ಮಳೆ ನಿಂತ ಮೇಲಿನ ಮರದ ಹನಿಗಳು

ಮಳೆ ನಿಂತ ಮೇಲಿನ ಮರದ ಹನಿಗಳು

ಹಿಂದೆ ನಾನು ಓದಿ ಓದಿ ಬೇಸತ್ತ ವಿಷಯ ತಿಳಿಸಿದ್ದೆ. ಇನ್ನು ಓದು ಸಾಕು ಎಂದು ಏಕೋ ಅನ್ನಿಸುತ್ತಿತ್ತು. ಕೊಂಡ ಪುಸ್ತಕಗಳು ಓದದೆಯೇ ಉಳಿದಿದ್ದವು , ಓದಿ/ಓದದೆ ಬೇಡವಾದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂದೂ ಚಿಂತೆಯಲ್ಲಿದ್ದೆ.

ಶ್ರೇಷ್ಠವೆನಿಸಿದ ಪುಸ್ತಕಗಳನ್ನು ( ಇನ್ನೊಮ್ಮೆ ಓದಬೇಕೆಂಬ ಆಸೆಯಿಂದ) ಇಟ್ಟುಕೊಂಡು ಉಳಿದವನ್ನು ವಿಲೇವಾರಿ ಮಾಡಿದೆ. ಪ್ರತಿಸಲ ಊರಿಗೆ ಹೋದಾಗಲೂ ಎಷ್ಟೇ ಬೇಡ ಎಂದು ತೀರ್ಮಾನಿಸಿದ್ದರೂ ಐದಾರುನೂರು ರೂಪಾಯಿಗಳ ಪುಸ್ತಕ ಹೊತ್ತು ತರುತ್ತಿದ್ದೆ.

ನನ್ನಂತಹವರೇ ಅನೇಕರು ಇದ್ದಾರೆ ಅಂತ ಕಾಣುತ್ತದೆ. ಹೋದ ತಿಂಗಳು ಸುಧಾ ಪತ್ರಿಕೆಯಲ್ಲಿ ಯಾರೋ ಬರೆದ 'ಓದದ ಪುಸ್ತಕಗಳು' ಎಂಬ ಪ್ರಬಂಢ ನನ್ನ ಮಟ್ಟಿಗೂ ಸತ್ಯವೇ ಆಗಿತ್ತು.

ಅವರು ಓದಿದ ಪುಸ್ತಕ, ಓದದ ಪುಸ್ತಕಗಳನ್ನು ಮತ್ತೆ ಜೋಡಿಸಹೊರಟರೆ ನಾನು ಕಟ್ಟಿ ಕಣ್ಣಿನಿಂದ ಮರೆ ಮಾಡಿಟ್ಟುಬಿಟ್ಟಿದ್ದೇನೆ! . ಕಣ್ಣಿಗೆ ಕಂಡರೆ ತಾನೇ ಟೆನ್ಶನ್ನು? ಏನೂ ಓದದ ಎಷ್ಟೋ ಜನರಿಲ್ಲವೇ ? ನನ್ನ ಓದು ನನಗೆ ಸಾಕೆನಿಸಿತು.

ಅದಕ್ಕೇ ಈ ಬ್ಲಾಗಿನಲ್ಲಿ ಹೊಸ ಓದು ಕುರಿತು ಏನೂ ಬರೆದಿಲ್ಲ.

ಆದರೂ
ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಅಲ್ಲವೇ?
ಅಕ್ಷರ ಬಲ್ಲವರ ದೌರ್ಬಲ್ಯ ನೋಡಿ.

ಕಳೆದ ತಿಂಗಳು ಮೂರು ಕಾದಂಬರಿ ಓದಿದೆ. ಒಂದು -ಹೆಸರು ಹೇಳುವದು ದಂಡ-ಪೋಲಿತನದಿಂದ ಓದಿಸಿಕೊಂಡೇನೋ ಹೋಗುತ್ತದೆ. ಮತ್ತೆ ಓದುವಂಥದ್ದಾಗಲೀ ನೆನಪಿನಲ್ಲಿಡುವಂಥದ್ದಾಗಲೀ ಅಲ್ಲವೇ ಅಲ್ಲ.

ಇನ್ನೊಂದು ಕನ್ನಡದ ಖ್ಯಾತ ಸಾಹಿತ್ಯಿ 'ಶ್ರೀ ರಂಗ' ಅವರ ಮಗಳು ಇಂಗ್ಲೀಷಿನಲ್ಲಿ ಬರೆದ ' Dark holds no Terror' ಕೃತಿಯ ಕನ್ನಡಾನುವಾದ- 'ಅಂಜಿಕೆ ಕತ್ತಲೆಯಲ್ಲಿಲ್ಲ'. ಒಂದೆರಡು ಪ್ರಮುಖ ಭಾಗಗಳು ಅರ್ಥ ಆಗಲಿಲ್ಲವಾದರೂ - ಸ್ವಗತದ ಶೈಲಿ ತುಂಬ ಚೆನ್ನಾಗಿತ್ತು. ವಾಕ್ಯ ಜೋಡಣೆಗಳೂ , ಕೆಲವು ವೈಯುಕ್ತಿಕ ನೆಲೆಯಲ್ಲಿನ ಒಳನೋಟಗಳೂ ತುಂಬ ಚೆನ್ನಾಗಿದ್ದವು.

ಮೂರನೇಯದು ಖ್ಯಾತ ಪಂಜಾಬಿ ಲೇಖಕಿ ಅಮೃತಾ ಪ್ರೀತಂ ರ ಆತ್ಮಕಥನ - 'ರಸೀದಿ ಟಿಕೀಟು' . ಅವರ ಶೈಲಿಯಂತೂ ಕಾವ್ಯಾತ್ಮಕವಾಗಿ , ಹೃದಯಸ್ಪರ್ಶಿಯಾಗಿ ಇದ್ದೇ ಇರುತ್ತದೆ.

ಸದ್ಯಕ್ಕಂತೂ ಓದು ಬಿಟ್ಟು translation.sampada.net ನಲ್ಲಿನ ಗಣಕ ತಂತ್ರಾಂಶವನ್ನು ಕನ್ನಡಕ್ಕೆ ಒ(ಬ!)ಗ್ಗಿಸಿಗೊಳ್ಳುವದರಲ್ಲಿ ಹೊತ್ತುಕಳೆಯುತ್ತಿದ್ದೇನೆ!.

ಮತ್ತೆ ಸಿಗೋಣ!

Rating
No votes yet