ದೇವನೂರರ ಸಂವೇದನೆಗೆ ನನ್ನಿಗಳು!

ದೇವನೂರರ ಸಂವೇದನೆಗೆ ನನ್ನಿಗಳು!

ಗಲ್ಲಿ-ಗಲ್ಲಿಯ ಕನ್ನಡ ರಾಜ್ಯೋತ್ಸವಾಚರಣೆ ಚಪ್ಪರಗಳು, ಕನ್ನಡದ ಹೆಸರು ಮಾತ್ರಾ ಹೆಳಿಕೊಂಡು ಮೆರೆದು ಮೆಟ್ಟಂಗಾಲಿಡುವ ಪುಡಾರಿಗಳ ವೇದಿಕೆಯಾಗುತ್ತಿರುವ ಈ ದಿನಗಳಲ್ಲಿ, ನೈಜ ಸಾಹಿತಿ ದೇವನೂರು ಮಹದೇವರ ಸಂವೇದನೆಗೆ, ಪ್ರಜ್ಞಾವಂತರು ’ನಮೋ’ ಎನ್ನಬೇಕು!


ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಮರ‍್ಯಾದೆಯನ್ನು, ಶಾಲಾ ಶಿಕ್ಷಣ ಮಾಧ್ಯಮ ಕನ್ನಡವಾಗುವವವರೆಗೆ ಈಸಿಕೊಳ್ಳುವುದಿಲ್ಲ ಎಂದು ಅವರು ಪೋಟಿ ಹಾಕಿರುವುದು ಸಂತಸ ತಂದಿದೆ. ಅರ್ಜಿ ಗುಜರಾಯಿಸಿ, ಅಯೋಗ್ಯರ ಪಾದಾದಿಗಳನ್ನು ನೆಕ್ಕಿ ಪ್ರಶಸ್ತಿಯಾಗಿ ಸೈಟು, ನಗದು ಮತ್ತೊಂದಕ್ಕಾಗಿ ಜೊಲ್ಲು ಸುರಿಸುವ “ರಾಜ್ಯ ಶ್ರೇಷ್ಠ”ರಿಗೆ ಈ ನಿಲವು ಅನುಭಾವವೇದ್ಯವಾಗುವುದು ಕಷ್ಟ!


ಮಹಾದೇವರಂಥಾ ನಿಷ್ಠುರಗಾರರು ಸಹ ತಮ್ಮ ಷರ್ತ್‌‌ನಲ್ಲಿ, ರಾಜ್ಯಭಾಷೆ ಅಥವಾ ಮಾತೃಭಾಷಾ ಮಾಧ್ಯಮ ಎಂದು ರಾಜಿ ಮಾಡಿಕೊಂಡಿರುವುದು ಎಡವಟ್ಟೆನಿಸುತ್ತದೆ. ಇದಕ್ಕೆ ಯಾವ ಗುಣವಾಚಕ ಅಥವಾ ವಿಶೇಷಣ ಬೇಡ. ಇದನ್ನು ನಿಸ್ಸಂಶಯವಾಗಿ “ಕನ್ನಡ” ಎಂದಷ್ಟೇ ಹೇಳಿದರೊಳ್ಳೆಯದು. ಕರ್ನಾಟಕವೆಂಬ ರಾಜ್ಯಕ್ಕೆ ರಾಜ್ಯಾಂಗೀಯ ಅಸ್ತಿತ್ವ ಕೊಟ್ಟಿರುವುದೇ ಈ “ಕನ್ನಡ”. ಈ ನೆಲದಲ್ಲಿ ನಿಂತು, ನೆಲದ ನೀರು ಕುಡಿದು, ನೆಲದನ್ನ ಉಣ್ಣುವೆಲ್ಲರಿಗೂ ನೆಲದ ಮಾತೂ ಗೊತ್ತಿರಲೇಬೇಕು. ಇದು ವ್ಯವಹಾರ; ಆವೇಶವಲ್ಲ. ಆ ಭಾಷೆ ಇಲ್ಲಿನ ಸಹಜ ಅನಿವಾರ‍್ಯವಾಗದಿದ್ದರೆ, ಎಷ್ಟೆಷ್ಟು ನೂರು ಕನ್ನಡ ರಾಜ್ಯೋತ್ಸವಗಳು ಬಂದುಹೋದರೂ, ಮಹಾನುಭಾವರು ಮೇಜು ಕುಟ್ಟಿ ವೀರಾವೇಶ ಮಾಡಿದರೂ ಅದು, ಪ್ರಮಾಣೀಕವಾಗಿ ನೆಲದ ಋಣ ತಿರಿಸಿದಂತಾಗುವುದಿಲ್ಲ!

Rating
No votes yet