ಮೃತ್ಯುವಿನ ಚೆಲ್ಲಾಟ
ಮರಣದ ಸುತ್ತಮುತ್ತ ಎಂದು ಈಚೆಗೆ ನಾನು ಬರೆದ ಲೇಖನಕ್ಕೆ ಸಂಪದದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಗೆ ಪೂರಕವಾಗಿ ನಾನು ಹಿಂದೆ ಸುದ್ದಿಪತ್ರಿಕೆಯಲ್ಲಿ ಓದಿದ ಹಾಗು ಮುಂಚೆ ಕೇಳಿದ ಎರಡು ವಿಬಿನ್ನ ಘಟನೆಗಳನ್ನು ನಿಮ್ಮಗಾಗಿ ನಿರೂಪಿಸುತ್ತೇನೆ.
ಸಾವಿನ ಚೆಲ್ಲಾಟ: ಕಳೆದ ವರ್ಷ ಓದಿದ ಒಂದು ಸುದ್ದಿ. ಅರಸಿಕೆರೆ ಚಿಕ್ಕಮಂಗಳೂರಿನ ಮದ್ಯೆ ವೇಗವಾಗಿ ಹೋಗುತ್ತಿದ್ದ ಒಂದು ಕರ್ನಾಟಕ ಸರ್ಕಾರದ ಬಸ್ ಒಂದು ತಾಂತ್ರಿಕ ಕಾರಣಗಳಿಂದ ವಿಫಲವಾಗಿ ಕಡೆಗೆ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿ ನಿಂತಿತು. ಎಲ್ಲರೂ ಗಾಭರಿಯಾಗಿ ಕೆಳಗಿಳಿದರು. ಆದರೆ ಅದೃಷ್ಟ(!) ಯಾರಿಗೂ ಅಪಾಯವಾಗದೆ ಜೀವಹಾನಿಯಾಗದೆ ಉಳಿದರು. ಕೆಳಗೆ ಇಳಿದ ಕಂಡಕ್ಟರ್ ಎಲ್ಲರನ್ನು ಬೇರೆ ಬಸ್ಸಿಗ್ಗೆ ಹತ್ತಿಸುವುದಾಗಿ ತಿಳಿಸಿ ರಸ್ತೆ ಬದಿ ನಿಂತು ಬರುವ ಬಸ್ಸಿಗಾಗಿ ಕಾಯುತ್ತಿದ್ದ, ಅವನ ಜೊತೆಯಲ್ಲಿ ಹಲವರು. ಆ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಯೊಂದು ಚಾಲಕನ ಹಿಡಿತ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಈ ಗುಂಪಿನ ಮೇಲೆ ನುಗ್ಗಿತು. ತನ್ನ ಹಿಡಿತದಿಂದ ತಪ್ಪಿಸಿಕೊಂಡು ಬೀಗುತ್ತಿದ್ದ ಹಲವರನ್ನು ಮೃತ್ಯು ಪುನಃ ತನ್ನ ವಶಕ್ಕೆ ತೆಗೆದುಕೊಂಡಿತು.
ಹಲ್ಲು ಕಿರಿತ: ಇದು ವಿದೇಶದ ಒಂದು ಘಟನೆ. ಜೀವನದಲ್ಲಿ ಬೇಸತ್ತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ದರಿಸಿದ.ಹೇಗಾದರು ಸರಿ ವಿಫಲನಾಗಬಾರದು ಸಾಯಲೇ ಬೇಕು ಎಂಬ ಛಲ. ವಿಷದ ಬಾಟಲಿ ಮತ್ತು ನಿದ್ರೆಮಾತ್ರೆ ಜೇಬಿಗೆ ಸೇರಿಸಿದ. ಉದ್ದನೆಯ ಗಟ್ಟಿಯಾದ ಒಂದು ಹಗ್ಗ ಹೊಂಚಿದ. ಜೊತೆಗೆ ಒಂದು ಪಿಸ್ತೂಲ್ ಪ್ಯಾಂಟ್ ಗೆ ಸೇರಿಸಿದ. ಊರ ಹೊರಗೆ ಹರಿಯುತ್ತಿದ್ದ ನದಿಗೆ ಎತ್ತರದಲ್ಲಿ ಕಟ್ಟಿದ ಸೇತುವೆಯ ಮೇಲೆ ಬಂದ. ಹಗ್ಗವನ್ನು ಸೇತುವೆಯ ಕಂಬಿಗೆ ಬಿಗಿದು, ಇನ್ನೊಂದು ಕೊನೆ ಕುತ್ತಿಗೆಗೆ ಬಿಗಿಮಾಡಿ, ವಿಷವನ್ನು ನಿದ್ದೆಮಾತ್ರೆಯನ್ನು ಕಣ್ಣು ಮುಚ್ಚಿ ನುಂಗಿದ. ಪಿಸ್ತೂಲನ್ನು ಕೈಯಲ್ಲಿ ಹಿಡಿದು. ಸೇತುವೆಯಿಂದ ಕೆಳಗೆ ಜಿಗಿದ. ಹಗ್ಗ ತಪ್ಪಿದರೆ ನೀರಿಗೆ ಬೀಳುವೆ ಈಜು ಬರದಿರುವದರಿಂದ ನೀರಿನಲ್ಲಾದರು ಮರಣ ನಿಶ್ಚಿತ ಎಂದು ಅವನ ಎಣಿಕೆ. ಕೆಳಗೆ ದುಮಿಕಿ ನೇತಾಡುತ್ತಿರುವಂತೆಯೆ ಪಿಸ್ತೂಲನ್ನು ತಲೆಗೆ ಗುರಿ ಇಟ್ಟು ಗುಂಡು ಹಾರಿಸಿದ. ಅಯ್ಯೊ||| ... ಆದರೆ ಮೃತ್ಯು ದೇವತೆಯ ನಿರ್ದಾರ ಬೇರೆ ಇತ್ತು. ಅವನು ಹಾರಿಸಿದ ಗುಂಡು ಗುರಿತಪ್ಪಿತು. ತಲೆಗೆ ತಗಲಬೇಕಿದ್ದ ಗುಂಡು ಹಗ್ಗಕ್ಕೆ ಬಡಿದು ಕತ್ತರಿಸಿತು. ನೇರವಾಗಿ ನೀರಿಗೆ ಬಿದ್ದ. ಕೆಳಗೆ ದೋಣಿಯಲ್ಲಿ ಹೋಗುತ್ತಿದ್ದವರು ದೂರದಿಂದ ಯಾರೋ ನೀರಿನಲ್ಲಿ ಬಿದ್ದದ್ದನ್ನು ಗಮನಿಸಿದರು. ಹತ್ತಿರ ಬಂದು ನೀರಿನಿಂದ ಈಚೆಗೆ ಎಳೆದು ಹಾಕಿದರು. ಈಚೆಗೆ ತರುವಾಗ ಸಾಕಷ್ಟು ನೀರು ಕುಡಿದಿದ್ದ. ಅವರು ಇವನನ್ನು ಬೋರಲು ಮಲಗಿಸಿ ನೀರನ್ನೆಲ್ಲ ಕಕ್ಕಿಸಿದರು. ಅಷ್ಟೆ ! ನೀರಿನ ಜೊತೆ ನಿದ್ದೆಯ ಮಾತ್ರೆ , ವಿಷದ ಪ್ರಬಾವ ಸಹ ಹೊರಹೋಯಿತು. ಸ್ವಲ್ಪ ಹೊತ್ತಿನಲ್ಲೆ ಎದ್ದು ಕುಳಿತ. ಮೃತ್ಯು ಅವನ ಮುಂದೆ ನಿಂತು ಹಲ್ಲು ಕಿರಿಯುತ್ತಿತ್ತು.