲ್ಪನೆಯೂ ಇಲ್ಲವೇ?!

ಈ ‘ಅತಿಬುದ್ಧಿವಂತ’ರಿಗೆ ‘ತಬ್ಬಲಿತನ’ದ ಪರಿಕಲ್ಪನೆಯೂ ಇಲ್ಲವೇ?!

ಕಾಶ್ಮೀರ ಕಣಿವೆ ಎಂದೂ ಭಾರತದ ಅವಿಭಾಜ್ಯ ಅಂಗವಾಗೇ ಇರಲಿಲ್ಲ ಎಂಬ ನುಡಿ ಮುಕ್ತಕ ಉದುರಿಸುವ ಮೂಲಕ, ಭಾರತೀಯ ವಿಖ್ಯಾತ ಆಂಗ್ಲ ಲೇಖಕಿ ಅರುಂಧತಿ ರಾಯ್, ಅಂತಾರಾಷ್ಟ್ರೀಯ ಅಭಿಮಾನಿಗಳಿಂದ ’ಶಹಬ್ಬಾಶ್‌ಗಿರಿ’ ಗಿಟ್ಟಿಸುವ ಪ್ರಯತ್ನ ಮಾಡಿದರು.


‘ಭೇಷ್’, ‘ಭೇಷ್’ ಎನ್ನಿಸಿಕೊಳ್ಳಲು ತಮ್ಮ ಬುದ್ಧಿ-ಭಾವಗಳನ್ನೇಲ್ಲಾ ಮುಡಿಪಿಟ್ಟು ತಿಣಕುವುದು ಕೆಲ ಕವಿ-ಕಲಾಕಾರ-ಸಾಹಿತಿವರೇಣ್ಯರ ಚಟ. ಅದು ಅವರ ಖುಷಿ. ಆದರೆ ಆ ಅಹಮಹಿಕೆಯಲ್ಲಿ, ಸಾಮಾಜಿಕಾರ್ಥಿಕ ರಾಜಕೀಯ ಪ್ರಚಲಿತಗಳ ಸಾಮಾನ್ಯ ಜ್ಞಾನ, ಜವಾಬ್ದಾರಿ ಪ್ರಜ್ಞೆಗಳಾದರೂ ಇರಬೇಡವೇ?


ಒಂದರ್ಥದಲ್ಲಿ ಅವರ ‘ಭಾವ’ವೂ ತಪ್ಪಿಲ್ಲದಿರಬಹುದು. ಕಾಶ್ಮೀರ ಕಣಿವೆಯೇ ಏನು, ಹಿಂದೊಮ್ಮೆ ಅಂಗವಂಗಕಳಿಂಗಕಾಭೋಜಾದಿಗಳೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲವಲ್ಲಾ? ಈಗ ಸಹ ವೈವಿಧ್ಯಮಯ ಭಾರತ, ಪಂಜಾಬ, ಸಿಂಧು, ಗುಜರಾತ, ದ್ರಾವಿಡಗಳ  ವಿಶಿಷ್ಟತೆ ಉಳಿಸಿಕೊಂಡಿದೆ ಎಂದು ನಮ್ಮ ರಾಷ್ಟ್ರಗೀತೆಯೇ ಹೆಮ್ಮೆ ಪಟ್ಟಿಲ್ಲವೇ? ಇವುಗಳೆಲ್ಲದರಲ್ಲಿರುವ ಏಕಸೂತ್ರ, ಏಕಸ್ರೋತದ ಅವ್ಯಕ್ತವನ್ನಷ್ಟೇ ‘ಭಾರತೀಯತೆ’ ಎಂದು ಗೌರವಿಸುವುದು. ಆ ಅನುಸಂಧಾನದ ಹಿಗ್ಗನ್ನು ಅನುಭೂತಿಸಿಕೊಳ್ಳುವ ಸಹೃದಯತೆಯೂ ಈ ಸೃಜನಶೀಲ ಸರಸ್ವತಿಗೆ ಇಲ್ಲದೇ ಹೋದದ್ದು ದುರಂತ?! ತಂದೆ-ತಾಯಿ ಆಸರೆಯಂತೆ, ನಿಲ್ಲುವುದಕ್ಕಾಧಾರವಾಗುವ ನೆಲಕ್ಕೇ ಕೃತಜ್ಞ ಬೇಡವೇ?!


ಏಕೊ ಏನೊ "ದೊಡ್ಡವರೆಲ್ಲಾSSS ಜಾಣರಲ್ಲ್ಲಾSSS..." ಎಂಬ ಸಿನಿಮಾ ಹಾಡಿನ ಚರಣ ನೆನಪಾಯಿತು!


 

Rating
No votes yet

Comments